AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ 5 ದಿನ ಮುನ್ನವೇ ಇಂಗ್ಲೆಂಡ್‌ ತಂಡ ಪ್ರಕಟ

England announce squad for 2nd Test: ಲೀಡ್ಸ್‌ನಲ್ಲಿ ಭಾರತವನ್ನು ಸೋಲಿಸಿದ ಇಂಗ್ಲೆಂಡ್ ತಂಡ, ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ತನ್ನ 15 ಸದಸ್ಯರ ತಂಡವನ್ನು ಘೋಷಿಸಿದೆ. ಗಾಯದಿಂದ ಮರಳಿದ ಜೋಫ್ರಾ ಆರ್ಚರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ, ಇದು ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಬಲಪಡಿಸಲಿದೆ. ಆರ್ಚರ್ 4 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದು, ಭಾರತದ ವಿರುದ್ಧ ತಮ್ಮ ಅದ್ಭುತ ವೇಗದ ಬೌಲಿಂಗ್ ಮತ್ತೊಮ್ಮೆ ಪ್ರದರ್ಶಿಸುವ ನಿರೀಕ್ಷೆಯಿದೆ.

IND vs ENG: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ 5 ದಿನ ಮುನ್ನವೇ ಇಂಗ್ಲೆಂಡ್‌ ತಂಡ ಪ್ರಕಟ
England Team
ಪೃಥ್ವಿಶಂಕರ
|

Updated on:Jun 26, 2025 | 6:01 PM

Share

ಲೀಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 5 ವಿಕೆಟ್​ಗಳಿಂದ ಸೋಲಿಸಿ ದಾಖಲೆ ಬರೆದಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ (England Cricket Team) ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಲೀಡ್ಸ್ ಟೆಸ್ಟ್‌ ಮುಗಿದ ಸುಮಾರು 2 ದಿನಗಳ ನಂತರ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸರಣಿಯ ಎರಡನೇ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಘೋಷಿಸಿದೆ. ಈ 15 ಸದಸ್ಯರಲ್ಲಿ ಸ್ಟಾರ್ ವೇಗಿ ಜೋಫ್ರಾ ಆರ್ಚರ್ (Jofra Archer) ತಂಡಕ್ಕೆ ಆಯ್ಕೆಯಾಗಿರುವುದು ಆಂಗ್ಲರಿಗೆ ಆನೆ ಬಲ ತಂದಿದೆ. ಕಳೆದ 4-5 ವರ್ಷಗಳಿಂದ ವಿವಿಧ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ ಸ್ಟಾರ್ ವೇಗಿ ಆರ್ಚರ್ ಅವರನ್ನು ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಈ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಭಾರತ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ

ಜೂನ್ 26 ರ ಗುರುವಾರ ಇಸಿಬಿ, 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕಾಗಿ ತನ್ನ 15 ಸದಸ್ಯರ ತಂಡವನ್ನು ಘೋಷಿಸಿದೆ. ಲೀಡ್ಸ್ ಟೆಸ್ಟ್‌ ಪಂದ್ಯದಲ್ಲಿ ಆಡಿದ ಯಾವುದೇ ಆಟಗಾರನನ್ನು ತಂಡದಿಂದ ಕೈಬಿಡಲಾಗಿಲ್ಲ. ಬದಲಿಗೆ ಹಳೆಯ ತಂಡಕ್ಕೆ ಜೋಫ್ರಾ ಆರ್ಚರ್ ಅವರನ್ನು ಹೊಸದಾಗಿ ಸೇರಿಸಿಕೊಳ್ಳಲಾಗಿದೆ. ಆರ್ಚರ್ ಅವರ ಆಗಮನ ಇಂಗ್ಲೆಂಡ್‌ ಬೌಲಿಂಗ್‌ ವಿಭಾಗದ ಬಲ ಹೆಚ್ಚಿಸಿದೆ. ಏಕೆಂದರೆ ಲೀಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ತಂಡದ ಬೌಲಿಂಗ್ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಎರಡೂ ಇನ್ನಿಂಗ್ಸ್‌ಗಳಲ್ಲಿ, ಟೀಂ ಇಂಡಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್​ಗಳು ಶತಕಗಳ ಮೇಲೆ ಶತಕ ಬಾರಿಸಿದ್ದರು.

ಇದೀಗ ಆರ್ಚರ್ ಆಗಮನ ಆಂಗ್ಲರ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಅನುಭವವನ್ನು ತರಲಿದೆ. 4 ವರ್ಷಗಳಿಗೂ ಹೆಚ್ಚು ಸಮಯದ ನಂತರ ಮತ್ತೆ ಕ್ರಿಕೆಟ್‌ಗೆ ಮರಳುತ್ತಿರುವ ಆರ್ಚರ್ ತಮ್ಮ 13 ಟೆಸ್ಟ್ ಪಂದ್ಯಗಳ ವೃತ್ತಿಜೀವನದಲ್ಲಿ 42 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಾಸಂಗಿಕವಾಗಿ, ಆರ್ಚರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ವಿರುದ್ಧವೇ ಆಡಿದ್ದರು. ಫೆಬ್ರವರಿ 2021 ರಲ್ಲಿ ಭಾರತ ಪ್ರವಾಸದಲ್ಲಿ ಆರ್ಚರ್ ತಮ್ಮ ವೃತ್ತಿಜೀವನದ 13 ನೇ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ಇದಾದ ಕೆಲವು ದಿನಗಳ ನಂತರ ಗಾಯಕ್ಕೆ ತುತ್ತಾದ ಆರ್ಚರ್, ಆ ಬಳಿಕ ಟೆಸ್ಟ್ ಮಾದರಿಯಿಂದ ದೂರ ಉಳಿದಿದ್ದರು.

ಫಿಟ್ನೆಸ್ ಸಾಬೀತುಪಡಿಸಿದ ಆರ್ಚರ್

ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ನಂತರ 2025 ರ ಐಪಿಎಲ್​ನಲ್ಲಿ ಯಾವುದೇ ಫಿಟ್ನೆಸ್ ಸಮಸ್ಯೆಗಳಿಲ್ಲದೆ ಆಡಿದ್ದ ಆರ್ಚರ್ ಟೆಸ್ಟ್ ತಂಡಕ್ಕೆ ಮರಳುವ ಭರವಸೆ ಹೆಚ್ಚಿತ್ತು. ಇದರ ಜೊತೆಗೆ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಸಸೆಕ್ಸ್‌ ತಂಡದ ಪರ ಕಣಕ್ಕಿಳಿದಿದ್ದ ಆರ್ಚರ್, 18 ಓವರ್‌ಗಳನ್ನು ಬೌಲಿಂಗ್ ಮಾಡಿ ಕೇವಲ 32 ರನ್‌ಗಳಿಗೆ 1 ವಿಕೆಟ್ ಪಡೆದರು. ಈ ಪ್ರದರ್ಶನ ಮತ್ತು ಫಿಟ್‌ನೆಸ್ ಮಾನದಂಡಗಳನ್ನು ಪೂರೈಸುವುದರೊಂದಿಗೆ ಆರ್ಚರ್​ಗೆ ರಾಷ್ಟ್ರೀಯ ತಂಡಕ್ಕೆ ಟಿಕೆಟ್ ಕೂಡ ಸಿಕ್ಕಿತು.

ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಕ್ರಿಸ್ ವೋಕ್ಸ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Thu, 26 June 25