ಧಾರವಾಡ: ಹಜ್ ಯಾತ್ರೆ ತಪ್ಪಿಸಿದ್ದಕ್ಕೆ ಅಲ್-ಹುದೆಬಿಯಾ ಟ್ರಾವೆಲ್ಸ್‌ಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

| Updated By: Rakesh Nayak Manchi

Updated on: Jul 22, 2023 | 4:58 PM

ಧಾರವಾಡದ ನವಲೂರಿನ ಮುಸ್ಲಿಂ ಕುಟುಂಬವೊಂದು ಹಜ್‌ ಧಾರ್ಮಿಕ ಯಾತ್ರೆಗೆ ತೆರಳಲು ಯೋಜನೆ ಹಾಕಿತ್ತು. ಆದರೆ ಹುಬ್ಬಳ್ಳಿಯ ಅಲ್-ಹುದೆಬಿಯಾ ಟ್ರಾವೆಲ್ಸ್​ಗೆ ಹಣ ಪಾವತಿಸಿದ್ದರೂ ಸೌಲಭ್ಯ ಕಲ್ಪಿಸಿರಲಿಲ್ಲ. ಹೀಗಾಗಿ ಈ ಟ್ರಾವೆಲ್ಸ್​ಗೆ ಗ್ರಾಹಕರ ಆಯೋಗ ದಂಡ ವಿಧಿಸಿದೆ.

ಧಾರವಾಡ: ಹಜ್ ಯಾತ್ರೆ ತಪ್ಪಿಸಿದ್ದಕ್ಕೆ ಅಲ್-ಹುದೆಬಿಯಾ ಟ್ರಾವೆಲ್ಸ್‌ಗೆ ದಂಡ ವಿಧಿಸಿದ ಗ್ರಾಹಕರ ಆಯೋಗ
ಹಜ್ ಯಾತ್ರೆ ತಪ್ಪಿಸಿದ್ದಕ್ಕೆ ಅಲ್-ಹುದೆಬಿಯಾ ಟ್ರಾವೆಲ್ಸ್‌ಗೆ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
Follow us on

ಧಾರವಾಡ, ಜುಲೈ 22: ಹಜ್ ಯಾತ್ರೆ ತಪ್ಪಿಸಿದ ಅಲ್-ಹುದೆಬಿಯಾ ಟೂರ್ಸ್ ಟ್ರಾವೆಲ್ಸ್ ಸಂಸ್ಥೆಗೆ ಧಾರವಾಡದ (Dharwad) ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿ ದೂರುದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಧಾರವಾಡದ ನವಲೂರಿನ ಮುಸ್ಲಿಂ ಕುಟುಂಬವೊಂದು ಹಜ್‌ ಧಾರ್ಮಿಕ ಯಾತ್ರೆಗೆ (Hajj Yatra) ತೆರಳಲು ಯೋಜನೆ ಹಾಕಿತ್ತು. ಆದರೆ ಹುಬ್ಬಳ್ಳಿಯ ಅಲ್-ಹುದೆಬಿಯಾ ಟ್ರಾವೆಲ್ಸ್​ಗೆ ಹಣ ಪಾವತಿಸಿದ್ದರೂ ಸೌಲಭ್ಯ ಕಲ್ಪಿಸಿರಲಿಲ್ಲ. ಹೀಗಾಗಿ ಈ ಟ್ರಾವೆಲ್ಸ್​ಗೆ ಗ್ರಾಹಕರ ಆಯೋಗ ದಂಡ ವಿಧಿಸಿದೆ.

ಧಾರವಾಡದ ನವಲೂರಿನ ಹಜರತ್‌‌ಸಾಬ್, ಫಾತಿಮಾ, ಬಿಬಿಶಾ ಕುಸುಗಲ್ ಮತ್ತು ಸಮೀರ್ ಬಾನಿ ಎಂಬ ಒಂದೇ ಕುಟುಂಬದ ಸದಸ್ಯರು ಉಮರ್ ಮತ್ತು ಹಜ್‌ ಧಾರ್ಮಿಕ ಯಾತ್ರೆಗೆ ತೆರಳಲು ಯೋಜನೆ ಹಾಕಿದ್ದರು. ಅದಕ್ಕಾಗಿ ಹುಬ್ಬಳ್ಳಿಯ ಅಲ್-ಹುದೆಬಿಯಾ ಇಂಟರ್‌ನ್ಯಾಶನಲ್ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆಗೆ 3.16 ಲಕ್ಷ ರೂ. ಕಟ್ಟಿ ಪ್ರಯಾಣ ನಿಗದಿಪಡಿಸಿಕೊಂಡಿದ್ದರು.

ಟ್ರಾವೆಲ್ಸ್‌ನವರು 2022 ಅಕ್ಟೋಬರ್ 3 ನೇ ವಾರದಲ್ಲಿ ಯಾತ್ರೆಗೆ ತೆರಳಲು ಸೌಲಭ್ಯ ಕಲ್ಪಿಸಬೇಕಾಗಿತ್ತು. ಆದರೆ, ಅಕ್ಟೋಬರ್ ಕಳೆದು ಹಲವು ತಿಂಗಳು ಕಳೆದರೂ ಯಾತ್ರೆಗೆ ತೆರಳುವ ಸೌಲಭ್ಯ ಒದಗಿಸಿರಲಿಲ್ಲ. ಹೀಗಾಗಿ ತಮ್ಮ ಹಜ್ ಯಾತ್ರೆ ತಪ್ಪಿದ್ದಲ್ಲದೇ ಟ್ರಾವೆಲ್ಸ್‌ನವರಿಂದ ಮೋಸವಾಗಿದೆ ಎಂದು ಆರೋಪಿಸಿ ಟ್ರಾವಲ್ಸ್ ವಿರುದ್ಧ ಗ್ರಾಹಕರ ಆಯೋಗಕ್ಕೆ 2023 ರ ಜನವರಿ ತಿಂಗಳಲ್ಲಿ ದೂರು ನೀಡಲಾಗಿತ್ತು.

ಇದನ್ನೂ ಓದಿ: ಮದುವೆ ಫೋಟೋ ಕೊಡದ ಫೋಟೊಗ್ರಾಫರ್​ಗೆ​ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ

ಈ ದೂರಿನ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಹಜ್‌ ಯಾತ್ರೆಯ ಪ್ರಯಾಣದ ವೆಚ್ಚ 3.16 ಲಕ್ಷ ರೂ. ಪಡೆದುಕೊಂಡು ಪ್ರಯಾಣ ಏರ್ಪಡಿಸದೇ, ಹಣವನ್ನು ಸ್ವಂತಕ್ಕಾಗಿ ಬಳಸಿಕೊಂಡು ಹಜ್‌ ಯಾತ್ರೆ ಕೈಗೊಳ್ಳಬೇಕೆನ್ನುವವರ ಆಶಯಕ್ಕೆ ನೀರೆರಚ್ಚಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ ದೂರುದಾರರು ಸಂದಾಯ ಮಾಡಿದ. 3.16 ಲಕ್ಷ ಹಾಗೂ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿಯನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗವು ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50 ಸಾವಿರ ರೂ. ಪರಿಹಾರ ಹಾಗೂ ಈ ಪ್ರಕರಣದ ವೆಚ್ಚವಾಗಿ 10,000 ರೂ. ನೀಡುವಂತೆ ಟ್ರಾವೆಲ್ಸ್‌ರವರಿಗೆ ಆಯೋಗ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ