ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಅನುಮತಿ ನೀಡಬೇಕು; ಪ್ರಲ್ಹಾದ್ ಜೋಶಿ ಆಗ್ರಹ

|

Updated on: Sep 14, 2023 | 8:46 PM

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಪ್ರಲ್ಹಾದ್ ಜೋಶಿ, ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ನಮ್ಮ ಹುಬ್ಬಳ್ಳಿ ಧಾರವಾಡದಲ್ಲೂ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಅನುಮತಿ ನೀಡಬೇಕು; ಪ್ರಲ್ಹಾದ್ ಜೋಶಿ ಆಗ್ರಹ
ಪ್ರಲ್ಹಾದ್ ಜೋಶಿ
Follow us on

ಬೆಂಗಳೂರು, ಸೆಪ್ಟೆಂಬರ್ 14: ಗಣೇಶ ಚತುರ್ಥಿ ಹಬ್ಬಕ್ಕೆ (Ganesh Chaturthi 2023) ದಿನಗಣನೆ ಆರಂಭವಾಗಿರುವಂತೆಯೇ ಹುಬ್ಬಳ್ಳಿಯ ಈದ್ಗಾ ಮೈದಾನ (Hubli Idgah Maidan) ಮತ್ತೆ ಸುದ್ದಿಯಲ್ಲಿದೆ. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಮತ್ತು ಹಬ್ಬದ ಆಚರಣೆಗೆ ಅವಕಾಶ ನಿಡಬೇಕು ಎಂದು ಬಿಜೆಪಿ (BJP) ಹಾಗೂ ಹಿಂದೂ ಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಈ ವಿಚಾರವಾಗಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿವೆ. ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರೂ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಅವರು, ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ನಮ್ಮ ಹುಬ್ಬಳ್ಳಿ ಧಾರವಾಡದಲ್ಲೂ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಮುಂದುವರಿದು, ‘ಹುಬ್ಬಳ್ಳಿ ಚೆನ್ನಮ್ಮ ಮೈದಾನದಲ್ಲಿ (ಈದ್ಗಾ) ಕಳೆದ ವರ್ಷ ನ್ಯಾಯಾಲಯದ ಅನುಮತಿಯಂತೆ ಗಣಪತಿ ಕೂರಿಸಿ ಅತ್ಯಂತ ಶಾಂತಿಯುತವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ರಾಜ್ಯ ಸರಕಾರ ಜಿಲ್ಲಾಡಳಿತದ ಮೂಲಕ ಚೆನ್ನಮ್ಮ ಮೈದಾನದಲ್ಲಿ ಗಣಪತಿ ಕೂರಿಸಲು ಅನುಮತಿ ನೀಡದೆ ಹಬ್ಬಕ್ಕೆ ಅಡ್ಡಿಪಡಿಸುತ್ತಿದೆ. ಹಿಂದೂಗಳ ಪವಿತ್ರ ಹಬ್ಬ ಗಣೇಶ ಚತುರ್ಥಿ ವಿಜೃಂಭಣೆಯಿಂದ ನಡೆಸಲು ಸರಕಾರ ಈ ಕೂಡಲೇ ಜಿಲ್ಲಾಡಳಿತಕ್ಕೆ ಸೂಚಿಸಿ ಅನುಮತಿ ನೀಡಬೇಕೆಂದು ಆಗ್ರಹಿಸುತ್ತೇನೆ. ಜೈ ಗಣೇಶ’ ಎಂದು ಉಲ್ಲೇಖಿಸಿದ್ದಾರೆ.


ಪ್ರಲ್ಹಾದ್ ಜೋಶಿ ಅವರ ಟ್ವೀಟ್ ಅನ್ನು ಕರ್ನಾಟಕ ಬಿಜೆಪಿ ಕೂಡ ರಿಟ್ವೀಟ್ ಮಾಡಿದ್ದು, ಹಿಂದೂ ವಿರೋಧಿ ನಾಚಿಕೆಗೇಡಿನ ಸರಕಾರ! ಎಂದು ಟೀಕಿಸಿದೆ.

ಇದನ್ನೂ ಓದಿ: ಗಣೇಶ ಹಬ್ಬದ ಪ್ರಯುಕ್ತ ಬೆಳಗಾವಿ ಯಶವಂತಪುರ ನಡುವೆ ಸಂಚರಿಸಲಿವೆ ವಿಶೇಷ ರೈಲುಗಳು; ಇಲ್ಲಿದೆ ವಿವರ

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕಳೆದ ಬಾರಿ ಸುಪ್ರೀಂ ಕೋರ್ಟ್ ನಮಗೆ ಅವಕಾಶ ನೀಡಿತ್ತು. ಈ ಬಾರಿಯೂ ನಾವು ಈದ್ಗಾ ಮೈದಾನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎಂದು ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಬುಧವಾರ ಹೇಳಿದ್ದರು.

ಈ ಮಧ್ಯೆ, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು ಎಂದು ವಿವಿಧ ದಲಿತ ಸಂಘಸಂಸ್ಥೆಗಳ ಮಹಾಮಂಡಳ ಆಗ್ರಹಿಸಿದೆ. ಒಂದು ವೇಳೆ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ