ಮುಗಿಯದ ಪೊಲೀಸ್​​ ವರ್ಗಾವಣೆ ಆಟ: ಇನ್‌ಸ್ಪೆಕ್ಟರ್​​ಗಳಿಲ್ಲದೇ ಬಿಕೋ ಎನ್ನುತ್ತಿರುವ ಧಾರವಾಡ ಠಾಣೆಗಳು

ಧಾರವಾಡದಲ್ಲಿ ಪೊಲೀಸ್ ವರ್ಗಾವಣೆ ಸಮಸ್ಯೆ ತೀವ್ರಗೊಂಡಿದ್ದು, ಉಪನಗರ ಮತ್ತು ನಗರ ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್‌ಗಳೇ ಇಲ್ಲ. ಪ್ರಮುಖ ಠಾಣೆಗಳಲ್ಲಿ ಅಧಿಕಾರಿಗಳ ಅನುಪಸ್ಥಿತಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಭೀತಿ ಎದುರಾಗಿದೆ.

ಮುಗಿಯದ ಪೊಲೀಸ್​​ ವರ್ಗಾವಣೆ ಆಟ: ಇನ್‌ಸ್ಪೆಕ್ಟರ್​​ಗಳಿಲ್ಲದೇ ಬಿಕೋ ಎನ್ನುತ್ತಿರುವ ಧಾರವಾಡ ಠಾಣೆಗಳು
ಧಾರವಾಡ ಪೊಲೀಸ್​ ಠಾಣೆಗಳು
Edited By:

Updated on: Nov 25, 2025 | 4:52 PM

ಧಾರವಾಡ, ನವೆಂಬರ್​ 25: ನಗರದಲ್ಲಿ ಪೊಲೀಸ್​​ ವರ್ಗಾವಣೆಯ ಕಣಾ ಮುಚ್ಚಾಲೆಯಾಟ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ಕಡೆ ವರ್ಗಾವಣೆಯನ್ನೇ ರಾಜ್ಯ ಸರಕಾರ ದಂಧೆ ಮಾಡಿಕೊಂಡಿದೆ ಅನ್ನೋ ಆರೋಪ ಇದ್ದರೆ, ವರ್ಗಾವಣೆಯಾದವರನ್ನು ಆಯಾ ಸ್ಥಳಗಳಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪ ಮತ್ತೊಂದು ಕಡೆ. ಇದರಿಂದಾಗಿ ಧಾರವಾಡ (Dharwad) ನಗರದ ಎರಡು ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಇನ್ಸ್ಪೆಕ್ಟರ್​ಗಳೇ (inspectors) ಇಲ್ಲ. ಇದರಿಂದಾಗಿ ನಗರದಲ್ಲಿ ಏನಾದರೂ ಅನಾಹುತವಾದರೆ ಅದನ್ನು ನಿಯಂತ್ರಿಸುವವರು ಇಲ್ಲದಂತಾಗಿ ಹೋಗಿದೆ. ಇದಕ್ಕೆ ಕಾರಣ ರಾಜ್ಯ ಸರಕಾರದ ಬೇಜವಾಬ್ದಾರಿತನ.

ಧಾರವಾಡ ನಗರದಲ್ಲಿ ಒಟ್ಟು ಮೂರು ಪೊಲೀಸ್ ಠಾಣೆಗಳಿವೆ. ಅದರಲ್ಲಿ ಉಪನಗರ ಠಾಣೆ ಎಂದರೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಪೊಲೀಸರು ಕೆಲಸದಲ್ಲಿಯೇ ಇರಬೇಕಾಗುತ್ತೆ. ನಗರದ ಬಹುತೇಕ ಪ್ರಮುಖ ಪ್ರದೇಶಗಳು ಇದೇ ಠಾಣಾ ವ್ಯಾಪ್ತಿಯಲ್ಲಿ ಬರುತ್ತವೆ. ಇನ್ನು ನಗರ ಠಾಣೆಯೂ ಕೂಡ ಪ್ರಮುಖವಾದ ಪೊಲೀಸ್ ಠಾಣೆ. ಈ ಠಾಣಾ ವ್ಯಾಪ್ತಿಯಲ್ಲಿ ನಗರದ ಪ್ರಮುಖ ಮಾರುಕಟ್ಟೆ, ಜ್ಯುವೆಲರಿ ಅಂಗಡಿಗಳು ಸೇರಿದಂತೆ ಅನೇಕ ವ್ಯಾಪಾರಿ ಕೇಂದ್ರಗಳು ಬರುತ್ತವೆ.

ಇದನ್ನೂ ಓದಿ: ಇಡಿ ಅಧಿಕಾರಿ ಸೋಗಿನಲ್ಲಿ ಬಂದು 3 ಕೋಟಿ ರೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ

ಈ ಎರಡೂ ಠಾಣೆಗಳಿಗೆ ಇದೀಗ ಪೊಲೀಸ್ ಇನ್ಸ್ಪೆಕ್ಟರ್​ಗಳೇ ಇಲ್ಲದಂತಾಗಿದೆ. ಕಳೆದ ಬಾರಿ ವರ್ಗಾವಣೆ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಸೂಚಿಸಿದವರನ್ನು ವರ್ಗಾವಣೆ ಮಾಡಿಲ್ಲ ಅನ್ನೋ ಕಾರಣಕ್ಕೆ ಈ ಠಾಣೆಗಳಿಗೆ ವರ್ಗಾವಣೆಯಾಗಿ ಬಂದಿರುವ ಇನ್ಸ್ಪೆಕ್ಟರ್​ಗಳಿಗೆ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಅವಕಾಶವನ್ನೇ ನೀಡಿಲ್ಲ. ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಈ ಎರಡೂ ಠಾಣೆಗಳಿಗೆ ಇನ್ಸ್ಪೆಕ್ಟರ್ ಗಳೇ ಇಲ್ಲ. ಪ್ರಭಾರಿಯಾಗಿ ಇಬ್ಬರು ಇನ್ಸ್ಪೆಕ್ಟರ್​ಗಳನ್ನು ನೀಡಲಾಗಿದ್ದು, ಅವರು ಎಷ್ಟರಮಟ್ಟಿಗೆ ಸರಿಯಾಗಿ ಕಾರ್ಯನಿರ್ವಹಿಸಬಲ್ಲರು ಅನ್ನೋ ಪ್ರಶ್ನೆ ಎದುರಾಗಿದೆ. ಪೊಲೀಸ್ ಇಲಾಖೆಯ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಪನಗರ ಠಾಣೆಯನ್ನು ಎರಡು ಠಾಣೆಗಳನ್ನಾಗಿ ಮಾಡಬೇಕೆನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಈ ಠಾಣಾ ವ್ಯಾಪ್ತಿ ಅಷ್ಟು ದೊಡ್ಡದಿದೆ. ಈ ಠಾಣಾ ವ್ಯಾಪ್ತಿಯಲ್ಲಿಯೇ ಎಲ್ಲ ಸರಕಾರಿ ಕಚೇರಿಗಳು, ಡಿಸಿ ಕಚೇರಿ, ಎಸ್ಪಿ ಕಚೇರಿ, ಎರಡು ವಿಶ್ವವಿದ್ಯಾಲಯಗಳು, ಅನೇಕ ಕಾಲೇಜುಗಳು, ನೂರಾರು ಕೋಚಿಂಗ್ ಸೆಂಟರ್​ಗಳು, ಹೊಸ ಬಸ್ ನಿಲ್ದಾಣ ಬರುತ್ತವೆ. ಹೀಗಾಗಿ ಇಲ್ಲಿನ ಪೊಲೀಸರು ನಿರಂತರವಾಗಿ ಒತ್ತಡದಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. ಇಂಥ ಠಾಣೆಯ ಉಸ್ತುವಾರಿಗೆ ಓರ್ವ ಇನ್ಸ್ಪೆಕ್ಟರ್ ಇರದಿದ್ದರೆ ಹೇಗೆ ಅನ್ನೋ ಪ್ರಶ್ನೆ ಕಾಡುತ್ತಿದೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಿಷ್ಟು 

ಇನ್ನು ನಗರ ಠಾಣೆಯ ವ್ಯಾಪ್ತಿಯಲ್ಲಿಯೇ ಸೂಪರ್ ಮಾರ್ಕೆಟ್, ಸಿಟಿ ಬಸ್ ನಿಲ್ಧಾಣ, ಗ್ರಾಮಾಂತರ ಬಸ್ ನಿಲ್ದಾಣ ಸೇರಿದಂತೆ ಅನೇಕ ಜ್ಯುವೆಲರಿ ಶಾಪ್​ಗಳು ಬರುತ್ತವೆ. ಹೀಗಾಗಿ ಇಲ್ಲಿ ಕ್ರೈಮ್ ರೇಟ್ ಕೂಡ ಹೆಚ್ಚಾಗಿದೆ. ಆದರೆ ಇಂಥ ಠಾಣೆಗೂ ಕೂಡ ಕಳೆದ ಒಂದೂವರೆ ತಿಂಗಳಿನಿಂದ ಇನ್ಸ್ಪೆಕ್ಟರ್ ಇಲ್ಲ ಅಂದರೆ ಜನರ ಗತಿಯೇನು ಅನ್ನೋ ಪ್ರಶ್ನೆ ಎದುರಾಗಿದೆ. ಇನ್ನು ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಕೇಳಿದರೆ, ಸರ್ಕಾರದ ಆದೇಶದಂತೆ ವರ್ಗಾವಣೆಯಾದವರು ಬಂದು ರಿಪೋರ್ಟಿಂಗ್ ಮಾಡಿಕೊಳ್ಳಬೇಕು. ಇಲ್ಲವಾದರೆ ಸೂಕ್ತ ಕ್ರಮಕ್ಕಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ.

ಇದನ್ನೂ ಓದಿ: Children’s Day Special: 3D ಪ್ರಿಂಟಿಂಗ್​ ಪ್ರವೀಣೆ 7ನೇ ತರಗತಿಯ ಈ ಬಾಲೆ

ಇದು ಕೇವಲ ಧಾರವಾಡದ್ದಷ್ಟೇ ಸಮಸ್ಯೆಯಲ್ಲ. ಬದಲಿಗೆ ಹುಬ್ಬಳ್ಳಿಯಲ್ಲಿಯೂ ಇಂಥದ್ದೇ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್ ನಾಯಕರು ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿ ಅಂತಾ ಶಿಫಾರಸ್ಸು ಪತ್ರ ನೀಡಿದ್ದರೂ ಅದನ್ನು ಪರಿಗಣಿಸದೇ ಇರೋದೇ ಇದಕ್ಕೆ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಏನೇ ಆದರೂ ಮೊದಲಿಗೆ ಬಂದು ನಿಂತು, ಎಲ್ಲವನ್ನು ನಿರ್ವಹಿಸುವ ಪೊಲೀಸರ ಪರಿಸ್ಥಿತಿಯೇ ಹೀಗಾಗಿದೆ ಎಂದರೆ, ಇನ್ನು ಉಳಿದ ಇಲಾಖೆಗಳ ಗತಿ ದೇವರಿಗೇ ಪ್ರೀತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:51 pm, Tue, 25 November 25