AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಿಮ್ಸ್ ಸಂಶೋಧನಾ ವರದಿಯಲ್ಲಿ ಆಘಾತಕಾರಿ ಅಂಶ ಪತ್ತೆ

ಮಕ್ಕಳಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಬಗ್ಗೆ ಹುಬ್ಬಳ್ಳಿಯ ಕಿಮ್ಸ್‌ ತಜ್ಞರ ತಂಡ ಸಂಶೋಧನೆ ನಡೆಸಿದ್ದು, ಆಘಾತಕಾರಿ ವಿಚಾರಗಳು ತಿಳಿದುಬಂದಿವೆ. ಅತಿಯಾದ ಮೊಬೈಲ್ ಬಳಕೆ, ಅಸಮತೋಲಿತ ಆಹಾರ ಮತ್ತು ದೈಹಿಕ ಚಟುವಟಿಕೆಯ ಕೊರತೆಯೇ ಮುಖ್ಯ ಕಾರಣಗಳೆಂದು ಪತ್ತೆಯಾಗಿದೆ. ಸದ್ಯ ವರದಿಯನ್ನು ಐಸಿಎಂಆರ್​​ಗೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ವರದಿಯಲ್ಲಿ ಕಂಡುಬಂದ ಆಘಾತಕಾರಿ ವಿಚಾರಗಳ ಮಾಹಿತಿ ಇಲ್ಲಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಿಮ್ಸ್ ಸಂಶೋಧನಾ ವರದಿಯಲ್ಲಿ ಆಘಾತಕಾರಿ ಅಂಶ ಪತ್ತೆ
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ
ಸಂಜಯ್ಯಾ ಚಿಕ್ಕಮಠ
| Updated By: Ganapathi Sharma|

Updated on:Jun 24, 2025 | 2:42 PM

Share

ಹುಬ್ಬಳ್ಳಿ, ಜೂನ್ 24: ಇತ್ತೀಚೆಗೆ ವಯಸ್ಕರು ಮಾತ್ರವಲ್ಲದೆ ಯುವ ಜನತೆ, ಮಕ್ಕಳಲ್ಲಿ ಕೂಡಾ ಹೃದಯಾಘಾತ (Heart Attack) ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಆನೇಕರು ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹುಬ್ಬಳ್ಳಿಯ (Hubli)  ಕಿಮ್ಸ್​ನ (KIMS) ಬಹುಶಿಸ್ತೀಯ ಶಂಶೋಧನಾ ಘಟಕ ಸಂಶೋಧನೆ ನೆಡಸಿದ್ದು, ಬೆಚ್ಚಿಬೀಳಿಸುವ ಅನೇಕ ಅಂಶಗಳು ಬೆಳಕಿಗೆ ಬಂದಿವೆ.

ಅತಿಯಾದ ಮೊಬೈಲ್ ಬಳಕೆ, ಜೀವನಶೈಲಿಯೇ ಪ್ರಮುಖ ಕಾರಣ

ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಲು ಅವರು ಅತಿಯಾಗಿ ಮೊಬೈಲ್ ಬಳಸುತ್ತಿರುವುದು ಮತ್ತು ಅವರ ಜೀವನ ಶೈಲಿ, ಆಹಾರ ಅಭ್ಯಾಸಗಳೇ ಪ್ರಮುಖ ಕಾರಣ ಎಂಬುದನ್ನು ತಂಡ ಪತ್ತೆ ಮಾಡಿದೆ.

ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳ: ದೇಶದಲ್ಲೇ ಮೊದಲ ಬಾರಿ ಅಧ್ಯಯನ

ಈ ಹಿಂದೆಲ್ಲ 40 ವರ್ಷ ವಯಸ್ಸು ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಹೃದಯಾಘಾತ ಇದೀಗ ಮಕ್ಕಳಲ್ಲಿ ಕಂಡುಬರುತ್ತಿರುವದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಸಾಮಾನ್ಯವಾಗಿ, ಆರೋಗ್ಯವಂತರಾಗಿ ಕಾಣಿಸುವವರು ಕೂಡಾ ದಿಢೀರನೆ ಹೃದಯಾಘಾತಕ್ಕೊಳಗಾಗಿ ಮೃತಪಡುತ್ತಿದ್ದಾರೆ. ಆದರೆ, ಮಕ್ಕಳಲ್ಲಿ ಯಾಕೆ ಹೃದಯಾಘಾತವಾಗುತ್ತಿದೆ, ಅದಕ್ಕೆ ಪ್ರಮುಖ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ಅಧ್ಯಯನಗಳಾಗಿಲ್ಲ. ಆದರೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿಯ ಪ್ರತಿಷ್ಟಿತ ಕಿಮ್ಸ್ ವೈದ್ಯಕೀಯ ಕಾಲೇಜಿನ ಬಹುಶಿಸ್ತೀಯ ಸಂಶೋಧನಾ ತಂಡ, ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣಗಳೇನು ಎಂಬುದರ ಬಗ್ಗೆ ದೇಶದಲ್ಲಿಯೇ ಮೊದಲ ಬಾರಿಗೆ ಪೈಲಟ್ ಪ್ರೊಜೆಕ್ಟ್ ಆಗಿ, ಶಂಶೋಧನೆ ನಡೆಸಿದೆ. ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಮಾಣ ಸಂಬಂಧ ದೇಶದಲ್ಲಿಯೇ ಮೊದಲ ಬಾರಿಗೆ ಕಿಮ್ಸ್ ಸಂಶೋಧನಾ ತಂಡದಿಂದ ಅಧ್ಯಯನ ನಡೆದಿದೆ.

ಇದನ್ನೂ ಓದಿ
Image
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
Image
ಹಾಸನ: ಹೃದಯಾಘಾತದಿಂದ ಮತ್ತಿಬ್ಬರು ಸಾವು, ಒಂದೇ ತಿಂಗಳಲ್ಲಿ 12 ಜನ ಬಲಿ
Image
ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ ನಾಲ್ವರು ಯುವಕರು ಹೃದಯಾಘಾತಕ್ಕೆ ಬಲಿ
Image
ಬಾತ್‌ರೂಂನಲ್ಲೇ ಯುವತಿಗೆ ಹೃದಯಾಘಾತ, ನಿಂತಲ್ಲೇ ಕುಸಿದು ಬಿದ್ದು ಯುವಕ ಸಾವು

Hubli Kims Study

ಐಸಿಎಂಆರ್ ಕೂಡಾ ಈ ರೀತಿಯ ಉತ್ತರಗಳನ್ನು ಹುಡುಕಲು ಅನೇಕ ರೀತಿಯ ಸಂಶೋಧನೆಗಳಿಗೆ ಒತ್ತು ನೀಡುತ್ತದೆ. ಹೀಗಾಗಿ ಕಿಮ್ಸ್ ನ ಬಹುಶಿಸ್ತೀಯ ಸಂಶೋಧನಾ ಘಟಕದ ಮುಖ್ಯಸ್ಥರಾಗಿರುವ ಡಾ. ರಾಮ್ ಕವಲಗುಡ್ಡ ನೇತೃತ್ವದ ತಂಡ, 2-3 ತಿಂಗಳ ಕಾಲ ನಿರಂತರವಾಗಿ ಅಧ್ಯಯನ ನಡೆಸಿ, ಅನೇಕ ಮಾಹಿತಿ ಸಂಗ್ರಹಿಸಿದೆ.

ಹೇಗೆ ನಡೆಯಿತು ಸಂಶೋಧನೆ, ಅನುಸರಿಸಿದ ಕ್ರಮಗಳೇನು?

ಧಾರವಾಡ ತಾಲೂಕಿನ 35 ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಹೈಸ್ಕೂಲ್​ಗೆ ಬೇಟಿ ನೀಡಿದ್ದ ತಂಡ, 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ 30 ಮಕ್ಕಳನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡಿತ್ತು. ಹೆಚ್ಚು ತೂಕ ಇರುವ ಮಕ್ಕಳನ್ನೇ ಸಂಶೋಧನೆಗೆ ಆಯ್ಕೆ ಮಾಡಿಕೊಂಡು, ಅವರ ಆಹಾರದ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಅವರು ಮೊಬೈಲ್ ನೋಡುವ ಸಮಯದ ಬಗ್ಗೆ, ದೈಹಿಕ ಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಿತ್ತು. ನಂತರ ಅವರ ದೈಹಿಕ ಪರೀಕ್ಷೆ ಮಾಡಲಾಗಿತ್ತು. ಇನ್ನು ಲಿಪಿಡ್ ಪ್ರೊಪೈಲ್, ಲೈಪೋ ಪ್ರೋಟಿನ್ ಎ, ಹೋಮೋಸಿಸ್ಟಿನ್, ಹೈಸೆನ್ಸಿಟಿವಿಟಿ ಸಿ ರಿಯಾಕ್ಟೀವ್ ಪ್ರೋಟಿನ್ ರಕ್ತ ಪರೀಕ್ಷೆ, ಜೆನೆಟಿಕ್ ಪರೀಕ್ಷೆ ಸೇರಿದಂತೆ ಅನೇಕ ರೀತಿಯ ರಕ್ತ ಪರೀಕ್ಷೆಗಳನ್ನು ನಡೆಸಿತ್ತು.

30 ರಲ್ಲಿ 26 ಮಕ್ಕಳಿಗೆ ಹೃದಯಾಘಾತದ ಅಪಾಯ

ಮಕ್ಕಳಲ್ಲಿ ಈ ರೀತಿಯ ಪರೀಕ್ಷೆಗಳನ್ನೆಲ್ಲ ನಡೆಸಿ ಈ ಹಿಂದೆ ಅಧ್ಯಯನ ಮಾಡಿರಲಿಲ್ಲ ಎಂಬುದು ಸಂಶೋಧನಾ ತಂಡದಲ್ಲಿದ್ದವರ ಅಭಿಪ್ರಾಯ. ಪರೀಕ್ಷೆಯ ನಂತರ ಬಂದ ವರದಿ ನೋಡಿ, ತಂಡವೇ ಶಾಕ್ ಆಗಿದೆ. ಯಾಕೆಂದರೆ, ಪರೀಕ್ಷೆಗೆ ಒಳಪಟ್ಟಿದ್ದ 30 ಮಕ್ಕಳ ಪೈಕಿ, ಬರೋಬ್ಬರಿ 26 ಮಕ್ಕಳು ಹೃದಯಾಘಾತದ ಅಪಾಯ ಹೊಂದಿರುವುದು ಗೊತ್ತಾಗಿದೆ.

ವೈದ್ಯಕೀಯ ವರದಿಯಲ್ಲಿ ಬಯಲಾದ ಆಘಾತಕಾರಿ ಸಂಗತಿಗಳು

ಸಂಶೋಧನಗೆ ಆಯ್ಕೆ ಮಾಡಿಕೊಂಡ 30 ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿಗೆ ಸಕ್ಕಲೆ ಕಾಯಿಲೆ ಇರುವುದು ಪತ್ತೆಯಾದರೆ, ನಾಲ್ವರು ವಿದ್ಯಾರ್ಥಿಗಳಲ್ಲಿ ಬಿಪಿ ಹೆಚ್ಚಾಗಿತ್ತು. ಐವರು ವಿದ್ಯಾರ್ಥಿಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿತ್ತು. 11 ವಿದ್ಯಾರ್ಥಿಗಳಲ್ಲಿ ಟ್ರೈಗ್ಲಿಸರೈಡ್ ಹೆಚ್ಚಾಗಿತ್ತು. ಐವರು ವಿದ್ಯಾರ್ಥಿಗಳಲ್ಲಿ ಎಲ್​ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಾಗಿರುವುದು ಕಂಡುಬಂದಿದೆ.

Hubli Kims Study Team

ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಮಾಣ ತಿಳಿಸುವ ಹೋಮೋಸಿಸ್ಟಿನ್ ಪ್ರಮಾಣ, 30 ಮಕ್ಕಳ ಪೈಕಿ ಬರೋಬ್ಬರಿ 26 ಮಕ್ಕಳಲ್ಲಿ ಹೆಚ್ಚಾಗಿತ್ತು. ನಾಲ್ಕು ಮಕ್ಕಳಲ್ಲಿ ಲಿಪೋಪ್ರೋಟಿನ್ ಪ್ರಮಾಣ ಹೆಚ್ಚಾಗಿತ್ತು. ಹೈ ಸೆ ನ್ಸಿಟಿವ್ ಸಿ ರಿಯಾಕ್ಟಿವ್ ಪ್ರೋಟಿನ್ 18 ಮಕ್ಕಳಲ್ಲಿ ಹೆಚ್ಚು ಇರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ಕಂಡುಬಂದಿತ್ತು. ಈ ಅಂಶಗಳು ಹೆಚ್ಚಾಗಿದ್ದರೆ ಅಂಥವರು ಹೃದಯಾಘಾತದ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ ಎಂದು ಅರ್ಥ.

ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳೇನು?

ಅಧ್ಯಯನಕ್ಕೆ ಒಳಪಟ್ಟ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳನ್ನು ಹೊಂದಿದ್ದಾರೆ ಎಂಬುದು ಗೊತ್ತಾಗಿದ್ದು, ಆ ಬಗ್ಗೆ ಅವರನ್ನು ಕೌನ್ಸೆಲಿಂಗ್​ಗೂ ಒಳಪಡಿಸಲಾಗಿದೆ. ಈ ವಿದ್ಯಾರ್ಥಿಗಳಲ್ಲಿ ಬೊಜ್ಜು ಹೆಚ್ಚಿರಲು, ದೈಹಿಕ ಚಟುವಟಿಕೆ ಇಲ್ಲದೇ ಇರುವುದು ಕಾರಣ ಎಂಬುದು ಗೊತ್ತಾಗಿದೆ. ಅವರು ಪ್ರತಿನಿತ್ಯ ಶಾಲೆಗೆ ಹೋಗುವುದು ಹಾಗೂ ಮನೆಗೆ ಹೋಗುವುದಷ್ಟನ್ನೇ ಮಾಡುತ್ತಿದ್ದರು. ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಮಕ್ಕಳು ದೈಹಿಕ ಶ್ರಮದ ಆಟವನ್ನೇ ಆಡುತ್ತಿರಲಿಲ್ಲ. ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರಲಿಲ್ಲ.

1 ರಿಂದ 4 ಗಂಟೆ ಮೊಬೈಲ್ ನೋಡುತ್ತಿದ್ದ ಮಕ್ಕಳು!

ಮಕ್ಕಳು ಪ್ರತಿ ದಿನ ಒಂದು ಗಂಟೆಯಿಂದ ನಾಲ್ಕು ಗಂಟೆವರಗೆ ಮೊಬೈಲ್​ ನೋಡುತ್ತಿದ್ದರು. ಜೊತೆಗೆ ಅವರ ಆಹಾರ ಕ್ರಮ ಕೂಡಾ ಸರಿಯಾಗಿರಲಿಲ್ಲ. ಅಸಹಜತೆ ಕಂಡುಬಂದ ವಿದ್ಯಾರ್ಥಿಗಳ ಪರೀಕ್ಷಾ ವರದಿಯನ್ನು ಅವರ ಹೆತ್ತವರಿಗೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕಳುಹಿಸಿ ಕೊಡಲಾಗಿದೆ. ಅವರ ದೈನಂದಿನ ಜೀವನ ಬದಲಾವಣೆಯಾಗದೇ ಹೋದರೆ ಅವರು ಹೃದಯಾಘಾತಕ್ಕೆ ಹತ್ತಿರವಾಗಿದ್ದಾರೆ ಎಂಬುದನ್ನು ತಿಳಿಸಲಾಗಿದೆ. ಜೊತೆಗೆ ಅಧ್ಯಯನ ತಂಡವೇ ವಿದ್ಯಾರ್ಥಿಗಳ ಮನೆಗೆ ಹೋಗಿ, ಅವರಿಗೆ ಡಯಟ್ ಪ್ಲಾನ್, ದೈಹಿಕ ಚಟುವಟಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟಿದೆ. ಅಲ್ಲದೆ, ಜೆನಟಿಕ್ ಸಮಸ್ಯೆ ಇರುವ ಮಕ್ಕಳಲ್ಲಿ ಹೆತ್ತವರ ಜೊತೆ ಕುಳಿತು ಕೌನ್ಸಲಿಂಗ್ ಮಾಡಲು ತಂಡ ಮುಂದಾಗಿದೆ.

ಪರಿಹಾರ ಕ್ರಮಗಳನೇನು?

ಮಕ್ಕಳಲ್ಲಿ ಹೃದಯಾಘಾತವಾಗುವುದನ್ನು ತಪ್ಪಿಸಬೇಕಾದರೆ ಅವರ ಆಹಾರ ಪದ್ದತಿ ಬದಲಾಗಲೇಬೇಕಾಗಿದೆ. ಸಾಂಪ್ರದಾಯಿಕ ಆಹಾರ ಪದ್ಧತಿ ಚೆನ್ನಾಗಿತ್ತು. ಆದರೆ, ಹೆಚ್ಚಿನ ಮಕ್ಕಳು ಜಂಕ್ ಪುಡ್ ತಿನ್ನುವುದು, ಸಾಫ್ಟ್ ಡ್ರಿಂಕ್ಸ್ ಹೆಚ್ಚಾಗಿ ಕುಡಿಯುತ್ತಿದ್ದಾರೆ. ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಪಠ್ಯದ ಜೊತೆಗೆ ಆಟಕ್ಕೂ ಹೆಚ್ಚಿನ ಸಮಯ ನೀಡಬೇಕು.

ಒಳ್ಳೆಯ ಜೀವನ ಶೈಲಿ, ಒಳ್ಳೆಯ ಆಹಾರ ಪದ್ಧತಿ ರೂಢಿ ಮಾಡಿಕೊಂಡರೆ ಹೃದಯದ ತೊಂದರೆಯಿಂದ ಪಾರಾಗಬಹುದು ಎಂದು ಹುಬ್ಬಳ್ಳಿ ಕಿಮ್ಸ್ ನ ಬಹುಶೀಸ್ತಿಯ ಸಂಶೋಧನಾ ಘಟಕದ ಮುಖ್ಯಸ್ಥ ಡಾ. ರಾಮ್ ಕವಲಗುಡ್ಡ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮತ್ತಿಬ್ಬರು ಸಾವು: ಒಂದೇ ತಿಂಗಳಲ್ಲಿ 12 ಜನ ಬಲಿ

ಸದ್ಯ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಐಸಿಎಂಆರ್​​ಗೆ ಕಳುಹಿಸಲಾಗಿದೆ. ಮಕ್ಕಳಲ್ಲಿ ಹೃದಯಾಘಾತದ ಲಕ್ಷಣಗಳು ಹೆಚ್ಚಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ರೀತಿಯ ಅಧ್ಯಯನಗಳನ್ನು ದೇಶಾದ್ಯಂತ ಎಲ್ಲೆಡೆ ಮಾಡಬೇಕಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಕ್ರಮಗಳನ್ನು ಕೈಗೊಂಡರೆ, ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತದ ತೊಂದರೆ ತಪ್ಪಿಸಬಹುದು ಎಂಬುದು ಕಿಮ್ಸ್ ನ ತಂಡದ ಆಶಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:28 pm, Tue, 24 June 25