ಆಸ್ಟ್ರೇಲಿಯಾದ ಅಮಾನವೀಯ ಕಾನೂನಿಗೆ ಸೋತಳಾ ಆ ಗೃಹಿಣಿ? ಧಾರವಾಡ ತವರಿನ ಪ್ರಿಯದರ್ಶಿನಿ ಸಾವಿಗೆ ಶರಣಾಗಿದ್ದು ಏಕೆ? ಡೆತ್ ನೋಟ್​ನಲ್ಲಿ ಏನಿದೆ?

Priyadarshini Death Note: ಹುಬ್ಬಳ್ಳಿಯ ಕೋರಿಯರ್ ಕಚೇರಿಯಲ್ಲಿ ಎಸ್. ಎಸ್. ದೇಸಾಯಿ ತಮ್ಮ ಹೆಸರಿನಲ್ಲಿ ಬಂದಿದ್ದ ಪಾರ್ಸಲ್ ಪಾರ್ಸಲ್ ತೆಗೆದು ನೋಡಿದಾಗ ಆತಂಕ ಶುರುವಾಗಿದೆ. ಅದರಲ್ಲಿ ಪ್ರಿಯದರ್ಶಿನಿ ತನ್ನೆಲ್ಲಾ ಚಿನ್ನಾಭರಣ, ಹಣ ಮತ್ತು ಮೊಬೈಲ್ನ್ನು ಆ ಬ್ಯಾಗುಗಳಲ್ಲಿ ಹಾಕಿದ್ದರು. ಇದರಿಂದಾಗಿ ಎಲ್ಲರಿಗೂ ಆತಂಕ ಹೆಚ್ಚಾಗತೊಡಗಿತ್ತು. ಈ ಮಧ್ಯೆ, ಸವದತ್ತಿಯಲ್ಲಿ ಓರ್ವ ಮಹಿಳೆಯ ಶವವೊಂದು ಸಿಕ್ಕಿತ್ತು... ಪ್ರಕರಣದಲ್ಲಿ ನ್ಯಾಯ ಸಿಗುತ್ತಾ?

ಆಸ್ಟ್ರೇಲಿಯಾದ ಅಮಾನವೀಯ ಕಾನೂನಿಗೆ ಸೋತಳಾ ಆ ಗೃಹಿಣಿ?  ಧಾರವಾಡ ತವರಿನ ಪ್ರಿಯದರ್ಶಿನಿ ಸಾವಿಗೆ ಶರಣಾಗಿದ್ದು ಏಕೆ? ಡೆತ್ ನೋಟ್​ನಲ್ಲಿ ಏನಿದೆ?
ಆಸ್ಟ್ರೇಲಿಯಾದ ಅಮಾನವೀಯ ಕಾನೂನಿಗೆ ಸೋತಳಾ ಆ ಗೃಹಿಣಿ?
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on:Aug 24, 2023 | 5:36 PM

Priyadarshini Death case: ಅದೊಂದು ಸುಂದರ ಸಂಸಾರ. ಪತಿ-ಪತ್ನಿ ಎರಡು ಮಕ್ಕಳ ಸಣ್ಣ ಕುಟುಂಬ. ಮೂಲ ಭಾರತದವರಾಗಿದ್ದರೂ ನೆಲೆಸಿದ್ದು ದೂರದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ಇಬ್ಬರೂ ಇಂಜಿನೀಯರ್ ಆಗಿದ್ದರಿಂದ ಕೈತುಂಬಾ ಸಂಬಳ. ಇಂಥ ವೇಳೆ ಬದುಕಿನ ಖುಷಿ ಎಲ್ಲೆಯಲ್ಲಿರುವಾಗಲೇ ಆ ಕುಟುಂಬಕ್ಕೊಂದು ಸಿಡಿಲು ಬಡೆದಿದೆ. ಇದಕ್ಕೆ ಕಾರಣ ವಿದೇಶದಲ್ಲಿ ನ್ಯಾಯಕ್ಕಾಗಿ ಮೊರೆ ಹೊಕ್ಕಿದ್ದು. ಇದನ್ನೇ ನೆಪ ಮಾಡಿಕೊಂಡ ಅಲ್ಲಿನ ಅನೇಕರು ದೂರು ನೀಡಿದ್ದ ಮಹಿಳೆಗೇ ಕಿರುಕುಳ ಕೊಡಲು ಶುರು ಮಾಡಿದ್ದಕ್ಕೆ ಆಕೆ ಕೊನೆಗೆ ತನ್ನ ಸ್ವಂತ ದೇಶಕ್ಕೆ ಬಂದು ಸಾವಿಗೆ ಶರಣಾದ ಕರುಣಾಜನಕ ಕಥೆ ಇದು. ಧಾರವಾಡ ನಗರದ (Dharwad) ಸಪ್ತಾಪುರ ಬಡಾವಣೆಯ ಎಸ್.ಎಸ್. ದೇಸಾಯಿ ಹಾಗೂ ಶೋಭಾ ದೇಸಾಯಿ ದಂಪತಿಯ ಮಗಳು ಪ್ರಿಯದರ್ಶಿನಿ ಅವರನ್ನು ಕಲ್ಯಾಣ ನಗರ ಬಡಾವಣೆಯ ಲಿಂಗರಾಜ್ ಪಾಟೀಲ್ ಅನ್ನೋರೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ಇಬ್ಬರೂ ಇಂಜಿನೀಯರ್ ಆಗಿದ್ದರಿಂದ ಕೆಲಸಕ್ಕೆ ಆಸ್ಟ್ರೇಲಿಯಾದಲ್ಲಿ (Australia) ಉತ್ತಮ ಅವಕಾಶ ಸಿಕ್ಕಿತು. ಹೀಗಾಗಿ ಇಬ್ಬರೂ ಅಲ್ಲಿಗೆ ಹೋಗಿ ಕೆಲಸ ಶುರು ಮಾಡಿದ್ದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿಯೇ ಅವರು ನೆಲೆಸಿದ್ದರು. ಅಲ್ಲಿಯೇ ಈ ದಂಪತಿಗೆ ಎರಡು ಮಕ್ಕಳು ಜನಿಸಿದ್ದರು. ಹೀಗಾಗಿ ಆ ಮಕ್ಕಳಿಗೆ ಸಹಜವಾಗಿ ಅಲ್ಲಿಯದ್ದೇ ಪೌರತ್ವ ಸಿಕ್ಕಿತ್ತು. ಇದೀಗ ಮಗ ಅಮರ್ತ್ಯನಿಗೆ 17 ವರ್ಷ, ಮಗಳು ಅಪರಾಜಿತಾಳಿಗೆ 13 ವರ್ಷ ವಯಸ್ಸು.

ಕೆಲ ದಿನಗಳ ಹಿಂದೆ ಅಮರ್ತ್ಯನ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಅಲ್ಲಿನ ಆಸ್ಪತ್ತೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಮರ್ತ್ಯನನ್ನು ನೋಡಿದ್ದ ವೈದ್ಯರು ಕೆಲವು ಔಷಧಗಳನ್ನು ನೀಡಿದ್ದರು. ಆದರೆ ಆ ಔಷಧಗಳು ಕೆಲಸ ಮಾಡಿರಲಿಲ್ಲ. ಬದಲಿಗೆ ಸಾಕಷ್ಟು ಅಡ್ಡ ಪರಿಣಾಮ ಬೀರಿದ್ದವು. ಅಷ್ಟೇ ಅಲ್ಲದೇ ಸಮಸ್ಯೆಯನ್ನು ಪತ್ತೆ ಹಚ್ಚುವಲ್ಲಿಯೇ ವೈದ್ಯರು ಎಡವಿದ್ದರು. ಇದರಿಂದಾಗಿ ಅಸಮಾಧಾನಗೊಂಡಿದ್ದ ಪ್ರಿಯದರ್ಶಿನಿ ಅಲ್ಲಿನ ಸರಕಾರಕ್ಕೆ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ದೂರು ಸಲ್ಲಿಸಿದ್ದರು. ಹೀಗೆ ದೂರು ನೀಡಿದ್ದೇ ಪ್ರಿಯದರ್ಶಿನಿ ಕುಟುಂಬಕ್ಕೆ ಮುಳುವಾಗಿ ಹೋಯಿತು. ತಮ್ಮ ವಿರುದ್ಧವೇ ದೂರು ನೀಡಿದ್ದರಿಂದ ನಿರಂತರವಾಗಿ ಇವರ ವಿರುದ್ಧವೇ ಷಡ್ಯಂತ್ರ ಶುರುವಾಯಿತು. ನೀವೇ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ ಅಂತಾ ಕಿರುಕುಳ ಮಾಡೋದು ಶುರುವಾಯಿತು. ಅಷ್ಟೇ ಅಲ್ಲದೇ, ಮಕ್ಕಳನ್ನು ಕೂಡ ಅಲ್ಲಿನ ಆಡಳಿತ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿತು. ಇದರಿಂದಾಗಿ ಪ್ರಿಯದರ್ಶಿನಿ ದಿನದಿಂದ ದಿನಕ್ಕೆ ಮಂಕಾಗತೊಡಗಿದರು.

ಇನ್ನು ಅಲ್ಲಿನ ಮಾನಸಿಕ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ನೀವೇ ಮಕ್ಕಳ ಪಾಲನೆಯನ್ನು ಸರಿಯಾಗಿ ಮಾಡಿಲ್ಲ ಅನ್ನೋ ಆರೋಪ ಪದೇ ಪದೇ ಪ್ರಿಯದರ್ಶಿನಿ ಮೇಲೆಯೇ ಬರೋದಕ್ಕೆ ಶುರುವಾಯಿತು. ಇದರಿಂದಾಗಿ ಪ್ರಿಯದರ್ಶಿನಿ ಮಾನಸಿಕವಾಗಿ ಕುಗ್ಗಿ ಹೋಗತೊಡಗಿದರು. ಇದೆಲ್ಲ ಪತಿ ಲಿಂಗರಾಜ್ ಪಾಟೀಲ್ ಅವರಿಗೆ ಗೊತ್ತಾದರೂ ಅವರು ಕೂಡ ಏನೂ ಮಾಡುವಂತಿರಲಿಲ್ಲ. ಬೇರೆ ದೇಶದಲ್ಲಿ ಅಲ್ಲಿಯ ಕಾನೂನುಗಳಿಗೆ ತಲೆ ಬಾಗಲೇಬೇಕು. ಅಲ್ಲಿಯ ನಿಯಮಗಳಂತೆ ಬದುಕನ್ನು ನಡೆಸಲೇಬೇಕು. ಹೀಗಾಗಿ ಸಾಧ್ಯವಾದಷ್ಟು ಅವರು ಪತ್ನಿಗೆ ಸಮಾಧಾನ ಹೇಳುತ್ತಿದ್ದರಾದರೂ ಅದರಿಂದ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಇದೇ ವೇಳೆ ಪ್ರಿಯದರ್ಶಿನಿ ಮರಳಿ ಭಾರತಕ್ಕೆ ಬರೋ ಪ್ರಯತ್ನವನ್ನು ಶುರು ಮಾಡಿದರು. ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಅವರಿಗೆ ಉತ್ತಮ ಅವಕಾಶ ಸಿಗೋದೂ ಖಚಿತವಾಗಿತ್ತು. ಮರಳಿ ಸ್ವದೇಶಕ್ಕೆ ಬಂದು ಬಿಡಬೇಕು ಅಂತಾ ನಿರ್ಧರಿಸಿ, ಕಳೆದ ವಾರ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿಂದ ಶನಿವಾರ ಆಗಸ್ಟ್ 19 ರ ರಾತ್ರಿ ಧಾರವಾಡಕ್ಕೆ ಬರಲು ಬಸ್ಗೆ ಟಿಕೆಟ್ ಬುಕ್ ಮಾಡಿದ್ದಾರೆ. ಹೇಗಿದ್ದರೂ ಮಗಳು ಬರುತ್ತಾಳೆ ಅಂತಾ ಧಾರವಾಡದಲ್ಲಿರೋ ತಂದೆ-ತಾಯಿ ಕಾಯುತ್ತಾ ಕೂತಿದ್ದಾರೆ.

ಆದರೆ ಅಸಲಿಗೆ ಅವತ್ತು ರಾತ್ರಿ ಬಸ್ ಹತ್ತಲೇ ಇಲ್ಲ. ಅಲ್ಲದೇ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇದು ತಂದೆ-ತಾಯಿಗೆ ಗೊತ್ತಾದ ಕೂಡಲೇ ಆತಂಕಗೊಂಡು, ಎಲ್ಲ ಕಡೆಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಹುಬ್ಬಳ್ಳಿಯ ಕೋರಿಯರ್ ಕಚೇರಿಯಲ್ಲಿ ಎಸ್. ಎಸ್. ದೇಸಾಯಿ ಅವರ ಹೆಸರಿನಲ್ಲಿ ಪಾರ್ಸಲ್ ಬುಕ್ ಆಗಿರೋ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಹೋಗಿ ವಿಚಾರಿಸಲಾಗಿ, ಓರ್ವ ಮಹಿಳೆ ಬಂದು ಈ ಪಾರ್ಸಲ್ ಬುಕ್ ಮಾಡಿರೋದಾಗಿ ಕಚೇರಿಯವರು ಹೇಳಿದ್ದಾರೆ. ಯಾವಾಗ ಪಾರ್ಸಲ್ ತೆಗೆದು ನೋಡಿದರೋ ಆಗ ಆತಂಕ ಶುರುವಾಗಿದೆ. ಏಕೆಂದರೆ ಪ್ರಿಯದರ್ಶಿನಿ ತನ್ನೆಲ್ಲಾ ಚಿನ್ನಾಭರಣ, ಹಣ ಮತ್ತು ಮೊಬೈಲ್ನ್ನು ಆ ಬ್ಯಾಗುಗಳಲ್ಲಿ ಹಾಕಿದರು. ಇದರಿಂದಾಗಿ ಎಲ್ಲರಿಗೂ ಆತಂಕ ಹೆಚ್ಚಾಗತೊಡಗಿತ್ತು. ಇದೇ ವೇಳೆ ತಾನು ಗೋಕಾಕ್ಗೆ ಹೋಗೋದಾಗಿ ಕೋರಿಯರ್ನವರಿಗೆ ಹೇಳಿದ್ದರು. ಹೀಗಾಗಿ ಕೂಡಲೇ ಕುಟುಂಬಸ್ಥರು ಗೋಕಾಕ್ ಕಡೆಗೆಲ್ಲಾ ತಿರುಗಾಡಿ ಹುಡುಕಾಟ ನಡೆಸಿದರು. ಅಲ್ಲದೇ ಅಲ್ಲಿನ ಪೊಲೀಸ್ ಠಾಣೆಗೆ ದೂರನ್ನು ಕೂಡ ಸಲ್ಲಿಸಿದರು. ಈ ವೇಳೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ಮಹಿಳೆಯ ಶವವೊಂದು ಸಿಕ್ಕಿತ್ತು. ಅದು ಬೇರೆ ಯಾರದ್ದೂ ಅಲ್ಲ, ಇದೇ ಪ್ರಿಯದರ್ಶಿನಿ ಅವರದ್ದು ಅನ್ನೋದು ಖಚಿತವಾಗಿತ್ತು.

ಅವತ್ತು ರಾತ್ರಿ ಬುಕ್ ಮಾಡಿದ್ದ ಬಸ್ ಬಿಟ್ಟು ಬೇರೆ ಬಸ್ಸಿಗೆ ಹುಬ್ಬಳ್ಳಿಗೆ ಬಂದ ಪ್ರಿಯದರ್ಶಿನಿ, ಅಲ್ಲಿಯೇ ಇದ್ದ ಕೋರಿಯರ್ ಕಚೇರಿಗೆ ಹೋಗಿ ತಮ್ಮ ತಂದೆಯ ಹೆಸರಿನಲ್ಲಿ ಪಾರ್ಸಲ್ ಬುಕ್ ಮಾಡಿದ ಬಳಿಕ, ಸಂಜೆ ಐದು ಗಂಟೆಯವರೆಗೆ ತಮಗೆ ಫೋನ್ ಮಾಡದಂತೆ ತಂದೆಗೆ ಹೇಳುವಂತೆ ಸೂಚಿಸಿದ್ದಾರೆ. ತಾನು ವೈಯಕ್ತಿಕ ಕೆಲಸದ ನಿಮಿತ್ತ ಗೋಕಾಕ್ ಕಡೆಗೆ ಹೋಗುತ್ತಿರೋದಾಗಿ ಹೇಳಿದ್ದಾರೆ. ಮೊಬೈಲ್ನ್ನು ಬ್ಯಾಗ್ನಲ್ಲಿ ಇಟ್ಟಿದ್ದನ್ನು ಕೋರಿಯರ್ನವರಿಗೂ ಹೇಳಿಲ್ಲ. ತಂದೆ ವಿಳಾಸದೊಂದಿಗೆ ಫೋನ್ ನಂಬರ್ ಕೂಡ ಕೊಟ್ಟಿದ್ದಾರೆ. ಬಳಿಕ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆ ಹೊತ್ತಿಗೆ ಹೊನ್ನಾವರ-ಅಥಣಿ ಬಸ್ ಹತ್ತಿದ್ದಾರೆ. ಬಳಿಕ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ಇಳಿದುಕೊಂಡಿದ್ದಾರೆ. ಅಲ್ಲಿನ ಮಠವೊಂದರ ಬಳಿ ಹೋದ ಪ್ರಿಯದರ್ಶಿನಿ ಅಲ್ಲಿಯೇ ಮಲಪ್ರಭಾ ನದಿಗೆ ಹಾರಬೇಕೆಂದುಕೊಂಡಿದ್ದಾರೆ. ಆದರೆ ಅಲ್ಲಿ ಜನರಿದ್ದ ಕಾರಣ ಅದು ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿಂದ ಪ್ರಯಾಣ ಮುಂದುವರೆಸಿದ ಅವರು ವಟನಾಳ ಅನ್ನೋ ಗ್ರಾಮದ ಬಳಿ ಬರುತ್ತಾರೆ. ಅಲ್ಲಿಗೆ ಬಂದು ಚುರುಮುರಿ ತೆಗೆದುಕೊಂಡು ಅದರಲ್ಲಿ ವಿಷ ಬೆರೆಸಿದ್ದಾರೆ. ನದಿಗುಂಟ ನಡೆಯುತ್ತಾ ಅದನ್ನೇ ಸೇವಿಸಿದ್ದಾರೆ. ಇದೇ ವೇಳೆ ವಿಷ ದೇಹದಲ್ಲಿ ಪಸರಿಸುತ್ತಿದ್ದಂತೆಯೇ ಅಲ್ಲಿ ಯಾರೂ ಇಲ್ಲದ್ದನ್ನು ನೋಡಿ ನದಿಗೆ ಹಾರಿದ್ದಾರೆ. ಈ ಪ್ರದೇಶ ನವಿಲುತೀರ್ಥ ಜಲಾಶಯದ ಹಿನ್ನೀರು. ಹೀಗಾಗಿ ಕೆಲವೇ ಗಂಟೆಗಳಲ್ಲಿ ನವಿಲುತೀರ್ಥ ಜಲಾಶಯದ ಬಳಿ ಅವರ ಮೃತದೇಹ ಪತ್ತೆಯಾಗಿದೆ. ಕೂಡಲೇ ಸವದತ್ತಿ ಪೊಲೀಸರು ಎಲ್ಲ ಕಡೆ ವಿಚಾರಿಸಿ, ಇದು ಪ್ರಿಯದರ್ಶಿನಿ ಅವರದ್ದೇ ಶವ ಅಂತಾ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಅಷ್ಟಕ್ಕೂ ಪ್ರಿಯದರ್ಶಿನಿ ಹೀಗೇಕೆ ಮಾಡಿದರು? ಡೆತ್ ನೋಟ್ನಲ್ಲಿ ಏನಿದೆ?

ಅಷ್ಟಕ್ಕೂ ಎಲ್ಲ ಗೊತ್ತಿದ್ದ ಪ್ರಿಯದರ್ಶಿನಿ ಹೀಗೇಕೆ ಮಾಡಿದರು ಅನ್ನೋದರ ಬಗ್ಗೆ ಅವರ ಕುಟುಂಬದ ಆತ್ಮೀಯರು ಮಾಹಿತಿ ನೀಡಿದ್ದಾರೆ. ಯಾವಾಗ ತಮ್ಮ ಮಗನಿಗೆ ಆರೋಗ್ಯದಲ್ಲಿ ಸಮಸ್ಯೆಯಾಯಿತೋ ಆಗ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಹೋದರೆ ಅದರಿಂದ ಸಮಸ್ಯೆಯೇ ಹೆಚ್ಚಾಗಿತ್ತು. ವೈದ್ಯರು ಸಮಸ್ಯೆಯನ್ನು ಸರಿಯಾಗಿ ಗುರುತಿಸಿರಲಿಲ್ಲ. ಹೀಗಾಗಿ ಮಗನನ್ನು ಭಾರತಕ್ಕೆ ಕರೆ ತಂದು ಚಿಕಿತ್ಸೆ ಕೊಡಿಸಲು ಪ್ರಿಯದರ್ಶಿನಿ ನಿರ್ಧರಿಸಿದ್ದರು. ಆದರೆ ಅದಕ್ಕೆ ಅಲ್ಲಿನ ಸರಕಾರ ಅನುಮತಿ ಕೊಡಬೇಕಲ್ಲವೇ? ಏಕೆಂದರೆ ಆ ಮಕ್ಕಳಿಗೆ ಆಸ್ಟ್ರೇಲಿಯಾ ಪೌರತ್ವ ಇತ್ತು. ಅಲ್ಲದೇ ಆ ಇಬ್ಬರೂ ಮಕ್ಕಳು ಅಲ್ಲಿನ ಸರಕಾರದ ಸುಪರ್ದಿಯಲ್ಲಿದ್ದರು. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪ್ರಿಯದರ್ಶಿನಿ ಈ ಬಗ್ಗೆ ಆಗಾಗ ತಮ್ಮ ತಾಯಿಗೆ ಫೋನ್ ಮಾಡಿ ನೋವನ್ನು ತೋಡಿಕೊಳ್ಳುತ್ತಿದ್ದರು. ತಾವು ಬಂದು ಭಾರತದಲ್ಲಿ ನೆಲೆಗೊಂಡರೆ ಬಳಿಕ ಮಕ್ಕಳನ್ನು ಇಲ್ಲಿಗೆ ಕರೆಯಿಸಿಕೊಂಡು, ಇಲ್ಲಿನ ಪೌರತ್ವವನ್ನು ಪಡೆದುಕೊಳ್ಳಬಹುದು ಅಂತಾನೂ ವಿಚಾರ ಮಾಡಿದ್ದರು. ಆದರೆ ಅಲ್ಲಿನ ಸರಕಾರ ಪದೇ ಪದೇ ಕಿರುಕುಳ ಹೆಚ್ಚು ಮಾಡಿದ್ದರಿಂದ ಅವರು ಮತ್ತಷ್ಟು ಮಾನಸಿಕವಾಗಿ ಜರ್ಜಿತರಾಗಿದ್ದರು. ಇದೇ ಮಾನಸಿಕ ಸಮಸ್ಯೆ ಏನಾದರೂ ಅವರನ್ನು ಆತ್ಮಹತ್ಯೆಗೆ ದೂಡಿತೇ ಅನ್ನೋ ಅನುಮಾನವೂ ಇದೆ. ಇದಕ್ಕೆ ಕಾರಣ ಆಕೆ ಬರೆದಿಟ್ಟಿದ್ದ ಡೆತ್ ನೋಟ್. ಅದರಲ್ಲಿ ತಮಗೆ ನೋವನ್ನುಂಟು ಮಾಡಿದ್ದ ಆಸ್ಪತ್ರೆ ಹಾಗೂ ವೈದ್ಯರ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿದ್ದಾರೆ.

ಗುರುವಾರ ನಡೆದ ಪ್ರಿಯದರ್ಶಿನಿ ಅಂತ್ಯಸಂಸ್ಕಾರ

ಪತಿ ಲಿಂಗರಾಜ ಪಾಟೀಲ್ ಆಸ್ಟ್ರೇಲಿಯಾದಿಂದ ಗುರುವಾರ ಧಾರವಾಡಕ್ಕೆ ಬಂದರು. ಸವದತ್ತಿಯಲ್ಲಿ ಶವ ಪತ್ತೆಯಾಗಿದ್ದರೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಶವವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲಾಗಿತ್ತು. ಪತಿ ಬರುತ್ತಿದ್ದಂತೆಯೇ ಪೋಸ್ಟ್ ಮಾರ್ಟಮ್ ಮಾಡಿ ಪ್ರಿಯದರ್ಶಿನಿ ಅವರ ಶವವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಮಕ್ಕಳು ಕೂಡ ತಂದೆಯೊಂದಿಗೆ ಬರಬಹುದಿತ್ತು. ಆದರೆ ಪ್ರಿಯದರ್ಶಿನಿ ಬರುವಾಗ ಆ ಎರಡೂ ಮಕ್ಕಳ ಪಾಸ್ಪೋರ್ಟ್ನ್ನು ತಮ್ಮೊಂದಿಗೆ ತಂದು ಬಿಟ್ಟಿದ್ದರು. ಹೀಗಾಗಿ ಆ ಮಕ್ಕಳಿಗೆ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಕೂಡ ಸಾಧ್ಯವಾಗಲೇ ಇಲ್ಲ. ಒಟ್ಟಿನಲ್ಲಿ ಎಲ್ಲ ತಿಳಿದುಕೊಂಡಿದ್ದ ಪ್ರಿಯದರ್ಶಿನಿ ಇಂಥ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು ಅವರ ಕುಟುಂಬಕ್ಕಷ್ಟೇ ಅಲ್ಲ ಅವರ ಆಪ್ತರನ್ನೂ ದುಃಖದ ಕಡಲಲ್ಲಿ ಮುಳುಗಿಸಿದ್ದು ವಿಪರ್ಯಾಸದ ಸಂಗತಿಯೇ ಸರಿ.

ಪ್ರಿಯದರ್ಶಿನಿ ಬೆಳಿಗ್ಗೆ ಬರುತ್ತಾಳೆ ಅಂತಾ ಕಾದಿದ್ದೊಂದೇ, ಆಕೆ ಬರಲೇ ಇಲ್ಲ – ಶೋಭಾ ದೇಸಾಯಿ

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ತಮ್ಮ ನೋವನ್ನು ತೋಡಿಕೊಂಡ ಪ್ರಿಯದರ್ಶಿನಿ ಅವರ ತಾಯಿ ಶೋಭಾ ದೇಸಾಯಿ, ಶನಿವಾರವಷ್ಟೇ ಬೆಳಿಗ್ಗೆ ಇಬ್ಬರೂ ಸಾಕಷ್ಟು ಹೊತ್ತು ಮಾತನಾಡಿದ್ದೆವು. ಶನಿವಾರ ರಾತ್ರಿ ಬಿಟ್ಟು ಬೆಳಿಗ್ಗೆ ಧಾರವಾಡಕ್ಕೆ ಬರೋದಾಗಿ ಆಕೆ ಹೇಳಿದ್ದಳು. ಅದಕ್ಕೂ ಮುಂಚೆ ಆಸ್ಟ್ರೇಲಿಯಾದಿಂದ ಮಾತನಾಡುವಾಗ ಆಕೆ ಸಾಕಷ್ಟು ನೊಂದಿದ್ದಳು ಅನ್ನೋದು ಮಾತಿನಲ್ಲಿಯೇ ಗೊತ್ತಾಗುತ್ತಿತ್ತು. ಆಕೆಗೆ ಇಲ್ಲಿ ಸಾಕಷ್ಟು ಅವಕಾಶಗಳು ಕಾದು ಕೂತಿದ್ದವು. ಬಂದ ಬಳಿಕ ಇಲ್ಲಿಯೇ ಕೆಲಸ ಸಿಗುತ್ತಿದ್ದವು. ಬಳಿಕ ಮಕ್ಕಳನ್ನು ಕರೆಯಿಸಿಕೊಳ್ಳಬಹುದಿತ್ತು. ಆದರೆ ನಮಗೆ ಮುಖ ಕೂಡ ತೋರಿಸದಂತೆ ಹೊರಟು ಹೋಗಿದ್ದಾಳೆ. ಮಕ್ಕಳ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿ ನಡೆದ ಬೆಳವಣಿಗೆಗಳಿಂದ ಆಕೆ ಸಾಕಷ್ಟು ನೊಂದಿದ್ದಳು. ಈ ಬಗ್ಗೆ ಸಾಕಷ್ಟು ಬಾರಿ ನನ್ನೊಂದಿಗೆ ಚರ್ಚೆ ಕೂಡ ನಡೆಸಿದ್ದಳು. ಆದರೆ ಈ ರೀತಿ ಮಾಡುತ್ತಾಳೆ ಅಂತಾ ನಾವಂದುಕೊಂಡಿರಲಿಲ್ಲ. ನಮ್ಮನ್ನು ಭೇಟಿಯಾಗಿದ್ದರೆ ಆಕೆಯ ನಿರ್ಧಾರ ಬದಲಾಗುತ್ತಿತ್ತೋ ಏನೋ? ಆದರೆ ಇದೀಗ ಆಕೆ ಯಾರ ಕೈಗೂ ಸಿಗದೇ ದೂರ ಹೋಗಿದ್ದಾಳೆ ಅಂತಾ ಕಣ್ಣೀರಿಡುತ್ತಾರೆ.

ಪ್ರಿಯದರ್ಶಿನಿ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಲು ನಿರ್ಧಾರ – ಈರೇಶ ಅಂಚಟಗೇರಿ

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಪಾಲಿಕೆಯ ಮಾಜಿ ಮಹಾಪೌರರು ಹಾಗೂ ಪ್ರಿಯದರ್ಶಿನಿ ಕುಟುಂಬದ ಆಪ್ತರೂ ಆಗಿರುವ ಈರೇಶ ಅಂಚಟಗೇರಿ, ಖ್ಯಾತ ಉದ್ದಿಮೆದಾರರು, ಸಹಕಾರಿ ರತ್ನ ಅವರ ದ್ವಿತೀಯ ಸುಪುತ್ರಿ ಈ ಪ್ರಿಯದರ್ಶಿನಿ. ಆಕೆ ಬಹಳ ಮನನೊಂದಿದ್ದರು. ಅಲ್ಲಿನ ಆಸ್ಪತ್ರೆಯ ಕಿರುಕುಳದಿಂದ ಮನನೊಂದಿದ್ದರು. ತನ್ನ ಮಕ್ಕಳನ್ನು ತನ್ನಿಂದ ದೂರ ಮಾಡುತ್ತಾರೆ ಅಂತಾ ಮಾನಸಿಕವಾಗಿ ನೊಂದಿದ್ದರು. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಿಷಯವನ್ನು ನಾನು ನಮ್ಮ ಸಂಸದರು ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಮೂಲಕ ಪ್ರಿಯದರ್ಶಿನಿ ಅವರು ಡೆತ್ ನೋಟ್ನಲ್ಲಿ ಬರೆದಿರೋರ ವಿರುದ್ಧ ಕ್ರಮ ಕೈಗೊಳ್ಳಲು ಆಸ್ಟ್ರೇಲಿಯಾದ ರಾಯಭಾರಿ ಕಚೇರಿಗೆ ದೂರನ್ನು ನೀಡುತ್ತೇವೆ. ಏಕೆಂದರೆ ತನ್ನ ಮಕ್ಕಳನ್ನು ನನ್ನೊಂದಿಗೆ ಭಾರತಕ್ಕೆ ಕಳಿಸಿಕೊಡುವಂತೆ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಇದರಿಂದಾಗಿ ಮನನೊಂದಿದ್ದ ಅವರು ಒಬ್ಬರೇ ಭಾರತಕ್ಕೆ ಮರಳಿದ್ದರು. ತುಂಬಾನೇ ಪ್ರತಿಭಾವಂತೆಯಾಗಿದ್ದ ಆಕೆ ಇಂಥ ನಿರ್ಧಾರ ತೆಗೆದುಕೊಂಡಿದ್ದರ ಹಿಂದೆ ಏನಿದೆ ಅನ್ನೋದರ ಬಗ್ಗೆ ತನಿಖೆಯಾಗಬೇಕಿದೆ. ಹೀಗಾಗಿ ಆ ನಿಟ್ಟಿನಲ್ಲಿ ನಾವು ಆಸ್ಟ್ರೇಲಿಯಾ ರಾಯಭಾರಿ ಕಚೇರಿ ಮೂಲಕ ಈ ಪ್ರಕರಣಕ್ಕೆ ನ್ಯಾಯ ಕೊಡಿಸಲು ಯತ್ನಿಸುತ್ತೇವೆ ಅನ್ನುತ್ತಾರೆ.

Published On - 4:33 pm, Thu, 24 August 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ