ಅಳಿವಿನಂಚಿನಲ್ಲಿ ದೇಶಿ ಅಕ್ಕಿ ತಳಿ ಮುಗದ ಸಿರಿ, ಸುಗಂಧ: ಔಷಧೀಯ ಗುಣ, ಪೌಷ್ಟಿಕಾಂಶಗಳ ಕಣಜವೇ ಇದರಲ್ಲಿದೆಯಂತೆ!
ಆ ಅಕ್ಕಿ ಒಲೆ ಮೇಲೆ ಕುದಿಯುತ್ತಿದ್ದರೆ ಓಣಿಯ ತುಂಬ ಘಮ ಪಸರಿಸುತ್ತಿತ್ತು. ಹೆಣ್ಣು ಮಕ್ಕಳಿಗೆ ಉಡಿಯಕ್ಕಿ ಹಾಕಿದರೆ ಒಡಲು ತುಂಬುತ್ತಿತ್ತು. ರೋಗ ರುಜಿನಕ್ಕೆ ಈ ಅಕ್ಕಿಯ ಪಾಯಸವೇ ಔಷಧಿ! ಈ ಭತ್ತದ ಹುಲ್ಲು ತಿಂದ ಗೂಳಿಗಳು ಕಾದಾಟಕ್ಕೆ ಕಾಲು ಕೆದರುತ್ತಿದ್ದವು. ಆದರೆ ಇದೀಗ ಈ ಭತ್ತವೇ ಕಣ್ಣರೆಯಾಗಿದೆ. ಧಾರವಾಡ ಮೂಲದ ಆ ಅಕ್ಕಿ ಇದೀಗ ಕಾಣುತ್ತಲೇ ಇಲ್ಲ.

ಧಾರವಾಡ, ಜನವರಿ 12: ಇಡೀ ಕಿತ್ತೂರು ಸೀಮೆಯನ್ನೇ ಘಮದಲ್ಲಿ ಮುಳುಗಿಸುತ್ತಿದ್ದ ಧಾರವಾಡ (Dharawad) ಸಮೀಪದ ಮುಗದ ಗ್ರಾಮದ ಮುಗದ ಸಿರಿ ಮತ್ತು ಮುಗದ ಸುಗಂಧ ಎಂಬ ಎರಡು ದೇಶಿ ಭತ್ತದ ತಳಿಗಳು ಇದೀಗ ಕಾಲನ ಗರ್ಭ ಸೇರುತ್ತಿವೆ. ಈ ತಳಿಗಳೀಗ ಕೇವಲ ಕೃಷಿ ಸಂಶೋಧನಾ ಕೇಂದ್ರದ ಪ್ಯಾಕೇಟಿನಲ್ಲಿ ನೋಡಲು ಉಳಿದಿವೆ. ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಗೋವಾ ಸೇರಿದಂತೆ ಕೊಂಕಣ ಭಾಗದ ಜನರ ಪ್ರಧಾನ ಆಹಾರವೇ ಆಗಿದ್ದ ದೇಶಿ ಭತ್ತದ ತಳಿಗಳ ಪೈಕಿ ಇವು ಮುಂಚೂಣಿಯಲ್ಲಿದ್ದವು. ಮುಗದ ಸಿರಿ ಮತ್ತು ಸುಗಂಧ ಭತ್ತ ಕಳೆದ ಹತ್ತು ವರ್ಷದಲ್ಲಿ ಶೇ 70 ಬಿತ್ತನೆ ಪ್ರದೇಶವನ್ನೇ ಕಳೆದುಕೊಂಡಾಗಿದೆ. ಉಚಿತ ಅಕ್ಕಿ ಹಂಚಿಕೆಯ ಪ್ರಭಾವದಿಂದಾಗಿ ದೇಶಿ ಅಕ್ಕಿಯ ಬೆಲೆಯೇ ಪ್ರಪಾತಕ್ಕೆ ಹೋಗಿದೆ. ಅದರಲ್ಲೂ, ಈ ಭಾಗದ ವಿಶೇಷ ತಳಿಯಾಗಿದ್ದ ಮುಗದ ಸಿರಿ ಮತ್ತು ಮುಗದ ಸುಗಂಧ ಅನ್ನೋ ತಳಿಗಳು ಇದೀಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಈ ತಳಿಗಳು ಸಂಪೂರ್ಣವಾಗಿ ನಶಿಸಿ ಹೋಗೋ ಸ್ಥಿತಿಗೆ ಬಂದಿವೆ.
ಪೌಷ್ಟಿಕಾಂಶಗಳ ಕಣಜವೇ ಆಗಿದ್ದ ಮುಗದ ಸಿರಿ, ಸುಗಂಧ
ಪೌಷ್ಟಿಕಾಂಶಗಳ ಕಣಜವೇ ಆಗಿರುವ ಮುಗದ ಸಿರಿ, ಸುಗಂಧ ಭತ್ತದ ಅಕ್ಕಿ ಉಣ್ಣುವ ಮನುಷ್ಯರಷ್ಟೇ ಅಲ್ಲ, ಜಾನುವಾರುಗಳು, ಪಶುಪಕ್ಷಿಗಳು ಕೂಡ ಸದೃಢವಾಗಿ ಬಿಡುತ್ತಿದ್ದವು. ಅಷ್ಟೊಂದು ಫೈಬರ್ ಸೇರಿ ಇತರ ಖನಿಜಾಂಶಗಳಿರುವ ಈ ಅಕ್ಕಿ ಒಂದು ಕಾಲದಲ್ಲಿ ಬಿರಿಯಾನಿಗೆ ಬಳಕೆಯಾಗುತ್ತಿತ್ತು. ಎಷ್ಟೋ ಸಲ ಮುಂಬೈ, ಗೋವಾ ಮತ್ತು ಹೈದರಾಬಾದ್ನಿಂದ ಬರುವ ವ್ಯಾಪಾರಿಗಳು ಈ ಭತ್ತ ಖರೀದಿಸುತ್ತಿದ್ದರು. ಆದರೆ ಇದೀಗ ರೈತರು ಬೇರೆ ಬೇರೆ ಬೆಳೆಗಳ ಬೆನ್ನು ಹತ್ತಿ ಈ ತಳಿಗಳನ್ನು ನಿರ್ಲಕ್ಷಿಸಿದ್ದಾರೆ.
ಭತ್ತದ ತಳಿ ನಶಿಸಲು ಸಕ್ಕರೆ ಕಾರ್ಖಾನೆಗಳೇ ಕಾರಣ!
ಈ ಪ್ರದೇಶದಲ್ಲಿ ತಲೆ ಎತ್ತಿರುವ ಸಕ್ಕರೆ ಕಾರ್ಖಾನೆಗಳೇ ಈ ತಳಿ ನಶಿಸಿ ಹೋಗಲು ಕಾರಣವಾಗಿವೆ. ದೇಶಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದ ಭೂಮಿಯಲ್ಲಿ ಇದೀಗ ಕಬ್ಬಿನ ಬೆಳೆ ಹೆಚ್ಚಾಗಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಮತ್ತು ಕಳೆನಾಶಕಗಳ ಬಳಕೆ ಹೆಚ್ಚುತ್ತಿದ್ದು ಪರಿಸರ ಸ್ನೇಹಿ ಭತ್ತದ ನಾಡೆಲ್ಲವೂ ವಿಪರೀತ ಭೂ ಮತ್ತು ಜಲಮಾಲಿನ್ಯದ ಬೀಡಾಗುತ್ತಿದೆ. ಒಂದು ದಶಕದಲ್ಲಿ 50 ಸಾವಿರ ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಭತ್ತದ ಬದಲು ಕಬ್ಬು ಬೆಳೆ ಆವರಿಸಿಕೊಂಡಿದೆ.
ಭತ್ತದ ತಳಿ ನಾಶಕ್ಕೆ ಕಾರಣವೇನು?
ದೇಶಿ ಭತ್ತಕ್ಕೆ ಮಾರುಕಟ್ಟೆ ಕುಸಿತ, ಉಚಿತವಾಗಿ ಅಕ್ಕಿ ವಿತರಣೆ ಪರಿಣಾಮ, ಕಬ್ಬಿಗೆ ಮಾರು ಹೋದ ರೈತರು, ಕೂಲಿಯಾಳುಗಳ ಕೊರತೆ, ಆಧುನಿಕ ಜೀವನ ಶೈಲಿಯ ಫಾಸ್ಟ್ ಫುಡ್ ಸಂಸ್ಕೃತಿಗೆ ಮಾರುಹೋದ ಪರಿಣಾಮವೇ ಈ ತಳಿಗಳು ನಶಿಸಿ ಹೋಗಲು ಕಾರಣವಾಗಿದೆ ಎಂದು ಅಭುಪ್ರಾಯಪಟ್ಟಿದ್ದಾರೆ ಕೃಷಿ ತಜ್ಞ ಡಾ. ಪ್ರಕಾಶ ಭಟ್.
ಇದನ್ನೂ ಓದಿ: ಬೀದರ್ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ
ಈ ತಳಿಗಳೊಂದಿಗೆ ಕಿತ್ತೂರು ಸೀಮೆಯಲ್ಲಿ 200ಕ್ಕೂ ಅಧಿಕ ತಳಿಯ ದೇಶಿ ಭತ್ತಗಳನ್ನು ಜನ ಸಾಂಪ್ರದಾಯಿಕ ಕೃಷಿ ವಿಧಾನದ ಮೂಲಕ ಬೆಳೆಯುತ್ತಿದ್ದರು. ಈ ಎಲ್ಲ ತಳಿಗಳು ಮಳೆಯಾಶ್ರಿತ ಮತ್ತು ಬಿತ್ತನೆ ಪದ್ಧತಿಯಲ್ಲಿ ಬೆಳೆಯುವಂತಹದ್ದಾಗಿವೆ. ಕಾಗಸಾಳಿ, ಅಂತರಸಾಳಿ, ಕುಂಕುಮಸಾಳಿ, ಕೊಂಕಣಸಾಳಿ, ದೊಡಗ್ಯಾ, ಬಂಗಾರಕಡ್ಡಿ, ಗಂಧಸಾಳಿ, ಮುಗದಸಿರಿ, ಮನಸೂರ ಸಾಳಿ ಹೀಗೆ ದೇಶಿ ತಳಿಯ ಮೂಲ ಭತ್ತದ ತಳಿಗಳೇ ಇದೀಗ ಕಣ್ಮರೆಯಾಗುತ್ತಿವೆ. ಒಟ್ಟಿನಲ್ಲಿ ಅದ್ಭುತವಾಗಿರುವ ತಳಿಗಳು ಆಧುಕಿನ ಕೃಷಿ ಪದ್ಧತಿಯ ಹೊಡೆತಕ್ಕೆ ನಲುಗಿ, ಇದೀಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.
