ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮತ್ತಿಬ್ಬರು ಸಾವು: ಒಂದೇ ತಿಂಗಳಲ್ಲಿ 12 ಜನ ಬಲಿ
ವಯಸ್ಸಿಗೆ ಬಂದವರ ಎದೆ ನಡುಗುತ್ತಿದೆ. ಹದಿ ಹರೆಯದವರ ಹೃದಯಕ್ಕೇ ಆಘಾತವಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಬದುಕಲು ಬಿಡದೆ ಯುವಕರನ್ನು ಸಾಲು ಸಾಲಾಗಿ ಬಲಿ ಪಡೆಯುತ್ತಿರುವ ಹಾರ್ಟ್ ಅಟ್ಯಾಕ್, ಇದೀಗ ಮತ್ತಿಬ್ಬರ ಸಾವಿಗೆ ಕಾರಣವಾಗಿದೆ. ಇದರೊಂದಿಗೆ, ಜಿಲ್ಲೆಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ 12 ಸಾವಾದಂತಾಗಿದೆ.

ಹಾಸನ, ಜೂನ್ 23: ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಯುವ ಜನರು ಹೃದಯಾಘಾತದಿಂದ (Heart Attack) ಸಾವಿಗೀಡಾಗುತ್ತಿರುವುದು ಹೆಚ್ಚಾಗಿದೆ. ಬಾಳಿ ಬದುಕಬೇಕಾದವರೇ ಅರ್ಧಕ್ಕೇ ಜೀವನದ ಆಟ ಮುಗಿಸುತ್ತಿದ್ದಾರೆ. ಹಾಸನ (Hassan) ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿದ್ದ ನಿಶಾದ್ (35) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಹಾಸನ ನಗರದ ಸತ್ಯಮಂಗಲ ಬಡಾವಣೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಚೇತನ್ (38) ಊಟ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಇಹಲೋಕ ತ್ಯಜಿಸಿದ್ದಾರೆ.
ಅನಾಥ ಶವಗಳ ಅಂತ್ಯಕ್ರಿಯೆ ಮಾಡಿ ಹೃದಯವೈಶಾಲ್ಯತೆ ಮೆರೆದಿದ್ದ ನಿಶಾದ್
ನಿಶಾದ್ ಅಹ್ಮದ್ ಸಮಾಜ ಸೇವಕರಾಗಿದ್ದು, ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅನಾಥ ಶವಗಳ ಅಂತ್ಯಕ್ರಿಯೆ ಮಾಡಿ ಹೃದಯವೈಶಾಲ್ಯತೆ ಮೆರೆದಿದ್ದರು. ಅಂಥಾ ಯವಕನೇ ಈಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಬೇಲೂರು ಪಟ್ಟಣದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿದ್ದ ನಿಶಾದ್ ಕುಟುಂಬಕ್ಕೆ ಆಧಾರವಾಗಿದ್ದ.
ಊಟ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್
ಇನ್ನು ಚೇತನ್ ಎಂಬವರು ರಾತ್ರಿ ಮನೆಯಲ್ಲಿ ಊಟ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಮಗುವಿನ ಆಕ್ರಂದನ ಮುಗಿಲು ಮುಟ್ಟಿದೆ.
ಹಾಸನ ಜಿಲ್ಲೆಯಲ್ಲಿ ಸರಣಿ ಮರಣ ಮೃದಂಗ
ಹಾಸನ ಜಿಲ್ಲೆಯಲ್ಲಿ ಸಾಲು ಸಾಲು ಯುವಕರು ಹಾಗೂ ಮಧ್ಯ ವಯಸ್ಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕ ಹೆಚ್ಚಿಸಿದೆ. ಒಂದು ತಿಂಗಳಲ್ಲಿ 12 ಜನ ಯುವಕರು, ಮಧ್ಯ ವಯಸ್ಕರು ಹೃದಯಾಘಾತದಿಂದ ಬಲಿಯಾಗಿದ್ದಾರೆ.
ಹಾಸನ: ಹೃದಯಾಘಾತ ಪ್ರಕರಣಗಳ ಹಿನ್ನೋಟ
- ಮೇ 20: ಅರಕಲಗೂಡು ತಾಲೂಕಿನ ಅಭಿಷೇಕ್ ಸಾವು
- ಮೇ 20: ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂದ್ಯಾ ಸಾವು.
- ಮೇ 28: ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕವನ ಸಾವು.
- ಜೂನ್ 11: ಹೊಳೆನರಸೀಪುರದ ಯುವಕ ನಿಶಾಂತ್ ಬಲಿ.
- ಜೂನ್ 12: ಬಸ್ನಲ್ಲಿ ಸಾರಿಗೆ ಸಿಬ್ಬಂದಿ ನಾಗಪ್ಪ ಸಾವು .
- ಜೂನ್ 12: ನಗರಸಭೆ ಮಾಜಿ ಸ. ನೀಲಕಂಠಪ್ಪ, ಸಾವು
- ಜೂನ್ 13: ಕಾರಲ್ಲೇ ದೇವರಾಜ್ ಎಂಬವರು ಸಾವು.
- ಜೂನ್ 13: ಸತೀಶ್ ಎಂಬವರ ಹಠಾತ್ ಸಾವು.
- ಜೂನ್ 14: ಕಾಂತರಾಜು ಎಂಬವರ ಸಾವು.
- ಜೂನ್ 18: ಅರಣ್ಯ ಇಲಾಖೆ ನೌಕರ ನವೀನ್ ಸಾವು.
- ಜೂನ್ 21: ನಿಶಾದ್ ಅಹ್ಮದ್, ಚೇತನ್ ಸಾವು.
ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳ ಅವಧಿಲ್ಲಿ 12 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೇ 20 ರಂದು ಅರಕಲಗೂಡು ತಾಲೂಕಿನ ಅಭಿಷೇಕ್ ಬೆಂಗಳೂರಿನಲ್ಲಿ ಉಸಿರು ನಿಲ್ಲಿಸಿದ್ದರೆ, ಅದೇ ದಿನ ಹೊಳೆನರಸೀಪುರದ 20 ವರ್ಷದ ವಿದ್ಯಾರ್ಥಿನಿ ಸಂಧ್ಯಾ ಸಾವಿಗೀಡಾಗಿದ್ದರು. ಮೇ 28 ರಂದು ಪದವಿ ವಿದ್ಯಾರ್ಥಿನಿ ಕವನ ಹೃದಯಾಘಾತಕ್ಕೆ ಬಲಿಯಾದರೆ, ಜೂನ್ 11 ರಂದು ಹೊಳೆನರಸೀಪುರದ ನಿಶಾಂತ್ ಮೃತಪಟ್ಟಿದ್ದ. ಜೂನ್ 12 ರಂದು ಆಲೂರು ತಾಲ್ಲೂಕಿನ ಮಗ್ಗೆ ಬಳಿ ಬಸ್ನಲ್ಲಿ ಸಾರಿಗೆ ಸಿಬ್ಬಂದಿ ನಾಗಪ್ಪ ಸಾವನ್ನಪ್ಪಿದ್ರೆ, ಅದೇ ದಿನ ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ, ಮನೆಯಲ್ಲೇ ಕುಸಿದು ಉಸಿರು ಚೆಲ್ಲಿದ್ದ. ಜೂನ್ 13 ರಂದು ದೇವರಾಜ್, ಅಂದೇ ಸತೀಶ್ ಎಂಬವರು ಜೀವ ಬಿಟ್ಟಿದ್ದರು. ಜೂನ್ 14 ರಂದು ಕಾಂತರಾಜು , ಜೂನ್ 18 ರಂದು ನವೀನ್ ಬಲಿಯಾದರೆ ಜೂನ್ 21 ರಂದು ನಿಶಾದ್ ಅಹ್ಮದ್ ಮತ್ತು ಸತ್ಯ ಮಂಗಲದ ಚೇತನ್ ಹೃದಯಾಘಾತದಿಂದ ಉಸಿರು ನಿಲ್ಲಿಸಿದ್ದಾರೆ.
ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದೇನು?
ಹಾಸನ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 507 ಜನರಿಗೆ ಹೃದಯಾಘಾತ ಸಂಭವಿಸಿದೆ. ಈ ಪೈಕಿ 20 ರಿಂದ 30 ವರ್ಷ ವಯಸ್ಸಿನ 14 ಜನರು ಮೃತಪಟ್ಟಿದ್ದಾರೆ. 30-40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರಿಗೆ ಹೃದಯಾಘಾತ ಸಂಭವಿಸಿದೆ. ಎರಡು ವರ್ಷಗಳಲ್ಲಿ ಹೃದಯಾಘಾತ ದಿಂದ ಒಟ್ಟು 140 ಜನರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅದಿಕಾರಿ ಡಾ. ಅನಿಲ್ ಮಾಹಿತಿ ನೀಡಿದ್ದಾರೆ.
ಯುವ ಜನರಲ್ಲಿ ಹೃದಯಾಘಾತ ತಡೆಗೆ ಏನೇನು ಕ್ರಮ?
ಯುವ ಜನರಲ್ಲಿ ಹೃದಯಾಘಾತ ತಡೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅರೋಗ್ಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಯುವ ಜನರಲ್ಲಿ ಹೆಚ್ಚುತ್ತಿರುವ ದುಶ್ಚಟಗಳು, ಅಸಮತೊಲನದ ಅಹಾರ ಸೇವನೆ, ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಹೃದಯಾಘಾತ ತಡೆಗೆ ಅರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಮಾಡಲು ಸಿದ್ಧತೆ ನಡೆಸಲಾಗಿದೆ. ಅರೋಗ್ಯ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಶಾಲೆ ಕಾಲೇಜುಗಳಲ್ಲಿ ಕೂಡ ಹೃದಯ ಅರೋಗ್ಯದ ತಪಾಸಣೆ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ಎಂದು ಡಾ. ಅನಿಲ್ ತಿಳಿಸಿದ್ದಾರೆ.
ಹೃದಯಾಘಾತಗಳ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಬದಲಾಗಿ ನಿಯಮಿತವಾಗಿ ಅರೋಗ್ಯ ತಪಾಸಣೆ, ಉತ್ತಮ ಅರೋಗ್ಯ ಶೈಲಿ ರೂಪಿಸಿಕೊಂಡು ಅರೋಗ್ಯವಾಗಿರಲು ಯತ್ನಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಎದೆ ನೋವು ಕಂಡು ಬಂದರೆ ನಿರ್ಲಕ್ಷ್ಯ ಬೇಡ
ಎದೆ ನೋವನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಂಡರೆ, ಅಕಾಲಿಕ ಸಾವುಗಳನ್ನು ತಡೆಯಬಹುದು ತಡೆಯಬಹುದು ಎಂದು ಹೃದ್ರೋಗ ತಜ್ಞ ಆಶ್ರಿತ್ ಶ್ರೀಧರ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ ನಾಲ್ವರು ಯುವಕರು ಹೃದಯಾಘಾತಕ್ಕೆ ಬಲಿ
ಬದಲಾದ ಜೀವನ ಶೈಲಿ, ಒತ್ತಡದಿಂದಾಗಿಯೂ ಚಿಕ್ಕ ವಯಸ್ಸಿನಲ್ಲೇ ಯುವಕರಲ್ಲಿ ಹೃದಯಾಘಾತ ಕಾಣಿಸುತ್ತಿದೆ ಎನ್ನಲಾಗಿದೆ. ಆದರೆ, ಯುವಕರೇ ಹೆಚ್ಚನ ಸಂಖ್ಯೆಯಲ್ಲಿ ಸಾವಿನ ಮನೆ ಸೇರುತ್ತಿರುವುದು ನಿಜಕ್ಕೂ ವಿಪರ್ಯಾಸ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Mon, 23 June 25