ಮತ್ತೆ ಸಂಕಷ್ಟದಲ್ಲಿ ಧಾರವಾಡ ಮಾವು ಬೆಳೆಗಾರರು: ಹಣ್ಣಿನ ರಾಜನಿಗೆ ಕಾಡುತ್ತಿದೆ ಭಯಾನಕ ರೋಗ

ಧಾರವಾಡ ಜಿಲ್ಲೆಯ ಮಾವು ಬೆಳೆಗಾರರು ಹಲವು ವರ್ಷಗಳಿಂದ ನಷ್ಟ ಎದುರಿಸುತ್ತಿದ್ದಾರೆ. ಈ ಬಾರಿ ಡಿಸೆಂಬರ್‌ನಲ್ಲಿ ಉತ್ತಮ ಹೂವು ಬಿಟ್ಟಿದ್ದರಿಂದ ಬಂಪರ್ ಬೆಳೆಯ ನಿರೀಕ್ಷೆ ಮೂಡಿತ್ತು. ಆದರೆ ಜನವರಿಯಲ್ಲಿ ಅಕಾಲಿಕ ಮಳೆ ಮತ್ತು ತಾಪಮಾನ ಕುಸಿತದಿಂದ ಹೂವುಗಳಿಗೆ ರೋಗದ ಭೀತಿ ಎದುರಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿದ್ದ ರೈತರಿಗೆ ಮತ್ತೆ ನಿರಾಸೆ ಕಾಡಿದ್ದು, ಬೆಳೆ ನಷ್ಟದ ಆತಂಕದಲ್ಲಿದ್ದಾರೆ.

ಮತ್ತೆ ಸಂಕಷ್ಟದಲ್ಲಿ ಧಾರವಾಡ ಮಾವು ಬೆಳೆಗಾರರು: ಹಣ್ಣಿನ ರಾಜನಿಗೆ ಕಾಡುತ್ತಿದೆ ಭಯಾನಕ ರೋಗ
ಹೂವು ಬಿಟ್ಟಿರುವ ಮಾವಿನ ಮರ
Edited By:

Updated on: Jan 16, 2026 | 5:42 PM

ಧಾರವಾಡ, ಜನವರಿ 16: ಧಾರವಾಡ (Dharwad) ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಮಾವು ಕೂಡ ಒಂದು. ಆದರೆ ಕಳೆದ ಹಲವಾರು ವರ್ಷಗಳಿಂದ ಮಾವಿನ ಬೆಳೆಗೆ ನಾನಾ ಸಮಸ್ಯೆಗಳು ಎದುರಾಗಿದ್ದರಿಂದ ಬೆಳೆಗಾರರು (mango farmers) ಒಂದು ರೂ. ಆದಾಯವನ್ನು ಪಡೆದಿಲ್ಲ. ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದಂತೂ ಅಕಾಲಿಕ ಮಳೆ ಬಿದ್ದು ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದರೆ ಈ ಬಾರಿ ಡಿಸೆಂಬರ್ ತಿಂಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಹೂವು ಬಿಟ್ಟಿದ್ದರಿಂದಾಗಿ ರೈತರು ಫುಲ್ ಖುಷ್ ಆಗಿದ್ದರು. ಆದರೆ ಆ ಖುಷಿ ಬಹಳ ದಿನ ಉಳಿಯಲೇ ಇಲ್ಲ. ಇದಕ್ಕೆ ಕಾರಣ ಜನವರಿಯಲ್ಲಿ ಬಿದ್ದ ತುಂತುರು ಮಳೆ.

ಹವಾಮಾನ ವೈಪರೀತ್ಯ: ರೈತರ ಆಸೆ ನುಚ್ಚುನೂರು

ಈ ಬಾರಿ ಡಿಸೆಂಬರ್ ತಿಂಗಳಲ್ಲಿಯೇ ಮಾವಿನ ಮರಗಳು ಹೂವನ್ನು ಬಿಡಲು ಶುರು ಮಾಡಿದ್ದವು. ಇದರಿಂದಾಗಿ ಈ ಬಾರಿ ಮಾವಿನ ಬೆಳೆಯೂ ಬೇಗನೇ ಬರುವ ನಿರೀಕ್ಷೆಯಿತು. ಇದೇ ವೇಳೆ ಹೂವಿನ ಪ್ರಮಾಣದಲ್ಲಿ ಆದ ಏರಿಕೆಯಿಂದಾಗಿ ರೈತರು ಅಚ್ಚರಿಯಾಗಿದ್ದರು. ಹಿಂದಿನ ಯಾವ ವರ್ಷಗಳಲ್ಲಿಯೂ ಇಷ್ಟೊಂದು ಪ್ರಮಾಣದ ಹೂವು ಬಿಟ್ಟಿರಲಿಲ್ಲ. ಹೀಗಾಗಿ ಈ ಬಾರಿ ಬಂಪರ್ ಬೆಳೆ ಗ್ಯಾರಂಟಿ ಅಂತಾ ರೈತರು ನಂಬಿದ್ದರು. ಆದರೆ ಅವರ ಆಸೆ ಕೆಲವೇ ದಿನಗಳಲ್ಲಿ ನುಚ್ಚುನೂರಾಗಿದೆ. ಇದಕ್ಕೆ ಕಾರಣ ಹವಾಮಾನ ವೈಪರೀತ್ಯ.

ಇದನ್ನೂ ಓದಿ: ಧಾರವಾಡ: ಇಳಕಲ್ ಸೀರೆ, ಬಗೆಬಗೆಯ ಊಟ; ಮಹಿಳೆಯರಲ್ಲಿ ಹಿಗ್ಗು ತಂದ ಸುಗ್ಗಿ ಹಬ್ಬ

ಇನ್ನೇನು ಕಾಯಿ ಕಟ್ಟಲು ಶುರುವಾಗುತ್ತೆ ಅನ್ನುವಾಗ ಜಿಲ್ಲೆಯಲ್ಲಿ ತಾಪಮಾನ ಕನಿಷ್ಠ ಪ್ರಮಾಣಕ್ಕೆ ಕುಸಿದು, ಹಲವಾರು ಕಡೆಗಳಲ್ಲಿ ತುಂತುರು ಮಳೆ ಕೂಡ ಸುರಿದಿದೆ. ಇದರಿಂದಾಗಿ ಮಾವಿನ ಹೂವುಗಳಿಗೆ ಇದೀಗ ರೋಗದ ಕಾಟ ಶುರುವಾರುವ ಲಕ್ಷಣಗಳು ಕಂಡುಬಂದಿವೆ.

ಇನ್ನು ಧಾರವಾಡ ಜಿಲ್ಲೆಯಲ್ಲಿ ಒಟ್ಟು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಇದರ ಪೈಕಿ ಆಲ್ಫ್ಯಾನ್ಸೋ ತಳಿಯೇ ಅತ್ಯಂತ ಮಹತ್ವದ್ದು. ಈ ತಳಿಯ ಮಾವಿನ ಹಣ್ಣುಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಅಷ್ಟೇ ಅಲ್ಲದೇ ಕೆಲ ವರ್ಷಗಳಿಂದ ಇವು ವಿದೇಶಕ್ಕೆ ರಫ್ತು ಕೂಡ ಆಗುತ್ತಿವೆ. ಹೀಗಾಗಿ ರೈತರು ಮಾವಿಗೆ ಹೆಚ್ಚಿನ ಕಾಳಜಿ ತೋರಿಸುತ್ತಾರೆ. ಪ್ರತಿವರ್ಷ ಈ ಮರಗಳನ್ನು ಆರೋಗ್ಯವಾಗಿಡಲು ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಇನ್ನು ಹೊಲಗಳ ನಿರ್ವಹಣೆಗೂ ಸಾಕಷ್ಟು ಹಣ ವ್ಯಯಿಸುತ್ತಾರೆ. ಆದರೆ ಕಳೆದ ಏಳೆಂಟು ವರ್ಷಗಳಿಂದ ಒಂದಿಲ್ಲ ಒಂದು ಕಾರಣದಿಂದಾಗಿ ಮಾವಿನ ಬೆಳೆ ಬರುತ್ತಲೇ ಇಲ್ಲ. ಈ ಬಾರಿಯಾದರೂ ಉತ್ತಮ ಬೆಳೆ ಕೈಗೆ ಸಿಗುತ್ತೆ ಅಂದುಕೊಂಡಿದ್ದ ರೈತರಿಗೆ ಈ ಜಿಟಿಜಿಟಿ ಮಳೆ ಶಾಕ್ ನೀಡಿದೆ.

ಇದನ್ನೂ ಓದಿ: ಅಳಿವಿನಂಚಿನಲ್ಲಿ ದೇಶಿ ಅಕ್ಕಿ ತಳಿ ಮುಗದ ಸಿರಿ, ಸುಗಂಧ: ಔಷಧೀಯ ಗುಣ, ಪೌಷ್ಟಿಕಾಂಶಗಳ ಕಣಜವೇ ಇದರಲ್ಲಿದೆಯಂತೆ!

ಇತ್ತೀಚಿನ ವರ್ಷಗಳಲ್ಲಿ ಮಾವು ಸಂಪೂರ್ಣವಾಗಿ ಕೈಕೊಡುತ್ತಿರೋದ್ರಿಂದ ಅನೇಕ ಕಡೆಗಳಲ್ಲಿ ರೈತರು ಮರಗಳನ್ನು ಕತ್ತರಿಸಿ ಹಾಕಿ, ಬೇರೆ ಬೆಳೆಗಳಿಗೆ ಮೊರೆ ಹೋಗಿದ್ದರು. ಅದರಲ್ಲೂ ಬಹುತೇಕರು ಕಬ್ಬು ಬೆಳೆಗೆ ಮೊರೆ ಹೋಗಿದ್ದರು. ಈ ಬಾರಿಯೂ ಅದೇ ರೀತಿಯಾದರೆ ಮತ್ತಷ್ಟು ಮಾವಿನ ಮರಗಳು ರೈತರ ಸಿಟ್ಟಿಗೆ ಆಹುತಿಯಾಗುವ ಲಕ್ಷಣಗಳಿವೆ. ಒಟ್ಟಿನಲ್ಲಿ ಈ ಬಾರಿಯಾದರೂ ಉತ್ತಮ ಇಳುವರಿ ಪಡೆಯಬಹುದು ಅಂದುಕೊಂಡಿದ್ದ ರೈತರಿಗೆ ಆರಂಭದಲ್ಲಿಯೇ ನಿರಾಸೆ ಕಾದಿರುವುದು ವಿಪರ್ಯಾಸವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.