ಧಾರವಾಡ: ಒಪ್ಪಂದದಂತೆ ನಿವೇಶನ ಅಭಿವೃದ್ಧಿ ಮಾಡದ ಬಿಲ್ಡರ್‌ಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ
ಒಪ್ಪಂದದಂತೆ ನಿವೇಶನ ಅಭಿವೃದ್ಧಿ ಮಾಡದ ಬಿಲ್ಡರ್ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಲಾಗಿತ್ತು. ಇದರ ಅನ್ವಯ ವಿಚಾರಣೆ ನಡೆಸಿದ ಆಯೋಗವು ಇಂದು ಬಿಲ್ಡರ್‌ಗೆ ದಂಡ ವಿಧಿಸಿ ಆದೇಶಿಸಿದೆ.
ಧಾರವಾಡ, ಜುಲೈ 18: ಒಪ್ಪಂದದಂತೆ ನಿವೇಶನ ಅಭಿವೃದ್ಧಿ ಮಾಡದ ಬಿಲ್ಡರ್‌ಗೆ ಜಿಲ್ಲಾ ಗ್ರಾಹಕರ ಆಯೋಗವು (Dharwad Consumer Commission) ದಂಡ ವಿಧಿಸಿದೆ. ಮುಂಗಡ ಹಣ 5 ಲಕ್ಷ ರೂ. ಮತ್ತು ಇದಕ್ಕೆ ಶೇ.8 ರಂತೆ ಬಡ್ಡಿ, ಮಾನಸಿಕ ಹಿಂಸೆಗಾಗಿ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಹುಬ್ಬಳ್ಳಿಯ ನಗರದ ಮೃತ್ಯುಂಜಯ ಬಡಾವಣೆ ವಿದ್ಯಾನಗರ ನಿವಾಸಿ ಬಸವರಾಜ ಬಸಾಪುರ ಅವರು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ವತಿಯಿಂದ ಅಮರಗೋಳ ಬಡಾವಣೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಲೇಔಟ್ನಲ್ಲಿ ಪ್ಲಾಟ್ ನಂ. 27 ನ್ನು 9.95 ಲಕ್ಷಕ್ಕೆ ಖರೀದಿಸಿದ್ದರು. ಆ ಪೈಕಿ 5 ಲಕ್ಷ ರೂ. ಮುಂಗಡ ಹಣ ಕೊಟ್ಟು 2015 ರ ಮೇ 29 ರಂದು ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಸಾಕಷ್ಟು ಕಾಲಾವಕಾಶ ನೀಡಿದರೂ ನಿವೇಶನ ಅಭಿವೃದ್ಧಿ ಮಾಡಿರಲಿಲ್ಲ. ಅಷ್ಟೇ ಅಲ್ಲದೆ, ಮುಂಗಡ ಹಣವನ್ನು ಸಹ ವಾಪಸ್ಸು ಕೊಟ್ಟಿರಲಿಲ್ಲ. ಆದ್ದರಿಂದ ಬಿಲ್ಡರ್ ವಿರುದ್ಧ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಬಸವರಾಜ ಅವರು ದೂರು ಸಲ್ಲಿಸಿದ್ದರು.
ಇದನ್ನೂ ಓದಿ: Viral News: ಮಸಾಲೆ ದೋಸೆಯೊಂದಿಗೆ ಸಾಂಬಾರ್ ನೀಡದಿದ್ದಕ್ಕೆ ರೆಸ್ಟೋರೆಂಟ್‌ಗೆ 3,500 ರೂ. ದಂಡ
ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ 2015 ರಲ್ಲಿ ದೂರುದಾರನಿಂದ 5 ಲಕ್ಷ ರೂ. ಹಣ ಪಡೆದುಕೊಂಡು ನಿವೇಶನ ಅಭಿವೃದ್ಧಿ ಮಾಡದೇ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ದೂರುದಾರರಿಗೆ ಮೋಸ ಎಸಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದ್ದಾರೆ.
ಮುಂಗಡ ಹಣ 5 ಲಕ್ಷ ರೂ. ಮತ್ತು ಅದರ ಮೇಲೆ ಶೇ. 8 ರಂತೆ ಬಡ್ಡಿ ಹಾಕಿ ಒಪ್ಪಂದವಾದ ದಿನದಿಂದ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಬಿಲ್ಡರ್‌ಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50 ಸಾವಿರ ರೂ. ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚವೆಂದು 10 ಸಾವಿರ ರೂ. ನೀಡುವಂತೆ ತೀರ್ಪಿನಲ್ಲಿ ಆಯೋಗ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ