ವರ್ಷಗಳೇ ಉರುಳಿದರೂ ಮುಗಿಯುತ್ತಲೇ ಇಲ್ಲ ಕಾಮಗಾರಿ: ಕೇಳುವವರಿಲ್ಲ ಈಜುಪಟುಗಳ ಸಂಕಟ
ಧಾರವಾಡದ ಈಜುಪಟುಗಳು ಪ್ರಾಕ್ಟೀಸ್ ಮಾಡಬೇಕೆಂದರೆ ಹುಬ್ಬಳ್ಳಿಗೆ ಹೋಗಬೇಕಿದೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ. ಸಣ್ಣ ಮಕ್ಕಳಿಗಂತೂ ಅದು ಸಾಧ್ಯವೇ ಇಲ್ಲದ ಮಾತು. ಇದರಿಂದಾಗಿ ಈ ಈಜುಗೊಳ ಬೇಗ ಶುರುವಾದರೆ ಒಳ್ಳೆಯದು ಅನ್ನೋದು ಈಜುಪಟುಗಳ ಆಶಯ. ಆದಷ್ಟು ಬೇಗನೇ ಈ ಕಾಮಗಾರಿ ಮುಗಿದು, ಈಜುಪಟುಗಳಿಗೆ ಅನುಕೂಲ ಮಾಡಬೇಕಿದೆ.
ಧಾರವಾಡ, ಅಕ್ಟೋಬರ್ 02: ಧಾರವಾಡದ ಈಜುಪಟುಗಳ ಹಣೆಬರಹವೇ ಸರಿ ಇಲ್ಲ ಅನ್ನಿಸುತ್ತದೆ. ಏಕೆಂದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ಪಟುಗಳು ಮಿಂಚಬೇಕೆಂದರೆ ಅವರಿಗೆ ಅಭ್ಯಾಸ ಮಾಡಲು ನಗರದಲ್ಲಿ ಈಜುಗೊಳವೇ (swimming pool) ಇಲ್ಲ. ಅಂತಾರಾಷ್ಟ್ರೀಯ ಮಟ್ಟದ ಈಜುಗೊಳ ನಿರ್ಮಾಣ ಕಾರ್ಯ ಶುರುವಾಗಿ ವರ್ಷಗಳೇ ಉರುಳಿದರೂ ಅದರ ಕಾಮಗಾರಿ ಮುಗಿಯುತ್ತಲೇ ಇಲ್ಲ. ಇದರಿಂದಾಗಿ ಈಜುಪಟುಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲಾ ಕಾರಣವಾದರೂ ಏನು? ಇಲ್ಲಿದೆ ಒಂದು ವರದಿ.
ಧಾರವಾಡ ನಗರದ ಡಿಸಿ ಕಾಂಪೌಂಡ್ ಬಳಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣದ ಹಂತದಲ್ಲಿದೆ. ಹಲವಾರು ವರ್ಷಗಳಿಂದಲೂ ಇದರ ಕಾಮಗಾರಿ ಹೀಗೆಯೇ ನಡೆದಿದೆ. ಆದರೆ ಮುಕ್ತಾಯ ಅನ್ನೋದು ಮಾತ್ರ ಕನಸಿನ ಮಾತಾಗಿ ಹೋಗಿದೆ. ಈಜುಪಟುಗಳ ನೆಚ್ಚಿನ ತಾಣವಾಗಿದ್ದ ಇಲ್ಲಿ ಹಳೆಯ ಕಾಲದ ಈಜುಕೊಳವೊಂದು ಇತ್ತು. ಆದರೆ ನಿರ್ವಹಣೆ ಕೊರತೆಯಿಂದಾಗಿ ಅದು ಹಾಳಾಗಿ ಹೋಗಿತ್ತು. ಹೀಗಾಗಿ ಇದನ್ನು ಹೊಸದಾಗಿ ನಿರ್ಮಿಸೋಕೆ ಜಿಲ್ಲಾಡಳಿತ ಮುಂದಾಗಿತ್ತು.
ಈ ಕಾಮಗಾರಿಗಾಗಿ 13.5 ಕೋಟಿ ರೂಪಾಯಿ ಅನುದಾನ ಸಿದ್ಧವಾಗಿತ್ತು. ಆದರೆ ಅನೇಕರು ಕೇವಲ ಈಜುಗೊಳವಷ್ಟೇ ಬೇಡ, ಅದರೊಂದಿಗೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣವಾದರೆ ಅದರಿಂದ ಎಲ್ಲ ಬಗೆಯ ಆಟಗಾರರಿಗೆ ಅನುಕೂಲವಾಗುತ್ತೆ ಅಂದಿದ್ದಕ್ಕೆ ಯೋಜನೆಯ ಸ್ವರೂಪವೇ ಬದಲಾಗಿ ಹೋಯಿತು. ಏಕೆಂದರೆ ಹೊಸ ಯೋಜನೆಯ ಪ್ರಕಾರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 33 ಕೋಟಿ ರೂಪಾಯಿ ಬೇಕಿತ್ತು.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ
ಈ ಹಣವನ್ನು ಸಿಎಸ್ಆರ್ ಫಂಡ್ ಮೂಲಕ ಈ ಕಾಮಗಾರಿ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ವರ್ಷಗಳು ಉರುಳಿದಂರತೆ ಕಾಮಗಾರಿ ವಿಳಂಬವಾಗುತ್ತಲೇ ಹೊರಟಿದೆ. ಆದರೆ ಇಷ್ಟರಲ್ಲಿಯೇ ಕಾಮಗಾರಿ ಮುಗಿಯುತ್ತೆ ಅನ್ನುತ್ತಾರೆ ಶಾಸಕ ಅರವಿಂದ ಬೆಲ್ಲದ್.
ಆರಂಭದಲ್ಲಿ ಈಜುಕೊಳದ್ದಷ್ಟೇ ನಿರ್ಮಾಣದ ಯೋಜನೆ ಇತ್ತು. ಅದನ್ನಷ್ಟೇ ಮಾಡಿದರೆ ಒಳ್ಳೆಯದಿತ್ತು ಅನ್ನುತ್ತಾರೆ ಸ್ಥಳೀಯರು. ಆದರೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವನ್ನು ನಿರ್ಮಾಣ ಮಾಡೋ ಯೋಜನೆಯನ್ನು ದೆಹಲಿ ಐಐಟಿಯ ತಾಂತ್ರಿಕ ಸಲಹೆಯೊಂದಿಗೆ ವಿನ್ಯಾಸ ಪರಿವರ್ತನೆ ಮಾಡಲಾಗಿತ್ತು.
ಇದನ್ನೂ ಓದಿ: ಕೇವಲ 12 ಗಂಟೆಯಲ್ಲಿ 120 ಕಿ.ಮೀ ಪಾದಯಾತ್ರೆ ಮಾಡಿ ಯಲ್ಲಮ್ಮನ ಹರಕೆ ತೀರಿಸಿದ ಯುವಕರು: ಇವರ ಸಾಹಸಕ್ಕೆ ಗ್ರಾಮಸ್ಥರ ಮೆಚ್ಚುಗೆ
ಈಜುಕೊಳದ ಜೊತೆಗೆ ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್ ಕೋರ್ಟ್, ಜಿಮ್ ಹಾಗೂ ಸಿಬ್ಬಂದಿ ವಸತಿ ಗೃಹ ಸೇರಿ ಬಹುಮಹಡಿ ಕ್ರೀಡಾ ಸಂಕೀರ್ಣದ ಸ್ವರೂಪ ಪಡೆದುಕೊಂಡಿತ್ತು. ಹೀಗಾಗಿಯೇ ಈ ಯೋಜನೆಯ 13.5 ಕೋಟಿ ರೂಪಾಯಿಯಿಂದ 33 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಅದಕ್ಕೆ ತಕ್ಕಂತೆ ವಿವಿಧ ಸಿಎಸ್ಆರ್ ಅಡಿಯಲ್ಲಿ ಅನುದಾನವೂ ಸಿಗುವುದಿತ್ತು. ಆದರೆ ಅದೇ ವೇಳೆಗೆ ಕೊರೋನಾ ಬಂದ ಕಾರಣಕ್ಕೆ ಎರಡು ವರ್ಷ ಯಾವುದೇ ಸಿಎಸ್ಆರ್ ಅನುದಾನ ಇದ್ದರೂ ಅದೆಲ್ಲವೂ ಕೋವಿಡ್ ಪರಿಹಾರಕ್ಕೆ ಹೋಗಿತ್ತು. ಆದರೂ ಇದೀಗ ಬರೋ ಫೆಬ್ರವರಿ ತಿಂಗಳಲ್ಲಿ ಈಜುಗೊಳದ ಕಾರ್ಯ ಸಂಪೂರ್ಣವಾಗಿ ಮುಗಿಯತ್ತೆ ಅನ್ನುತ್ತಾರೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ. ಉಳಿದ ಕೆಲಸವನ್ನು ಮುಂದಿನ ಎಂಟು ತಿಂಗಳಲ್ಲಿ ಮುಗಿಯೋದಾಗಿಯೂ ಹೇಳುತ್ತಾರೆ.
ಧಾರವಾಡದ ಈಜುಪಟುಗಳು ಪ್ರಾಕ್ಟೀಸ್ ಮಾಡಬೇಕೆಂದರೆ ಹುಬ್ಬಳ್ಳಿಗೆ ಹೋಗಬೇಕಿದೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ. ಇನ್ನು ಸಣ್ಣ ಮಕ್ಕಳಿಗಂತೂ ಅದು ಸಾಧ್ಯವೇ ಇಲ್ಲದ ಮಾತು. ಇದರಿಂದಾಗಿ ಈ ಈಜುಗೊಳ ಬೇಗ ಶುರುವಾದರೆ ಒಳ್ಳೆಯದು ಅನ್ನೋದು ಈಜುಪಟುಗಳ ಆಶಯ. ಒಟ್ಟಿನಲ್ಲಿ ಆದಷ್ಟು ಬೇಗನೇ ಈ ಕಾಮಗಾರಿ ಮುಗಿದು, ಈಜುಪಟುಗಳಿಗೆ ಅನುಕೂಲ ಮಾಡಿಕೊಟ್ಟರೆ ಒಳ್ಳೇದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.