ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಮುಗಿಯಿತು.. ಇನ್ನು ಅಧ್ಯಕ್ಷ ಗಾದಿಗೆ ಸರ್ಕಸ್!

| Updated By: ಸಾಧು ಶ್ರೀನಾಥ್​

Updated on: Jan 02, 2021 | 11:55 AM

ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದಲೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಏರಲು ಕಸರತ್ತು ಶುರುವಾಗಿ ಬಿಟ್ಟಿರುತ್ತದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ ಗೆದ್ದವರ ಗುಂಪು ರಚಿಸುತ್ತಿರುವ ರಾಜಕೀಯ ಪಕ್ಷಗಳು ಮೀಸಲಾತಿ ಪ್ರಕಟಗೊಳ್ಳುವ ಮುನ್ನವೇ ಬಹುಮತಕ್ಕೆ ಬೇಕಿರುವ ಸದಸ್ಯರ ಬೆಂಬಲ ಪಡೆಯಲು ಗೆದ್ದವರಿಗೆ ಗಾಳ ಹಾಕುತ್ತಲೇ ಇವೆ.

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಮುಗಿಯಿತು.. ಇನ್ನು ಅಧ್ಯಕ್ಷ ಗಾದಿಗೆ ಸರ್ಕಸ್!
ಪ್ರಾತಿನಿಧಿಕ ಚಿತ್ರ
Follow us on

ಧಾರವಾಡ: ಇತ್ತೀಚಿಗಷ್ಟೇ ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳು ಮುಕ್ತಾಯವಾಗಿದ್ದು, ಮತ ಎಣಿಕೆ ಕಾರ್ಯವೂ ಮುಗಿದಿದೆ. ಸೋತವರು ಮನೆ ಸೇರಿದರೆ, ಗೆದ್ದವರು ಅಧ್ಯಕ್ಷ, ಉಪಾಧ್ಯಕ್ಷ ಗಾದಿಯತ್ತ ಗಮನ ಹರಿಸಿದ್ದಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನವೆಂದರೆ ಅದು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವಂತಾಗಿದೆ. ಅದು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಆಯಕಟ್ಟಿನ, ಮಹತ್ವದ ಸ್ಥಾನವಾಗಿ ಪರಿಣಮಿಸಿದೆ. ರಾಜಕೀಯವಾಗಿಯೂ ಪ್ರತಿಷ್ಠೆಯ ಸ್ಥಾನವಾಗಿದೆ.. ಹೀಗಾಗಿ ಎಲ್ಲರ ಕಣ್ಣು ಅಧ್ಯಕ್ಷ ಸ್ಥಾನದ ಮೇಲೆ ನೆಟ್ಟಿದೆ.

ಈ ಮಧ್ಯೆ ಮುಂಬರುವ ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳು ಕೂಡ ಈ ಅಧ್ಯಕ್ಷ ಸ್ಥಾನಗಳ ಮೇಲೆ ಕಣ್ಣಿಟ್ಟಿವೆ. ತಮ್ಮ ಪಕ್ಷದ ಬೆಂಬಲಿತ ವ್ಯಕ್ತಿಗೆ ಆ ಹುದ್ದೆ ಸಿಗುವಂತೆ ಮಾಡಲು ಯೋಜನೆ ರೂಪಿಸಿದ್ದು, ಹಣ, ಜಾತಿ, ಅಧಿಕಾರ ಬಳಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ತಮ್ಮ ಪಕ್ಷದ ನಿಷ್ಠರನ್ನು ಕೂಡಿಸಲು ಬಹಿರಂಗವಾಗಿಯೇ ಪ್ರಯತ್ನ ಆರಂಭಿಸಿವೆ.

ಗೆದ್ದವರ ಗುಂಪು ರಚಿಸುತ್ತಿರುವ ರಾಜಕೀಯ ಪಕ್ಷಗಳು:
ಮೇಲ್ನೋಟಕ್ಕೆ ಗ್ರಾಮ ಪಂಚಾಯತಿ ಚುನಾವಣೆಗೆ ರಾಜಕೀಯ ಪಕ್ಷಗಳ ಹಂಗು ಇರುವುದಿಲ್ಲ ಎನ್ನಿಸುತ್ತದೆ. ಆದರೆ ನಿಜವಾಗಿಯೂ ಎಲ್ಲಅ ಚುನಾವಣೆಗಳಂತೆ ಇಲ್ಲಿಯೂ ರಾಜಕೀಯದ ಹಸ್ತಕ್ಷೇಪ ಇದ್ದೇ ಇರುತ್ತದೆ. ಅದರಲ್ಲೂ ಹಳ್ಳಿಯ ರಾಜಕೀಯವಂತೂ ಹೇಳತೀರದು. ಒಂದೇ ಮನೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ಕಾಣಿಸಿಕೊಳ್ಳುವುದು ಕೂಡ ಇಲ್ಲಿ ಸಾಮಾನ್ಯ ಸಂಗತಿಯೇ ಸರಿ. ಇಂತಹ ವೇಳೆಯಲ್ಲಿ ರಾಜಕೀಯ ಪಕ್ಷಗಳು ಇದನ್ನು ಬಳಸಿಕೊಂಡು ನಿಧಾನವಾಗಿ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತವೆ.

ಅದರಲ್ಲೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಯಾವತ್ತೂ ಒಂದು ಕೈ ಮುಂದೆಯೇ ಇರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಗೆದ್ದಿದ್ದಾರೆ ಎಂದು ಆ ಪಕ್ಷದ ಮುಖಂಡರು ಬಹಿರಂಗವಾಗಿ ಹೇಳುತ್ತಿರುವುದು ಇದಕ್ಕೆ ಸಾಕ್ಷಿ. ಹೀಗಾಗಿ ಸಹಜವಾಗಿ ತಮ್ಮ ಪಕ್ಷ ಬೆಂಬಲಿತ ವ್ಯಕ್ತಿಗಳೇ ಅಧ್ಯಕ್ಷ, ಉಪಾಧ್ಯಕ್ಷರಾಗಲಿ ಎನ್ನುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರು ನಿರಂತರವಾಗಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೆ ಇವರೆಲ್ಲರಿಗೆ ಇದೀಗ ತಲೆನೋವಾಗಿರುವುದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ.

ಮೀಸಲಾತಿ ಪ್ರಕಟವಾಗುವವರೆಗೂ ಏನೂ ಮಾಡುವಂತಿಲ್ಲ!
ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದಲೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಏರಲು ಕಸರತ್ತು ಶುರುವಾಗಿ ಬಿಟ್ಟಿರುತ್ತದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ ಗೆದ್ದವರ ಗುಂಪು ರಚಿಸುತ್ತಿರುವ ರಾಜಕೀಯ ಪಕ್ಷಗಳು ಮೀಸಲಾತಿ ಪ್ರಕಟಗೊಳ್ಳುವ ಮುನ್ನವೇ ಬಹುಮತಕ್ಕೆ ಬೇಕಿರುವ ಸದಸ್ಯರ ಬೆಂಬಲ ಪಡೆಯಲು ಗೆದ್ದವರಿಗೆ ಗಾಳ ಹಾಕುತ್ತಲೇ ಇವೆ. ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಈ ಚುನಾವಣೆ ನಡೆಯುವುದಿಲ್ಲವಾದರೂ ಗೆದ್ದು ಬಂದ ಬಹುತೇಕರು ರಾಜಕೀಯ ಪಕ್ಷಗಳ ಬೆಂಬಲಿತರೇ ಆಗಿರುತ್ತಾರೆ. ಅನೇಕ ಕಡೆಗಳಲ್ಲಿ ಸ್ವತಂತ್ರವಾಗಿ ಗೆದ್ದವರ ಬೆಂಬಲ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಬಹು ಮುಖ್ಯವಾಗಿರುತ್ತದೆ. ಇಂತವರನ್ನು ಕರೆಯಿಸಿ ಮಾತುಕತೆ ನಡೆಸುತ್ತಿರುವ ರಾಜಕೀಯ ಮುಖಂಡರು, ಮೀಸಲಾತಿ ಪ್ರಕಟವಾದ ಬಳಿಕ ಅವಕಾಶ ಸಿಕ್ಕರೆ ನಿಮ್ಮನ್ನೇ ಅಧ್ಯಕ್ಷ ಅಥವಾ ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಆಫರ್ ನೀಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಪ್ರತಿಷ್ಠೆಗೆ ಬೀಳುತ್ತಿರುವ ರಾಜಕೀಯ ಪಕ್ಷಗಳು:
ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿಗೆ ಗೆದ್ದಿದ್ದಾರೆ ಎಂದು ಹೇಳುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಇದೀಗ ತಮ್ಮ ಗಮನವನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದತ್ತ ಹೆಚ್ಚು ಕೇಂದ್ರೀಕರಿಸುತ್ತಿವೆ. ಅನೇಕ ಕಡೆಗಳಲ್ಲಿ ಬಹುಮತಕ್ಕೆ ಬೇಕಾಗಿರುವ ಸಂಖ್ಯಾ ಬಲದ ಕೊರತೆಯನ್ನು ಎದುರಿಸುತ್ತಿದ್ದು, ಈ ಕೊರತೆಯನ್ನು ನೀಗಿಸಲು ಜಾತಿ, ಹಣವನ್ನು ಬಳಸಿಕೊಳ್ಳಲು ಮುಂದಾಗುತ್ತಿವೆ. ಅದರಲ್ಲೂ ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದು, ಅದರೊಂದಿಗೆ ಅನುದಾನದ ನೆಪವನ್ನು ಕೂಡ ಒಡ್ಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕೂಡ ಆ ಪಕ್ಷಕ್ಕೆ ಪ್ಲಸ್ ಆಗಲಿದ್ದು, ಹಾಗೆಂದು ಕಾಂಗ್ರೆಸ್ ಸುಮ್ಮನ್ನೆ ಕೂತಿಲ್ಲ. ಕೈ ಮುಖಂಡರು ತಮ್ಮ ಅನುಭವವನ್ನು ಬಳಸಿಕೊಂಡು, ಅಧಿಕಾರವನ್ನು ಪಡೆಯಲು ಯತ್ನ ನಡೆಸುತ್ತಿದ್ದಾರೆ. ಇನ್ನು ಜೆಡಿಎಸ್ ಎರಡೂ ಪಕ್ಷಗಳ ನಡುವೆ ಯಾರನ್ನು ನಂಬಬೇಕು ಎನ್ನುವ ಯೋಚನೆಯಲ್ಲಿದ್ದರೂ, ಸಾಧ್ಯವಾದ ಕಡೆಗಳಲ್ಲಿ ಅಧಿಕಾರವನ್ನು ತಮ್ಮವರಿಗೆ ಕೊಡಿಸುವುದರತ್ತ ಪ್ರಯತ್ನ ಮುಂದುವರೆಸಿದೆ.

ಮೀಸಲಾತಿ ಯಾವುದೇ ಬರಲಿ ಬಿಡಿ:
ಮೀಸಲಾತಿ ಪ್ರಕಟವಾಗುವವರೆಗೆ ಯಾರೂ ಏನೂ ಮಾಡುವಂತಿಲ್ಲ. ಆದರೆ ಗೆದ್ದವರು ಅದಾಗಲೇ ಗುಂಪು ರಚನೆ ಮಾಡಿಕೊಂಡಿದ್ದು, ತಮ್ಮ ತಮ್ಮಲ್ಲೇ ಮುಂದಿನ ಅಧ್ಯಕ್ಷ, ಉಪಾಧ್ಯಕ್ಷರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇತ್ತ ರಾಜಕೀಯ ಪಕ್ಷಗಳು ಹಿಂದಿನ ಮೀಸಲಾತಿ ಲೆಕ್ಕಾಚಾರದಲ್ಲಿ ಮುಂದಿನ ಯೋಜನೆ ರೂಪಿಸುತ್ತಿವೆ. ಮೀಸಲಾತಿ ಯಾವುದೇ ಬಂದರು ಅದಕ್ಕೆ ತಯಾರಾಗಿರುವ ರಾಜಕೀಯ ಪಕ್ಷಗಳು, ಗೆದ್ದಿರುವ ಎಲ್ಲಾ ಜಾತಿಯ ವ್ಯಕ್ತಿಯೊಬ್ಬರು ತಮ್ಮ ಗುಂಪಲ್ಲಿ ಇರುವಂತೆ ವ್ಯವಸ್ಥೆ ಮಾಡಿಕೊಂಡಿವೆ.ಈ ವೇಳೆ ಭಿನ್ನಮತವೇನಾದರೂ ಕಂಡು ಬಂದರೆ, ಇಬ್ಬರಿಗೆ ಎರಡೂವರೆ ವರ್ಷಗಳ ಅಧಿಕಾರಾವಧಿಯ ಆಫರ್ ಕೂಡ ನೀಡುತ್ತಿದ್ದು, ಹೇಗಾದರೂ ಆಗಲಿ, ಅಧಿಕಾರ ಮಾತ್ರ ತಮ್ಮ ಪಕ್ಷದ ಬೆಂಬಲಿತ ವ್ಯಕ್ತಿಯ ಕಡೆಗೆ ಇರಲಿ ಎನ್ನುವುದು ಎಲ್ಲಾ ಪಕ್ಷಗಳ ನಾಯಕರ ಲೆಕ್ಕಾಚಾರ.

ಇನ್ನೇನು ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಳ್ಳಲಿದೆ. ಅದಾಗಲೇ ನಡೆದಿರುವ ತೆರೆಮರೆಯ ಕಸರತ್ತು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಪ್ರಕಟವಾದ ಕೂಡಲೇ ಬಹಿರಂಗವಾಗಿ ಕಾಣಿಸಿಕೊಳ್ಳುತ್ತದೆ. ಆಗ ರಾಜಕೀಯ ಪಕ್ಷಗಳು ಕೂಡ ಬಹಿರಂಗವಾಗಿಯೇ ಹಳ್ಳಿ ಅಧಿಕಾರದ ಗದ್ದುಗೆ ಹಿಡಿಯುವುದು ಕೂಡ ಅಷ್ಟೇ ಸತ್ಯ. ಇದು ಕೇವಲ ಧಾರವಾಡ ಜಿಲ್ಲೆಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪರಿಸ್ಥಿತಿಯೂ ಕೂಡ ಇದೆ ಎನ್ನುವುದು ಸುಳ್ಳಲ್ಲ.

ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿಗಳಿಗೆ ಊರು ಬಿಟ್ಟವರೇ ಟಾ​ರ್ಗೆಟ್ ..!