IND vs ENG: ‘ಬೇಸರವಾಯ್ತು, ಹಾಗಂತ…’; ಕ್ಯಾಚ್‌ಗಳನ್ನು ಕೈಚೆಲ್ಲಿದ ಬಗ್ಗೆ ಮೌನ ಮುರಿದ ಬುಮ್ರಾ
India vs England Test: ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 6 ಕ್ಯಾಚ್‌ಗಳನ್ನು ಕೈಬಿಟ್ಟು ನಿರಾಶೆಗೊಳಿಸಿತು. ಇದರಿಂದಾಗಿ, ಭಾರತ 471 ರನ್ ಗಳಿಸಿದರೂ ಕೇವಲ 6 ರನ್‌ಗಳ ಮುನ್ನಡೆ ಪಡೆಯಿತು. ಜಸ್ಪ್ರೀತ್ ಬುಮ್ರಾ ತಮ್ಮ ಬೌಲಿಂಗ್‌ನಲ್ಲಿ 3 ಕ್ಯಾಚ್‌ಗಳು ಕೈಬಿಟ್ಟಿದ್ದನ್ನು ಉಲ್ಲೇಖಿಸಿ, ಆಟಗಾರರನ್ನು ಪ್ರೋತ್ಸಾಹಿಸಿ ಮುಂದಿನತ್ತ ಗಮನ ಹರಿಸುವಂತೆ ಹೇಳಿದರು. ಬುಮ್ರಾ 5 ವಿಕೆಟ್ ಪಡೆದರೂ, ಕ್ಯಾಚ್‌ಗಳನ್ನು ಕೈಬಿಟ್ಟು ಪಂದ್ಯದ ಮೇಲಿನ ನಿಯಂತ್ರಣ ಕಳೆದುಕೊಳ್ಳಲಾಯಿತು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ (India vs England Test) ಫೀಲ್ಡಿಂಗ್ ನಿರಾಶಾದಾಯಕವಾಗಿತ್ತು. ಒಂದೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಒಂದಲ್ಲ, ಎರಡಲ್ಲ, ಬರೋಬ್ಬರಿ 6 ಕ್ಯಾಚ್‌ಗಳನ್ನು ಕೈಬಿಟ್ಟಿತು. ಇದರಿಂದಾಗಿ, ಟೀಂ ಇಂಡಿಯಾ 471 ರನ್ ಗಳಿಸಿದ್ದರೂ ಕೇವಲ 6 ರನ್‌ಗಳ ಮುನ್ನಡೆ ಪಡೆಯಲು ಸಾಧ್ಯವಾಯಿತು. ಟೀಂ ಇಂಡಿಯಾ ಜೀವದಾನ ನೀಡಿದ ಆಟಗಾರರು ಬಿಗ್ ಇನ್ನಿಂಗ್ಸ್ ಆಡಿದ ಕಾರಣ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 465 ರನ್ ಕಲೆಹಾಕಿತು. ಈ ಕ್ಯಾಚ್‌ಗಳನ್ನು ಕೈಬಿಡುವ ಮೂಲಕ ಟೀಂ ಇಂಡಿಯಾ ಪಂದ್ಯದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿತು. ಬೇಸರದ ಸಂಗತಿಯೆಂದರೆ ಟೀಂ ಇಂಡಿಯಾ ಕೈಚೆಲ್ಲಿದ 6 ಕ್ಯಾಚ್‌ಗಳಲ್ಲಿ, 3 ಕ್ಯಾಚ್‌ಗಳು ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಬೌಲಿಂಗ್‌ನಲ್ಲಿ ಸಂಭವಿಸಿದವು. ಹೀಗಾಗಿ ಮೂರನೇ ದಿನದ ಆಟ ಮುಗಿದ ನಂತರ, ಮಾತನಾಡಿದ ಬುಮ್ರಾ ಆಟಗಾರರು ಕ್ಯಾಚ್‌ಗಳನ್ನು ಕೈಬಿಟ್ಟ ಬಗ್ಗೆ ಹೇಳಿದ್ದಿದು.
ಜಸ್ಪ್ರೀತ್ ಬುಮ್ರಾ ಹೇಳಿದ್ದೇನು?
‘ಕ್ಯಾಚ್‌ಗಳನ್ನು ಕೈಚೆಲ್ಲಿದಾಗ, ನಾನು ಒಂದು ಕ್ಷಣ ನಿರಾಶೆಗೊಂಡೆ. ಆದರೆ ಅದು ಆಟದ ಒಂದು ಭಾಗ. ಆಟಗಾರರು ಹೊಸಬರು ಮತ್ತು ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾನು ಅವರ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡಲು ಅಥವಾ ಅವರ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ. ಯಾರೂ ಇದನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಕ್ಯಾಚ್ ಹಿಡಿಯುವುದು ಆಟದ ಒಂದು ಭಾಗ. ಹೀಗಾಗಿ ಕ್ಯಾಚ್‌ಗಳನ್ನು ಕೈಚೆಲ್ಲಿದ ಬಗ್ಗೆ ಹೆಚ್ಚು ಯೋಚಿಸುವ ಬದಲು, ನಾವು ಮುಂದಿನ ಆಟದತ್ತ ಗಮನ ಹರಿಸಬೇಕು. ಸ್ವಾಭಾವಿಕವಾಗಿ, ಕ್ಯಾಚ್‌ಗಳನ್ನು ತೆಗೆದುಕೊಂಡರೆ ಅದು ಉತ್ತಮವಾಗಿರುತ್ತದೆ. ಆದರೆ ಆಟಗಾರರು ಇದರಿಂದ ಕಲಿಯುತ್ತಾರೆ’ ಎಂದು ಬುಮ್ರಾ ಹೇಳಿದರು.
ಅವರು ಮಾತನಾಡಲಿ
ಇದರ ಜೊತೆಗೆ ತಮ್ಮ ಬೌಲಿಂಗ್ ಶೈಲಿಯನ್ನು ಟೀಕಿಸಿದವರಿಗೆ ಪ್ರತಿಕ್ರಿಯಿಸಿದ ಬುಮ್ರಾ, ‘ನನ್ನ ವೃತ್ತಿಜೀವದನ ಆರಂಭದ ದಿನಗಳಿಂದಲೂ ಕೆಲವರು ನಾನು ಕೇವಲ 8 ತಿಂಗಳು ಮಾತ್ರ ಆಡುತ್ತೇನೆ ಎಂದಿದ್ದರು. ಇನ್ನು ಕೆಲವರು ನಾನು 10 ತಿಂಗಳು ಆಡುತ್ತೇನೆ ಎಂದು ಹೇಳಿದ್ದರು. ಆದರೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ವರ್ಷ ಮತ್ತು 12-13 ಐಪಿಎಲ್‌ಗಳನ್ನು ಆಡಿದ್ದೇನೆ. ಅಷ್ಟೇ ಅಲ್ಲ, ಈಗಲೂ ಸಹ ನಾನು ಗಾಯಗೊಂಡಾಗ ಜನರು, ಇನ್ನು ಮುಂದೆ ಬುಮ್ರಾಗೆ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ. ಅವರು ಮಾತನಾಡಲಿ. ನಾನು ನನ್ನ ಕೆಲಸವನ್ನು ಮುಂದುವರಿಸುತ್ತೇನೆ. ಈ ರೀತಿಯ ಮಾತುಗಳು ಪ್ರತಿ 4 ತಿಂಗಳಿಗೊಮ್ಮೆ ಬರುತ್ತವೆ. ಆದರೆ ದೇವರ ಕೃಪೆ ಇರುವವರೆಗೆ, ನಾನು ಆಡುವುದನ್ನು ಮುಂದುವರಿಸುತ್ತೇನೆ’ ಎಂದು ಬುಮ್ರಾ ಸ್ಪಷ್ಟವಾಗಿ ಹೇಳಿದರು.
IND vs ENG: 5 ವಿಕೆಟ್ ಪಡೆದ ಚೆಂಡನ್ನು ಬುಮ್ರಾ ಉಡುಗೊರೆಯಾಗಿ ನೀಡಿದ್ಯಾರಿಗೆ ಗೊತ್ತಾ?
ಲೀಡ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ ಬುಮ್ರಾ
ಲೀಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 465 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಬುಮ್ರಾ ನಿರ್ಣಾಯಕ ಪಾತ್ರ ವಹಿಸಿದರು. ಈ ಇನ್ನಿಂಗ್ಸ್‌ನಲ್ಲಿ 24.4 ಓವರ್‌ಗಳನ್ನು ಬೌಲ್ ಮಾಡಿದ ಬುಮ್ರಾ 83 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಬುಮ್ರಾ ಟೆಸ್ಟ್‌ನಲ್ಲಿ 14ನೇ ಬಾರಿಗೆ 5 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಹಾಗೆಯೇ ಸೇನಾ ದೇಶದಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) 150 ವಿಕೆಟ್‌ಗಳನ್ನು ಪಡೆದ ಮೊದಲ ಏಷ್ಯನ್ ಬೌಲರ್ ಕೂಡ ಎನಿಸಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Mon, 23 June 25
