ಗಂಡು ಹಾವನ್ನು ಸಾಯಿಸಿದಕ್ಕೆ ಹೆಣ್ಣು ಹಾವಿನಿಂದ ಕಾಟ; ಒಂದೇ ದಿನದಲ್ಲಿ ನಿರ್ಮಾಣವಾಯ್ತು ನಾಗಪ್ಪನ ದೇವಸ್ಥಾನ
ಹಾವಿನ ದ್ವೇಷ ಹನ್ನೆರಡು ವರ್ಷ ಅನ್ನೋ ನಂಬಿಕೆ ಜನರಲ್ಲಿದೆ. ಅಷ್ಟೇ ಅಲ್ಲ, ಜೋಡಿ ನಾಗರಹಾವು ಇದ್ದಲ್ಲಿ, ಆ ಪೈಕಿ ಒಂದನ್ನು ಸಾಯಿಸಿ ಬಿಟ್ಟರೆ ಇನ್ನೊಂದು ಹಾವು ಸೇಡು ತೀರಿಸಿಕೊಳ್ಳದೇ ಬಿಡೊಲ್ಲ ಎನ್ನಲಾಗುತ್ತೆ. ಈ ನಂಬಿಕೆಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ ಇಂದಿಗೂ ಜನರು ಇವುಗಳನ್ನೆಲ್ಲಾ ನಂಬಿಕೊಂಡೇ ಬಂದಿದ್ದಾರೆ. ಇಂಥ ನಂಬಿಕೆಗಳ ಆಧಾರದಲ್ಲಿಯೇ ಧಾರವಾಡದಲ್ಲೊಂದು ಘಟನೆ ನಡೆದಿದೆ. ಒಂದು ನಾಗರಹಾವು ಕೊಂದ ಕಾರಣಕ್ಕೆ ಇನ್ನೊಂದು ನಾಗರ ಹಾವು ಎಡೆಬಿಡದೇ ಬೆನ್ನತ್ತಿದ್ದು ಒಂದೇ ರಾತ್ರಿಯಲ್ಲಿ ಗ್ರಾಮವೊಂದರಲ್ಲಿ ನಾಗ ದೇವರ ಮಂದಿರ ನಿರ್ಮಿಸಲಾಗಿದೆ.
ಧಾರವಾಡ, ಅ.16: ಮನೆಯ ಹಿತ್ತಲಿನಲ್ಲಿ ಹಾವು (Snake) ಕಾಣಿಸಿಕೊಂಡಿದ್ದು ಮನೆಯವರು ಅದನ್ನು ಹೊಡೆದು ಸಾಯಿಸಿದ್ದರು. ಈ ಘಟನೆ ಬಳಿಕ ಮತ್ತೊಂದು ಹಾವು ಮನೆಯ ಮಕ್ಕಳಿಗೆ, ಅಕ್ಕ-ಪಕ್ಕದ ಮಕ್ಕಳಿಗೆ ಕಾಣಿಸಿಕೊಂಡಿದೆ. ಇದರಿಂದ ಊರಲೆಲ್ಲ ಬಿಸಿ ಬಿಸಿ ಚರ್ಚೆಯಾಗಿದ್ದು ಗಂಡನನ್ನು ಸಾಯಿಸಿದಕ್ಕೆ ಹೆಣ್ಣು ಹಾವು ಈ ರೀತಿ ಬೆನ್ನುಬಿದ್ದಿದೆ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ಹಾವನ್ನು ಸಾಯಿಸಲಾದ ಜಾಗದಲ್ಲೇ ನಾಗರ ಹಾವಿನ ದೇವಸ್ಥಾನ ಕಟ್ಟಿ ಪೂಜಿಸಲಾಗುತ್ತಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಹನುಮಂತ ಜಾಧವ ಎಂಬುವವರ ಹಿತ್ತಲಿನಲ್ಲಿ ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ನಾಗರ ಪಂಚಮಿಯ ಮುನ್ನಾದಿನ ಇವರ ಹಿತ್ತಲಿನ ಇದೇ ಸ್ಥಳದಲ್ಲಿ ದೊಡ್ಡ ನಾಗರಹಾವೊಂದು ಕಂಡಿತ್ತು. ತುಂಬಾ ದಿನಗಳಿಂದ ಓಡಾಡಿಕೊಂಡಿದ್ದ ಈ ಹಾವು ಕಂಡ ತಕ್ಷಣವೇ ಅದನ್ನು ಹೊಡೆದು ಕೊಲ್ಲಲಾಗಿತ್ತು. ಅದಾದ ಒಂದು ವಾರದಲ್ಲಿ ಈ ಮನೆಯ 11 ವರ್ಷದ ಪೂಜಾ ಎಂಬ ಬಾಲಕಿಗೆ ಇದೇ ಹಿತ್ತಲಿನಲ್ಲಿ ನಾಗರಹಾವು ಕಾಣೋಕೆ ಶುರುವಾಗಿತ್ತು. ಆಕೆಗೆ ಮಾತ್ರವಲ್ಲ, ಅಕ್ಕಪಕ್ಕದ ಮನೆಗಳ ಮಕ್ಕಳಿಗೆ ಆ ಹಾವು ಕಂಡಿತ್ತು.
ಬಳಿಕ ಈ ಹಾವು ಹಿಂದೆ ಕೊಂದಿರೋ ನಾಗರ ಹಾವಿನ ಪತ್ನಿ. ಗಂಡನನ್ನು ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಬಂದಿದೆ. ನೀವು ದೇವಸ್ಥಾನ ಕಟ್ಟಿ ಎಂದು ಜನ ಹೇಳೋಕೆ ಶುರು ಮಾಡಿದ್ರು. ಅಲ್ಲದೆ ಮಕ್ಕಳು ಕೂಡ ಇದನ್ನೇ ಹೇಳುತ್ತಿದ್ದರು. ಹೀಗಾಗಿ ಮಕ್ಕಳ ಮೂಲಕವೇ ನಾಗದೇವತೆ ಈ ಮಾತನ್ನು ಹೇಳಿಸಿದ್ದಾಳೆಂದು ಒಂದೇ ರಾತ್ರಿಯಲ್ಲಿ ದೇವಸ್ಥಾನ ಕಟ್ಟಲಾಗಿದೆ.
ಇದನ್ನೂ ಓದಿ: ಸಿಎಂ ಇಲ್ಲವೇ ಡಿಸಿಎಂ ಹೆಸರು ಉಲ್ಲೇಖಿಸುವಂತೆ ಈಡಿ ಅಧಿಕಾರಿಗಳು ಒತ್ತಡ ಹೇರಿದ್ದರು: ಬಿ ನಾಗೇಂದ್ರ
ಸುಟ್ಟರೂ ಸುಡದ ಹಾವು
ಇನ್ನು ಇಲ್ಲಿ ಅಚ್ಚರಿ ಎಂದರೆ ಸತ್ತ ಹಾವನ್ನು ದಹನ ಮಾಡಿದರೆ ಅದು ಸುಡಲೇ ಇಲ್ಲವಂತೆ. ಆಗಲೇ ಜನರಿಗೆ ಆತಂಕ ಶುರುವಾಗಿದೆ. ಅಲ್ಲದೇ ಮಕ್ಕಳಿಗೆ ಕಂಡ ಹಾವು ನಾಗದೇವತೆ ಅಂತಾನೇ ಇಲ್ಲಿನ ಜನ ನಂಬಿದ್ದಾರೆ. ಅಷ್ಟೇ ಅಲ್ಲ, ಹಾವು ನೋಡಿದ ಮಕ್ಕಳೊಂದಿಗೆ ಎಲ್ಲರೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗಿ ಬಂದಿದ್ದಾರೆ. ಅಲ್ಲಿಯೂ ದೋಷ ಪರಿಹಾರಕ್ಕೆ ದೇವಸ್ಥಾನ ನಿರ್ಮಾಣದ ಸೂತ್ರವನ್ನೇ ಅರ್ಚಕರು ಹೇಳಿದ್ದಾರೆ. ಅಲ್ಲಿಂದ ಬಂದ ದಿನ ರಾತ್ರಿಯೇ ಗ್ರಾಮಸ್ಥರೆಲ್ಲ ಸೇರಿ, ದೇವಸ್ಥಾನ ಕಟ್ಟಿ, ಜೋಡಿ ನಾಗರ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇದು ದೇವರ ಸ್ವರೂಪ ಅಂತಾ ಹೇಳುತ್ತಿದ್ದು, ಸದ್ಯ ಜನ ತಂಡೋಪತಂಡವಾಗಿ ನೋಡೋಕೆ ಬರುತ್ತಿದ್ದಾರೆ. ಇನ್ನು ಮಕ್ಕಳಿಗೆ ಕಂಡ ಹಾವು ಇನ್ನೂವರೆಗೂ ದೊಡ್ಡವರಿಗೆ ಮಾತ್ರ ಕಂಡಿಲ್ಲವಂತೆ. ಹೀಗಾಗಿ ಇದು ದೇವರ ಪವಾಡ ಅಂತಾ ನಂಬಿರೋ ಸ್ಥಳೀಯರು ಈಗ ನಿರ್ಮಾಣವಾಗಿರೋ ದೇವಸ್ಥಾನಕ್ಕೆ ಕಳಸ ಸಹಿತ ಇನ್ನಿತರ ಅಭಿವೃದ್ಧಿ ಮಾಡೋಕೆ ಮುಂದಾಗಿದ್ದಾರೆ.
ನಮ್ಮಲ್ಲಿ ನಾಗರ ಹಾವಿನ ಬಗ್ಗೆ ಅನೇಕ ಕಥೆಗಳು, ನಂಬಿಕೆಗಳಿವೆ. ಅಲ್ಲದೇ ನಾಗರ ಹಾವಿನ ಕೋಪ ತುಂಬಾ ಕಠೋರ ಹಾಗೂ ಪವಾಡ ಅನ್ನೋ ನಂಬಿಕೆಯೂ ಇದೆ. ಅಂಥ ನಂಬಿಕೆಗಳ ಪಾಲಿಗೆ ಈ ದೇವಸ್ಥಾನವೊಂದು ಇದೀಗ ಹೊಸದಾಗಿ ಸೇರ್ಪಡೆಯಾಗಿದೆ. ಒಟ್ಟಿನಲ್ಲಿ ಜನರು ನಂಬಿಕೆಗಳನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅನ್ನೋದಕ್ಕೆ ಈ ದೇವಸ್ಥಾನವೇ ಸಾಕ್ಷಿಯಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ