ಅಯೋಧ್ಯೆಯ ರಾಮನಿಗೆ ಧಾರವಾಡದ ಕುರುಬರಿಂದ ಜೋಡಿ ಕಂಬಳಿಗಳ ಕೊಡುಗೆ! ಏನದರ ವಿಶೇಷ?
ದೇಶದ ವಿವಿಧ ಕಡೆಗಳಿಂದ ಬಗೆ ಬಗೆಯ ಉಡುಗೆ-ದೇಣಿಗೆಗಳನ್ನು ಭಕ್ತರು ಅಯೋಧ್ಯೆಗೆ ಕಳಿಸುತ್ತಿದ್ದಾರೆ. ಧಾರವಾಡದಿಂದಲೂ ವಿಶೇಷ ಉಡುಗೊರೆ ರಾಮ ಲಲ್ಲಾ ಪೂಜೆಗೆ ಹೋಗುತ್ತಿದೆ. ಉ.ಕ ಪದ್ಧತಿಗಳಲ್ಲೊಂದಾದ ಆ ಉಡುಗೊರೆಯನ್ನು ಅಯೋಧ್ಯೆಗೆ ಕಳಿಸೋ ಜವಾಬ್ದಾರಿಯನ್ನು ಧಾರವಾಡ ಸಂಸದ ಪ್ರಲ್ಹಾದ ಜೋಶಿ ವಹಿಸಿಕೊಂಡಿದ್ದಾರೆ.
ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ (Ram Mandir Inauguration). ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಕಡೆಗಳಿಂದ ಬಗೆ ಬಗೆಯ ದೇಣಿಗೆಗಳನ್ನು ಭಕ್ತರು ಅಯೋಧ್ಯೆಗೆ ಕಳಿಸುತ್ತಿದ್ದಾರೆ. ಇದೇ ವೇಳೆ ಧಾರವಾಡದಿಂದಲೂ ವಿಶೇಷ ಉಡುಗೊರೆಯೊಂದು ರಾಮ ಲಲ್ಲಾನ ಪೂಜೆಗೆ ಹೋಗುತ್ತಿದೆ. ಉತ್ತರ ಕರ್ನಾಟಕದ ಪದ್ಧತಿಗಳಲ್ಲೊಂದಾದ ಆ ಉಡುಗೊರೆಯನ್ನು (Gift) ಅಯೋಧ್ಯೆಗೆ ( Ayodhya) ಕಳಿಸೋ ಜವಾಬ್ದಾರಿಯನ್ನು ಕೇಂದ್ರ ಸಚಿವ ಹಾಗೂ ಧಾರವಾಡದ (Dharwad) ಸಂಸದ ಪ್ರಲ್ಹಾದ ಜೋಶಿ (Pralhad Joshi) ವಹಿಸಿಕೊಂಡಿದ್ದಾರೆ.
ಈಗಾಗಲೇ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿರೋ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸವಿಯಲು ಇಡೀ ದೇಶವೇ ಕಾತುರವಾಗಿದೆ. ಇದೇ ವೇಳೆ ದೇಶದ ಮೂಲೆ ಮೂಲೆಗಳಿಂದ ರಾಮನಿಗಾಗಿ ಬಗೆ ಬಗೆಯ ಉಡುಗೊರೆಗಳು ಬರುತ್ತಿವೆ. ಕೆಲವರು ಭಕ್ತಿಯ ಸಂಕೇತವಾಗಿರೋ ವಸ್ತುಗಳನ್ನು ಕಳಿಸುತ್ತಿದ್ದರೆ ಮತ್ತೆ ಕೆಲವರು ತಮಗಿಷ್ಟವಾದ ವಸ್ತುಗಳನ್ನು ತಮ್ಮ ನೆಚ್ಚಿನ ರಾಮಚಂದ್ರನಿಗೆ ಕಳಿಸುತ್ತಿದ್ದಾರೆ.
ಇಂಥವರ ಪೈಕಿ ಧಾರವಾಡದ ಸುಭಾಸ್ ಬಸಪ್ಪ ರಾಯಪ್ಪನವರ್ ಕೂಡ ಒಬ್ಬರು. ಬಸಪ್ಪ ಮೂಲತಃ ಕಂಬಳಿ ಮಾರಾಟಗಾರರು. ಅವರ ಅಜ್ಜನ ಕಾಲದಿಂದ ಅವರ ಕುಟುಂಬಸ್ಥರು ಈ ಕಂಬಳಿ ಮಾರಾಟ ಮಾಡಿಯೇ ಜೀವನ ನಡೆಸುತ್ತಾರೆ. ಇಂಥ ಬಸಪ್ಪ ರಾಮ ಭಕ್ತನೂ ಹೌದು. ಇದೇ ಕಾರಣಕ್ಕೆ ತಮ್ಮ ಜೀವನ ನಿರ್ವಹಣೆಗೆ ನೆರವಾಗಿರೋ ಈ ಕಂಬಳಿ (Dharwad Kuruba Kambali Gift) ಮೂಲಕವೇ ತಮ್ಮ ನೆಚ್ಚಿನ ದೇವರಿಗೆ ಉಡುಗೊರೆ ಕೊಡಲು ಸುಭಾಸ್ ನಿರ್ಧರಿಸಿದ್ದಾರೆ. ಹೀಗಾಗಿ ಎರಡು ಕುರುಬರ ಕಂಬಳಿಗಳನ್ನು ರಾಮನಿಗೆ ಅರ್ಪಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿಕೊಂಡ ಸುಭಾಸ್ ಅವರು, ಆ ಎರಡು ಕಂಬಳಿಗಳ ಅಂಚಿಗೆ ‘ಕರಿ’ಯನ್ನು ನೇಯ್ದಿದ್ದಾರೆ.
ಏನಿದು ಕಂಬಳಿ ಅಂಚಿಗೆ ನೇಯುವ ‘ಕರಿ’?
ಸಾಮಾನ್ಯವಾಗಿ ಕಂಬಳಿಯ ಅಂಚಿನಲ್ಲಿ ಯಾವುದೇ ನೇಯ್ಗೆ ಇರೋದಿಲ್ಲ. ತುದಿಯ ಭಾಗದ ನೇಯ್ದೆ ಬಿಚ್ಚಬಾರದು ಅಂತಾ ಗಂಟು ಹಾಕೋ ಮೂಲಕ ನೇಯಲಾಗಿರುತ್ತೆ. ಆದರೆ ಹೀಗೆ ದೇವಸ್ಥಾನಗಳಿಗೆ ಅಥವಾ ದೈವಕಾರ್ಯಗಳಿಗೆ ಕಂಬಳಿಗಳನ್ನು ನೀಡಬೇಕಾದರೆ ಈ ‘ಕರಿ’ಯನ್ನು ನೇಯಲೇಬೇಕು. ಸುಭಾಸ್ ತಾವು ಮಾರಾಟ ಮಾಡುವ ಕುರುಬರ ಕಂಬಳಿಗಳ ಪೈಕಿ ಎರಡನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳ ಅಂಚಿಗೆ ‘ಕರಿ’ಯನ್ನು ನೇಯ್ದಿದ್ದಾರೆ. ಹೀಗೆ ಒಂದು ದೇವರ ಹೆಸರು ಹೇಳಿ ‘ಕರಿ’ಯನ್ನು ನೇಯ್ದರೆ ಅವುಗಳನ್ನು ಅದೇ ದೇವರಿಗೆ ಅರ್ಪಿಸಬೇಕು. ಇದೀಗ ಈ ಎರಡು ಕಂಬಳಿಗಳಿಗೆ ಅಯೋಧ್ಯೆಯ ರಾಮನ ಹೆಸರಿನಲ್ಲಿಯೇ ‘ಕರಿ’ ನೇಯಲಾಗಿದ್ದು, ಅವುಗಳನ್ನು ಇಷ್ಟರಲ್ಲಿಯೇ ಅಯೋಧ್ಯೆಗೆ ರವಾನೆ ಮಾಡಲಾಗುತ್ತೆ.
ಕಂಬಳಿ ಕಳಿಸೋ ಜವಾಬ್ದಾರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರದ್ದು..!
110 ಇಂಚು ಉದ್ದ ಮತ್ತು 54 ಇಂಚು ಅಗಲ ಇರೋ ಈ ಕಂಬಳಿಗಳನ್ನು ಸಣ್ಣ ಕುರಿಗಳ ಉಣ್ಣೆಯಿಂದ ತಯಾರಿಸಲಾಗಿದೆ. ಹೀಗೆ ಸಣ್ಣ ಕುರಿಗಳ ಉಣ್ಣೆಯಿಂದ ತಯಾರಿಸಿದ ಕಂಬಳಿಗಳು ತುಂಬಾನೇ ಮೃದುವಾಗಿರುತ್ತವೆ. ಅಲ್ಲದೇ ನೋಡಲು ತುಂಬಾನೇ ಆಕರ್ಷಕವಾಗಿರುತ್ತವೆ. ಹೀಗಾಗಿ ಇವುಗಳ ಬೆಲೆಯೂ ದುಬಾರಿ. ಇಂಥ ಕಂಬಳಿಗಳ ಪೈಕಿ ಉತ್ತಮವಾದ ಎರಡು ಕಂಬಳಿಗಳನ್ನು ಆರಿಸಿದ ಬಳಿಕ ಅದರ ಅಂಚಿಗೆ ಹಳದಿ ಮತ್ತು ಕೆಂಪು ಬಣ್ಣದ ದಾರದಿಂದ ‘ಕರಿ’ಯನ್ನು ಕಟ್ಟಲಾಗಿದೆ. ಈ ಕರಿಯನ್ನು ಸ್ವತಃ ಸುಭಾಸ್ ಅವರೇ ಕಟ್ಟಿದ್ದಾರೆ.
ಇದೆಲ್ಲವರೂ ಸಿದ್ಧವಾದ ಬಳಿಕ ಅವುಗಳನ್ನು ಅಲ್ಲಿಗೆ ಕಳಿಸೋದರ ಬಗ್ಗೆ ಚಿಂತೆ ಶುರುವಾಯಿತು. ಕೂಡಲೇ ಸುಭಾಸ್ ತಮ್ಮ ಆತ್ಮೀಯರಾಗಿರೋ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಈರೇಶ ಅಂಚಟಗೇರಿ ಅವರನ್ನು ಸಂಪರ್ಕಿಸಿದರು. ಕೂಡಲೇ ಈರೇಶ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಸಂಪರ್ಕಿಸಿ, ಸುಭಾಸ್ ಅವರನ್ನು ಪ್ರಲ್ಹಾದ ಜೋಶಿ ಅವರ ಬಳಿ ಕರೆದೊಯ್ದರು. ಇದನ್ನು ನೋಡಿದ ಜೋಶಿ ಅವರಿಗೆ ಸಂತಸವಾಗಿ, ಇವುಗಳನ್ನು ಅಯೋಧ್ಯೆಯ ರಾಮನಿಗೆ ಕಳಿಸೋ ವ್ಯವಸ್ಥೆ ಮಾಡಲು ನಿರ್ಧರಿಸಿದರು. ಇದರಿಂದಾಗಿ ರಾಮಭಕ್ತ ಸುಭಾಸ್ ಅವರಿಗೆ ಸಾಕಷ್ಟು ಸಂತೋಷವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಇಂಥ ಕಂಬಳಿಗಳನ್ನು ದೇವರಿಗೆ ಅರ್ಪಿಸೋದು ಹಲವಾರು ಶತಮಾನಗಳಿಂದ ನಡೆದು ಬಂದಿದೆ. ಅಲ್ಲದೇ ದೇವರ ಗದ್ದುಗೆ ಮೇಲೆ ಕೂಡ ಈ ಕಂಬಳಿಯನ್ನು ಹಾಸಲಾಗುತ್ತೆ. ಇನ್ನು ಇಂಥ ಕಂಬಳಿ ಮೇಲೆ ಕುಳಿತೇ ಶುಭ ಕಾರ್ಯಗಳನ್ನು ನೆರವೇರಿಸಲಾಗುತ್ತೆ. ಜನರಿಗೆ ಈ ಕಂಬಳಿ ಅಂದರೆ ಭಕ್ತಿಯ ಸಂಕೇತವಾಗಿದೆ. ಹೀಗಾಗಿ ಈ ಭಕ್ತಿಯ ಸಂಕೇತದ ಮೂಲಕವೇ ತನ್ನ ನೆಚ್ಚಿನ ದೇವರಿಗೆ ಉಡುಗೊರೆ ಕೊಡಲು ಸುಭಾಸ್ ನಿರ್ಧರಿಸಿದ್ದು ವಿಶೇಷ. ಒಟ್ಟಿನಲ್ಲಿ ಧಾರವಾಡದ ಈ ಎರಡು ಕಂಬಳಿಗಳು ಅಯೋಧ್ಯೆಯ ಶ್ರೀರಾಮಚಂದ್ರನಿಗೆ ಅರ್ಪಿತವಾಗುತ್ತಿರೋದು ಕಂಬಳಿಯನ್ನು ಭಕ್ತಿಯ ಸಂಕೇತ ಅಂತಾ ನಂಬೋ ಎಲ್ಲರಿಗೂ ಖುಷಿಯ ವಿಷಯವಾಗಿದೆ.
ಇನ್ನೂ ಈ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಸುಭಾಸ್, ನಮ್ಮ ಕುಟುಂಬಕ್ಕೆ ಈ ಕಂಬಳಿ ಅನ್ನ ಹಾಕೋ ದೇವರು. ನಮ್ಮ ಅಜ್ಜಂದಿರ ಕಾಲದಿಂದ ಈ ಕಂಬಳಿ ಮಾರಾಟದಿಂದಲೇ ನಾವು ಬದುಕು ರೂಪಿಸಿಕೊಂಡಿದ್ದೇವೆ. ಅಲ್ಲದೇ ಈ ಕಂಬಳಿ ಅಂದರೆ ನಮ್ಮ ಭಾಗದಲ್ಲಿ ದೇವರ ಸಮಾನ. ಕೇವಲ ಕುರುಬರಿಗಷ್ಟೇ ಅಲ್ಲದೇ ಈ ಕಂಬಳಿ ಬಹುತೇಕ ಎಲ್ಲ ಜನಾಂಗದವರಿಗೂ ದೈವ ಸಮಾನ. ನಾನು ಕೂಡ ರಾಮಭಕ್ತ. ಹೀಗಾಗಿ ಎಷ್ಟೋ ವರ್ಷಗಳಿಂದ ಕಾಣುತ್ತಿದ್ದ ಕನಸು ಇದೀಗ ನನಸಾಗುತ್ತಿದೆ.
ಅಯೋಧ್ಯೆಯಲ್ಲಿ ನನ್ನ ಭಕ್ತಿಯ ರಾಮನ ಮಂದಿರ ನಿರ್ಮಾಣವಾಗುತ್ತಿದೆ. ಹೀಗಾಗಿ ನನ್ನದೂ ಒಂದು ಸಣ್ಣ ಭಕ್ತಿಯ ಉಡುಗೊರೆ ಅಲ್ಲಿಗೆ ಮುಟ್ಟಲಿ ಅಂತಾ ಈ ಕುರುಬರ ಕಂಬಳಿ ಕಳಿಸುತ್ತಿದ್ದೇನೆ. ರಾಮನ ಹೆಸರಿನಲ್ಲಿಯೇ ನಾನು ಈ ಕಂಬಳಿಗೆ ‘ಕರಿ’ ಕಟ್ಟಿದ್ದೇನೆ. ಇದೀಗ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಇವುಗಳನ್ನು ಅಯೋಧ್ಯೆಗೆ ಮುಟ್ಟಿಸೋ ವ್ಯವಸ್ಥೆ ಮಾಡೋದಾಗಿ ಹೇಳಿದ್ದಾರೆ. ಹೀಗಾಗಿ ನನ್ನ ಕನಸನ್ನು ನನಸು ಮಾಡುತ್ತಿರೋ ಅವರಿಗೆ ನಾನು ಅಭಾರಿಯಾಗಿದ್ದೇನೆ ಅನ್ನುತ್ತಾರೆ.
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಈರೇಶ ಅಂಚಟಗೇರಿ, ನನಗೆ ಮುಂಚೆಯಿಂದಲೂ ಸುಭಾಸ್ ಅವರು ಪರಿಚಿತ. ಅವರು ನನ್ನ ಬಳಿ ಬಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ನನಗೂ ಈ ಕೆಲಸದಲ್ಲಿ ಭಾಗಿಯಾಗೋ ಅವಕಾಶ ಸಿಕ್ಕಿತು ಅನ್ನಿಸಿ ನೇರವಾಗಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಬಳಿ ಕರೆದೊಯ್ದೆ. ಅವರು ಇದನ್ನು ನೋಡಿ ಖುಷಿಯಿಂದ ಸುಭಾಸ್ ಅವರ ಆಸೆಯನ್ನು ನೆರೆವೇರಿಸೋ ವ್ಯವಸ್ಥೆ ಮಾಡೋದಾಗಿ ಹೇಳಿದರು. ಸುಭಾಸ್ ಅವರ ಈ ಉಡುಗೊರೆ ಕೇವಲ ಅವರದ್ದಷ್ಟೇ ಅಲ್ಲ, ಬದಲಿಗೆ ಧಾರವಾಡ ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಹೆಮ್ಮೆಯ ಉಡುಗೊರೆಯಾಗಿದೆ ಅನ್ನುತ್ತಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:08 pm, Thu, 4 January 24