ಧಾರವಾಡ, ಆಗಸ್ಟ್ 04: ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ, ಫಾರ್ಮ ಹೌಸ್ ನಿರ್ಮಿಸಿ ಕೊಟ್ಟಿಲ್ಲ. ಇದರಿಂದಾಗಿ ತನಗೆ ಮೋಸವಾಗಿದೆ ಮತ್ತು ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಆರೋಪಿಸಿ ಬಿಲ್ಡರ್ ವಿರುದ್ಧ ವ್ಯಕ್ತಿ ಒಬ್ಬರು ಗ್ರಾಹಕರ ಆಯೋಗಕ್ಕೆ (Consumer Commission) ದೂರು ನೀಡಿದ್ದಾರೆ. ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ನಗರದ ಟೋಲ್ ನಾಕಾದ ನಿವಾಸಿ ಹೆರಾಲ್ಡ್ ಜೋಸೆಫ್ ಎಂಬುವವರು ಇಮ್ರಾನ್ ಕಳ್ಳಿಮನಿ ಎಂಬುವವರ ಜಾಹೀರಾತಿನ ಮೇರೆಗೆ ಕೆಲಗೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಫಾರ್ಮ್ ಹೌಸ್‍ನ್ನು 40 ಲಕ್ಷ ರೂಪಾಯಿಗೆ 2021ರ ಜನವರಿ 25 ರಂದು ಖರೀದಿಸಿದ್ದರು. ಈ ಬಗ್ಗೆ ಇಬ್ಬರ ನಡುವೆ ಖರೀದಿ ಕರಾರು ಪತ್ರ ಆಗಿತ್ತು. ಹೆರಾಲ್ಡ್ ಜೋಸೆಫ್ ರೂ. 35 ಲಕ್ಷ ಮುಂಗಡ ಹಣವನ್ನು ಪಾವತಿಸಿದ್ದರು. ಬಿಲ್ಡರ್ ಇಮ್ರಾನ್ ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ, ಫಾರ್ಮ ಹೌಸ್ ನಿರ್ಮಿಸಿ ಕೊಟ್ಟಿಲ್ಲ. ಹಾಗಾಗಿ ಹೆರಾಲ್ಡ್ ಜೋಸೆಫ್ ಅವರು ಬಿಲ್ಡರ್ ಇಮ್ರಾನ್ ವಿರುದ್ಧ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವೈಪೈ ಇಂಟರ್ನೆಟ್ ಸಮಸ್ಯೆ, ರೈತರಿಂದ ಪ್ರತಿಭಟನೆ
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ದೂರುದಾರನಿಂದ ರೂ. 35 ಲಕ್ಷ ಹಣ ಪಡೆದುಕೊಂಡು ಬಿಲ್ಡರ್ ಲೇಔಟ್ ಅಭಿವೃದ್ಧಿಪಡಿಸಿ, ಫಾರ್ಮ್ ಹೌಸ್ ನೋಂದಣಿ ಮಾಡಿಕೊಡಲು ವಿಫಲರಾಗಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಆ್ಯಂಬುಲೆನ್ಸ್ ಟೈಯರ್ ಸ್ಫೋಟ: ರೋಗಿ, ಸಂಬಂಧಿಕರು ಪರದಾಟ
ಅಲ್ಲದೇ ದೂರುದಾರನಿಗೆ ಹಣವನ್ನು ಹಿಂತಿರುಗಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ಹೀಗಾಗಿ ಹೆರಾಲ್ಡ್ ಜೋಸೆಫ್ ಅವರು ನೀಡಿದ್ದ ರೂ. 35 ಲಕ್ಷ ಮತ್ತು ಅದರ ಮೇಲೆ ಹಣ ನೀಡಿದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ. 8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ನೀಡುವಂತೆ ಆಯೋಗ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ಅಂತಾ ರೂ. 10,000/- ನೀಡುವಂತೆ ಎದುರುದಾರನಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.