
ಧಾರವಾಡ, ಜೂನ್ 02: ಧಾರವಾಡ (Dharwad) ವಿದ್ಯಾಕಾಶಿ ಅಂತಲೇ ಪ್ರಸಿದ್ಧಿ ಪಡೆದಿದೆ. ಸರಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು ಇಲ್ಲಿವೆ. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ (Coaching Centre) ಗಳ ಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕೆ ಪೂರಕವಾಗಿ ಪಿಜಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಎಗ್ಗಿಲ್ಲದೆ ಆರಂಭವಾಗುತ್ತಿರುವ ಪಿಜಿಗಳಲ್ಲಿ ಅಧಿಕೃತ ಎಷ್ಟು? ಅನಧಿಕೃತ ಎಷ್ಟು? ಎಂಬ ಲೆಕ್ಕ ಇಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ತೆರಿಗೆ ಸರಿಯಾಗಿ ಬರುತ್ತಿಲ್ಲ. ಮತ್ತೊಂದು ಕಡೆ ಇದೇ ಪಿಜಿಗಳು ಅಕ್ರಮ ದಂಧೆಗಳ ತಾಣವಾಗುತ್ತಿವೆ. ಇದಕ್ಕೆ ಲಗಾಮು ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ.
ಐಎಎಸ್, ಕೆಎಎಸ್, ಪೊಲೀಸ್ ನೇಮಕಾತಿಯಿಂದ ಹಿಡಿದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್ಗಳು ಧಾರವಾಡದಲ್ಲಿವೆ. ಒಂದು ಅಂದಾಜಿನ ಪ್ರಕಾರ ಇಲ್ಲಿರುವ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆ ಒಂದು ಲಕ್ಷ ಮೇಲಿದೆ. ಇದಕ್ಕೆ ತಕ್ಕಂತೆ ಧಾರವಾಡದ ಮೂಲೆ ಮೂಲೆಗಳಲ್ಲಿ ಪಿಜಿಗಳು ತಲೆ ಎತ್ತಿವೆ. ಪಿಜಿಗಳು ಕಮರ್ಷಿಯಲ್ ವ್ಯಾಪ್ತಿಗೆ ಬರುತ್ತವೆ. ಆದರೆ ಬಹುತೇಕ ಕಡೆ ವಾಸದ ಮನೆಗಳನ್ನೇ ಪಿಜಿಗಳನ್ನಾಗಿ ಮಾಡಲಾಗಿದ್ದು, ಸರಿಯಾಗಿ ತೆರಿಗೆ ಕಟ್ಟುತ್ತಿಲ್ಲ. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳುತ್ತಿಲ್ಲ. ಇದನ್ನು ಮನಗಂಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಪಿಜಿಗಳ ಸಂಖ್ಯೆ ಹಾಗೂ ಅಲ್ಲಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದ್ದಾರೆ.
ಧಾರವಾಡದಲ್ಲಿ ಆರಂಭದಲ್ಲಿ ಸಪ್ತಾಪುರ ಹಾಗೂ ಜಯನಗರ ಬಡಾವಣೆಗಳಲ್ಲಿ ಮಾತ್ರ ಕೋಚಿಂಗ್ ಸೆಂಟರ್ಗಳು ಇದ್ದವು. ಆ ಪ್ರದೇಶದ ಸುತ್ತಮುತ್ತ ಮಾತ್ರವೇ ಪಿಜಿಗಳು ಇದ್ದವು. ಆದರೆ ಈಗ ಕೋಚಿಂಗ್ ಸೆಂಟರ್ಗಳ ವ್ಯಾಪ್ತಿ ನಗರದ ತುಂಬೆಲ್ಲ ವ್ಯಾಪಿಸಿದೆ. ಧಾರವಾಡದಲ್ಲಿ ಅನೇಕ ಪ್ರತಿಷ್ಠಿತ ಕಾಲೇಜುಗಳಿದ್ದು, ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕೂಡ ವ್ಯಾಸಂಗಕ್ಕಾಗಿ ಬರುತ್ತಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್ಗಳ ಲಭ್ಯತೆ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಪಿಜಿಗಳತ್ತ ಮುಖ ಮಾಡುತ್ತಿದ್ದಾರೆ.
ಈ ಹಿಂದೆ ಸಂಸಾರಸ್ಥರಿಗೆ ಮನೆಗಳನ್ನು ಬಾಡಿಗೆ ಕೊಡುತ್ತಿದ್ದವರೆಲ್ಲರೂ, ಈಗ ಅದೇ ಮನೆಗಳಲ್ಲಿ ಕೆಲವು ಬೆಡ್ ಹಾಕಿ, ಒಂದು ಬೆಡ್ಗೆ ಇಂತಿಷ್ಟು ಅಂತ ದರ ನಿಗದಿ ಮಾಡಿ ಪಿಜಿ ನಡೆಸುತ್ತಿದ್ದಾರೆ. ಇದರಿಂದ ಪಾಲಿಕೆ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಈ ಮನೆಗಳ ಮಾಲೀಕರಿಗೆ ನೋಟಿಸ್ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಲೇ ಬಂದಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ.
ಆದರೆ, ಈ ಬಾರಿಯಾದರೂ ಕಾರ್ಯರೂಪಕ್ಕೆ ಬಂದು, ಸಕ್ರಮವಾಗಿ ಪಿಜಿಗಳನ್ನು ನಡೆಸುವವರಿಗೆ ನ್ಯಾಯ ಸಿಗಲಿ ಎಂಬ ಕೂಗು ಕೇಳಿ ಬರುತ್ತಿದೆ. ಪಿಜಿಗಳೆಲ್ಲ ಕಮರ್ಷಿಯಲ್ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ತೆರಿಗೆ ವಿಧಿಸಿದರೂ ನಾವು ನೀಡಲು ಸಿದ್ಧ ಅಂತ ಕೆಲ ಪಿಜಿ ಮಾಲೀಕರು ಹೇಳುತ್ತಿದ್ದಾರೆ. ಕೂಡಲೇ, ಈ ಬಗ್ಗೆ ಸರಿಯಾಗಿ ನಿಯಮಗಳನ್ನು ರೂಪಿಸಿ, ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಸೇರಿ 43 ಕೇಸ್ ವಾಪಸ್ ಆದೇಶ ರದ್ದುಗೊಳಿಸಿದ ಕೋರ್ಟ್
ಹು-ಧಾ ಮಹಾನಗರ ಪಾಲಿಕೆ ಆದಾಯದ ಕೊರತೆ ಅನುಭವಿಸುತ್ತಿದೆ. ವಿವಿಧ ಮೂಲಗಳಿಂದ ಆದಾಯವನ್ನು ಪಡೆಯಲು ಹರಸಾಹಸ ಪಡುತ್ತಿದೆ. ಇದೇ ವೇಳೆ ನಗರದಲ್ಲಿ ಇಷ್ಟೊಂದು ಪಿಜಿಗಳನ್ನಿಟ್ಟುಕೊಂಡರೂ ಅವುಗಳಿಂದ ತೆರಿಗೆ ಹರಿದು ಬರುತ್ತಿಲ್ಲ. ಹೀಗಾಗಿ, ಕೂಡಲೇ ಈ ವಿಚಾರವನ್ನು ಪಾಲಿಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಪಿಜಿಗಳಿಂದ ಸಾಕಷ್ಟು ಸಮಸ್ಯೆಗಳು ಎದುರಾಗುವುದರಲ್ಲಿ ಎರಡು ಮಾತಿಲ್ಲ.