ಧಾರವಾಡ: ದೇಶದ ರಕ್ಷಣಾ ವ್ಯವಸ್ಥೆಗೆ ಪೂರಕವಾಗುವ ಡ್ರೋನ್ ತಯಾರಿಸಿದ ವಿದ್ಯಾರ್ಥಿಗಳು
ಆಪರೇಷನ್ ಸಿಂದೂರ್‌ನಿಂದ ಪ್ರೇರಿತರಾಗಿ ವಿದ್ಯಾರ್ಥಿಗಳು ದೇಶದ ರಕ್ಷಣಾ ವ್ಯವಸ್ಥೆಗೆ ಪೂರಕವಾಗುವ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಧಾರವಾಡದಲ್ಲಿ ನಡೆದ ಇನ್ಸಿಗ್ನಿಯಾ ಎಂಜಿನಿಯರಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಈ ಡ್ರೋನ್‌ಗಳನ್ನು ಹಾರಿಸಿದರು. ಈ ಡ್ರೋನ್‌ಗಳು ವೈದ್ಯಕೀಯ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಸಲು ಸೂಕ್ತವಾಗಿವೆ. ರಿಮೋಟ್ ನಿಯಂತ್ರಣವಿಲ್ಲದೆ ಕಾರ್ಯನಿರ್ವಹಿಸುವ ಈ ಡ್ರೋನ್‌ಗಳು, ಭಾರತೀಯ ಸೇನೆಯ ಡ್ರೋನ್ ತಂತ್ರಜ್ಞಾನವನ್ನು ಆಧರಿಸಿ ನಿರ್ಮಿಸಲ್ಪಟ್ಟಿವೆ. ಸ್ಪರ್ಧೆಯ ಉದ್ದೇಶ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುವುದು.
ಇತ್ತೀಚಿಗೆ ನಡೆದ ಆಪರೇಷನ್ ಸಿಂದೂರ್ನಲ್ಲಿ ಡ್ರೋನ್ಗಳೇ ಹೆಚ್ಚು ಸದ್ದು ಮಾಡಿದ್ದವು. ಇತ್ತೀಚಿನ ದಿನಗಳಲ್ಲಿ ಸಮರಕ್ಕೂ ಸೇರಿ ವಿವಿಧ ಕಡೆಗಳಲ್ಲಿ ಈ ಡ್ರೋನ್ಗಳದ್ದೇ ಹವಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡ್ರೋನ್ ಆವಿಷ್ಕಾರಕ್ಕೆ ಭಾರಿ ಮಹತ್ವ ಸಿಗುತ್ತಿದೆ. ಭವಿಷ್ಯದಲ್ಲಿ ರಕ್ಷಣಾ ಪಡೆಗಳಿಗೆ ಸಹಾಯವಾಗಬಲ್ಲ ಡ್ರೋನ್‌ಗಳನ್ನು ವಿದ್ಯಾರ್ಥಿಗಳೇ ತಯಾರಿಸಿ, ಧಾರವಾಡದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
1 / 8
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಡ್ರೋನ್ಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದರಿಂದ ಅಭಿವೃದ್ಧಿ ಹಾಗೂ ಸೇವಾ ಕ್ಷೇತ್ರಕ್ಕೆ ಮಾತ್ರವೇ ಸಿಮೀತವಾಗಿದ್ದ ಡ್ರೋನ್‌ಗಳನ್ನು ಭವಿಷ್ಯದಲ್ಲಿ ಹೇಗೆಲ್ಲ ರಕ್ಷಣಾ ವ್ಯವಸ್ಥೆಗೆ ಹಾಗೂ ಯುದ್ಧಕ್ಕೆ ಬಳಸಬಹುದು ಅನ್ನೋದನ್ನೇ ಆಧರಿಸಿ ಈ ಸಲ ಡ್ರೋನ್ ಸ್ಪರ್ಧೆ ಆಯೋಜಿಸಲಾಗಿತ್ತು.
2 / 8
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಾವು ತಯಾರಿಸಿದ್ದ ಡ್ರೋನ್‌ಗಳನ್ನು ಪ್ರದರ್ಶಿಸಿದರು. ಡ್ರೋನ್ ತಂತ್ರಗಾರಿಕೆಯನ್ನು ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಅಭಿವೃದ್ಧಿಪಡಿಸುವ ದೃಷ್ಟಿಯಿಂದಲೂ ಸ್ಪರ್ಧಾಳುಗಳಿಗೆ ಕಾರ್ಯಾಗಾರ ನಡೆಸಲಾಯಿತು. ಅಟೋನಾಮಸ್ ಕೋರ್ಸ್ ಆಧಾರಿತ ಡ್ರೋನ್‌ಗಳನ್ನು ಇಲ್ಲಿ ಪ್ರದರ್ಶನ ಮಾಡಲಾಯಿತು.
3 / 8
ಸಾಮಾನ್ಯವಾಗಿ ಡ್ರೋನ್‌ಗಳನ್ನು ಹಾರಿಸಬೇಕಾದರೆ ಕೈಯಲ್ಲಿ ರಿಮೋಟ್ ಹಿಡಿದುಕೊಂಡು ನಿರ್ವಹಿಸಲೇಬೇಕು. ಡ್ರೋನ್ ಎಲ್ಲಿಗೆ ಹೋಗುತ್ತೆ ಅನ್ನೋದನ್ನು ಅದರ ಮೇಲೆ ನಿರಂತರ ನಿಗಾ ಇಡಲೇಬೇಕಾಗುತ್ತದೆ. ಆದರೆ, ಇಲ್ಲಿ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿರುವ ಡ್ರೋನ್‌ಗಳನ್ನು ಯಾವುದೇ ರಿಮೋಟ್ ನಿಂದ ನಿರ್ವಹಿಸಲೇಬೇಕಿಲ್ಲ.
4 / 8
ಭಾರತೀಯ ಸೇನೆ ಬಳಸಿದ್ದ ಡ್ರೋನ್ಗಳಲ್ಲಿ ಇದ್ದ ತಂತ್ರಜ್ಞಾನವನ್ನು ಆಧರಿಸಿ ಈ ಡ್ರೋನ್‌ಗಳನ್ನು ಆವಿಷ್ಕಾರ ಮಾಡಲಾಗಿದೆ. ವೈದ್ಯಕೀಯ ಸೇವೆ ಮತ್ತು ರಕ್ಷಣಾ ಪಡೆಗೆ ಸಹಾಯವಾಗಬಲ್ಲಂತೆ ವಿದ್ಯಾರ್ಥಿಗಳು ಡ್ರೋನ್‌ಗಳನ್ನು ತಯಾರಿಸಿದ್ದಾರೆ. ಟ್ರಾನ್ಸ್ ಮೀಟರ್ ಮೂಲಕ ಡ್ರೋನ್ಗೆ ರೇಡಿಯೇಷನ್ ಬರುತ್ತದೆ. ಆ ರೆಡಿಯೇಷನ್ ನಿಂದ ಡ್ರೋನ್ಗೆ ಸಿಗ್ನಲ್ ಬರುತ್ತದೆ. ಆ ಸಿಗ್ನಲ್ ಆಧರಿಸಿಯೇ ಮುಂಚಿತವಾಗಿ ನಿಗದಿಪಡಿಸಿದ ಸ್ಥಳಕ್ಕೆ ತಾನಾಗಿಯೇ ಡ್ರೋನ್ ಹೋಗಿ ಮಾಡಬೇಕಾಗಿರುವ ತನ್ನ ಕೆಲಸವನ್ನು ಮುಗಿಸಿಕೊಂಡು, ಪುನಃ ಸ್ವಸ್ಥಾನಕ್ಕೆ ಮರಳುತ್ತದೆ.
5 / 8
ಈ ಸ್ಪರ್ಧೆಯಲ್ಲಿಯೂ ಒಂದು ನಿಗದಿತ ಸ್ಥಳ ಗುರುತು ಮಾಡಲಾಗಿತ್ತು. ಅಲ್ಲಿಂದ ಹಾರಿ ಹೋಗುವ ಡ್ರೋನ್ಗಳಿಗೆ ಮುಂಚೆಯೇ ಮೈದಾನದಲ್ಲಿ ಕೆಲವೊಂದು ಜಾಗಗಳನ್ನು ಗುರುತು ಮಾಡಲಾಗುತ್ತದೆ. ಅಲ್ಲಿಂದ ಬರುವ ರೇಡಿಯೇಷನ್ ಸಿಗ್ನಲ್ ಆಧರಿಸಿ ಆ ಡ್ರೋನ್‌ಗಳು ಗುರಿಯ ಸ್ಥಳಗಳಿಗೆ ಇಳಿದು, ಪುನಃ ಮೇಲೆ ಹಾರಿ, ಮತ್ತೊಂದು ಸ್ಥಳಕ್ಕೆ ಹೋಗಿ, ಪುನಃ ಮೇಲೆ ಹಾರಿ, ಸ್ವಸ್ಥಾನಕ್ಕೆ ಬರಬೇಕು. ಒಂದೊಂದು ಸಲ ಮೂರರಿಂದ ನಾಲ್ಕು ಸ್ಥಳಗಳ ಗುರು ನಿಗದಿ ಮಾಡಲಾಗಿತ್ತು. ಅಷ್ಟೂ ಗುರಿಗಳಿಗೆ ಇಳಿದು ಡ್ರೋನ್‌ಗಳು ನಿಗದಿತ ಸ್ವಸ್ಥಾನಕ್ಕೆ ಮರಳಿದರೆ ಆ ತಂಡ ವಿಜಯ ಆದಂತೆ.
6 / 8
ಧಾರವಾಡದ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಳೆದ 14 ವರ್ಷಗಳಿಂದ ಇನ್ಸಿಗ್ನಿಯಾ ಎಂಬ ಎಂಜಿನಿಯರಿಂಗ್ ಆಧಾರಿತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿವರ್ಷ ಆಟೋಮೊಬೈಲ್, ಕೃಷಿ, ಕೈಗಾರಿಕೆ ಸಂಬಂಧಿತ ವಿವಿಧ ಯಂತ್ರೋಪಕರಣ ಸೇರಿದಂತೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕೈಗೊಳ್ಳಲಿರುವ ಯೋಜನೆಗಳು, ವಿವಿಧ ಹೊಸ ಆವಿಷ್ಕಾರಗಳ ಬಗ್ಗೆಯೇ ಹೆಚ್ಚು ಒತ್ತುಕೊಟ್ಟು ಇನ್ಸಿಗ್ನಿಯಾ ನಡೆಸಲಾಗುತ್ತಿದೆ.
7 / 8
ಒಟ್ಟಾರೆಯಾಗಿ ಧಾರವಾಡದಲ್ಲಿ ನಡೆದಿರುವ ಈ ಇನ್ ಸಿಗ್ನಿಯಾ ಸ್ಪರ್ಧೆ, ಕೇವಲ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ಪಠ್ಯದ ಬಗ್ಗೆ ಸ್ಪರ್ಧೆ ಆಯೋಜಿಸುವುದು ಮಾತ್ರವಲ್ಲದೇ ದೇಶದ ರಕ್ಷಣಾ ವ್ಯವಸ್ಥೆಗೂ ಪೂರಕವಾಗಿ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಬೇಕು ಎಂಬುವುದು ಸ್ಪರ್ಧೆಯ ಉದ್ದೇಶವಾಗಿದೆ.