ಸಿಕ್ಕಿಬಿದ್ದ ಜೋಡಿ! ಯುಟ್ಯೂಬ್‌ನಲ್ಲಿ ಕಲಿತು ಸಚಿವೆ ಶಶಿಕಲಾ-ಸಂಸದ ಜೊಲ್ಲೆ ಕುಟುಂಬಕ್ಕೆ ಸೇರಿದ ಬ್ಯಾಂಕ್ ಅನ್ನೇ ದೋಚಿದರು
ಕಳ್ಳತನದಲ್ಲಿ ಭಾಗಿಯಾಗಿರೋ ಯುವರಾಜ್-ವೈಷ್ಣವಿ ಜೋಡಿಯ ಹಿನ್ನೆಲೆಯೂ ಬ್ಯಾಂಕ್‌ಗೆ ಲಿಂಕ್ ಆಗುತ್ತಿದೆ! ಯುವರಾಜ್, ಜೊಲ್ಲೆ ಸಮೂಹ ಸಂಸ್ಥೆಗಳ ಮುಖ್ಯ ಕಚೇರಿ ಇರೋ ಯಕ್ಸಂಬಾ ಗ್ರಾಮದವ. ಇನ್ನು ವೈಷ್ಣವಿ ಧಾರವಾಡದಲ್ಲಿ ನೆಲೆಸಿದ್ದು, ಇದೇ ಬ್ಯಾಂಕ್ ನಿರ್ದೇಶಕರೊಬ್ಬರ ಮಗಳಂತೆ.
ಇದು ಡಿಜಿಟಲ್ ಯುಗ. ಈಗ ಏನಿದ್ದರೂ ಇಂಟರ್ ನೆಟ್ ಇಲ್ಲವೇ ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು (Youtube) ನೋಡಿ ಏನೇನೋ ಕಲಿಯುವ ಕಾಲ. ಇಲ್ಲೊಬ್ಬ ವ್ಯಕ್ತಿ ಅದೇ ರೀತಿ ಯುಟ್ಯೂಬ್ ವಿಡಿಯೋ ನೋಡಿಯೇ ಒಂದು ಕಲೆ ಕಲಿತಿದ್ದ. ಅದನ್ನು ಪ್ರಾಕ್ಟಿಕಲ್ ಆಗಿಯೂ ಯಶಸ್ವಿಯಾಗಿ ಪ್ರಯೋಗಿಸಿದ್ದ. ಆದರೆ ಈಗ ಆತನ ಯುಟ್ಯೂಬ್ ಕಲಿಕೆ ಕೈ ಕೊಟ್ಟು ಹೋಗಿದ್ದು, ಕಂಬಿ ಎಣಿಸುವಂತಾಗಿದೆ (Arrest). ಹಾಗಾದ್ರೆ ಏನಿದು ಯುಟ್ಯೂಬ್ ನೋಡಿ ಕಲಿತ ಯಡವಟ್ಟು… ಕಂತೆ ಕಂತೆ ನೋಟು… ನೋಟಿನ ಕಂತೆಗಳ ಪಕ್ಕವೇ ಚಿನ್ನಾಭರಣಗಳ ರಾಶಿ… ಇದನ್ನು ನೋಡಿದ ತಕ್ಷಣವೇ ಅಬ್ಬಾ! ಅನ್ನೋ ಉದ್ಘಾರ ಬರದೇ ಇರದು. ಇದೆಲ್ಲವೂ ಧಾರವಾಡದ ನಗರ ಠಾಣೆ ಪೊಲೀಸರು (Dharwad Police) ವಶಪಡಿಸಿಕೊಂಡಿರುವ ಕಳ್ಳತನದ ಮಾಲು. ಇಷ್ಟೆಲ್ಲ ನೋಡಿದಾಗ ಇದು ಬೇರೆ ಬೇರೆ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದು ಅನಿಸದೇ ಇರದು. ಆದರೆ ಇದೆಲ್ಲವೂ ಒಂದೇ ಪ್ರಕರಣದ್ದು. ಹೌದು; ಜನವರಿ 2ರಂದು ಧಾರವಾಡದ ಕೋರ್ಟ್ ಸರ್ಕಲ್ ಬಳಿ ಇರೋ ಬೀರೇಶ್ವರ ಕೋ ಆಪ್ ಸೊಸೈಟಿಯ ಶಾಖೆಯಲ್ಲಿ ಭಾರಿ ಕಳ್ಳತನವಾಗಿದ್ದು (Bank Theft) ಬೆಳಕಿಗೆ ಬಂದಿತ್ತು.
ಇದು ಬೆಳಗಾವಿ ಜಿಲ್ಲೆಯ ಯಕ್ಸಂಬಾದ ಮುಖ್ಯ ಬ್ಯಾಂಕ್‌ನ ಶಾಖೆ. ಈ ಬ್ಯಾಂಕ್, ಸಚಿವೆ ಶಶಿಕಲಾ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಕುಟುಂಬದ ಒಡೆತನಕ್ಕೆ ಸೇರಿದ್ದು. ಡಿಸೆಂಬರ್ 31ರಂದು ಶನಿವಾರ, ಜನವರಿ 1ರಂದು ಭಾನುವಾರ. ಸೋಮವಾರ ಜನವರಿ 2ರಂದು ಬ್ಯಾಂಕ್ ಸಿಬ್ಬಂದಿ ಬಂದು ನೋಡಿದ್ರೆ, ಅಲ್ಲಿ ಲಾಕರ್‌ನಲ್ಲಿ ಹಣ ಹಾಗೂ ಗ್ರಾಹಕರು ಅಡವಿಟ್ಟ ಚಿನ್ನಾಭರಣಗಳೆಲ್ಲವೂ ಕಳ್ಳತನವಾಗಿದ್ದವು. ಪೊಲೀಸರು ಬಂದು ನೋಡಿದ್ರೆ ಅಲ್ಲಿರೋ ಸಿಸಿಟಿವಿ ಕ್ಯಾಮರಾಗಳನ್ನು ನಾಶಮಾಡಿದ್ದಲ್ಲದೇ ಡಿವಿಆರ್‌ನ್ನೂ ಹೊತ್ತೊಯ್ದಿದ್ದರು.
ಸಾಕ್ಷ್ಯಗಳೇ ಇಲ್ಲದ ಪ್ರಕರಣದ ಬೆನ್ನುಹತ್ತಿದ್ದ ನಗರ ಠಾಣೆ ಹಾಗೂ ಸಿಸಿಬಿ ಪೊಲೀಸರು ಕೊನೆಗೂ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಇದು ದೊಡ್ಡ ಪ್ರೊಫೆಷನಲ್ ಕಳ್ಳರ ಗ್ಯಾಂಗ್‌ನ ಕೆಲಸ ಎಂದೇ ಪರಿಗಣಿಸಲಾಗಿತ್ತು. ಆದರೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು ಯುವರಾಜ್ ರಾಂಪುರ್ ಮತ್ತು ವೈಷ್ಣವಿ ಶಾಹೀನ್ ಎಂಬ ಜೋಡಿ. ಸದ್ಯ ಇವರನ್ನು ಬಂಧಿಸಿರುವ ಪೊಲೀಸರು 17 ಲಕ್ಷ 90 ಸಾವಿರ ರೂಪಾಯಿ ನಗದು ಹಾಗೂ 21 ಲಕ್ಷ ರೂಪಾಯಿ ಮೌಲ್ಯದ 615 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಇನ್ನು ಈ ಕಳ್ಳತನದಲ್ಲಿ ಭಾಗಿಯಾಗಿರೋ ಯುವರಾಜ್ ಮತ್ತು ವೈಷ್ಣವಿ ಜೋಡಿಯ ಹಿನ್ನೆಲೆಯೂ ಬ್ಯಾಂಕ್‌ಗೆ ಲಿಂಕ್ ಆಗುತ್ತಿದೆ. ಯುವರಾಜ್, ಜೊಲ್ಲೆ ಸಮೂಹ ಸಂಸ್ಥೆಗಳ ಮುಖ್ಯ ಕಚೇರಿ ಇರೋ ಯಕ್ಸಂಬಾ ಗ್ರಾಮದವನೇ ಅನ್ನೋದು ಗಮನಿಸಬೇಕಾದ ಸಂಗತಿ. ಜೊತೆಗೆ ಬೀರೇಶ್ವರ ಕೋ ಆಪ್ ಸೊಸೈಟಿ ಮಾಜಿ ಉದ್ಯೋಗಿ. ಈತನಿಗೆ ಸಹಾಯ ಮಾಡಿರುವ ವೈಷ್ಣವಿ ಧಾರವಾಡದಲ್ಲಿ ನೆಲೆಸಿದ್ದು, ಇದೇ ಸಂಸ್ಥೆಯ ನಿರ್ದೇಶಕರೊಬ್ಬರ ಮಗಳಂತೆ.
ಬೀರೇಶ್ವರ ಬ್ಯಾಂಕ್‌ನ ಧಾರವಾಡ ಶಾಖೆಗೆ ಕನ್ನ ಹಾಕಬೇಕಾದ್ರೆ ಅದಕ್ಕೆ ಯುವರಾಜ್ ಯೂಟ್ಯೂಬ್ ನಲ್ಲಿ ಕೆಲವೊಂದು ಕಳ್ಳತನದ ವಿಡಿಯೋಗಳನ್ನು ನೋಡಿಕೊಂಡು ತಯಾರಿ ಮಾಡಿದ್ದನಂತೆ. ಇಬ್ಬರೂ ಹಲವು ಸಲ ರಿಹರ್ಸಲ್ ಸಹ ಮಾಡಿದ್ದಾರೆ. ಅದು ಡಿಸೆಂಬರ್ 31 ಶನಿವಾರ. ಅವತ್ತು ಇಡೀ ನಗರ ಹೊಸ ವರ್ಷಾಚರಣೆ ಸಂಭ್ರಮದಲ್ಲಿತ್ತು. ಮೊದಲಿಗೆ ಅವತ್ತು ಪ್ರಯತ್ನಿಸಿ, ವಿಫಲರಾಗಿದ್ದಾರೆ.
ಅವತ್ತು ವಿಫಲ ಆದ್ರೆ ಮರುದಿನವೂ ಪ್ರಯತ್ನಿಸೋಕೆ ಅವಕಾಶ ಇರಬೇಕು. ಅಂಥ ದಿನವನ್ನೇ ನಿಗದಿ ಮಾಡಿದ್ದರು. ಹಾಗೆಯೇ ಮರುದಿನ ಜನವರಿ 1 ಭಾನುವಾರ. ಅವತ್ತು ರಾತ್ರಿ ಬ್ಯಾಂಕ್‌ನ ಬಾಗಿಲಿನ ಕೀ ಮುರಿದು ಒಳನುಗ್ಗಿದ ಇವರು ಮೊದಲಿಗೆ ಸಿಸಿಟಿವಿ ಕ್ಯಾಮರಾಗಳನ್ನು ಗ್ಯಾಸ್ ಕಟರ್‌ನಿಂದ ಸುಟ್ಟು ಹಾಕಿದ್ದಾರೆ. ಬಳಿಕ ಅದರ ಡಿವಿಆರ್ ತೆಗೆದಿಟ್ಟುಕೊಂಡಿದ್ದಾರೆ. ತದನಂತರವೇ ಲಾಕರ್ ಮುರಿದು ಹಣ ಮತ್ತು ಚಿನ್ನಾಭರಣ ದೋಚಿದ್ದರು.
ಸದ್ಯ ಯುವರಾಜ್ ಮತ್ತು ವೈಷ್ಣವಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇವರೊಂದಿಗೆ ಇನ್ನು ಕೆಲವರು ಇರೋ ಬಗ್ಗೆ ಪೊಲೀಸರಿಗೆ ಶಂಕೆ ಇದೆ. ಆ ನಿಟ್ಟಿನಲ್ಲಿ ತನಿಖೆ ಸಹ ನಡೆದಿದ್ದು, ಯುಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದವರು ಈಗ ಜೈಲು ಕಂಬಿ ಎಣಿಸುವಂತಾಗಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ