ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶಕ್ಕೆ ಮೆಂತ್ಯ, ಹಸಿರು ಕಾಳು ಹೋಗಲು ಕಾರಣವೇನು, ಗಗನಯಾನಕ್ಕೂ ಧಾರವಾಡ ಕೃಷಿ ವಿವಿಗೂ ಲಿಂಕ್ ಹೇಗೆ? ಇಲ್ಲಿದೆ ವಿವರ
ಆಕ್ಸಿಯಮ್ 4 ಅಂತರಿಕ್ಷಯಾನದಲ್ಲಿ ಭಾರತೀಯ ಶುಭಾಂಶು ಶುಕ್ಲಾ ಜೊತೆಗೆ ಹೋಗಿರುವುದು ನಮ್ಮ ಕರ್ನಾಟಕದ ಹಸಿರು ಮತ್ತು ಮೆಂತೆ ಕಾಳುಗಳು. ಇವು ಮುಂದೆ ಮೊಳಕೆಯೊಡೆದು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಶೋಧನೆಗೆ ಬರಲಿವೆ ಎಂಬುವುದು ಈಗ ಗೊತ್ತಾಗಿರುವ ವಿಚಾರ. ಇದೇ ಕಾರಣದಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಖ್ಯಾತಿ ಇದೀಗ ಮುಗಿಲೆತ್ತರಕ್ಕೆ ವ್ಯಾಪಿಸಿದೆ. ಹಾಗಾದರೆ ಕೃಷಿ ವಿವಿ ಈ ವಿಚಾರವಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲನೇ ಸಲನಾ? ಗಗನಯಾನಕ್ಕೂ ಈ ಕೃಷಿ ವಿವಿಗೆ ಲಿಂಕ್ ಬೆಳೆದಿದ್ದು ಹೇಗೆ? ಇಲ್ಲಿದೆ ವಿವರ.

ಧಾರವಾಡ, ಜೂನ್ 27: ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಆಕ್ಸಿಯಮ್ -4 (Axiom-4 mission) ಗುರುವಾರ ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದೆ. ಈ ಗಗನಯಾನದಲ್ಲಿ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ ಅವರು ನಮ್ಮ ಕರ್ನಾಟಕದ ಹಸಿರು ಮತ್ತು ಮೆಂತೆ ಬೀಜಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯವು (Dharwad Agriculture University) ಹಸಿರುಕಾಳು ಮತ್ತು ಮೆಂತ್ಯ ಬೀಜಗಳನ್ನು ಕಳುಹಿಸಿದೆ. ಹಾಗಾದರೆ ಕೃಷಿ ವಿಶ್ವವಿದ್ಯಾಲಯ ಅಂತರಿಕ್ಷ ವಿಷಯದಲ್ಲಿ ಕೆಲಸ ಮಾಡುತ್ತಿರುವುದು ಇದೇ ಮೊದಲನೇ ಸಲನಾ? ಗಗನಯಾನಕ್ಕೂ ಈ ಕೃಷಿ ವಿವಿಗೆ ಲಿಂಕ್ ಬೆಳೆದಿದ್ದು ಹೇಗೆ? ಇಲ್ಲಿದೆ ಮಾಹಿತಿ.
ಧಾರವಾಡದ ಕೃಷಿ ವಿಶ್ವವಿದ್ಯಾಲಯ ರೈತರ ಶ್ರೇಯೋಭಿವೃದ್ಧಿಗೆ, ಕೃಷಿಯಲ್ಲಿನ ವಿವಿಧ ಆವಿಷ್ಕಾರದಲ್ಲಿ ಕೆಲಸ ಮಾಡಲು ಹೆಸರು ವಾಸಿಯಾಗಿದೆ. ಅದರಲ್ಲಿಯೂ ಕೃಷಿ ವಿಶ್ವವಿದ್ಯಾಲಯ ಆವಿಷ್ಕಾರ ಮಾಡಿದ ವಿವಿಧ ಬಗೆಯ ಬೀಜಗಳಿಗೆ ದೇಶವ್ಯಾಪಿಯಲ್ಲಿ ಬೇಡಿಕೆ ಇದೆ. ಇಷ್ಟು ದಿನ ರೈತರ ಹೊಲಗದ್ದೆಗಳಲ್ಲಿ ಬಿತ್ತನೆಗೆ ಮಾತ್ರವೇ ಸೀಮಿತವಾಗಿದ್ದ ಕೃಷಿ ವಿಶ್ವವಿದ್ಯಾಲಯದ ಕಾಳುಗಳಿಗೆ ಈಗ ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿಯೂ ಬೇಡಿಕೆ ಬಂದಿದೆ. ಇದು ಅಚ್ಚರಿಯಾದರೂ ಸತ್ಯ.
ಹೇಗೆ ನಡೆಯಲಿದೆ ಸಂಶೋಧನೆ?
ಪೌಷ್ಠಿಕಾಂಶದ ಆಹಾರ ಬೆಳೆಯುವ ಕುರಿತ ಸಂಶೋಧನೆ ಪ್ರಯುಕ್ತ ಬಾಹ್ಯಾಕಾಶಕ್ಕೆ ಹಸಿರು ಮತ್ತು ಮೆಂತೆ ಬೀಜ ತೆಗೆದುಕೊಂಡು ಹೋಗಲಾಗಿದ್ದು, ಅಂತರಿಕ್ಷದಲ್ಲಿಯೇ ಶುಭಾಂಶು ಅವರು, ಕಾಳುಗಳಿಗೆ ನೀರು ಹಾಕಿ ಮೊಳಕೆ ಬರುವಂತೆ ಮಾಡಲಿದ್ದಾರೆ. 14 ದಿನಗಳ ಅಂತರಿಕ್ಷ ಯಾನದ ಬಳಿಕ ಭೂಮಿಗೆ ಬಂದಾಗ, ಶೂನ್ಯ ಗುರುತ್ವಾಕರ್ಷಣೆಯಿಂದ ಬರುವ ಮೊಳಕೆ ಒಡೆದ ಕಾಳುಗಳು ಹೆಚ್ಚಿನ ಸಂಶೋಧನೆಗೆ ನೇರವಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗಕ್ಕೆ ಬರಲಿವೆ. ಇಲ್ಲಿ ಜೈವಿಕ ತಜ್ಞ ಡಾ. ರವಿಕುಮಾರ ಹೊಸಮನಿ ಇವುಗಳ ಮೇಲೆ ಸಂಶೋಧನೆ ಮಾಡಲಿದ್ದಾರೆ.
ಈ ಕಾಳುಗಳನ್ನೇ ಕಳುಹಿಸಲು ಕಾರಣವೇನು?
ಇಸ್ರೋ, ಕೃಷಿ ವಿವಿ ಹಾಗೂ ಧಾರವಾಡ ಐಐಟಿ ಸಹಯೋಗದೊಂದಿಗೆ ಈ ಕಾಳುಗಳನ್ನು ಕಳುಹಿಸಲಾಗಿದ್ದು, ಬಾಹ್ಯಾಕಾಶಕ್ಕೆ ಹೋದವರಿಗೆ ಪೌಷ್ಟಿಕಾಂಶ ಸಿಗಲಿ ಎಂಬ ಉದ್ದೇಶದಿಂದ ಇವುಗಳನ್ನು ಕಳುಹಿಸಲಾಗಿದೆ. ಹಸಿರು ಮತ್ತು ಮೆಂತೆ ಕಾಳು ಮನುಷ್ಯನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇವುಗಳನ್ನು ಗಗನ ಯಾತ್ರೆಯಲ್ಲಿ ಮೈನಸ್ 40 ಡಿಗ್ರಿಯಲ್ಲಿ ಬಾಹ್ಯಾಕಾಶದಲ್ಲಿ ಇಟ್ಟು ಮರಳಿ ಭೂಮಿಗೆ ತರಲಾಗುತ್ತದೆ. 16 ದಿನಗಳ ಬಳಿಕ ಭೂಮಿಗೆ ಇವರು ಬಂದಾಗ ಅವುಗಳ ಪೋಷಕಾಂಶ ಗುಣಮಟ್ಟದ ಪರೀಕ್ಷೆ ಮಾಡಲಾಗುತ್ತದೆ. ಗಗನ ಯಾತ್ರೆಯಲ್ಲಿ ಸೂಕ್ಷ್ಮಾಣು ಜೀವಗಳಿಂದ ಈ ಕಾಳುಗಳಿಗೆ ಏನಾದರೂ ಪರಿಣಾಮ ಆಗಿದೆಯೇ ಎಂದು ಪರೀಕ್ಷೆ ಮಾಡಲಾಗುತ್ತದೆ. ಇದರ ಬಳಿಕ ಗಗನಯಾತ್ರೆಯಲ್ಲಿ ಗಗನಯಾತ್ರಿಗಳು ಈ ಕಾಳು ಉಪಯೋಗ ಮಾಡಬಹುದಾ ಅಥವಾ ಬೇಡವಾ ಎಂಬುವುದನ್ನು ಪರೀಕ್ಷೆ ಮಾಡಲಾಗುತ್ತದೆ. ಇದೀಗ ಕೃಷಿ ವಿವಿ ವಿಜ್ಞಾನಿಗಳು ಪ್ರಯೋಗ ಮಾಡುತ್ತಿದ್ದಾರೆ ಎಂದು ಕೃಷಿ ವಿವಿ ಕುಲಪತಿ ಪ್ರೊ. ಪಿ. ಎಲ್. ಪಾಟೀಲ್ ಹೇಳಿದರು.
ಗಗನಯಾತ್ರಿಗಳಿಗೆ ಕಿಡ್ನಿ ಸ್ಟೋನ್ ಆಗದಂತೆ ತಡೆಯುತ್ತೆ ಮೆಂತೆ ಕಾಳು
ಮೆಂತೆ ಕಾಳಿನಲ್ಲಿ ಔಷಧಿಯ ಗುಣಮಟ್ಟ ಹೆಚ್ಚಾಗಿರುತ್ತದೆ. ಸಕ್ಕರೆ ಖಾಯಿಲೆ ಹಾಗೂ ಕಿಡ್ನಿ ಸ್ಟೋನ್ ಇದ್ದವರು ಮೆಂತೆ ಕಾಳು ನೆನೆಸಿ, ಅದರ ನೀರನ್ನು ಕುಡಿಯುತ್ತಾರೆ. ಇದರ ಕಾಳನ್ನು ಕೂಡ ಉಪಯೋಗ ಮಾಡುತ್ತಾರೆ. ಬಾಹ್ಯಾಕಾಶ ಯಾತ್ರೆಯ ಸಮಯದಲ್ಲಿ ಬಾಹ್ಯಾಕಾಶಿಗಳ ಕಿಡ್ನಿಯಲ್ಲಿ ಸ್ಟೋನ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದೇ ಕಾರಣಕ್ಕೆ ಅದನ್ನು ನೀಗಿಸಲು ಈ ಮೆಂತೆಯ ಪ್ರಯೋಗಕ್ಕೆ ಒಳಪಡಿಸಲಾಗಿದೆ ಎಂದರು.
ಅಂತರಿಕ್ಷದಲ್ಲಿ ಭಾರತದ 7 ಪ್ರಯೋಗಗಳು
ಬೆಂಗಳೂರು ಐಐಎಸ್ಸಿಯ 2, ಧಾರವಾಡ ಕೃಷಿ ವಿವಿಗೆ ಸಂಬಂಧಿಸಿದ ಹಸಿರು ಕಾಳು ಮತ್ತು ಮೆಂತೆ ಕಾಳುಗಳ ಅಧ್ಯಯನ, ಬೆಂಗಳೂರಿನ ಬ್ರಿಕ್ ಇನ್ಸ್ಟೆಮ್ ಸಂಸ್ಥೆಯದ್ದು ಸೇರಿ ದೇಶದಿಂದ ರವಾನೆಯಾಗಿರುವ 7 ಪ್ರಯೋಗಗಳನ್ನು ಅಂತರಿಕ್ಷದಲ್ಲಿ ಶುಭಾಂಶು ನಡೆಸಲಿದ್ದಾರೆ.
ಇದನ್ನೂ ಓದಿ: ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿವೆ ಧಾರವಾಡದ ಮೆಂತ್ಯ, ಒಣಬೀಜ, ಹಸಿರುಕಾಳು!
ಧಾರವಾಡದ ಹಸಿರುಕಾಳು ಮತ್ತು ಮೆಂತೆ ಕಾಳುಗಳು ಈಗ ಅಂತರಿಕ್ಷ ಯಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ. ಮುಂದಿನ ದಿನಗಳಲ್ಲಿ ನಡೆಯುವ ಹೆಚ್ಚಿನ ಸಂಶೋಧನೆ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ. ಇದು ಕೇವಲ ಧಾರವಾಡ ಮಾತ್ರವಲ್ಲದೇ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.








