Prithvi Shaw: ವೃತ್ತಿಜೀವನಕ್ಕಾಗಿ ತಂಡ ತೊರೆಯಲು ನಿರ್ಧರಿಸಿದ ಪೃಥ್ವಿ ಶಾ
Prithvi Shaw: ಪೃಥ್ವಿ ಶಾ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೋರಿದ್ದು, ಬೇರೆ ರಾಜ್ಯದಿಂದ ಆಡಲು ಪೃಥ್ವಿ ಬಯಸಿರುವುದಾಗಿ ವರದಿಯಾಗಿದೆ. ಮುಂಬೈನಲ್ಲಿ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ರಣಜಿ ಟ್ರೋಫಿ ಮತ್ತು ಐಪಿಎಲ್‌ನಲ್ಲಿ ಅವರಿಗೆ ಸ್ಥಾನ ದೊರೆಯದಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ. ಭವಿಷ್ಯದಲ್ಲಿ ಅವರ ವೃತ್ತಿಜೀವನ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದು ಸಮಯದಲ್ಲಿ ಟೀಂ ಇಂಡಿಯಾದಲ್ಲಿ (Team India) ಖಾಯಂ ಸ್ಥಾನ ಪಡೆದುಕೊಳ್ಳುವ ಎಲ್ಲಾ ಸೂಚನೆ ನೀಡಿದ್ದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw)ಗೆ, ಪ್ರಸ್ತುತ ರಾಜ್ಯ ತಂಡದಲ್ಲೂ ಸ್ಥಾನವಿಲ್ಲ. ಪೃಥ್ವಿ ಟೀಂ ಇಂಡಿಯಾದಿಂದ ಹೊರಗುಳಿದಿರುವುದಲ್ಲದೆ ಮುಂಬೈ ಕೂಡ ಅವರನ್ನು ರಣಜಿ ಟ್ರೋಫಿಯಿಂದ ಕೈಬಿಟ್ಟಿದೆ. ಇದರ ಜೊತೆಗೆ ಅವರಿಗೆ ಐಪಿಎಲ್‌ನಲ್ಲಿ (IPL 2025) ಅವಕಾಶವೂ ಸಿಗಲಿಲ್ಲ. ಹೀಗಾಗಿ ತಮ್ಮ ವೃತ್ತಿ ಜೀವನದ ಉಳಿವಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಪೃಥ್ವಿ, ಮುಂಬೈ ಕ್ರಿಕೆಟ್ ತಂಡವನ್ನು ತೊರೆದು ಬೇರೆಡೆಗೆ ಹೋಗಲಿದ್ದಾರೆ ಎಂಬ ವರದಿಗಳಿವೆ.
ಮಾಧ್ಯಮ ವರದಿಗಳನ್ನು ನಂಬುವುದಾದರೆ, ಪೃಥ್ವಿ ಶಾ ಬೇರೆ ರಾಜ್ಯದಿಂದ ಕ್ರಿಕೆಟ್ ಆಡಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೇಳಿದ್ದಾರೆ. ಕಳೆದ ವರ್ಷ ಮುಂಬೈ ಕ್ರಿಕೆಟ್ ಆಯ್ಕೆ ಸಮಿತಿಯು ಪೃಥ್ವಿ ಶಾ ಅವರನ್ನು ತಂಡದಿಂದ ಕೈಬಿಟ್ಟಿತು. ಅಲ್ಲದೆ ಪೃಥ್ವಿ ಶಾ ಅವರನ್ನು ಅನರ್ಹ ಎಂದು ಘೋಷಿಸಿತ್ತು. ಆ ಬಳಿಕ ಪೃಥ್ವಿಗೆ ತೂಕ ಇಳಿಸಿಕೊಳ್ಳಲು ಸಲಹೆ ಕೂಡ ನೀಡಿತ್ತು.
ನಾನು ಬೇರೆ ತಂಡಕ್ಕೆ ಆಡಲು ಬಯಸುತ್ತೇನೆ: ಪೃಥ್ವಿ ಶಾ
ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಮೂಲಗಳ ಪ್ರಕಾರ, ಪೃಥ್ವಿ ಶಾ ಅವರು ಎಂಸಿಎಗೆ ಇಮೇಲ್ ಮಾಡಿದ್ದಾರೆ. ಅದರಲ್ಲಿ ಅವರು, ‘ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಅಚಲ ಬೆಂಬಲ ಮತ್ತು ತಂಡಕ್ಕಾಗಿ ಆಡಲು ಅವಕಾಶ ನೀಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಎಂಸಿಎಯ ಭಾಗವಾಗಿರುವುದು ನಿಜಕ್ಕೂ ಗೌರವದ ಸಂಗತಿ. ನನ್ನ ವೃತ್ತಿಜೀವನದ ಈ ಹಂತದಲ್ಲಿ, ನನಗೆ ಬೇರೆ ರಾಜ್ಯ ಸಂಘದಿಂದ ವೃತ್ತಿಪರ ಕ್ರಿಕೆಟ್ ಆಡುವ ಅವಕಾಶ ಸಿಗುತ್ತಿದೆ, ಇದು ಕ್ರಿಕೆಟಿಗನಾಗಿ ನನ್ನ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ ಎಂದು ನನಗೆ ಖಚಿತವಾಗಿದೆ. ಭವಿಷ್ಯದಲ್ಲಿ ನಾನು ಆ ತಂಡಕ್ಕಾಗಿ ಆಡಲು ಸಾಧ್ಯವಾಗುವಂತೆ ನನಗೆ NOC ನೀಡುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ’ ಎಂದು ಬರೆದಿದ್ದಾರೆ.
Ranji Trophy 2025: ವಿದರ್ಭ ತಂಡಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟ ಕನ್ನಡಿಗ ಕರುಣ್ ನಾಯರ್
ಮುಂಬೈ ಪರ ಪೃಥ್ವಿ ಶಾ ಅದ್ಭುತ ಪ್ರದರ್ಶನ
ಪೃಥ್ವಿ ಶಾ ಮುಂಬೈ ಪರ ದೇಶೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜನವರಿ 1, 2017 ರಂದು ಮುಂಬೈ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಪೃಥ್ವಿ ಎರಡನೇ ಇನ್ನಿಂಗ್ಸ್‌ನಲ್ಲಿಯೇ ತಮಿಳುನಾಡು ವಿರುದ್ಧ ಭರ್ಜರಿ ಶತಕ ಬಾರಿಸಿದರು. ಈ ಶತಕಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನನು ನೀಡಲಾಯಿತು. 2022-23 ರ ರಣಜಿ ಟ್ರೋಫಿಯಲ್ಲಿ, ಶಾ ಅಸ್ಸಾಂ ವಿರುದ್ಧ 379 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದರು, ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಮುಂಬೈ ಪರ ದಾಖಲಾದ ಅತಿದೊಡ್ಡ ಇನ್ನಿಂಗ್ಸ್ ಎಂಬ ದಾಖಲೆಯನ್ನು ಬರೆಯಿತು. 2020-21 ರ ವಿಜಯ್ ಹಜಾರೆ ಟ್ರೋಫಿಯಲ್ಲಿ, ಪೃಥ್ವಿ ಶಾ ಮುಂಬೈ ತಂಡವನ್ನು ಚಾಂಪಿಯನ್ ಮಾಡುವಲ್ಲೂ ಯಶಸ್ವಿಯಾಗಿದ್ದರು. ಈ ಟೂರ್ನಿಯಲ್ಲಿ ಪೃಥ್ವಿ ಆಡಿದ 8 ಪಂದ್ಯಗಳಲ್ಲಿ 827 ರನ್ ಬಾರಿಸಿದ್ದರು. ಪೃಥ್ವಿ ಶಾ ಮುಂಬೈ ಪರ ಇದುವರೆಗೆ 65 ಲಿಸ್ಟ್ ಎ ಇನ್ನಿಂಗ್ಸ್‌ಗಳಲ್ಲಿ 55.7 ಸರಾಸರಿಯಲ್ಲಿ 3,399 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:46 pm, Mon, 23 June 25
