AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಥಿಕ ಸಂಕಷ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ: ಅಭಿವೃದ್ಧಿ ಸ್ಥಗಿತ, ಸರ್ಕಾರದತ್ತ ಬೊಟ್ಟು

ಕರ್ನಾಟಕದ ಅಂತ್ಯತ ಹಳೆಯ ಮಹಾನಗರ ಪಾಲಿಕೆಯಲ್ಲಿ ಒಂದಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸರ್ಕಾರ ಪಾಲಿಕೆಗೆ ನೀಡಬೇಕಾದ ಅನುದಾನವನ್ನು ಕೂಡಲೇ ನೀಡಬೇಕು ಅಂತ ಬಿಜೆಪಿ ಆಡಳಿತವಿರುವ ಪಾಲಿಕೆ ಸದಸ್ಯರು ಆಗ್ರಹಿಸುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರ್ಥಿಕ ಸಂಕಷ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ: ಅಭಿವೃದ್ಧಿ ಸ್ಥಗಿತ, ಸರ್ಕಾರದತ್ತ ಬೊಟ್ಟು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಸಂಜಯ್ಯಾ ಚಿಕ್ಕಮಠ
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 31, 2025 | 4:53 PM

Share

ಹುಬ್ಬಳ್ಳಿ, ಅಕ್ಟೋಬರ್​​ 31: ಬೆಂಗಳೂರು ಹೊರತು ಪಡಿಸಿದರೆ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi-Dharwad Municipal Corporation) ಪಡೆದುಕೊಂಡಿದೆ. ಆದರೆ ಅವಳಿ ನಗರದಲ್ಲಿ ಅಭಿವೃದ್ದಿ ಮಾತ್ರ ಕುಂಠಿತವಾಗಿದೆ. ಪಾಲಿಕೆ ಇದೀಗ ಅನುದಾನ (fund) ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಿಬ್ಬಂದಿ ವೇತನ ನೀಡಲು ಕೂಡ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅವಳಿ ನಗರದ ರಸ್ತೆಗಳು ಗುಂಡಿಮಯವಾಗಿವೆ. ಅಭಿವೃದ್ದಿ ಬಗ್ಗೆ ಕೇಳಿದರೆ ಪಾಲಿಕೆ ಬೊಟ್ಟು ಮಾಡುತ್ತಿರುವುದು ರಾಜ್ಯ ಸರ್ಕಾರದತ್ತ.

ರಾಜ್ಯ ಸರ್ಕಾರದತ್ತ ಪಾಲಿಕೆ ಬೊಟ್ಟು 

ರಾಜ್ಯದ ವಾಣಿಜ್ಯ ನಗರಿ, ಶಿಕ್ಷಣ ನಗರಿ ಅಂತ ಕರೆಸಿಕೊಳ್ಳುವ ಹುಬ್ಬಳ್ಳಿ-ಧಾರವಾಡದ ಸ್ಥಿತಿ ಇದೀಗ ದೇವರಿಗೆ ಪ್ರೀತಿ ಅನ್ನುವಂತಾಗಿದೆ. ಎಲ್ಲೆಂದರಲ್ಲಿ ಬಿದ್ದಿರುವ ಗುಂಡಿಗಳು, ಹಾಳಾಗಿ ಹೋಗಿರುವ ರಸ್ತೆಗಳಿಂದ ಅವಳಿ ನಗರದ ಸೌಂದರ್ಯ ಹದಗೆಟ್ಟು ಹೋಗಿದೆ. ಅವಳಿ ನಗರದಲ್ಲಿ ಸಂಚರಿಸಲು ವಾಹನ ಸವಾರರು, ಜನರು ನಿತ್ಯ ಹತ್ತಾರು ರೀತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಮಾಡಿಸಿ ಅಂತ ಜನರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕೇಳಿದರೆ, ಪಾಲಿಕೆ ಬೊಟ್ಟು ಮಾಡುತ್ತಿರುವುದು ರಾಜ್ಯ ಸರ್ಕಾರದತ್ತ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಮರು ನಾಮಕರಣ: ರಾಣಿ ಚೆನ್ನಮ್ಮ ಮೈದಾನವೆಂದು ಹೆಸರಿಡಲು ಮುಂದಾದ ಪಾಲಿಕೆ

ಪಾಲಿಕೆಯಲ್ಲಿ ಸದ್ಯ ಯಾವುದೇ ಅನುದಾನ ಇಲ್ಲಾ ಅಂತ ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ತಗ್ಗು ಗುಂಡಿಗಳನ್ನು ಮುಚ್ಚಲು ಕೂಡ ಆಗದಂತಹ ದಯನೀಯ ಸ್ಥಿತಿಗೆ ಪಾಲಿಕೆ ತಲುಪಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ನೀಡುವುದು ದೂರದ ಮಾತಾಗಿದ್ದು, ಕನಿಷ್ಟ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡಲು ಕೂಡ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಾಲಿಕೆಗೆ 350 ಕೋಟಿ ರೂ. ಹೆಚ್ಚು ಅನುದಾನ ಬಾಕಿ

ರಾಜ್ಯ ಸರ್ಕಾರದಿಂದ ಪಾಲಿಕೆಗೆ 350 ಕೋಟಿ ರೂ. ಹೆಚ್ಚು ಅನುದಾನ ಬಾಕಿ ಇದೆಯಂತೆ. 15ನೇ ಹಣಕಾಸು ಯೋಜನೆ, ಎಸ್​ಎಪ್​​ಸಿ ಮುಕ್ತನಿಧಿ, ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ ಅನುದಾನ, ನೌಕರರ ಪಿಂಚಣಿ, ಅಮೃತ ಯೋಜನೆಯ ಅನುದಾನ ಸೇರಿ ವಿವಿಧ ಯೋಜನೆಗಳ ಅನುದಾನವನ್ನು ನೀಡುತ್ತಿಲ್ಲವಂತೆ. ಪಾಲಿಕೆಗೆ ನೀಡಬೇಕಾದ ಅನುದಾನವನ್ನು ನೀಡಬೇಕು ಅಂತ ಈಗಾಗಲೇ ಪಾಲಿಕೆ ಸರ್ಕಾರಕ್ಕೆ ಹತ್ತಾರು ಬಾರಿ ಪತ್ರ ವ್ಯವಹಾರ ಮಾಡಿದೆಯಂತೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವಂತೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಪಾಲಿಕೆಗಳಿಗೆ ಉದ್ದೇಶಪೂರ್ವಕವಾಗಿಯೇ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಅಂತ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಬಿಜೆಪಿ ಸದಸ್ಯರು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ ಪಾಲಿಕೆಗೆ ಹಣ ನೀಡುತ್ತಿರುವ ಸರ್ಕಾರ, ಬಿಜೆಪಿ ಅಧಿಕಾರದಲ್ಲಿರುವ ಪಾಲಿಕೆಗೆ ಅನುದಾನ ನೀಡದೆ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಅಂತ ಹೇಳಿದ್ದಾರೆ.

ಇಮ್ರಾನ್ ಯಲಿಗಾರ್ ಹೇಳಿದ್ದಿಷ್ಟು

ಇನ್ನು ಪಾಲಿಕೆಯ ಸರ್ವಪಕ್ಷ ಸದಸ್ಯರ ನಿಯೋಗ ತೆಗೆದುಕೊಂಡು ಸಿಎಂ ಬಳಿ ಹೋಗಲು ಕೂಡ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮೇಯರ್ ಸಜ್ಜಾಗಿದ್ದಾರೆ. ಆದರೆ ಬಿಜೆಪಿ ಸದಸ್ಯರಿಗೆ ಅಭಿವೃದ್ದಿ ಮಾಡುವ ಮನಸ್ಸು ಇಲ್ಲ, ಹೀಗಾಗಿ ನೆಪ ಹೇಳುತ್ತಿದ್ದಾರೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ್ ಎಂದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿದ ಬಿಜೆಪಿ

ಅನುದಾನ ಕೊರತೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇದೀಗ ಆರ್ಥಿಕ ಸಂಕಷ್ಟದಿಂದ ತೊಂದರೆಯಲ್ಲಿದ್ದು, ಅಭಿವೃದ್ದಿ ಕೆಲಸಗಳು ಕುಂಠಿತವಾಗಿವೆ. ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ದಿಯಾಗಬೇಕಾದರೆ ಸರ್ಕಾರ ಪಕ್ಷಪಾತವಿಲ್ಲದೇ ಅನುದಾನ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.