ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್‌ಎಸ್ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ
ಬಾಹ್ಯಾಕಾಶದಿಂದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮೊದಲ ಸಂದೇಶ ಕಳುಹಿಸಿದ್ದು, ‘ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಸುರಕ್ಷಿತವಾಗಿ ಐಎಸ್‌ಎಸ್ ತಲುಪಿದ್ದೇನೆ. ಮುಂದಿನ 14 ದಿನಗಳು ಅದ್ಭುತವಾಗಿರಲಿವೆ’ ಎಂದಿದ್ದಾರೆ. ಇತರ ಮೂವರು ಗಗನಯಾತ್ರಿಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಪ್ರವೇಶಿಸಿದ ಶುಭಾಂಶು ಶುಕ್ಲಾ ಅವರಿಗೆ ಅಪ್ಪುಗೆಯ ಸ್ವಾಗತ ಸಿಕ್ಕಿತು.

ನವದೆಹಲಿ, ಜೂನ್ 26: ಇಂದು (ಗುರುವಾರ) ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ (Shubanshu Shukla) ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಕಳುಹಿಸಿದ್ದಾರೆ. ಕಕ್ಷೆಯ ಪ್ರಯೋಗಾಲಯಕ್ಕೆ ಬಂದಾಗ ತನಗೆ ಉತ್ತಮ ಅನುಭವವಾಯಿತು. ನಮ್ಮ ಭೂಮಿಯನ್ನು ಈ ಸ್ಥಳದಿಂದ ನೋಡಿದ ಕೆಲವೇ ಜನರಲ್ಲಿ ಒಬ್ಬನಾಗಿರುವುದು ತನ್ನ ಸೌಭಾಗ್ಯ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಪರೀಕ್ಷಾ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯರಾಗಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ 8 ದಿನಗಳ ಕಾಲ ಉಳಿದುಕೊಂಡಿದ್ದರು. ಶುಭಾಂಶು ಶುಕ್ಲಾ 14 ದಿನ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರಯೋಗ ನಡೆಸಲಿದ್ದಾರೆ.
ಬಾಹ್ಯಾಕಾಶದಿಂದ ನೀಡಿದ ಮೊದಲ ಸಂದೇಶದಲ್ಲಿ ಶುಭಾಂಶು ಶುಕ್ಲಾ, “ಈ ಪ್ರಯಾಣ ಅದ್ಭುತವಾಗಿತ್ತು. ಮುಂದಿನ 14 ದಿನಗಳು ಅದ್ಭುತವಾಗಿರುತ್ತವೆ ಎಂದು ನನಗೆ ತುಂಬಾ ವಿಶ್ವಾಸವಿದೆ. ವಿಜ್ಞಾನ ಮತ್ತು ಸಂಶೋಧನೆಯನ್ನು ಮುಂದುವರೆಸುವುದು ಮತ್ತು ಒಟ್ಟಿಗೆ ಕೆಲಸ ಮಾಡುವುದು ಬಹಳ ಸಂತಸದ ಮತ್ತು ಹೆಮ್ಮೆಯ ಸಂಗತಿ. ಎಲ್ಲರಿಗೂ ತುಂಬಾ ಧನ್ಯವಾದಗಳು” ಎಂದಿದ್ದಾರೆ.
Message from Sir Shubhanshu Shukla to Indians after reaching International space station 🫡🇮🇳#shubhanshushuklainspace #Axiom4Mission pic.twitter.com/C3CWEphOAS
— Explorer (@VishalS80242581) June 26, 2025
ಇದನ್ನೂ ಓದಿ: Axiom 4 Mission: ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿ ಇತಿಹಾಸ ಸೃಷ್ಟಿಸಿದ ಶುಭಾಂಶು ಶುಕ್ಲಾ
ಹಾಗೇ, ಭಾರತೀಯರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿರುವ ಶುಭಾಂಶು ಶುಕ್ಲಾ, “ನನ್ನ ಪ್ರೀತಿಯ ದೇಶವಾಸಿಗಳಿಗೆ ಒಂದು ಸಣ್ಣ ಸಂದೇಶ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸುರಕ್ಷಿತವಾಗಿ ತಲುಪಿದ್ದೇನೆ. ಇಲ್ಲಿ ನಿಲ್ಲುವುದು ತುಂಬಾ ಸುಲಭ ಎಂದು ಅನಿಸಿದರೂ ಸ್ವಲ್ಪ ಕಷ್ಟ. ನನ್ನ ತಲೆ ಸ್ವಲ್ಪ ಭಾರವಾಗಿದೆ, ಇದು ಕಿರಿಕಿರಿಯಾದರೂ ಇವೆಲ್ಲವೂ ತುಂಬಾ ಸಣ್ಣ ವಿಷಯ. ನಾವು ಕೆಲವೇ ದಿನಗಳಲ್ಲಿ ಇದಕ್ಕೆ ಒಗ್ಗಿಕೊಳ್ಳುತ್ತೇವೆ. ಇದು ಪ್ರಯಾಣದ ಮೊದಲ ಹೆಜ್ಜೆ. ನಾನು ಮುಂದಿನ 14 ದಿನಗಳವರೆಗೆ ಇಲ್ಲಿ ವಾಸಿಸಬೇಕು ಮತ್ತು ಬಹಳಷ್ಟು ವಿಜ್ಞಾನ ಪ್ರಯೋಗಗಳನ್ನು ನಡೆಸಬೇಕು, ಹಾಗೇ ನಿಮ್ಮೆಲ್ಲರೊಂದಿಗೆ ಮಾತನಾಡಬೇಕು. ಈ ಹಂತವು ನಮ್ಮದೇ ಆದ ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ. ನಾನು ಸ್ವಲ್ಪ ಸಮಯದ ಹಿಂದೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ನಿಮ್ಮೊಂದಿಗೆ ಮಾತನಾಡಿದ್ದೆ. ಇನ್ನು ಮುಂದೆಯೂ ನಾನು ಮಾತನಾಡುವುದನ್ನು ಮುಂದುವರಿಸುತ್ತೇನೆ. ಈ ಪ್ರಯಾಣವನ್ನು ರೋಮಾಂಚನಗೊಳಿಸೋಣ. ನಾನು ತುಂಬಾ ಉತ್ಸುಕನಾಗಿದ್ದೇನೆ. ನನ್ನ ಭುಜದ ಮೇಲಿನ ತ್ರಿವರ್ಣ ಧ್ವಜವು ನೀವೆಲ್ಲರೂ ನನ್ನೊಂದಿಗಿದ್ದೀರಿ ಎಂದು ನನಗೆ ನೆನಪಿಸುತ್ತದೆ. ಆದ್ದರಿಂದ ನೀವೆಲ್ಲರೂ ನನ್ನೊಂದಿಗೆ ಉತ್ಸುಕರಾಗಿದ್ದೀರಿ ಎಂದು ನಾನು ಅಂದುಕೊಂಡಿದ್ದೇನೆ. ಮುಂದಿನ 14 ದಿನಗಳು ರೋಮಾಂಚನಕಾರಿಯಾಗಿರುತ್ತವೆ ಎಂದು ನಾನು ಭಾವಿಸುತ್ತೇನೆ. ಧನ್ಯವಾದಗಳು. ಜೈ ಹಿಂದ್, ಜೈ ಭಾರತ್.” ಎಂದು ಹೇಳಿದ್ದಾರೆ.
#Shubhanshu Shukla has entered International Space Station. Hearty Congratulations !!! @Axiom_Space @isro pic.twitter.com/ZChwIPeRk7
— Indian Rocket Girl (@VU3BIZ) June 26, 2025
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇಂದು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಅವರು ಆಕ್ಸಿಯಮ್ ಮಿಷನ್ 4ನಲ್ಲಿ ತಮ್ಮ ಮೂವರು ಸಿಬ್ಬಂದಿಯನ್ನು ಹೊತ್ತೊಯ್ದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದೊಂದಿಗೆ ಯಶಸ್ವಿಯಾಗಿ ಡಾಕ್ ಮಾಡಿದರು. ಆಕ್ಸಿಯಮ್ ಮಿಷನ್ -4 ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ದೋಷರಹಿತ ಡಾಕಿಂಗ್‌ಗೆ ಯಶಸ್ವಿಯಾಗಿ ಪೈಲಟ್ ಮಾಡಿದ್ದಾರೆ. ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಸಿಬ್ಬಂದಿಯನ್ನು ಇಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ಅವರಿಗೆ ಅಪ್ಪುಗೆ ಮತ್ತು ಪಾನೀಯದೊಂದಿಗೆ ಸ್ವಾಗತಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 pm, Thu, 26 June 25