ಹುಬ್ಬಳ್ಳಿ: 2030 ರೊಳಗೆ ದೇಶದ ರೈಲುಗಳನ್ನು ಪರಿಸರ ಸ್ನೇಹಿಯಾಗಿ ಮಾಡಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಅದರಂತೆ ಗ್ರೀನ್ ರೈಲ್ವೆ ಎನ್ನುವ ಪಣ ತೊಟ್ಟಿದೆ. ವಿದ್ಯುದ್ದೀಕರಣಗೊಳಿಸಿ ಗ್ರೀನ್ ರೈಲ್ವೆ ಮಾಡುವ ಉದ್ದೇಶ ಹೊಂದಿರುವ ಭಾರತೀಯ ರೈಲ್ವೆ ಇಲಾಖೆ ಧ್ಯೆಯದಂತೆ, ಹುಬ್ಬಳ್ಳಿಯ ನೈಋತ್ಯ ರೈಲ್ವೆ(Southwest Railway) ವಲಯವೂ ವಿದ್ಯುದ್ದೀಕರಣ(Electrification) ಕಾಮಗಾರಿಯನ್ನು ಭರದಿಂದ ಕೈಗೆತ್ತಿಕೊಂಡಿದ್ದು, ಈಗಾಗಲೇ 1248.60 ಕಿಲೋ ಮೀಟರ್ ಪೂರ್ಣಗೊಳಿಸಿದೆ. ಅದರಲ್ಲೂ ಈ ಬಾರಿಯ ಕೇಂದ್ರ ಬಜೆಟ್(Budget) ನೈಋತ್ಯ ರೈಲ್ವೆ ವಲಯಕ್ಕೆ ಬಂಪರ್ ಕೊಡುಗೆ ಲಭಿಸಿದ್ದು, ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗಗಳಲ್ಲೂ ವಿದ್ಯುದ್ದೀಕರಣ ಕಾಮಗಾರಿಗಳು ನಡೆದಿವೆ. ಅದರಲ್ಲಿ ಬೆಂಗಳೂರು ವಿಭಾಗದಲ್ಲಿ ಕೊಂಚ ಜೋರಾಗಿಯೇ ಕಾಮಗಾರಿ ನಡೆದಿದೆ.
ಬೆಂಗಳೂರಿನ 1144 ಆರ್‌ಕೆಎಂ (ಕಿಲೋಮೀಟರ್) ಪೈಕಿ ಈವರೆಗೆ 688 ಆರ್‌ಕೆಎಂ ಪೂರ್ಣಗೊಂಡಿದೆ. ಹುಬ್ಬಳ್ಳಿ ವಿಭಾಗದ 1328 ಆರ್‌ಕೆಎಂ ಪೈಕಿ ಈವರೆಗೆ 426,69 ಆರ್‌ಕೆಎಂ ಪೂರ್ಣಗೊಂಡಿದ್ದರೆ, ಮೈಸೂರು ವಿಭಾಗದ 1132 ಆರ್‌ಎಂ ಪೈಕಿ 134.1 ಆರ್‌ಕೆಎಂ ಪೂರ್ಣಗೊಂಡಿದೆ. ಈ ಮೂಲಕ 3604 ಆರ್‌ಕೆಎಂ ಪೈಕಿ ಈವರೆಗೆ 1248.69 ಕಿಲೋ ಮೀಟರ್ ವಿದ್ಯುದ್ದೀಕರಣ ಪೂರ್ಣಗೊಂಡಿದೆ. 2024ರ ಹೊತ್ತಿಗೆ ಬಾಕಿ ಉಳಿದ ಕಾಮಗಾರಿ ಮುಗಿಯಲಿದೆ. ಅಲ್ಲದೆ ಮುಂದಿನ ಹಣಕಾಸು ವರ್ಷದ ವೇಳೆಗೆ ನೈಋತ್ಯ ರೈಲ್ವೆ ಇಲಾಖೆ ಸರ್ಕಾರದ ಗುರಿಯನ್ನು ಸಕಾರಗೊಳಿಸುವ ಉದ್ದೇಶ ಹೊಂದಿದೆ ಎಂದು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಹುಟಗಿ-ವಿಜಯಪುರ ಮಾರ್ಗದಲ್ಲಿ ವಿದ್ಯುತ್ ಎಂಜಿನ್ ಬಳಸಿ ಪ್ರಾಯೋಗಿಕ ಸಂಚಾರ ಕೂಡ ಮಾಡಲಾಗಿದೆ. ಶೀಘ್ರದಲ್ಲೇ ಅಲ್ಪಾವರ-ಲೋಂಡಾ ಮಧ್ಯೆ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. ಇನ್ನೂ ಕೆಲವೆಡೆ ವಿದ್ಯುತ್ ಎಂಜಿನ್ ಬಳಸಿ ಪ್ರಾಯೋಗಿಕ ಸಂಚಾರ ಕೂಡ ಮಾಡಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಹೂಟಗಿ- ವಿಜಯಪುರ ಮಧ್ಯೆ ವಿದ್ಯುತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಅದು ಯಶಸ್ವಿ ಕೂಡ ಆಗಿದೆ.
ಇದೀಗ ಹುಬ್ಬಳ್ಳಿ ವಿಭಾಗದ ಅಳ್ಳಾವರ-ಲೋಂಡಾ ಮಧ್ಯೆ ಪ್ರಾಯೋಗಿಕ ಸಂಚಾರ ನಡೆಸಲು ವಲಯ ನಿರ್ಧರಿಸಿದೆ. ವಿದ್ಯುತ್ ರೈಲುಗಳು ಸಂಚರಿಸಿದರೆ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಪರಿಸರ ರಕ್ಷಣೆಯೂ ಆಗುತ್ತದೆ. ಒಂದು ವಿದ್ಯುತ್ ಎಂಜಿನ್‌ನಿಂದ ವರ್ಷಕ್ಕೆ 18 ಟನ್ ಕಾರ್ಬನ್ ಪುಟ್ ಪ್ರಿಂಟ್ ಕಡಿಮೆ ಆಗುತ್ತದೆ. ರೈಲುಗಳ ಸ್ಪೀಡ್ ಹೆಚ್ಚಾಗುತ್ತದೆ. ಪ್ರಯಾಣದ ಸಮಯದ ಉಳಿತಾಯವೂ ಆಗುತ್ತದೆ ಎನ್ನುತ್ತಾರೆ ಎಂದು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ತೈಲ ಎಂಜಿನ್ ಬಳಕೆಗಿಂತ ವಿದ್ಯುತ್ ಎಂಜಿನ್ ಬಳಕೆಯಿಂದ ವೆಚ್ಚ ಕೂಡ ಕಡಿಮೆಯಾಗುತ್ತದೆ. ಡೀಸೆಲ್ ಬಳಕೆಯಿಂದ ಪರಿಸರ ಎಲ್ಲಾ ಮಾಲಿನ್ಯವೂ ಜಾಸ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಕಾಳಜಿ ವಹಿಸಲು ನೈಋತ್ಯ ರೈಲ್ವೆ ಮುಂದಾಗಿರುವುದು ವಿಶೇಷವಾಗಿದೆ.
ವರದಿ: ದತ್ತಾತ್ರೇಯ ಪಾಟೀಲ್
ಇದನ್ನೂ ಓದಿ:
Budget 2022: ಮೂರು ವರ್ಷಗಳಲ್ಲಿ 400 ಹೊಸ ತಲೆಮಾರಿನ ವಂದೇ ಭಾರತ್ ರೈಲು: ನಿರ್ಮಲಾ ಸೀತಾರಾಮನ್
Budget Expectations ವೇಗದ ರೈಲುಗಳು, ವಿದ್ಯುದ್ದೀಕರಣ ಮತ್ತು ಹೆಚ್ಚಿನ ಸೌಲಭ್ಯ; ರೈಲ್ವೆ ಬಜೆಟ್ ನಿರೀಕ್ಷೆಗಳೇನು?