IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್
England vs India Second Test: ಲೀಡ್ಸ್‌ನಲ್ಲಿನ ಸೋಲಿನ ನಂತರ, ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುವ ಎರಡನೇ ಟೆಸ್ಟ್‌ಗೆ ಭಾರತ ತಯಾರಿ ನಡೆಸುತ್ತಿದೆ. ಆದರೆ, ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಕಾರಣಗಳೊಂದಿಗೆ ವಿವರಿಸಿದ್ದಾರೆ. ಒಂದು ವೇಳೆ ಬುಮ್ರಾ 2ನೇ ಆಡದಿದ್ದರೆ ತಂಡಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಐದು ಶತಕಗಳನ್ನು ಬಾರಿಸಿಯೂ ಸೋಲಿಗೆ ಶರಣಾಗಿದ್ದ ಟೀಂ ಇಂಡಿಯಾ (Team India) ಇದೀಗ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲ್ಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ತನ್ನ ತಯಾರಿ ಆರಂಭಿಸಿದೆ. ಈ ಪಂದ್ಯ ಜುಲೈ 2 ರಿಂದ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಗಿಲ್ ಪಡೆಗೆ ಆಘಾತ ಎದುರಾಗಿದ್ದು, ಲೀಡ್ಸ್ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ಜಸ್ಪ್ರೀತ್ ಬುಮ್ರಾ (Jasprit Bumrah), ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಲೀಡ್ಸ್ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ಬುಮ್ರಾ ಹೊರತುಪಡಿಸಿ ಮತ್ತ್ಯಾವ ಬೌಲರ್ ಪರಿಣಾಮಕಾರಿಯಾಗದ್ದು ಪ್ರಮುಖ ಕಾರಣವಾಗಿತ್ತು. ಇದೀಗ 2ನೇ ಟೆಸ್ಟ್ನಿಂದ ಬುಮ್ರಾ ಹೊರಗುಳಿದರೆ ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಲಿದೆ.
3 ಪಂದ್ಯಗಳಲ್ಲಿ ಬುಮ್ರಾ ಕಣಕ್ಕೆ?
ವಾಸ್ತವವಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಜಸ್ಪ್ರೀತ್ ಬುಮ್ರಾ ಎಲ್ಲಾ 5 ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿತ್ತು. ವರದಿಯ ಪ್ರಕಾರ ಬುಮ್ರಾ 3 ಟೆಸ್ಟ್ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ‘ಬುಮ್ರಾ ಯಾವ ಮೂರು ಪಂದ್ಯಗಳನ್ನು ಆಡುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಒಂದು ವೇಳೆ ವರದಿ ನಿಜವಾಗಿ ಬುಮ್ರಾ ಕೇವಲ 3 ಪಂದ್ಯಗಳನ್ನು ಆಡುತ್ತಾರೆ ಎಂಬುದಾದರೆ, ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಏಕೆಂದರೆ ಲಾರ್ಡ್ಸ್‌ನಲ್ಲಿ ನಡೆಯಲ್ಲಿರುವ ಮೂರನೇ ಪಂದ್ಯದಲ್ಲಿ ಆಡಲು ಬುಮ್ರಾ ಬಯಸುತ್ತಾರೆ.
ಲಾರ್ಡ್ಸ್‌ನಲ್ಲಿ ಬೌಲರ್ಗಳ ಮೇಲುಗೈ
ಲಾರ್ಡ್ಸ್ ಮೈದಾನ ವೇಗದ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ ಬುಮ್ರಾ ಇಲ್ಲಿ ಚೆನ್ನಾಗಿ ಬೌಲಿಂಗ್ ಮಾಡಬಹುದು, ಆದರೆ ಈ ಪಂದ್ಯಕ್ಕೂ ಮೊದಲು ಅವರಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕಾಗಿದೆ. ಬುಮ್ರಾ ಎಡ್ಜ್‌ಬಾಸ್ಟನ್‌ನಲ್ಲಿ ಆಡಿದರೆ, ಅವರು ಲಾರ್ಡ್ಸ್‌ನಲ್ಲಿ ಆಡಲು ಸಾಧ್ಯವಿಲ್ಲ. ಏಕೆಂದರೆ ಎರಡು ಪಂದ್ಯಗಳ ನಡುವೆ ಕೇವಲ ನಾಲ್ಕು ದಿನಗಳ ಅಂತರವಿದೆ. ಆದಾಗ್ಯೂ ಬುಮ್ರಾರನ್ನು ಯಾವ ಟೆಸ್ಟ್‌ನಲ್ಲಿ ಆಡಿಸಬೇಕು, ಯಾವುದರಲ್ಲಿ ಆಡಿಸಬಾರದು ಎಂಬ ನಿರ್ಧಾರವನ್ನು ತಂಡದ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅವರನ್ನು ಆಡಿಸದಿದ್ದರೆ ಭಾರತ ಆ ಟೆಸ್ಟ್ ಪಂದ್ಯವನ್ನೂ ಸೋಲುವ ಅಪಾಯದಲ್ಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಸಾಕಷ್ಟು ಬೌಲಿಂಗ್ ಮಾಡಿದ್ದಾರೆ. ಈಗ ಅವರಿಗೆ ವಿಶ್ರಾಂತಿ ನೀಡಬೇಕಾಗಿದೆ. ಅಲ್ಲದೆ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ದಾಖಲೆ ತುಂಬಾ ಕಳಪೆಯಾಗಿದೆ. ಹೀಗಾಗಿ 2ನೇ ಟೆಸ್ಟ್‌ನಲ್ಲಿ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
IND vs ENG: ‘ಬೇಸರವಾಯ್ತು, ಹಾಗಂತ…’; ಕ್ಯಾಚ್ಗಳನ್ನು ಕೈಚೆಲ್ಲಿದ ಬಗ್ಗೆ ಮೌನ ಮುರಿದ ಬುಮ್ರಾ
ಎಡ್ಜ್‌ಬಾಸ್ಟನ್‌ನಲ್ಲಿ ಗೆದ್ದೇ ಇಲ್ಲ
ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಗೆಲುವಿಗಾಗಿ ಟೀಂ ಇಂಡಿಯಾ ವರ್ಷಗಳಿಂದ ಕಾಯುತ್ತಿದೆ. ಏಕೆಂದರೆ ಭಾರತ ತಂಡ ಇಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಮೈದಾನದಲ್ಲಿ ಭಾರತ ತಂಡ ಹಲವು ಬಾರಿ ಗೆಲುವಿನ ಹತ್ತಿರಕ್ಕೆ ಬಂದು ಸೋತಿದೆ ಅಥವಾ ಡ್ರಾ ಮಾಡಿಕೊಂಡಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಏಳು ಪಂದ್ಯಗಳನ್ನು ಆಡಿದೆ. ಈ ಪೈಕಿ, ಮೂರು ಬಾರಿ ಇನ್ನಿಂಗ್ಸ್ ಅಂತರದಿಂದ ಸೋತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Thu, 26 June 25
