ಟಿವಿ ದೋಷ ಸರಿಪಡಿಸದ ಪ್ರಕರಣದಲ್ಲಿ ಝಿಯೋಮಿ ಟಿವಿ ಕಂಪನಿ ಮತ್ತು ವಿಮಾ ಸಂಸ್ಥೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದ್ದಲ್ಲದೇ ಒಂದು ತಿಂಗಳೊಳಗೆ ಟಿವಿ ದೋಷ ಸರಿಪಡಿಸುವಂತೆ ಆದೇಶಿಸಿದೆ. ಧಾರವಾಡ ನಗರದ ನವಲೂರು ಬಡಾವಣೆಯ ವಿನಾಯಕ ನಗರದ ನಿವಾಸಿ ವಕೀಲ ಸಿ.ಎಸ್. ಹಿರೇಮಠ ಅವರು 2020 ಸೆ.11ರಂದು ಹುಬ್ಬಳ್ಳಿಯ ಕಾಮಾಕ್ಷಿ ಎಂಟರ್‌ಪ್ರೈಸೆಸ್ ಬಳಿ ರೂ. 22,500 ಕೊಟ್ಟು ಝಿಯೋಮಿ ಕಂಪನಿಯ ಟಿವಿ ಖರೀದಿಸಿದ್ದರು. ರೂ. 552 ಪ್ರೀಮಿಯಂ ಕಟ್ಟಿ ವಿಮೆ ಕೂಡ ಮಾಡಿಸಿದ್ದರು.
2021ರ ಅಕ್ಟೋಬರ್‌ನಲ್ಲಿ ಟಿವಿಯಲ್ಲಿ ದೋಷ ಉಂಟಾಗಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ದೋಷ ಸರಿಪಡಿಸುವಂತೆ ಕಾಮಾಕ್ಷಿ ಎಂಟರ್‌ಪ್ರೈಸೆಸ್‌ನವರಿಗೆ ಹಿರೇಮಠ ದೂರು ನೀಡಿದ್ದರು. ಟಿ.ವಿ. ಉತ್ಪಾದನಾ ದೋಷದಿಂದ ಕೂಡಿದೆ ಎಂದು ಕಂಪನಿ ಹಾಗೂ ವಿಮಾ ಸಂಸ್ಥೆಗೆ ತಿಳಿಸಿರುವುದಾಗಿ ಹಿರೇಮಠ ಅವರಿಗೆ ಕಾಮಾಕ್ಷಿ ಎಂಟರ್‌ಪ್ರೈಸೆಸ್ ನವರು ಹೇಳಿದ್ದರು.
Also read: ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ, 10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ಉತ್ಪಾದಕ ಕಂಪನಿ 10 ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿತ್ತು. ಆದರೆ ಹೇಳಿದ ಹಾಗೆ ಝಿಯೋಮಿ ಕಂಪನಿ ದೋಷವನ್ನು ಸರಿಪಡಿಸಿರಲಿಲ್ಲ. ಇದರಿಂದಾಗಿ ನೊಂದ ಸಿ.ಎಸ್. ಹಿರೇಮಠ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ, ಝಿಯೋಮಿ ಕಂಪನಿ ಮತ್ತು ವಿಮಾ ಕಂಪನಿ ಜಂಟಿಯಾಗಿ ದೂರುದಾರರಿಗೆ ರೂ. 10 ಸಾವಿರ ಪರಿಹಾರ ಹಾಗೂ ಪ್ರಕರಣದ ವೆಚ್ಚ ರೂ. 5 ಸಾವಿರ ನೀಡುವಂತೆ ಆದೇಶಿಸಿದ್ದಾರೆ. ಅಲ್ಲದೇ ಒಂದು ತಿಂಗಳೊಳಗೆ ಟಿವಿ ದೋಷ ಸರಿಪಡಿಸುವಂತೆ ಆದೇಶಿಸಿದ್ದಾರೆ. ಇನ್ನು ಈ ದೋಷಕ್ಕೆ ಟಿವಿ ಮಾರಾಟಗಾರರಾದ ಕಾಮಾಕ್ಷಿ ಎಂಟರ್‌ಪ್ರೈಸೆಸ್‌ನವರು ಹೊಣೆಗಾರರಲ್ಲ ಅಂತಾ ಅವರ ಮೇಲಿನ ದೂರನ್ನು ಆಯೋಗ ವಜಾಗೊಳಿಸಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Fri, 6 October 23