ಧಾರವಾಡ: ಢಾಬಾದಲ್ಲಿ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿರುವ ಆರೋಪ, ಪೊಲೀಸ್​ ಭೇಟಿ

| Updated By: ವಿವೇಕ ಬಿರಾದಾರ

Updated on: Nov 29, 2024 | 1:33 PM

ಧಾರವಾಡ-ಬೆಳಗಾವಿ ರಸ್ತೆಯ ಒಂದು ಢಾಬಾದಲ್ಲಿ ಮಾನಸಿಕ ಅಸ್ವಸ್ಥ ಕಾರ್ಮಿಕನ ಕಾಲಿಗೆ ಸರಪಳಿ ಹಾಕಿದ್ದ ಬಗ್ಗೆ ಮಾಹಿತಿ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆದರೆ ಆ ಕಾರ್ಮಿಕ ಇನ್ನೂ ಪತ್ತೆಯಾಗಿಲ್ಲ. ಢಾಬಾ ಮಾಲೀಕ ಮತ್ತು ಕಾರ್ಮಿಕನ ತಂದೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಯ ಸತ್ಯಾಸತ್ಯತೆ ಪರಿಶೀಲನೆಗೆ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಧಾರವಾಡ: ಢಾಬಾದಲ್ಲಿ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿರುವ ಆರೋಪ, ಪೊಲೀಸ್​ ಭೇಟಿ
ಓಲ್ಡ್​ ಮುಲ್ಲಾ ಢಾಬಾ
Follow us on

ಧಾರವಾಡ, ನವೆಂಬರ್​ 29: ಧಾರವಾಡ-ಬೆಳಗಾವಿ (Dharwad-Belagavi) ರಸ್ತೆಯಲ್ಲಿರುವ ಢಾಬಾವೊಂದರಲ್ಲಿ ಅಡುಗೆ ಕಾರ್ಮಿಕನ ಕಾಲಿಗೆ ಚೈನಿಂದ ಕಟ್ಟಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಚೈನಿಂದ ಕಟ್ಟಿಸಿಕೊಂಡಿದ್ದ ಎನ್ನಲಾದ ಕಾರ್ಮಿಕ ಕಿರಣ ಮಾತ್ರ ಪತ್ತೆಯಾಗಿಲ್ಲ. ಆತ ಮಾನಸಿಕ ಅಸ್ವಸ್ಥನಾಗಿದ್ದು, ತಂದೆಯೊಂದಿಗೆ ಇದೇ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಧಾರವಾಡ-ಬೆಳಗಾವಿ ಹೆದ್ದಾರಿ ಪಕ್ಕದ ತೇಗೂರು ಗ್ರಾಮದ ಬಳಿ ಇರುವ ಓಲ್ಡ್ ಮುಲ್ಲಾ ಢಾಬಾ 1975 ರಲ್ಲಿಯೇ ಆರಂಭವಾಗಿದೆ. ಇಲ್ಲಿ ಸುಮಾರು 70 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದೇ ಢಾಬಾದಲ್ಲಿ ಕಳೆದ 20 ವರ್ಷಗಳಿಂದ ಅರುಣ ಕುಮಾರ್ ಎಂಬ ವ್ಯಕ್ತಿ ಅಡುಗೆ ಕೆಲಸ ಮಾಡುತ್ತಿದ್ದಾನೆ. ಇವರ ಮಗ ಕಿರಣ ಕೂಡ ಇಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಇದೀಗ ಆತನ ಕಾಲಿಗೆ ಸರಪಳಿ ಹಾಕಿ, ದುಡಿಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರಿಗೆ ದೊರೆತಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿದರು. ಈ ವೇಳೆ ಕಿರಣ ಎಲ್ಲಿಯೂ ಪತ್ತೆಯಾಗಲಿಲ್ಲ. ಆದರೆ ಆತನ ತಂದೆ ಅರುಣಕುಮಾರ್​ನನ್ನು ವಿಚಾರಿಸಿದಾಗ, “ಏಳು ವರ್ಷಗಳ ಹಿಂದೆ ಕಿರಣ್​ ಅಪಘಾತದಲ್ಲಿ ಗಾಯಗೊಂಡು, ಮಾನಸಿಕ ಅಸ್ವಸ್ಥನಾಗಿದ್ದಾನೆ. ಹೀಗಾಗಿ ಎಷ್ಟೋ ದಿನಗಳವರೆಗೆ ಎಲ್ಲೆಲ್ಲಿಯೋ ಹೋಗಿಬಿಡುತ್ತಾನೆ. ಮೂರ್ನಾಲ್ಕು ದಿನ ನಾನು ಕೂಡ ಢಾಬಾದಲ್ಲಿ ಇರಲಿಲ್ಲ. ಈ ವೇಳೆ ಕಾಲಿಗೆ ಚೈನ್​ ಹಾಕಿದ್ದರೋ ಏನೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧಾರವಾಡ ತಾಲೂಕಿನಲ್ಲಿ ಉಂಟಾಗಿದ್ದ ವಕ್ಫ್​ ಆಸ್ತಿ ಗೊಂದಲಗಳಿಗೆ ಕೊನೆಗೂ ತೆರೆ: ನಿಟ್ಟುಸಿರು ಬಿಟ್ಟ ರೈತರು

ಢಾಬಾ ಮಾಲಿಕ ಮಹಮ್ಮದ್ ತೈಫೂರ್ ಉಡಕೇರಿಯನ್ನು ಢಾಬಾಕ್ಕೆ ಕರೆಸಿಕೊಂಡರು. ಈ ವೇಳೆ ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದರು. ಇದೇ ವೇಳೆ ಧಾರವಾಡದ ಕಾರ್ಮಿಕ ಅಧಿಕಾರಿಗಳು ಕೂಡ ಭೇಟಿ ನೀಡಿ, ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಢಾಬಾ ಮಾಲಿಕ ಮಹಮ್ಮದ್ ರೈಫೂರ್, ಆತನ ತಂದೆ ಹಲವಾರು ವರ್ಷಗಳಿಂದ ಇಲ್ಲಿಯೇ ಇದ್ದಾನೆ. ನಮ್ಮ ಮಾವನೇ ಆತನಿಗೆ ಮದುವೆ ಮಾಡಿಸಿದ್ದಾನೆ. ಇತ್ತೀಚಿಗೆ ಕಿರಣ್ ಮಾನಸಿಕ ಅಸ್ವಸ್ಥನಾಗಿದ್ದಕ್ಕೆ ಅವನ ಪೋಷಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಆತನ ಎಷ್ಟೋ ದಿನಗಳವರೆಗೆ ಎಲ್ಲೆಲ್ಲೋ ಓಡಿ ಹೋಗಿಬಿಡುತ್ತಾನೆ. ಇದೇ ಕಾರಣಕ್ಕೆ ಆತನ ತಂದೆ-ತಾಯಿಯೇ ಆತನನನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಇಲ್ಲಿ ಆತ ಸುರಕ್ಷಿತವಾಗಿರುತ್ತಾನೆ ಅಂತ ಮನವಿ ಮಾಡಿಕೊಂಡರು. ಆತ ಬೇರೆಡೆ ಹೋಗಿ ಏನಾದರೂ ಅನಾಹುತ ಆಗಬಾರದು ಅನ್ನೋ ಕಾರಣಕ್ಕೆ ನಾವು ಇಲ್ಲಿಯೇ ಇಟ್ಟುಕೊಂಡಿದ್ದೆವು. ಅವರ ತಾಯಿ ಹೇಳಿದರೂ ನಾವು ಚೈನ್ ಹಾಕುತ್ತಿರಲಿಲ್ಲ. ಬಹುಶಃ ಇತ್ತಿಚಿಗೆ ಯಾರೋ ಕಾರ್ಮಿಕರು ಆತನಿಗೆ ಚೈನ್ ಹಾಕಿರಬಹುದು ಎಂದರು.

ಈ ಬಗ್ಗೆ ಎಸ್ಪಿ ಡಾ. ಗೋಪಾಲ್ ಬ್ಯಾಕೋಡ್ ಮಾತನಾಡಿ, ಇದೀಗ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆತ ಮಾನಸಿಕವಾಗಿ ಅಸ್ವಸ್ಥನಿದ್ದ ಅಂತ ಹೇಳಲು ಬರುವುದಿಲ್ಲ. ದಾಖಲೆಗಳನ್ನು ನಾವು ಪರಿಶೀಲಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಏನು ದೂರು ನೀಡುತ್ತಾರೆ, ಆ ರೀತಿ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದರು.
ಗರಗ ಠಾಣೆಯ ಪೊಲೀಸರು ಢಾಬಾ ಮಾಲಿಕ ಮಹಮ್ಮದ್ ತೈಫೂರ್ ಹಾಗೂ ಕಾರ್ಮಿಕನ ತಂದೆ ಅರುಣಕುಮಾರ್ ಯಾದವ್​ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ