IND vs ENG: ಟೀಮ್ ಇಂಡಿಯಾ ಎಷ್ಟು ರನ್ಗಳಿಸಿ ಡಿಕ್ಲೇರ್ ಮಾಡಬೇಕು? ಇಲ್ಲಿದೆ ಮಾಹಿತಿ
England vs India, 1st Test: ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 471 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ 465 ರನ್ಗಳಿಸಿ ಆಲೌಟ್ ಆಗಿದೆ. ಇದೀಗ 6 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 90 ರನ್ ಕಲೆಹಾಕಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ಮೂರು ದಿನದಾಟಗಳಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದೆ. ಹೀಗಾಗಿ ನಾಲ್ಕನೇ ದಿನದಾಟವು ನಿರ್ಣಾಯಕ. ಇತ್ತ ಮೂರನೇ ದಿನದಾಟದ ಕೊನೆಯ ಸೆಷನ್ನಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 90 ರನ್ಗಳಿಸಿದೆ.
ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (47) ಹಾಗೂ ಶುಭ್ಮನ್ ಗಿಲ್ (6) ಇನಿಂಗ್ಸ್ ಮುಂದುವರೆಸಲಿದ್ದಾರೆ. ಅಲ್ಲದೆ ಇಂದು ಭಾರತ ತಂಡವು ಸಂಪೂರ್ಣ ಬ್ಯಾಟಿಂಗ್ ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಅಂದರೆ 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿಲ್ಲ. ಏಕೆಂದರೆ ಹೆಡಿಂಗ್ಲೆ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಹೊಂದಿದ್ದು, ಇಲ್ಲಿ ಚೇಸಿಂಗ್ ಮಾಡುವುದು ಸುಲಭ. ಇದಕ್ಕೆ ಸಾಕ್ಷಿ ಈ ಹಿಂದಿನ ಅಂಕಿ ಅಂಶಗಳು.
ಯಶಸ್ವಿ ಚೇಸ್ ಯಾವುದು?
- ಹೆಡಿಂಗ್ಲೆ ಮೈದಾನದಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದಿರುವುದು ಆಸ್ಟ್ರೇಲಿಯಾ ತಂಡ. 1948 ರಲ್ಲಿ ಇಂಗ್ಲೆಂಡ್ ವಿರುದ್ಧ 404 ರನ್ಗಳ ಗುರಿಯನ್ನು ಬೆನ್ನತ್ತಿ ಆಸೀಸ್ ಪಡೆ ಜಯ ಸಾಧಿಸಿತ್ತು.
- ಇದಾದ ಬಳಿಕ ಈ ಮೈದಾನದಲ್ಲಿ ಕಂಡು ಬಂದ ಅತ್ಯಂತ ಯಶಸ್ವಿ ಚೇಸಿಂಗ್ ಇಂಗ್ಲೆಂಡ್ ತಂಡದ್ದು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 359 ರನ್ಗಳನ್ನು ಚೇಸ್ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿತ್ತು.
- ಇದಲ್ಲದೆ ಇತ್ತೀಚಿನ ವರ್ಷಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೆ, 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ನಾಲ್ಕನೇ ಇನಿಂಗ್ಸ್ನಲ್ಲಿ 251 ರನ್ ಬಾರಿಸಿ ಗೆಲುವು ದಾಖಲಿಸಿದೆ. ಹಾಗೆಯೇ 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ 296 ರನ್ಗಳ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಗಿದೆ.
ಅಂದರೆ ಹೆಡಿಂಗ್ಲೆ ಮೈದಾನದಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ 250 ರಿಂದ 350 ರನ್ಗಳಿಸುವುದು ಕಷ್ಟವೇನಲ್ಲ. ಹೀಗಾಗಿ ಭಾರತ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಕನಿಷ್ಠ 400+ ಸ್ಕೋರ್ಗಳಿಸದೇ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿಲ್ಲ.
ಈ ಮೂಲಕ ಇಂಗ್ಲೆಂಡ್ಗೆ ತಂಡಕ್ಕೆ ಕೊನೆಯ ಇನಿಂಗ್ಸ್ನಲ್ಲಿ ಕನಿಷ್ಠ 400+ ರನ್ಗಳ ಗುರಿ ನೀಡಲು ಪ್ಲ್ಯಾನ್ ರೂಪಿಸಲಿದ್ದಾರೆ. ಒಂದು ವೇಳೆ ಟೀಮ್ ಇಂಡಿಯಾ 300ರ ಅಸುಪಾಸಿನಲ್ಲಿ ಆಲೌಟ್ ಆದರೆ, ಇಂಗ್ಲೆಂಡ್ ಚೇಸಿಂಗ್ಗೆ ಪ್ರಯತ್ನಿಸುವುದು ಖಚಿತ.
ಏಕೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ರಣತಂತ್ರವನ್ನು ಅಳವಡಿಸಿಕೊಂಡಿರುವ ಇಂಗ್ಲೆಂಡ್ ತಂಡವು ಕಳೆದ ಕೆಲ ವರ್ಷಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದಕ್ಕಿಂತ ಮ್ಯಾಚ್ ಗೆಲ್ಲಲು ಪ್ರಯತ್ನಿಸುತ್ತಾ ಬಂದಿದೆ. ಈ ಪ್ರಯತ್ನವು ಹಲವು ಬಾರಿ ಆಂಗ್ಲರ ಕೈ ಹಿಡಿದಿದೆ. ಹೀಗಾಗಿ ಟೀಮ್ ಇಂಡಿಯಾ 300 ರನ್ಗಳ ಅಸುಪಾಸಿನಲ್ಲಿ ರನ್ಗಳಿಸಿದರೆ, ಇಂಗ್ಲೆಂಡ್ ಗೆಲುವಿನ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯುವುದು ಖಚಿತ.
ಇತ್ತ ಟೀಮ್ ಇಂಡಿಯಾ ಪರ ಮೊದಲ ಇನಿಂಗ್ಸ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿದರೆ, ಉಳಿದ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ಪ್ರಸಿದ್ಧ್ ಕೃಷ್ಣ 20 ಓವರ್ಗಳಲ್ಲಿ 128 ರನ್ ನೀಡಿದರೆ, ಮೊಹಮ್ಮದ್ ಸಿರಾಜ್ 27 ಓವರ್ಗಳಲ್ಲಿ 122 ರನ್ ಬಿಟ್ಟು ಕೊಟ್ಟಿದ್ದರು. ಹೀಗಾಗಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಲು ಅಥವಾ ಗೆಲ್ಲಲು ಬಯಸಿದರೆ, ಕನಿಷ್ಠ 400 ರನ್ಗಳನ್ನು ಕಲೆಹಾಕಲೇಬೇಕು.
ಇದನ್ನೂ ಓದಿ: MLC 2025: ದಾಖಲೆಯ ರನ್ ಚೇಸ್… ಹೊಸ ಚರಿತ್ರೆ ಬರೆದ ವಾಷಿಂಗ್ಟನ್ ಫ್ರೀಡಂ
ಹೆಡಿಂಗ್ಲೆ ಟೆಸ್ಟ್ ಪಂದ್ಯಗಳ ಯಶಸ್ವಿ ರನ್ ಚೇಸ್‌ಗಳು:
| ಶ್ರೇಣಿ | ತಂಡ | ಗುರಿ | ಸ್ಕೋರ್ | ಓವರ್‌ಗಳು | ರನ್ ರೇಟ್ | ಎದುರಾಳಿ | ವರ್ಷ |
|---|---|---|---|---|---|---|---|
| 1 | ಆಸ್ಟ್ರೇಲಿಯಾ | 404 | 404/3 | 114.4 | 3.53 | ಇಂಗ್ಲೆಂಡ್ | 1948 |
| 2 | ಇಂಗ್ಲೆಂಡ್ | 359 | 362/9 | 125.4 | 2.88 | ಆಸ್ಟ್ರೇಲಿಯಾ | 2019 |
| 3 | ವೆಸ್ಟ್ ಇಂಡೀಸ್ | 322 | 322/5 | 91.2 | 3.52 | ಇಂಗ್ಲೆಂಡ್ | 2017 |
| 4 | ಇಂಗ್ಲೆಂಡ್ | 315 | 315/4 | 73.2 | 4.29 | ಆಸ್ಟ್ರೇಲಿಯಾ | 2001 |
| 5 | ಇಂಗ್ಲೆಂಡ್ | 296 | 296/3 | 54.2 | 5.44 | ನ್ಯೂಝಿಲೆಂಡ್ | 2022 |
| 6 | ಇಂಗ್ಲೆಂಡ್ | 251 | 254/7 | 50.0 | 5.08 | ಆಸ್ಟ್ರೇಲಿಯಾ | 2023 |
| 7 | ಇಂಗ್ಲೆಂಡ್ | 219 | 219/7 | 80.2 | ೨.೭೨ | ಪಾಕಿಸ್ತಾನ | 1982 |
| 8 | ಇಂಗ್ಲೆಂಡ್ | 184 | 186/5 | 52.4 | 3.53 | ಸೌತ್ ಆಫ್ರಿಕಾ | 1929 |
| 9 | ಪಾಕಿಸ್ತಾನ | 180 | 180/7 | 50.4 | 3.55 | ಆಸ್ಟ್ರೇಲಿಯಾ | 2010 |
| 10 | ವೆಸ್ಟ್ ಇಂಡೀಸ್ | 128 | 131/2 | 32.3 | 4.03 | ಇಂಗ್ಲೆಂಡ್ | 1984 |
