ಧಾರವಾಡ, ಅಕ್ಟೋಬರ್ 14: ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ನಿನ ವಿಶ್ವ ಟೆನಿಸ್ ಟೂರ್ ಡಾಲರ್ 25 ಸಾವಿರ ಬಹುಮಾನ ಮೊತ್ತದ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಟೆನಿಸ್ ಪಂದ್ಯಾವಳಿ ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ (DDLTA) ಆಶ್ರಯದಲ್ಲಿ ರಾಜಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿರುವ ಐದು ಹಾರ್ಡ್ ಕೋರ್ಟ್ ಅಂಗಣಗಳಲ್ಲಿ ಅ. 15 ರಿಂದ 22ರ ವರೆಗೆ ನಡೆಯಲಿದ್ದು, ಪಂದ್ಯಾವಳಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಅ. 17ರಂದು ಬೆಳಿಗ್ಗೆ 8.30ಕ್ಕೆ ಕಾರ್ಮಿಕ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ಸಚಿವ ಬಿ. ನಾಗೇಂದ್ರ, ಶಾಸಕರಾದ ಅರವಿಂದ ಬೆಲ್ಲದ ಗೌರವ ಅತಿಥಿಗಳಾಗಿರುವರು.
20 ರಾಷ್ಟ್ರಗಳಿಂದ 44 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇದರಲ್ಲಿ 12 ಜನರು ಭಾರತೀಯ ಆಟಗಾರರು ಇದ್ದಾರೆ. ಭಾರತ, ಅಮೇರಿಕಾ, ಫ್ರಾನ್ಸ್, ಜಪಾನ್, ಮಲೇಶಿಯಾ, ನೆದರ್‌ಲ್ಯಾಂಡ್, ಕೋರಿಯಾ, ಸ್ವೀಡನ್, ಗ್ರೇಟ್ ಬ್ರಿಟನ್, ಇಟಲಿ, ವಿಯಟ್ನಾಂ, ಆಸ್ಟ್ರೇಲಿಯಾ, ನೇಪಾಳ, ಸ್ವೀಜರ್‌ಲ್ಯಾಂಡ್, ತೈಪೇ, ಅರ್ಜೆಂಟಿನಾ, ಉಕ್ರೇನ್, ಜರ್ಮನಿ, ಇರಾಕ್ ಮತ್ತು ಕೆಮರೂನ್ ರಾಷ್ಟ್ರಗಳ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.
ಇದನ್ನೂ ಓದಿ: ಅಕ್ರಮ ಪಟಾಕಿ ಗೋದಾಮು ಮೇಲೆ 70 ಅಧಿಕಾರಿಗಳಿಂದ ದಾಳಿ: ಕೋಟ್ಯಂತರ ಮೌಲ್ಯದ ಪಟಾಕಿ ಸಂಗ್ರಹ
ಪಂದ್ಯಾವಳಿಯಲ್ಲಿ ಒಟ್ಟು 32 ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು 32 ಮೇನ್ ಡ್ರಾ ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳು ಅಕ್ಟೋಬರ್ 15, 16ರಂದು ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಭಾರತದ 18 ಸೇರಿದಂತೆ ಒಟ್ಟು 27 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಡ್ರಾ ಪಂದ್ಯಗಳು ಅಕ್ಟೋಬರ್ 17 ರಿಂದ ನಡೆಯಲಿವೆ.
ಡಬಲ್ಸ್ ಪಂದ್ಯಗಳಲ್ಲಿ ನೇರವಾಗಿ ಮೇನ್ ಡ್ರಾ ಇರುತ್ತವೆ. 16 ಜೋಡಿಗಳು ಡಬಲ್ಸ್ ನಲ್ಲಿ ಭಾಗವಹಿಸುತ್ತವೆ. ಪ್ರತಿ ಪಂದ್ಯ ಬೆಸ್ಟ್ ಆಫ್ ಫೈವ್ ಸೆಟ್ಸ್ ಇರಲಿದೆ. ಅಂತಿಮ ಪಂದ್ಯಗಳು ಡಬಲ್ಸ್ ಹಾಗೂ ಸಿಂಗಲ್ಸ್ ಕ್ರಮವಾಗಿ ಅ. 21 ಹಾಗೂ 22ರಂದು ನಡೆಯಲಿವೆ. ಜಿ.ಆರ್. ಅಮರನಾಥ ಪಂದ್ಯಾವಳಿಯ ನಿರ್ದೇಶಕರಾಗಿದ್ದು, ಐಟಿಎಫ್ ಮತ್ತು ಕೆಎಸ್‌ಎಲ್‌ಟಿಎ ಉಸ್ತುವಾರಿಯಲ್ಲಿ ಪಂದ್ಯಾವಳಿ ಜರುಗಲಿದೆ.
ಬಹುಮಾನ ಮೊತ್ತ ಮತ್ತು ಪಂದ್ಯಾವಳಿಯ ಖರ್ಚಿಗಾಗಿ ಪ್ರಾಯೋಜಕರಿಂದ ನಿಧಿ ಸಂಗ್ರಹಿಸಲಾಗಿದ್ದು, ಈ ನಿಧಿಯ ಸದ್ಬಳಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಕ್ರೀಡಾ ಪ್ರೇಮಿಗಳಿಗೆ ಪಂದ್ಯ ವೀಕ್ಷಿಸಲು ಮತ್ತು ಕ್ರೀಡಾಪಟುಗಳಿಗೆ ವಸತಿ ಹಾಗೂ ಇತರ ಸೌಲಭ್ಯಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಮತ್ತು ರಾಜಾಧ್ಯಕ್ಷ ಪೆವಿಲಿಯನ್ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಈ ಆವರಣದಲ್ಲಿ ತಮ್ಮ ಬಾಲ್ಯವನ್ನು ಟೆನಿಸ್ ಆಡುತ್ತಾ ಕಳೆದಿರುವ ಅನೇಕ ಹಿರಿಯರು ಅತ್ಯಂತ ಅಭಿಮಾನದಿಂದ ಈ ಸಂಸ್ಥೆಯೊಡನೆ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾರೆ. ಆಗ, ನ್ಯಾಯಾಧೀಶರಾಗಿದ್ದ ನ್ಯಾ. ರಾಜಾಧ್ಯಕ್ಷ ಧಾರವಾಡದಲ್ಲಿ ಒಂದು ಉತ್ತಮ ಟೆನಿಸ್ ಸಂಕೀರ್ಣ ನಿರ್ಮಿಸಬೇಕೆಂಬ ಕನಸು ಹೊತ್ತಿದ್ದರು. ಈ ಕನಸು 1937ರಲ್ಲಿ ನಿಜವಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಸಿರು ವನಸಿರಿಯ ಸುಂದರ ವಾತಾವರಣದಲ್ಲಿ ಟೆನಿಸ್ ಅಂಗಣಗಳು ನಿರ್ಮಾಣಗೊಂಡು ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ ಈ ಆವರಣದಲ್ಲಿ ಸ್ಥಾಯಿ ಆಯಿತು.
1937 ರಲ್ಲಿ ಮುಂಬೈ ಪ್ರಾಂತ್ಯದ ಗವರ್ನರ್ ಲಾರ್ಡ್ ಬ್ರೆಬೋರ್ನ್ ಈ ಟೆನಿಸ್ ಸಂಕೀರ್ಣವನ್ನು ಉದ್ಘಾಟಿಸುವುದರೊಂದಿಗೆ ಧಾರವಾಡದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಯಿತು. ಸ್ಥಾಪನೆಯಾದಾಗಿನಿಂದ ಇದುವರೆಗೆ ಡಿಡಿಎಲ್‌ಟಿಎ ಸಾಗಿ ಬಂದ ದಾರಿ ಅನೇಕ ಏರಿಳಿತಗಳನ್ನು ಕಂಡಿದೆ.
ಕಷ್ಟಕಾಲ ಬಂದಾಗಲೆಲ್ಲಾ ಧೈರ್ಯದಿಂದ ಮತ್ತೆ ಪುಟಿದೆದ್ದು ಬಲಶಾಲಿಯಾಗಿ ಹೊರಹೊಮ್ಮಿದೆ. ಸ್ಥಾಪನೆಯಾದ ಮರು ವರ್ಷವೇ ಈ ಅವರಣದ ಕೋರ್ಟ್‌ಗಳಲ್ಲಿ ಆಗಿನ ವಿಶ್ವದ ಕ್ರಮವಾಗಿ ನಂ. 1, ನಂ. 2 ಆಟಗಾರರಾಗಿದ್ದ ಬಿಲ್ ಟಿಲ್ಡನ್ ಮತ್ತು ಹೆನ್ರಿ ಕೋಶೆ ಆಟವಾಡಿದರು. ಆ ಪಂದ್ಯಗಳನ್ನು ವೀಕ್ಷಿಸಿದ್ದ ಹಿರಿಯರು ಇತ್ತೀಚಿನವರೆಗೂ ಅದರ ಬಗ್ಗೆ ಕೌತಕವಾಗಿ ಅಭಿಮಾನದಿಂದ ಮಾತನಾಡುತ್ತಾರೆ.
ಇದನ್ನೂ ಓದಿ: ವರ್ಷಗಳೇ ಉರುಳಿದರೂ ಮುಗಿಯುತ್ತಲೇ ಇಲ್ಲ ಕಾಮಗಾರಿ: ಕೇಳುವವರಿಲ್ಲ ಈಜುಪಟುಗಳ ಸಂಕಟ
ಧಾರವಾಡದವರೇ ಆಗಿದ್ದ ಚಾಂಪಿಯನ್ ಬಾಳಾಸಾಹೇಬ ಕೋಯಿಮತ್ತೂರ ವಿಶ್ವಖ್ಯಾತನಾಮರ ಜೊತೆಗೆ ಆಡಿದ್ದರೆ, ಇನ್ನೊಬ್ಬ ಹಿರಿಯರಾಗಿದ್ದ ಎಸ್.ಆರ್. ನರಸಾಪೂರ ಆ ಪಂದ್ಯಕ್ಕೆ ಅಂಪೈಯರ್ ಆಗಿದ್ದರು. ಈ ಪಂದ್ಯ ವೀಕ್ಷಿಸಿದ ನಂತರ ಧಾರವಾಡದಲ್ಲಿ ಟೆನಿಸ್ ಚಟುವಟಿಕೆಗಳಿಗೆ ಸ್ಪೂರ್ತಿ ದೊರೆತು ಅನೇಕ ಹೊಸ ಆಟಗಾರರು ಹೊರಹೊಮ್ಮಿ ಆಗಿನ ಮುಂಬೈ ವಿಶ್ವವಿದ್ಯಾಲಯದ ತಂಡಗಳಲ್ಲಿ ಸ್ಥಾನ ಪಡೆದು ಯಶಸ್ವಿಯಾಗಿದ್ದಾರೆ. ಮುಂದೆ ಕರ್ನಾಟಕ ವಿವಿ ಸ್ಥಾಪನೆಯಾದ ನಂತರ ವಿವಿ ತಂಡಕ್ಕೆ ಈ ಅಂಗಣದಿಂದ ಹೊರಹೊಮ್ಮಿದ ಅನೇಕ ಆಟಗಾರರು ಸೇರ್ಪಡೆಯಾಗಿ ಡಿಡಿಎಲ್‌ಟಿಎ ಮತ್ತು ವಿವಿಗೆ ಕೀರ್ತಿ ತಂದಿದ್ದಾರೆ.
ಮುಂಬೈ ಎ.ಸಿ. ಪೆರಿರಾ, ಲೆ.ಕ. ಎಸ್.ಎಸ್. ಕಣಬರ್ಗಿಮಠ, ಲಿಮಯೆ, ನರಸಿ ಜೋಶಿ, ವಾಮನ್ ಜಮಖಂಡಿ ನಂತರದ ದಿನಗಳಲ್ಲಿ ಸುಧೀರ ದೇಸಾಯಿ, ವಿನಯ ಜಠಾರ, ಸತೀಶ ತಗರಪುರ, ದಿಲೀಪ ನಾಗರಕಟ್ಟಿ, ಜೋಶಿ ಸಹೋದರರಾದ ಆನಂದ, ಸುಹಾಸ ಮತ್ತು ಶ್ರೀಕಾಂತ, ಎಸ್.ಎಸ್. ಹೊಸಮಠ, ಅಜಿತ ವಾಗ್ಳೆ, ಎಚ್.ವಿ. ಕಿರಣ, ಗುರುರಾಜ ಜಮಖಂಡಿ, ಚೇತನ ಗಂಜಾಳಿ, ಗಿರೀಶ ಕುಡಸೋಮಣ್ಣವರ ಮುಂತಾದವರು ಇದೇ ಗರಡಿಯಲ್ಲಿ ಪಳಗಿ ವಿವಿ ತಂಡಗಳನ್ನು ಪ್ರತಿನಿಧಿಸಿದವರು. ಇತ್ತೀಚಿನ ವರ್ಷಗಳಲ್ಲಿ ಅನೇಕ ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತ ಅನೇಕ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದಾರೆ.
ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರರಾಗಿದ್ದ ನಂದೂ ನಾಟೇಕರ ಬ್ಯಾಡ್ಮಿಂಟನ್‌ಗೆ ಹೋಗುವ ಮೊದಲು ಉತ್ತಮ ಕ್ರಿಕೆಟ್ ಮತ್ತು ಟೆನಿಸ್ ಪಟುವಾಗಿದ್ದರು. ಅವರ ತಂದೆ ಧಾರವಾಡದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಆಗಿದ್ದರಿಂದ ನಂದೂ ನಾಟೇಕರ ಕೂಡಾ ಡಿಡಿಎಲ್‌ಟಿಎ ಅಂಗಣಗಳಲ್ಲಿ ಆಡಿ ಪ್ರಶಸ್ತಿಗಳನ್ನು ಗೆದ್ದವರು.
ಜಾಕ್ ಅರ್ಕಿನ್ ಸ್ಟಾಲ್, ಬಿಲ್ ಗಿಲ್‌ಮೋರ್ (ಆಸ್ಟ್ರೇಲಿಯಾ), ಟಿ.ಕೆ. ರಾಮನಾಥನ್, ರಾಚಪ್ಪ, ವನರ್ಸೆ, ಬಾರ್ಕೇರ್, ಜಿ.ಎನ್. ಪವಾರ, ಗೋಪಾಲರಾವ್, ಡೆರಿಕ್ ಡೀಸಾ, ಡಾ.ಎನ್.ಎಂ. ಶ್ರೀನಿವಾಸ, ಬಿ.ಎಸ್. ರವಿ, ಬಿ.ಆರ್. ಪ್ರಿಯದರ್ಶಿ, ಆರ್.ಕೆ. ರಾಮ್, ಆನಂದ ಅಮೃತರಾಜ್, ಶಶಿ ಮನೆನ್, ನಂದನಬಾಳ, ಶೇರ ಪಠಾಣ, ಸಿ.ಜಿ.ಕೆ. ಭೂಪತಿ ಅಲ್ಲದೇ ಪ್ರಾದೇಶಿಕವಾಗಿ ಚಾಂಪಿಯನ್ ಆಗಿದ್ದ ಅನೇಕರು ಈ ಅಂಗಣಗಳಲ್ಲಿ ತಮ್ಮ ಆಕರ್ಷಕ ಆಟ ಪ್ರದರ್ಶಿಸಿದ್ದಾರೆ.
86 ವಸಂತಗಳನ್ನು ಕಂಡಿರುವ ರಾಜಾಧ್ಯಕ್ಷ ಪೆವಿಲಿಯನ್ ಕಾಲಕಾಲಕ್ಕೆ ಜಿಲ್ಲಾಧಿಕಾರಿಗಳಾಗಿದ್ದ ಡಿ.ಡಿ. ಸಾಠೆ, ಬಿ.ಆರ್. ಅಗವಾನೆ, ಕಪಿಲ ಮೋಹನ, ಗೌರವಗುಪ್ತಾ, ಎಂ.ಎಸ್. ಶ್ರೀಕರ, ರಾಜೇಂದ್ರ ಚೋಳನ್, ದೀಪಾ ಚೋಳನ್ ಹಾಗೂ ಈಗಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಬೆಂಬಲ ಮತ್ತು ಪರಿಶ್ರಮದಿಂದ ನೂತನ ಸೌಲಭ್ಯಗಳನ್ನು ಹೊಂದಿದ್ದು, ಈ ಭಾಗದ ಚುನಾಯಿತ ಪ್ರತಿನಿಧಿಗಳಾದ ಪ್ರಹ್ಲಾದ ಜೋಶಿ, ಬಸವರಾಜ ಹೊರಟ್ಟಿ, ಎ.ಎಂ. ಹಿಂಡಸಗೇರಿ, ಇಸ್ಮಾಯಿಲ್ ಕಾಲೆಬುಡ್ಡೆ, ಎಚ್.ಕೆ. ಪಾಟೀಲ, ಅರವಿಂದ ಬೆಲ್ಲದ ಮುಂತಾದವರ ನೆರವಿನಿಂದ ಉನ್ನತೀಕರಣ ಹೊಂದಿದೆ. ಈಗಾಗಲೇ ಎರಡು ಅಂತಾರಾಷ್ಟ್ರೀಯ ಎಟಿಪಿ ಪಂದ್ಯಾವಳಿಗಳನ್ನು ಸಂಘಟಿಸಿರುವ ಡಿಡಿಎಲ್‌ಟಿಎ ಆವರಣ ಈಗ ಐದು ಸುಸಜ್ಜಿತ ಸಿಂಥೆಟಿಕ್ ಕೋರ್ಟ್, ಹೊನಲು ಬೆಳಕು, ಜಿಮ್, ಆಟಗಾರರ ಡ್ರೆಸ್ಸಿಂಗ್ ರೂಂ, ಕ್ಲಬ್ ಹೌಸ್ ಇತ್ಯಾದಿ ಅತ್ಯಾಧುನಿಕ ಸೌಕರ್ಯಗಳಿಂದ ಸುಸಜ್ಜಿತವಾಗಿದ್ದು ಕ್ರೀಡಾ ಪ್ರೇಮಿಗಳಿಗೆ ಐಟಿಎಫ್ ಪಂದ್ಯಾವಳಿ ಶ್ರೇಷ್ಠ ಟೆನಿಸ್ ರಸದೌತಣ ನೀಡಲು ಸಿದ್ಧವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.