ಹುಬ್ಬಳ್ಳಿ: ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆನ್ನುವುದು ನನ್ನ ಕನಸು ಎಂದು ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಸಿಎಂ ಆಗುವುದು, ಜೈನ ನಿಗಮ ಸ್ಥಾಪನೆ ಇವರೆಡೂ ನನ್ನ ಕನಸು. ಎಷ್ಟೇ ಕಾಟ ಇರಲಿ, ಎಷ್ಟೇ ಸಂಕಟ ಇರಲಿ ಡಿಕೆಶಿ ಸಿಎಂ ಆಗುತ್ತಾರೆ. ಇದು ನಮ್ಮ ಭವಿಷ್ಯವಾಣಿ ಎಂದ ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.
ಮುಂದಿನ ಅವಧಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಕಷ್ಟಪಟ್ಟಷ್ಟು ಯಾರೂ ಪಟ್ಟಿಲ್ಲ. ಕಾಂಗ್ರೆಸ್‌ಗೆ ಮರುಜೀವ ಕೊಟ್ಟಿದ್ದಾರೆ, ಇದನ್ನು ಕರ್ನಾಟಕ ಜನರು ಮರೆತಿಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆಗುವುದು ನಮ್ಮ ಕನಸು ಎಂದು ಜೈನಮುನಿ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ತವರು ವರುಣಾ ಕ್ಷೇತ್ರದ ಗ್ರಾಮಸ್ಥರಿಂದ ಕಾಂಗ್ರೆಸ್ ಮುಖಂಡರಿಗೆ ಬಹಿಷ್ಕಾರ
ಜೈನ ಸಮುದಾಯಕ್ಕೆ ಕೊಡುವುದು ಗೊತ್ತು, ಬೇಡುವುದು ಗೊತ್ತಿಲ್ಲ. ಆದರೆ, ಈಗ ನಿಗಮ ಮಂಡಳಿಗೆ ಬೇಡುತ್ತಿದ್ದೇವೆ, ಇದು ಸಮಾಜದ ಅಪೇಕ್ಷೆ ಎಂದು ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ ಹೇಳಿದ್ದಾರೆ. ಈ ವೇಳೆ ವೇದಿಕೆ ಮೇಲಿನ ಎಲ್ಲಾ ಆಚಾರ್ಯರು, ಜೈನಮುನಿಗಳು ಕೈ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಶೀರ್ವದಿಸಿದ್ದಾರೆ.
ಈ ವೇಳೆ ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾನು ಸಿಎಂ ಆಗಲೆಂದು ಗುಣಧರನಂದಿ ಶ್ರೀಗಳು ಆಶೀರ್ವದಿಸಿದ್ದಾರೆ. ನೀವು ಆಶೀರ್ವಾದಿಸಿದಾಗಲೆಲ್ಲಾ ನಮಗೆ ಏಟು ಕೊಡುತ್ತಿರುತ್ತಾರೆ. ವಿನಯ್ ಗುರೂಜಿ ಈ ಮಾತನ್ನು ಮೊದಲೇ ಹೇಳಿದ್ದರು ಎಂದು ಜೈನ ಮುನಿಗಳ ಆಶೀರ್ವಾದಕ್ಕೆ ಡಿಕೆಶಿ ಮಾರ್ಮಿಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದೆ; ಸಿಎಂ ಸಿದ್ದರಾಮಯ್ಯ ಆರೋಪ
ಅಹಿಂಸೆ, ಸತ್ಯ, ತ್ಯಾಗಕ್ಕೆ ಮತ್ತೊಂದು ಹೆಸರು ಜೈನ ಧರ್ಮ. ಈ ಡಿಕೆಶಿ ನಿಮ್ಮ ಧರ್ಮದ ಜೊತೆ ಇರುತ್ತಾನೆ. ನನ್ನ ಮೇಲೆ ನಂಬಿಕೆ ಇಡಿ. ಜೈನ ಅಭಿವೃದ್ಧಿ ನಿಗಮ ಮಾಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿ, ಮುಂಬರುವ ಬಜೆಟ್ನಲ್ಲಿಯೇ ರಚನೆ ಮಾಡಲು ಮನವಿ ಮಾಡ್ತೇನೆ. ಜೈನರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ನಮ್ಮ ಕಾಂಗ್ರೆಸ್. ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲಾಗಿದೆ. ನಮ್ಮ ಸರ್ಕಾರ, ನಮ್ಮ ಪಕ್ಷ ನಿಮ್ಮ ಜೊತೆಗೆ ಇರುತ್ತದೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 pm, Tue, 21 January 25