ದೂರುದಾರರಿಗೆ 25 ಸಾವಿರ ರೂ ಪರಿಹಾರ ಕೊಡುವಂತೆ ಹೆಲ್ತ್ ಇನ್ಶೂರೆನ್ಸ್ ಕಂಪನಿಗೆ ಗ್ರಾಹಕರ ಆಯೋಗ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2023 | 8:01 PM

ಆರೋಗ್ಯ ವಿಮಾ ತಿರಸ್ಕರಿಸಿದ ಮಣಿಪಾಲ ಸಿಗ್ನಾ ವಿಮಾ ಕಂಪನಿಗೆ 4.50 ಲಕ್ಷ ರೂ. ವಿಮಾ ಹಣ ಹಾಗೂ 25 ಸಾವಿರ ರೂ. ಪರಿಹಾರ ಒದಗಿಸಲು ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಸ್ಕೀಜೋಫ್ರೇನಿಯಾ ಕಾಯಿಲೆ ಇತ್ತು ಎನ್ನುವ ಸಂಗತಿಯನ್ನು ಸಾಬೀತುಪಡಿಸಲು ವಿಮಾ ಕಂಪನಿ ವಿಫಲರಾಗಿದ್ದಾರೆಂದು ಆಯೋಗ ತೀರ್ಪು ನೀಡಿದೆ.

ದೂರುದಾರರಿಗೆ 25 ಸಾವಿರ ರೂ ಪರಿಹಾರ ಕೊಡುವಂತೆ ಹೆಲ್ತ್ ಇನ್ಶೂರೆನ್ಸ್ ಕಂಪನಿಗೆ ಗ್ರಾಹಕರ ಆಯೋಗ ಆದೇಶ
ಪ್ರಾತಿನಿಧಿಕ ಚಿತ್ರ
Follow us on

ಧಾರವಾಡ, ಡಿಸೆಂಬರ್​ 14: ಆರೋಗ್ಯ ವಿಮಾ (health insurance company) ತಿರಸ್ಕರಿಸಿದ ಮಣಿಪಾಲ ಸಿಗ್ನಾ ವಿಮಾ ಕಂಪನಿಗೆ 4.50 ಲಕ್ಷ ರೂ. ವಿಮಾ ಹಣ ಹಾಗೂ 25 ಸಾವಿರ ರೂ. ಪರಿಹಾರ ಒದಗಿಸಲು ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಹುಬ್ಬಳ್ಳಿ ನಿವಾಸಿ ಚೇತನ ಕೆ. ಎಂಬುವರು ಮಣಿಪಾಲ ಸಿಗ್ನಾ ವಿಮಾ ಕಂಪನಿಯ ಜೊತೆ ರೂ. 4.50 ಲಕ್ಷ ರೂ. ವರೆಗೆ ತಮ್ಮ ಆರೋಗ್ಯ ವಿಮೆ ಮಾಡಿಸಿದ್ದರು. ವಿಮಾ ಅವಧಿ 2020ರ ನವೆಂಬರ್‌ 8 ರಿಂದ 2021ರ ನವೆಂಬರ್‌ 7ರ ವರೆಗೆ ಇತ್ತು. ಅದಕ್ಕಾಗಿ ಚೇತನ ಅವರು ರೂ. 11788 ಪ್ರಿಮಿಯಮ್ ಕಟ್ಟಿದ್ದರು. 2021ರ ಮೇ ತಿಂಗಳಲ್ಲಿ ಚೇತನ್ ಅವರಿಗೆ ಅನಾರೋಗ್ಯವಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದೇ ಕಾಲಕ್ಕೆ ಅವರಿಗೆ ಕೋವಿಡ್-19 ಕೂಡಾ ಆಗಿತ್ತು. ಈ ಬಗ್ಗೆ ಚೇತನಗೆ ರೂ.75360 ವೈದ್ಯಕೀಯ ಖರ್ಚು ಬಂದಿತ್ತು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಸದರಿ ವೈದ್ಯಕೀಯ ಖರ್ಚು ವೆಚ್ಚ ಕೇಳಿ ವಿಮಾ ಕಂಪನಿಯ ಎಜೆಂಟರ ಮೂಲಕ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ವಿಮೆ ಮಾಡಿಸುವ ಮೊದಲಿನಿಂದ ದೂರುದಾರರಿಗೆ ಸ್ಕೀಜೋಫ್ರೇನಿಯಾ ಕಾಯಿಲೆ ಇದ್ದು ಅದನ್ನು ಮರೆಮಾಚಿ ವಿಮೆ ಪಡೆದಿದ್ದಾರೆ ಅನ್ನುವ ಕಾರಣ ನೀಡಿ ವಿಮಾ ಕಂಪನಿ ದೂರುದಾರರ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಚೇತನ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023ರ ಜೂನ್‌ 6ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಬಾಡಿಗೆ ಕೊಡದ ಏರ್‌ಸೆಲ್ ಹಾಗೂ JTL ಕಂಪನಿಗೆ 50 ಸಾವಿರ ರೂ ದಂಡ ವಿಧಿಸಿದ ಗ್ರಾಹಕರ ಆಯೋಗ

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ವಿಮಾ ಪಾಲಸಿ ಅವರ ಅನಾರೋಗ್ಯ ಅವಧಿಯಲ್ಲಿ ಊರ್ಜಿತದಲ್ಲಿದೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುವ ಬಗ್ಗೆ ದಾಖಲೆಗಳಿವೆ. ಸ್ಕೀಜೋಫ್ರೇನಿಯಾ ಕಾಯಿಲೆ ಇತ್ತು ಎನ್ನುವ ಸಂಗತಿಯನ್ನು ಸಾಬೀತುಪಡಿಸಲು ವಿಮಾ ಕಂಪನಿ ವಿಫಲರಾಗಿದ್ದಾರೆಂದು ಆಯೋಗ ತೀರ್ಪು ನೀಡಿದೆ.

ಇದನ್ನೂ ಓದಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಮಾ ಕಂಪನಿಗೆ ದಂಡ! ಕಾರಣವೇನು?

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರ ವೈದ್ಯಕೀಯ ವೆಚ್ಚದ ಹಣ ರೂ. 75360 ಮತ್ತು ಅದರ ಮೇಲೆ ಕ್ಲೇಮ್ ನಿರಾಕರಿಸಿದ 2021ರ ಫೆಬ್ರುವರಿ 27 ರಿಂದ ಶೇ. 8ರಂತೆ ಬಡ್ಡಿ ಲೆಕ್ಕ ಹಾಕಿ ನೀಡುವಂತೆ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ. 25 ಸಾವಿರ ಪರಿಹಾರ ಮತ್ತು ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ದೂರುದಾರರಿಗೆ ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:50 pm, Thu, 14 December 23