3 ತಿಂಗಳಿನಿಂದ ಹಣ ಬಾರದೇ ಗೃಹಲಕ್ಷ್ಮೀಯರು ಕಂಗಾಲು: ಪ್ರತಿದಿನ ಬ್ಯಾಂಕ್ಗೆ ಅಲೆದು ಸುಸ್ತಾದ ಮಹಿಳೆಯರು
ಕರ್ನಾಟಕದಲ್ಲಿ ಗೃಹಣಿಯರು ಆರ್ಥಿಕವಾಗಿ ಸಭಲರಾಗಬೇಕು ಅನ್ನೋ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡ್ತಿದೆ. ಆದ್ರೆ ಪ್ರತಿ ತಿಂಗಳು ಹಣ ಬಾರದೆ ಇರೋದು ಇದೀಗ ಗೃಹಲಕ್ಷ್ಮಿಯರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಕಳೆದ ಮೂರು ತಿಂಗಳಿಂದ ಹಣ ಬಂದಿಲ್ಲವಂತೆ. ಹೀಗಾಗಿ ಆದಷ್ಟು ಬೇಗನೆ ಹಣ ಹಾಕಬೇಕು ಎಂದು ಗೃಹಲಕ್ಷ್ಮಿಯರು ಆಗ್ರಹಿಸುತ್ತಿದ್ದಾರೆ.

ಹುಬ್ಬಳ್ಳಿ, (ಜೂನ್ 26): ರಾಜ್ಯದಲ್ಲಿ ತಾವು ಅಧಿಕಾರಕ್ಕೆ ಬಂದ್ರೆ ಪ್ರತಿಯೊಬ್ಬ ಗೃಹಲಕ್ಷ್ಮಿಯರಿಗೆ ಎರಡು ಸಾವಿರ ಹಣ ನೀಡುವುದಾಗಿ ಕಾಂಗ್ರೆಸ್ (Congress) ನಾಯಕರು ಹೇಳಿದ್ದರು. ಅದರಂತೆ ಅಧಿಕಾರಕ್ಕೆ ಬಂದಮೇಲೆ 2023 ರ ಜುಲೈ ತಿಂಗಳಿಂದ ಈ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Guarantee Scheme )ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಸರಿಸುಮಾರು 1.25 ಕೋಟಿ ಗೃಹಣಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಈ ಯೋಜನೆಗಾಗಿಯೇ ಕಳೆದ ಬಜೆಟ್ ನಲ್ಲಿ ಸರ್ಕಾರ ಬಜೆಟ್ ನಲ್ಲಿ 28608 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದ್ರೆ ಗೃಹಲಕ್ಷ್ಮಿ ಹಣ ಸರಿಯಾಗಿ ಪ್ರತಿ ತಿಂಗಳು ಖಾತೆಗೆ ಜಮೆಯಾಗದಿರುವುದರಿಂದ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗೃಹಲಕ್ಷ್ಮಿ ಹಣದ ವಿಚಾರವಾಗಿ ವಿರೋಧ ಪಕ್ಷಗಳು ಆಗಾಗ ಸರ್ಕಾರದ ವಿರುದ್ದ ಹರಿಹಾಯುತ್ತಲೇ ಇವೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ ಎಂದು ಆರೋಪಿಸುತ್ತಿವೆ. ಸರ್ಕಾರ ಕೂಡಾ ಸರಿಯಾಗಿ ಹಣ ಹಾಕುತ್ತೇವೆ ಎಂದು ಹೇಳುತ್ತಲೇ ಇದೆ. ಆದ್ರೆ ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿಯರಿಗೆ ಹಣ ಬಂದಿಲ್ಲವಂತೆ. ಪ್ರತಿ ತಿಂಗಳು ಹಣ ಜಮೆಯಾಗದಿರುವುದಕ್ಕೆ ಹುಬ್ಬಳ್ಳಿಯಲ್ಲಿ ಫಲಾನುಭವಿಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಸರ್ಕಾರ ಪ್ರತಿ ತಿಂಗಳು ಹಣ ಹಾಕುವುದಾಗಿ ಹೇಳಿತ್ತು. ಆದ್ರೆ ಕಳೆದ ಮೂರು ತಿಂಗಳಿಂದ ನಮ್ಮ ಅಕೌಂಟ್ ಗೆ ಹಣ ಬಂದಿಲ್ಲ. ಹಣ ಬಂದಿದೆ ಎಂದು ಬ್ಯಾಂಕ್ ಗೆ ಹೋಗಿ ಬರುತ್ತಿದ್ದೇವೆ. ಆದ್ರೆ ಬ್ಯಾಂಕ್ ನವರು ಯಾವುದೇ ಹಣ ಜಮೆಯಾಗಿಲ ಎಂದು ಹೇಳುತ್ತಿದ್ದಾರೆ.
ವೃದ್ದರು ಮಾತ್ರೆ ಖರ್ಚಿಗಾಗಿ ಈ ಹಣ ಬಳಸಿದ್ರೆ, ಕೆಲವರು ಮಕ್ಕಳ ಶಾಲೆ ಪೀಸ್ ಕಟ್ಟಲು ಹಣ ಬಳಸಿಕೊಳ್ಳುತ್ತಿದ್ದೇವೆ. ಪ್ರತಿ ತಿಂಗಳು ಮನೆಯ ರೇಷನ್ ಖರ್ಚಿಗೆ ಹಣ ಬಳಕೆ ಆಗ್ತಿತ್ತು. ಆದ್ರೆ ಸರಿಯಾಗಿ ಹಣ ಬಾರದೇ ಇದ್ದಿದ್ದರಿಂದ ಇದೀಗ ಎಲ್ಲದಕ್ಕೂ ತೊಂದರೆಯಾಗಿದೆ. ಹೀಗಾಗಿ ಸರ್ಕಾರ ಪ್ರತಿ ತಿಂಗಳು ಅಕೌಂಟ್ ಗೆ ಹಣ ಜಮೆ ಮಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಆದಷ್ಟು ಬೇಗನೆ ಹಣ ಹಾಕುವುದಾಗಿ ಪ್ರತಿ ಸಲ ಹೇಳುತ್ತಲೇ ಇದ್ದಾರೆ. ಆದ್ರೆ ಪ್ರತಿ ತಿಂಗಳು ಮಾತ್ರ ಸರಿಯಾಗಿ ಗೃಹಲಕ್ಷ್ಮಿಯರಿಗೆ ಹಣ ಜಮೆಯಾಗುತ್ತಿಲ್ಲ. ಯಾವಾಗ ಬರುತ್ತೆ ಎನ್ನುವುದು ಸಹ ಗ್ಯಾರಂಟಿ ಇಲ್ಲದಂತಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎನ್ನುವುದು ಫಲಾನುಭವಿಗಳ ಆಗ್ರಹವಾಗಿದೆ.



