ಧಾರವಾಡದ ಯುವಕನೋರ್ವ ತನ್ನದೇ ಶೈಲಿಯಲ್ಲಿ ಕೊವಿಡ್ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದಾರೆ. ಅವರೇ 29 ವರ್ಷದ ವಿಜೇತ ಕುಮಾರ್ ಹೊಸಮಠ. ಹುಬ್ಬಳ್ಳಿಯ ಕೆ.ಎಲ್.ಇ. ಯೂನಿವರ್ಸಿಟಿಯಲ್ಲಿ ಕೆಲಸ ಮಾಡುತ್ತಿರುವ ವಿಜೇತ ಕುಮಾರ ಉತ್ತಮ ಫೋಟೋಗ್ರಾಫರ್. ತಮ್ಮ ಕೆಲಸದೊಂದಿಗೆ ಫೋಟೋಗ್ರಫಿಯ ಹವ್ಯಾಸವನ್ನೂ ಮುಂದುವರೆಸಿಕೊಂಡು ಹೋಗುತ್ತಿರುವ ವಿಜೇತ, ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಅನೇಕ ಫೋಟೋ ತೆಗೆದು ಎಲ್ಲರ ಗಮನಸೆಳೆದಿದ್ದರು. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಜನರ ಪರದಾಟ ಸೇರಿದಂತೆ ಅನೇಕ ಬಗೆಯ ಫೋಟೋಗಳು ವಿಜೇತ ಕುಮಾರ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದ್ದವು. ನಿರಂತರವಾಗಿ ಜನರಿಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತನಾಗಿರುವ ವಿಜೇತ ಇದೀಗ ದೊಡ್ಡದೊಂದು ಅಭಿಯಾನ ಆರಂಭಿಸಿದ್ದಾರೆ. ಕೊರೊನಾ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಧಾರವಾಡದಿಂದ ಕಾಶ್ಮೀರದವರೆಗೆ 100 ಸಿಸಿ ಬೈಕ್ ಮೂಲಕ ಸಂಚರಿಸಿ, ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಜಾಗೃತಿ ಅಭಿಯಾನಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಈ ಪ್ರಯಾಣ ಸುಮಾರು 6,000 ಕಿ.ಮೀ. ಇದ್ದು, ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಇಂಧನ ಬೇಕಾಗುತ್ತದೆ. ಅಲ್ಲದೇ ಅಲ್ಲಿಯವರೆಗೆ ಹೋಗುವಾಗ ಸಾಕಷ್ಟು ಖರ್ಚು ಕೂಡ ಇರುತ್ತದೆ. ಈ ಹಿನ್ನೆಲೆಯಲ್ಲಿ ವಿಜೇತ ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದಾರೆ. ಸುಮಾರು 20 ದಿನಗಳ ಯಾತ್ರೆ ಇದಾಗಿದ್ದು, ಈ ವೇಳೆ ಇಂಧನ, ಊಟ, ವಸತಿ, ವಾಹನದ ಇತರೆ ಖರ್ಚುಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಹಣ ನೀಡಿ ಅಂತಾ ಸಾಮಾಜಿಕ ಜಾಲತಾಣಗಳ ಮೂಲಕ ವಿಜೇತ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೆಲವರು ವಿಜೇತ ಅವರಿಗೆ ಸಹಾಯ ಮಾಡಿದ್ದರು. ಇದೀಗ ಅಕ್ಟೋಬರ್ 8 ರಂದು ಪ್ರಯಾಣ ಆರಂಭಿಸಿರುವ ವಿಜೇತ ಅಕ್ಟೋಬರ್ 24 ಕ್ಕೆ ಈ ಪ್ರಯಾಣವನ್ನು ಮುಕ್ತಾಯಗೊಳಿಸಲಿದ್ದಾರೆ. ನಿತ್ಯವೂ ದಾರಿಯುದ್ದಕ್ಕೂ ಹಳ್ಳಿ-ನಗರಗಳ ಮೂಲಕ ಅಲ್ಲಿನ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ ಸಾಗಿದ್ದಾರೆ ವಿಜೇತ ಕುಮಾರ್.
ಈ ಯಾತ್ರೆಗೆ ಕ್ರೌಡ್ ಫಂಡಿಂಗ್ ಏಕೆ ಬೇಕು?
ಒಂದು ದೀರ್ಘಯಾತ್ರೆ (ಸುಮಾರು 6,000 ಕಿಮೀ) ಮುಗಿಸಬೇಕೆಂದರೆ ತುಂಬಾ ಸಮಯ ಹಿಡಿಯುತ್ತದೆ . ಹಲವು ಸ್ಥಳಗಳಿಗೆ ಭೇಟಿ ಕೊಡಬೇಕಾಗುತ್ತದೆ. ಮುಖ್ಯವಾಗಿ ಯಾತ್ರಿಕರಿಗೂ ಎಲ್ಲರಂತೆ ತಮ್ಮದೇ ಆದ ಖರ್ಚುಗಳು, ಅಗತ್ಯತೆಗಳೂ ಇರುತ್ತವೆ. ಪ್ರಯಾಣವು 20 ದಿನಗಳ ಕಾಲದ್ದಾಗಿದ್ದು, ಈ ವೇಳೆ ದಾರಿಯಲ್ಲಿ ಇಂಧನ, ಊಟ, ವಸತಿ, ವಾಹನದ ಪರಿಸ್ಥಿತಿ ನೋಡಿಕೊಂಡು ಯಾತ್ರೆ ಮಾಡಬೇಕಾಗುತ್ತದೆ. ಹೀಗಾಗಿ ನಿಸ್ವಾರ್ಥವಾಗಿ ಜಾಗೃತಿ ಮಾಡುವ ವಿಜೇತನಂಥ ಯುವಕರು ಕ್ರೌಡ್ ಫಂಡಿಂಗ್ ಮೊರೆ ಹೋಗುತ್ತಾರೆ.
ಈ ಮುಂಚೆಯೂ ಅಭಿಯಾನ ಮಾಡಿದ್ದ ವಿಜೇತ ಕುಮಾರ
ವಿಜೇತ ಈಗಾಗಲೇ ಹಲವಾರು ಬಾರಿ ಇಂಥ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಜಾಗೃತಿಯನ್ನೊಂದೇ ದೃಷ್ಟಿಯಲ್ಲಿಟ್ಟುಕೊಂಡು ವಿಜೇತ ಮಾಡುತ್ತಿರುವ ಅಭಿಯಾನಕ್ಕೆ ಸಾರ್ವಜನಿಕರು ಸಾಕಷ್ಟು ಸಹಕಾರ ನೀಡುತ್ತಲೇ ಬಂದಿದ್ದಾರೆ. ಈ ಹಿಂದೆ 2019 ರ ಲೋಕಸಭಾ ಚುನಾವಣೆಯ ಅಂಗವಾಗಿ ಧಾರವಾಡದಿಂದ ಕನ್ಯಾಕುಮಾರಿಯವರೆಗೂ ಇದೇ ರೀತಿ 100 ಸಿಸಿ ಬೈಕ್ ಮೂಲಕ ಸುಮಾರು 2800 ಕಿ.ಮೀ. ಹೋಗಿದ್ದರು. ಈ ವೇಳೆ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದ ವಿಜೇತ ಕುಮಾರ್ ಇದೀಗ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮತ್ತೊಂದು ಯಾತ್ರೆಯನ್ನು ಹಮ್ಮಿಕೊಂಡಿದ್ದಾನೆ. ಸಮಾಜದಲ್ಲಿ ಏನೇ ಸಂಭವಿಸಿದರೂ ತನ್ನ ಫೋಟೋಗಳ ಮೂಲಕವೋ ಅಥವಾ ಹೀಗೆ ಜಾಗೃತಿ ಮೂಲಕವೋ ವಿಜೇತ ಕುಮಾರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವವನ್ನು ಮಾಡುತ್ತಲೇ ಬಂದಿದ್ದಾರೆ.
ಇನ್ನು ಜಾಗೃತಿ ಜಾಥಾ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ವಿಜೇತ ಕುಮಾರ್, ‘ಸಮಾಜದಿಂದ ನಾವು ಸಾಕಷ್ಟು ಪ್ರಯೋಜನ ಪಡೆದುಕೊಂಡಿದ್ದೇವೆ. ಹೀಗಾಗಿ ನಾವು ಸಮಾಜಕ್ಕೆ ಮರಳಿ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಕೊರೊನಾ ಸಂದರ್ಭದಲ್ಲಿ ಜನರು ಅನುಭವಿಸಿದ ಸಂಕಟಗಳನ್ನು ಸಮೀಪದಿಂದ ನೋಡಿದ್ದೇನೆ. ಒಂದನೇ ಅಲೆಗಿಂತ ಎರಡನೇ ಅಲೆ ಭೀಕರವಾಗಿತ್ತು. ಇದೀಗ ಮೂರನೇ ಅಲೆಯ ಆತಂಕ ಶುರುವಾಗಿದೆ. ಇದೇ ವೇಳೆ ಜನರು ಕೊರೊನಾ ಲಸಿಕೆ ಲಭ್ಯವಿದ್ರೂ ಹಾಕಿಸಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಕೊರೊನಾದ ಭೀಕರತೆ ಜೊತೆಗೆ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಜಾಥಾ ಮೂಲಕ ಜಾಗೃತಿ ಮೂಡಿಸಲು ಈ ಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ. ಗೆಳೆಯರು, ಆತ್ಮೀಯರು ಈ ಜಾಥಾಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಹಿರಿಯ ವರದಿಗಾರ
ಟಿವಿ 9, ಧಾರವಾಡ
ಇದನ್ನೂ ಓದಿ:
ಬೆಕ್ಕಿನ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಧಾರವಾಡದ ಪ್ರಾಣಿಪ್ರೇಮಿ ಸೋಮಶೇಖರ ಚೆನ್ನಶೆಟ್ಟಿ
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು