24 ಗಂಟೆಗಳಲ್ಲಿ ಹಾಸನದ ಮತ್ತಿಬ್ಬರು ಹೃದಯಾಘಾತಕ್ಕೆ ಬಲಿ: ಒಂದೇ ತಿಂಗಳಲ್ಲಿ 14 ಜನ ಸಾವು
ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಬರುತ್ತಿದ್ದ ಹೃದಯಾಘಾತ ಈಗ ಯುವಕರನ್ನು ಸಹ ಬಲಿಪಶುಗಳನ್ನಾಗಿ ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಯುವ ಜನರ ಸಾವಿನ ಸರಣಿ ಮುಂದುವರಿದಿದೆ. ಅದರಲ್ಲೂ ಹಾಸನ ಜಿಲ್ಲೆಯ ಯುವಕ-ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ನಿನ್ನೆ(ಜೂನ್ 25) ಒಂದೇ ದಿನ ಹಾಸನ ಮೂಲದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.

ಬೆಂಗಳೂರು/ಹಾಸನ, (ಜೂನ್ 26): ಹಾಸನ (Hassan) ಮೂಲದ ಯುವಕ-ಯುವತಿಯರು(Youths) ಹೃದಯಾಘಾತದಿಂದ (Heart Attack) ಸಂಭವಿಸುತ್ತಿರುವ ಸಾವಿನ ಸರಣಿ ಮುಂದುವರಿದಿದೆ. ಚಿಕ್ಕವರಿಂದ ಹಿಡಿದು ವಯಸ್ಕರು ದಿಢೀರ್ ಸಾವನ್ನಪ್ಪುತ್ತಿದ್ದಾರೆ. ಒಂದೇ ದಿನ ಹಾಸನದ ಮತ್ತಿಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ನಿನ್ನೆ (ಜೂನ್ 25) ಸಂಜೆ ಅಷ್ಟೇ ಹಾಸನ ಮೂಲದ ಯುವಕ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಮತ್ತೋರ್ವ ಹಾಸನ ಮೂಲದ ಯುವತಿ ಬೆಂಗಳೂರಿನಲ್ಲಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ಹಾಸನದವರು ಒಂದೇ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
32 ವರ್ಷದ ಆಟೋ ಚಾಲಕ ಸಾವು
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ ಹೊನ್ನೇನಹಳ್ಳಿ ಗ್ರಾಮದ 32 ವರ್ಷದ ಯೋಗೇಶ್ ಬೆಂಗಳುರಿನಲ್ಲಿ ನಿನ್ನೆ(ಜೂನ್ 25) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಾಲ್ಕು ವರ್ಷಗಳ ಹಿಂದೆ ಅಷ್ಟೇ ವಿವಾಹವಾಗಿದ್ದ ಯೋಗೇಶ್ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಲಗ್ಗೆರೆಯಲ್ಲಿ ವಾಸವಿದ್ದ. ಆದ್ರೆ, ಬುಧವಾರ ಬೆಳಗ್ಗೆ ಆಟೋ ಓಡಿಸಿ ಮನೆಗೆ ಬಂದು ಮಲಗಿದ್ದು, ಕೊಠಡಿಯಲ್ಲೇ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾನೆ. ಬಳಿಕ ಆಸ್ಪತ್ರೆಗೆ ಹೋದಾಗ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಸ್ಫೋಟಕ ಕಾರಣ ಬಿಚ್ಚಿಟ್ಟ ಡಿಹೆಚ್ಓ
22 ವರ್ಷದ ಯುವತಿ ಹೃದಯಾಘಾತಕ್ಕೆ ಬಲಿ
ಮಧ್ಯಾಹ್ನ ಹಾಸನ ಮೂಲದ ಆಟೋ ಚಾಲಕ ಯೋಗೇಶ್ ಮೃತಪಟ್ಟಿದ್ದರೆ, ಸಂಜೆ ಹಾಸನ ಮೂಲದ ಕಟ್ಟಳ್ಳಿಯ ಕೃಷ್ಣಮೂರ್ತಿ, ರೂಪಾ ದಂಪತಿ ಪುತ್ರಿ ಸುಪ್ರಿಯಾ(22) ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಗ್ರಾಮದ ನಿವಾಸಿಯಾಗಿದ್ದ ಸುಪ್ರಿಯಾ ಕುಟುಂಬ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು, ಸುಪ್ರಿಯಾ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿದ್ದಳು. ವಿದ್ಯಾಭ್ಯಾಸದ ಜೊತೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದ್ರೆ, ನಿನ್ನೆ (ಜೂನ್ 25) ಮನೆಯಲ್ಲಿ ಸುಪ್ರಿಯಾಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾಳೆ. ಕೂಡಲೇ ಪೋಷಕರು, ಸುಪ್ರಿಯಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ದುರದೃಷ್ಟವಶಾತ್, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸುಪ್ರಿಯಾ ಮೃತಪಟ್ಟಿದ್ದಾಳೆ.
ಒಂದೇ ತಿಂಗಳಲ್ಲಿ 14 ಜನರು ಹೃದಯಾಘಾತಕ್ಕೆ ಬಲಿ
ಕಳೆದೊಂದು ತಿಂಗಳ ಹೃದಯಾಘಾತ ಮಾಹಿತಿ ನೋಡಿದರೆ, ಇವರೆರೆಡು ಸೇರಿ ಕಳೆದ ಒಂದು ತಿಂಗಳ ಅವಧಿಯಲ್ಲಿ 14ನೇ ಸಾವು. ಮೇ 20ರಂದು ಅರಕಲಗೂಡು ತಾಲೂಕಿನ ಅಭಿಷೇಕ್, ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂಧ್ಯಾ ಸಾವನ್ನಪ್ಪಿದ್ದರು. ಮೇ 28ರಂದು ಮತ್ತೋರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಆನಂತರ ಜೂನ್ 11ರಂದು ಹೊಳೆನರಸೀಪುರದ ಯುವಕ ನಿಶಾಂತ್ ಸಾವು, ಜೂನ್ 12ರಂದು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಾರಿಗೆ ಸಿಬ್ಬಂದಿ ನಾಗಪ್ಪ ಸಾವು, ಅದೇ ದಿನ ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ ಮೃತಪಟ್ಟಿದ್ದರು.
ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮತ್ತಿಬ್ಬರು ಸಾವು: ಒಂದೇ ತಿಂಗಳಲ್ಲಿ 12 ಜನ ಬಲಿ
ಇನ್ನು ಜೂನ್ 13ರಂದು ಚನ್ನರಾಯಪಟ್ಟಣದ ಗ್ರಾಮ ಲೆಕ್ಕಿಗ ದೇವರಾಜ್ ಎಂಬುವರು ಕಾರಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದರು. ಅದೇ ದಿನ ಸತೀಶ್ ಎಂಬುವರು ಹಠಾತ್ ಸಾವಿಗೀಡಾಗಿದ್ದರು. ಜೂನ್ 14ರಂದು ಕಾಂತರಾಜು ಮೃತಪಟ್ಟದ್ದರೆ, ಜೂನ್ 18ರಂದು ಅರಸೀಕೆರೆ ಮೂಲದ ಶಿರಾದಲ್ಲಿ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ನೌಕರ ನವೀನ್ ಸಾವನ್ನಪ್ಪಿದ್ದರು. ಜೂನ್ 21ರಂದು ಬೇಲೂರಿನ ನಿಶಾದ್ ಅಹ್ಮದ್ ಹಾಗೂ ಹಾಸನ ಮೂಲದ ಚೇತನ್ ಹೃದಯಾಘಾತಕ್ಕೆ ಬಲಿಯಾಗಿದ್ದರು.
2 ವರ್ಷಗಳಲ್ಲಿ 507 ಜನರಿಗೆ ಹೃದಯಾಘಾತ
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವರ್ಷಗಳಲ್ಲಿ ಬರೋಬ್ಬರಿ 507 ಜನರಿಗೆ ಹೃದಯಾಘಾತವಾಗಿದೆ. 20 ರಿಂದ 30 ವಯಸ್ಸಿನ 14 ಜನರು, 30 ರಿಂದ 40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರಿಗೆ ಹೃದಯಾಘಾತವಾಗಿದ್ದು, ಈ ಪೈಕಿ ಎರಡು ವರ್ಷಗಳಲ್ಲಿ ಒಟ್ಟು 140 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸ್ವತಃ ಹಾಸನ ಡಿಹೆಚ್ ಓ ಡಾ ಅನಿಲ್ ಮೊನ್ನೆ ಅಷ್ಟೇ ಮಾಹಿತಿ ನೀಡಿದ್ದರು.
ದುಶ್ಚಟ, ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹೃದಯಘಾತ ಸಂಭವಿಸುತ್ತಿವೆ ಎಂದು ಹಾಸನ ಡಿಹೆಚ್ ಓ ಮಾಹಿತಿ ನೀಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Thu, 26 June 25