AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಕ್ಕಿನ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಧಾರವಾಡದ ಪ್ರಾಣಿಪ್ರೇಮಿ ಸೋಮಶೇಖರ ಚೆನ್ನಶೆಟ್ಟಿ

ಗೆಳೆಯರು ಮತ್ತೊಂದು ಹಗ್ಗದ ಸಹಾಯದಿಂದ ಸೋಮಶೇಖರ ಅವರನ್ನು ಮೇಲೆತ್ತಿದ್ದಾರೆ. ಹೀಗೆ ಮೇಲೆ ಬರುವಾಗ ಸೋಮಶೇಖರ ಬೆಕ್ಕನ್ನು ತೆಗೆದುಕೊಂಡೇ ಬಂದಿದ್ದಾರೆ. ಸೋಮಶೇಖರ್ ಅವರ ಪ್ರಾಣಿ ಪ್ರೀತಿ ಬಗ್ಗೆ ಇದೀಗ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ಬೆಕ್ಕಿನ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಧಾರವಾಡದ ಪ್ರಾಣಿಪ್ರೇಮಿ ಸೋಮಶೇಖರ ಚೆನ್ನಶೆಟ್ಟಿ
ಸೋಮಶೇಖರ ಚೆನ್ನಶೆಟ್ಟಿ
TV9 Web
| Updated By: guruganesh bhat|

Updated on:Oct 08, 2021 | 7:18 PM

Share

ಧಾರವಾಡದಲ್ಲಿ ಯಾವುದೇ ಪ್ರಾಣಿಗೆ ತೊಂದರೆಯಾದರೂ ಒಂದು ಹೆಸರು ಕೇಳಿಬರುತ್ತದೆ. ಅವರೇ ಸೋಮಶೇಖರ ಚೆನ್ನಶೆಟ್ಟಿ. ಧಾರವಾಡದ ಜನರು ಇವರನ್ನು ಪ್ರೀತಿಯಿಂದ ಸೋಮು ಎಂದೇ ಕರೆಯುತ್ತಾರೆ. ಹಾವು, ಬೆಕ್ಕು, ನಾಯಿ, ಆಕಳು, ಕುದುರೆ – ಹೀಗೆ ಯಾವುದೇ ಪ್ರಾಣಿ ಅಪಾಯದಲ್ಲಿ ಸಿಲುಕಿದೆ ಎಂಬುದು ಗೊತ್ತಾದರೆ ಸಾಕು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ಅವುಗಳ ಜೀವವನ್ನು ರಕ್ಷಿಸುವ ಹವ್ಯಾಸವನ್ನ ಸೋಮಶೇಖರ ಅವರು ಬೆಳೆಸಿಕೊಂಡಿದ್ದಾರೆ. ಇಂಥ ಪ್ರಾಣಿಪ್ರೇಮಿ ಬೆಕ್ಕೊಂದನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ನಗರದ ಸಾಧನಕೇರಿ ಬಡಾವಣೆಯ ವೆಂಕಟೇಶ್ವರ ದೇವಸ್ಥಾನದ ಬಾವಿಯಲ್ಲಿ ಬೆಳಿಗ್ಗೆ ಬೆಕ್ಕೊಂದು ಬಿದ್ದಿತ್ತು. ಆಹಾರವನ್ನು ಅರಸಿ ಬಾವಿ ಬಳಿ ಹೋಗಿದ್ದ ಬೆಕ್ಕು, ಕಾಲು ಜಾರಿ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದ ಬಳಿಕ ಕೂಗಲು ಶುರುಮಾಡಿದೆ. ಬೆಕ್ಕಿನ ಕೂಗಾಟದ ಶಬ್ದ ಕೇಳಿದ ಸ್ಥಳೀಯರು ಸೋಮಶೇಖರ ಅವರಿಗೆ ಫೋನ್ ಮಾಡಿದ್ದಾರೆ. ಬಾವಿಯ ಸುತ್ತಲೂ ಜಾಲಿಯನ್ನು ಅಳವಡಿಸಿದ್ದರೂ ಬೆಕ್ಕು ಬಾವಿಗೆ ಬಿದ್ದಿತ್ತು. ಅದನ್ನು ಹೊರಗೆ ತರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬಾವಿಗೆ ಹಾಕಲಾಗಿರುವ ಮೆಷ್ ನಡುವೆ ಇದ್ದ ಚಿಕ್ಕದೊಂದು ಕಿಂಡಿಯಿಂದ ಒಳಗಡೆ ಇಳಿಯಬೇಕು. ಬೆಕ್ಕು ಬಾವಿಯ ಮಧ್ಯಭಾಗದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಅಲ್ಲಿಗೆ ತೆರಳುವ ವೇಳೆ ಅದು ಆತಂಕಗೊಂಡು ಬಾವಿಗೆ ಹಾರಿದರೆ ಕಷ್ಟ. ಹೀಗಾಗಿ ಮೊದಲಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡ ಸೋಮಶೇಖರ ನಿಧಾನವಾಗಿ ಬಾವಿಯೊಳಗೆ ಇಳಿದರು. ಈ ವೇಳೆ ದುರ್ಘಟನೆಯೊಂದು ನಡೆಯಿತು.

ಹಗ್ಗ ಕತ್ತರಿಸಿ ಬಿದ್ದು ಅವಘಡ; ಜೀವಾಪಾಯದಿಂದ ಪಾರಾದ ಸೋಮು ಬೆಕ್ಕಿನ ಬಳಿ ನಿಧಾನವಾಗಿ ಹೋಗಲು ಸೋಮಶೇಖರ ಹರಸಾಹಸಪಡುತ್ತಿದ್ದರು. ಒಂದು ಕಡೆ ಭಯಗೊಂಡಿದ್ದ ಬೆಕ್ಕು. ಮತ್ತೊಂದು ಕಡೆ ಹಿಡಿದುಕೊಳ್ಳಲು ಏನೂ ಇರದೇ ನೇತಾಡುತ್ತಿದ್ದ ಸೋಮಶೇಖರ. ಇದೇ ವೇಳೆ ಒಮ್ಮೆಲೇ ಹಗ್ಗ ತುಂಡಾಗಿ ಹೋಗಿದೆ. ಸುಮಾರು ಐದಾರು ಅಡಿಯಿಂದ ಸೋಮಶೇಖರ ಕೆಳಗಡೆ ಬಿದ್ದಿದ್ದಾರೆ. ಬಾವಿಯಲ್ಲಿ ಕೆಸರಿನ ಪ್ರಮಾಣ ಹೆಚ್ಚಾಗಿದ್ದರಿಂದ ಸೋಮಶೇಖರ ಅವರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ. ಕೂಡಲೇ ಮೇಲಿದ್ದ ಸಹಚರರು ಗೆಳೆಯರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗೆಳೆಯರು ಮತ್ತೊಂದು ಹಗ್ಗದ ಸಹಾಯದಿಂದ ಸೋಮಶೇಖರ ಅವರನ್ನು ಮೇಲೆತ್ತಿದ್ದಾರೆ. ಹೀಗೆ ಮೇಲೆ ಬರುವಾಗ ಸೋಮಶೇಖರ ಬೆಕ್ಕನ್ನು ತೆಗೆದುಕೊಂಡೇ ಬಂದಿದ್ದಾರೆ. ಸೋಮಶೇಖರ್ ಅವರ ಪ್ರಾಣಿ ಪ್ರೀತಿ ಬಗ್ಗೆ ಇದೀಗ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ಬಾವಿಯಲ್ಲಿ ಡಿಹೈಡ್ರೇಷನ್​ನಿಂದ ಬಳಲಿದ ಸೋಮು ಹಗ್ಗ ತುಂಡರಿಸಿ ಬಿದ್ದ ಕೂಡಲೇ ಸುಧಾರಿಸಿಕೊಳ್ಳಲು ಸೋಮಶೇಖರ್ ಅವರಿಗೆ ಹತ್ತಾರು ನಿಮಿಷಗಳ ಕಾಲ ಬೇಕಾಯಿತು. ಬಾವಿಯಲ್ಲಿ ಗಾಳಿಯ ಪ್ರಮಾಣ ತೀರ ಕಡಿಮೆಯಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆ ಜೊತೆಗೆ ಡಿಹೈಡ್ರೇಷನ್ ಕೂಡ ಉಂಟಾಯಿತು. ಬಳಿಕ ಸ್ಥಳಕ್ಕೆ ಬಂದ ಗೆಳೆಯರು ಏಣಿಯನ್ನು ತಂದು ಹಗ್ಗದ ಸಹಾಯದಿಂದ ಕೆಳಗೆ ಬಿಟ್ಟಿದ್ದಾರೆ. ಹತ್ತಾರು ನಿಮಿಷದ ಬಳಿಕ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಘಟನೆಯಿಂದಾಗಿ ಸೋಮಶೇಖರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಘಟನೆ ಬಗ್ಗೆ ಟಿವಿ9 ಡಿಜಿಟಲ್ ಜತೆಗೆ ಮಾತನಾಡಿದ ಸೋಮಶೇಖರ, ‘ಇಂಥ ಘಟನೆಗಳು ನಡೆದ ಕೂಡಲೇ ಜನರು ಫೋನ್ ಮಾಡಿಬಿಡುತ್ತಾರೆ. ಕೂಡಲೇ ಬರುವಂತೆ ಕೇಳಿಕೊಳ್ಳುತ್ತಾರೆ. ನಾವು ಹೋಗುವುದು ಕೊಂಚ ತಡವಾದರೂ ಪ್ರಾಣಿಗಳ ಜೀವ ಹಾರಿ ಹೋಗುತ್ತದೆ. ಹೀಗಾಗಿ ಯಾವುದೇ ಸಿದ್ಧತೆ ಇಲ್ಲದೇ ಸ್ಥಳಕ್ಕೆ ಹೋಗಿ ಬಿಡುತ್ತೇವೆ. ಅಲ್ಲಿರುವ ಸಾಧನಗಳನ್ನೇ ಬಳಸಿಕೊಂಡು ಪ್ರಾಣಿಗಳ ರಕ್ಷಣೆಗೆ ಯತ್ನಿಸುತ್ತೇವೆ. ಇಂಥ ವೇಳೆ ದುರ್ಘಟನೆಗಳು ನಡೆಯುತ್ತವೆ. ಈ ಘಟನೆಯಲ್ಲಿ ನನಗೆ ಏನೂ ಆಗಲಿಲ್ಲ. ಕೆಳಗಡೆ ನೀರಿನಲ್ಲಿನ ಮಣ್ಣಿನ ಪ್ರಮಾಣವೂ ಇತ್ತು. ಹೀಗಾಗಿ ಯಾವುದೇ ತೊಂದರೆಯಾಗಲಿಲ್ಲ. ಆದರೆ ಒಳಗೆ ಗಾಳಿಯ ಪ್ರಮಾಣ ಇಲ್ಲದೇ ಪರದಾಡುವಂತಾಯಿತು. ಗೆಳೆಯರೆಲ್ಲಾ ಬಂದು ಏಣಿಯ ಸಹಾಯದಿಂದ ನನ್ನನ್ನು ಮೇಲಕ್ಕೆ ಎಳೆದುಕೊಂಡರು. ಎಲ್ಲದಕ್ಕಿಂತ ಖುಷಿ ವಿಚಾರವೆಂದರೆ ಬೆಕ್ಕನ್ನು ನನ್ನ ಜೊತೆಗೆ ಮೇಲೆ ಕರೆದುಕೊಂಡು ಬಂದಿದ್ದು ಎಲ್ಲಕ್ಕಿಂತ ಖುಷಿಯ ವಿಚಾರ’ ಎನ್ನುತ್ತಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ ಹಿರಿಯ ವರದಿಗಾರರು ಟಿವಿ9, ಧಾರವಾಡ

ಇದನ್ನೂ ಓದಿ:

 17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು

ಮಹಾಲಯ ಅಮವಾಸ್ಯೆಯಂದು ಸಮಾಧಿಗಳಿಗಾಗಿ ನೀರಲ್ಲಿಳಿದು ಹುಡುಕಾಡಿದ ಕೋಲಾರದ ಜನರು!

Published On - 7:12 pm, Fri, 8 October 21