ಧಾರವಾಡ: ಕೊರೊನಾ ಹಾವಳಿ ಶುರುವಾದಾಗಿನಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆ ಕಡೆಗೆ ಹೋಗಿಯೇ ಇಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಒಂದೆರಡು ತಿಂಗಳು ಇದೇ ರೀತಿ ಸಮಸ್ಯೆ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿವೆ. ಆದರೆ ಇಂಥ ಸಂದರ್ಭವನ್ನೇ ಬಳಸಿಕೊಂಡ ಧಾರವಾಡದ ಶಿಕ್ಷಕರೊಬ್ಬರು ತಮ್ಮ ಶಾಲೆಯನ್ನು ಸುಂದರಗೊಳಿಸೋ ಕೆಲಸದಲ್ಲಿ ತೊಡಗಿಕೊಂಡು ಜನರಿಗೆ ಅಚ್ಚರಿ ಮೂಡಿಸಿದ್ದಾರೆ.
ಮಾರ್ಚ್ 24ರಿಂದ ದೇಶಾದ್ಯಂತ ಕೊರೊನಾ ಸೋಂಕಿನಿಂದಾಗಿ ಪ್ರಧಾನಿ ಮೋದಿ ಲಾಕ್‍ಡೌನ್ ಘೋಷಿಸಿದರು. ಅಲ್ಲಿಂದ ಇಂದಿನವರೆಗೂ ಯಾರೂ ಶಾಲೆಯತ್ತ ಸುಳಿದಿಲ್ಲ. ಆದರೆ ಧಾರವಾಡ ನಗರದ ನವಲಗುಂದ ರಸ್ತೆಯ ಹೆಬ್ಬಳ್ಳಿ ಫಾರ್ಮ್ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮೌನೇಶ್ವರ ಕಮ್ಮಾರ ಮಾತ್ರ ಇದೇ ವೇಳೆಯಲ್ಲಿ ಶಾಲೆಗೆ ಬಣ್ಣ ಬಳಿದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರು, ಮಕ್ಕಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದ್ದಾರೆ.
ಕಾಂಪೌಂಡ್ ಮೇಲೆ ಜಾಗೃತಿ ಮೂಡಿಸುವ ಕೆಲಸ:
ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಜನರು ದೂರದಿಂದ ನೋಡಿದರೂ ಅವರಿಗೆ ಸಂದೇಶ ಕಾಣುವಂತೆ ಹಾಗೂ ಅದು ಎಲ್ಲರಿಗೂ ಅರ್ಥವಾಗುವಂತಹ ಚಿತ್ರಗಳನ್ನು ಬಿಡಿಸಿದ್ದಾರೆ. ಇನ್ನು ಸಹೋದರರಾದ ನಾಗಲಿಂಗ ಲೋಹಾರ್, ಸೋಮಶೇಖರ್ ಗಣಮುಖಿ ಅವರ ಸಹಾಯದಿಂದ ಶಾಲೆಯ ಆವರಣದಲ್ಲಿರುವ ಉದ್ಯಾನವನ, ಶೌಚಾಲಯ, ಕೋಣೆಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೂಡ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿಯೇ ಇದನ್ನೆಲ್ಲ ಮಾಡಿರೋ ಶಿಕ್ಷಕ ಕಮ್ಮಾರ್ ಅವರು ಶಾಲಾ ಆವರಣದಲ್ಲಿ ಬಾಳೆ ಗಿಡ ಸೇರಿದಂತೆ ಇತರೆ ಹೂ ಗಿಡಗಳನ್ನು ನೆಟ್ಟು ಉದ್ಯಾನವನವನ್ನು ನಿರ್ಮಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸುವ ಮೌನೇಶ್ವರ ಕಮ್ಮಾರ್ ಅವರು ಪ್ರತಿಯೊಬ್ಬರಿಗೂ ನಮ್ಮ ಶಾಲೆ, ನಮ್ಮ ಮಕ್ಕಳು ಎನ್ನುವ ಹೆಮ್ಮೆ ಇರಬೇಕು. ಅಂದಾಗ ಮಾತ್ರ ಶಾಲೆಯಲ್ಲಿ ಏನಾದರೂ ಇತರೆ ಚಟುವಟಿಕೆಗಳ ಕಾರ್ಯಗಳು ಬರಲು ಸಾಧ್ಯವಾಗಲಿದೆ. ನಮ್ಮ ಶಾಲೆಗೆ ನಮ್ಮ ಕೈಲಿಂದ ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ ಅಷ್ಟೇ. ಶಾಲೆ ಸ್ವಚ್ಛವಾಗಿದ್ದರೆ ಕಲಿಕಾ ವಾತಾವರಣ ಚೆನ್ನಾಗಿರಲಿದೆ ಎನ್ನುತ್ತಾರೆ.