ಹುಬ್ಬಳ್ಳಿ-ಧಾರವಾಡದ ಕೆಲ ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ: ಪೊಲೀಸರಿಗೆ ಬೆಲ್ಲದ್ ಪತ್ರ
ಹುಬ್ಬಳ್ಳಿ ಧಾರವಾಡದ ಕೆಲ ಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿರುವುದು ಕಂಡುಂಬಂದಿದ್ದು, ಈ ಸಂಬಂಧ ಸ್ಥಳೀಯರು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಬೆಲ್ಲದ್ ಸಹ ಗೃಹ ಸಚಿವರು ಹಾಗೂ ಹುಬ್ಬಳ್ಳಿ ಧಾರವಾಡದ ಆಯುಕ್ತ ಶಶಿಕುಮಾರ್ ಅವರಿಗೆ ಪತ್ರ ಬರೆದಿದ್ದು, ಅಪರಿಚಿತ ವ್ಯಕ್ತಗಳ ತನಿಖೆ ನಡೆಸಬೇಕೆಂದಿದ್ದಾರೆ. ಈ ಸಂಬಂಧ ಬೆಲ್ಲದ್ ಹೇಳಿದ್ದೇನು? ಅವರ ಪತ್ರದಲ್ಲೇನಿದೆ ಎನ್ನುವ ವಿವರ ಇಲ್ಲಿದೆ.

ಹುಬ್ಬಳ್ಳಿ, (ಮೇ 18): ಅಪರಿಚಿತ ಹಾಗೂ ಅನುಮಾನಾಸ್ಪದವಾಗಿ ಬೇರೆ ದೇಶದ ವ್ಯಕ್ತಿಗಳು ಹುಬ್ಬಳ್ಳಿ-ಧಾರವಾಡ (Hubballi-Dharwad) ಮಹಾನಗರದ ಕೆಲ ಮಸೀದಿಗಳಲ್ಲಿ ಓಡಾಟ ನಡೆಸುತ್ತಿದ್ದು, ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Aravind Bellad) ಪತ್ರ ಬರೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅವರು ಸ್ಥಳೀಯರು ಅಲ್ಲ. ಹೀಗಾಗಿ ಅಪರಿಚಿತರ ಓಡಾಟ ಪರಿಶೀಲಿಸುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೆ ಬೆಲ್ಲದ್ ಪತ್ರ ಬರೆದಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ತಡೆಯಬೇಕೆಂದು ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಹೊಸ ಮುಖ, ಅಪರಿಚಿತ, ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅವರು ಹೊರ ದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ. ಅವಳಿ ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ (ಜನ್ನತ್ ನಗರ ಧಾರವಾಡ ಸೇರಿದಂತೆ) ವಾಸವಾಗಿದ್ದಾರೆಂಬ ಮಾಹಿತಿಯೂ ಇದೆ. ಅದಕ್ಕಾಗಿ ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೇಹುಗಾರಿಕೆ ಆರೋಪ: ಯೂಟ್ಯೂಬರ್ ಜ್ಯೋತಿ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ
ಅವಳಿ ನಗರದಲ್ಲಿರುವ ಅಪರಿಚಿತ, ಹೊಸಮುಖದ ವ್ಯಕ್ತಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಜರುಗಿಸಬೇಕು. ಇದರಿಂದ ಮಹಾನಗರದಲ್ಲಿ ಅಹಿತಕರ ಘಟನೆ ಆಗದಂತೆ ತಡೆಯುವ ಕೆಲಸ ಮಾಡಬೇಕೆಂದು ಶಾಸಕ ಬೆಲ್ಲದ್ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದ ಬಗ್ಗೆ ಅರವಿಂದ್ ಬೆಲ್ಲದ್ ಹೇಳಿದ್ದೇನು?
ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಬಗ್ಗೆ ಅರವಿಂದ ಬೆಲ್ಲದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕೆಲ ಜನರು ನನಗೆ ಫೋನ್ ಮಾಡಿ ನಮ್ಮ ಪ್ರದೇಶದಲ್ಲಿ ಹೊರಗಿನ ಜನ ಕಾಣುತ್ತಿದ್ದಾರೆ. ಅದರ ಬಗ್ಗೆ ನಾನು ವಿಚಾರಿಸಿದೆ. ಅವರು ಹೇಗೆ ಕಾಣುತ್ತಾರೆ ಅಂದೆ, ಅವರು ಸ್ಥಳೀಯರು ಅನ್ನಿಸುತ್ತಿಲ್ಲ ಅಂದರು. ಬಾಂಗ್ಲಾದವರ ತರ ಕಾಣಿಸುತ್ತಿದ್ದಾರಾ ಎಂದು ಪ್ರಶ್ನಿಸಿದೆ. ಇಲ್ಲ, ಅವರು ಪಾಕಿಸ್ತಾನಿಯರಂತೆ ಕಾಣುತ್ತಿದ್ದಾರೆ ಎಂದಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತರಿಗೆ ಫೋನ್ ಮಾಡಿ ಕೂಡಲೇ ಈ ಬಗ್ಗೆ ತನಿಖೆ ಮಾಡುವಂತೆ ಹೇಳಿದ್ದೇನೆ ಎಂದು ಹೇಳಿದರು.
ಗೃಹ ಮಂತ್ರಿಗಳಿಗೂ ಪತ್ರ ಬರೆದಿದ್ದೇನೆ. ಆದರೆ ನಾನು ಮತ್ಯಾರಿಗೂ ಇದನ್ನು ಹೇಳಿರಲಿಲ್ಲ. ಮಾಧ್ಯಮಗಳಿಗೂ ಪತ್ರ ಬಿಡುಗಡೆ ಮಾಡಿರಲಿಲ್ಲ. ಆದರೆ ಪತ್ರ ಬರೆದು ಎಂಟು ದಿನಗಳಾಗಿವೆ. ಬಹುಶಃ ನಾನು ಬರೆದ ಪತ್ರ ಕಮಿಷನರ್ ಕಚೇರಿಯಿಂದಲೇ ಲೀಕ್ ಆಗಿರಬಹುದು. ಆದರೆ ಆಯುಕ್ತರು ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ. ಇಷ್ಟೊಂದು ಗಂಭೀರವಾದ ಆರೋಪ ಮಾಡಿದ್ದೇನೆ. ಆದರೂ ಅವರು ಏನು ಕ್ರಮ ಕೈಗೊಂಡರು ಅನ್ನೋದನ್ನು ಹೇಳಿಲ್ಲ. ವಿಚಾರಣೆ ಮಾಡಬೇಕೆಂಬ ಮನಸ್ಥಿತಿಯೂ ಅವರಲ್ಲಿಲ್ಲ. ಇದು ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಎಂದು ಕಿಡಿಕಾರಿದರು.
ಸರಕಾರವೇ ‘ಅವರು ನಮ್ಮ ಬ್ರದರ್’ ಅಂದರೆ ಕೆಳಗಿನವರೂ ಅನುಕರಣೆ ಮಾಡುತ್ತಾರೆ. ಮೇಲಿನವರಿಗೇ ಗಂಭೀರತೆ ಇಲ್ಲ. ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಅನ್ನೋ ಮನಸ್ಥಿತಿಗೆ ಪೊಲೀಸರು ಬಂದಿದ್ದಾರೆ. ಸುಮಾರು ಏಳೆಂಟು ಜನರಿದ್ದಾರೆ ಅನ್ನೋ ಮಾಹಿತಿ ಇದೆ. ಬೆಳಿಗ್ಗೆ ನಮಾಜ್ ವೇಳೆ ಕಾಣುತ್ತಾರಂತೆ. ಅವರ ಚಟುವಟಿಕೆಗಳೇನು ಅನ್ನೋದು ಗೊತ್ತಿಲ್ಲ. ಅದರ ಬಗ್ಗೆ ವಿಚಾರ ಮಾಡಬೇಕು. ಆದರೆ ಪೊಲೀಸರು ಕಲೆಕ್ಷನ್ ದಂಧೆಯಲ್ಲಿದ್ದಾರೆ. ಅದನ್ನು ಮೇಲಿನವರಿಗೆ ಮುಟ್ಟಿಸೋ ಕೆಲಸದಲ್ಲಿದ್ದಾರೆ. ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡೋ ಕೆಲಸದಲ್ಲಿ ಆಸಕ್ತಿ ಇಲ್ಲ. ಪತ್ರ ಬರೆದು ಎಂಟು ದಿನವಾದರೂ ಏನೂ ಆ್ಯಕ್ಷನ್ ಆಗಿಲ್ಲ. ನನಗೆ ಅವರು ಉತ್ತರವನ್ನೂ ಬರೆದಿಲ್ಲ. ಏನಾದರೂ ಹೆಚ್ಚು ಕಡಿಮೆಯಾದರೆ ಪೊಲೀಸರು ಹಾಗೂ ಕಾಂಗ್ರೆಸ್ ಸರಕಾರ ಹೊಣೆ ಹೊರಬೇಕಾಗುತ್ತೆ ಎಂದರು.




