ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿವೆ ಧಾರವಾಡದ ಮೆಂತ್ಯ, ಒಣಬೀಜ, ಹಸಿರುಕಾಳು!

ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಸಿರುಕಾಳು, ಮೆಂತ್ಯ ಮತ್ತು ಇತರ ಒಣ ಬೀಜಗಳನ್ನು ಕಳುಹಿಸಿದೆ. ಗಗನಯಾತ್ರಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಮತ್ತು ಬಾಹ್ಯಾಕಾಶ ಪರಿಸರದಲ್ಲಿ ಇವುಗಳ ಬೆಳೆಯುವ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಈ ಪ್ರಯೋಗ ಮಾಡಲಾಗುತ್ತಿದೆ. ಈ ಕುರಿತು ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಯೋಜನೆಯ ಪ್ರಧಾನ ಅಧಿಕಾರಿ ಡಾ. ರವಿಕುಮಾರ್ ಹೊಸಮನಿ ನೀಡಿರುವ ಮಾಹಿತಿ ಇಲ್ಲಿದೆ.

ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿವೆ ಧಾರವಾಡದ ಮೆಂತ್ಯ, ಒಣಬೀಜ, ಹಸಿರುಕಾಳು!
ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶಕ್ಕೆ ಹೋಗಿವೆ ಧಾರವಾಡದ ಮೆಂತ್ಯ, ಒಣಬೀಜ, ಹಸಿರುಕಾಳು! (ಸಾಂದರ್ಭಿಕ ಚಿತ್ರ)
Updated By: Ganapathi Sharma

Updated on: Jun 26, 2025 | 12:42 PM

ಧಾರವಾಡ, ಜೂನ್ 26: ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ -4 (Axiom-4 mission) ಕಾರ್ಯಾಚರಣೆಯ ಯಶಸ್ವಿ ಉಡಾವಣೆಯನ್ನು ಜಗತ್ತು ಸಂಭ್ರಮಿಸಿದೆ. ಇದರ ಜತೆ ಜತೆಗೇ ಧಾರವಾಡದ ಕೃಷಿ ವಿಶ್ವವಿದ್ಯಾಲಯ (UAS) ಕೂಡ ತನ್ನದೇ ಆದ ವಿಶಿಷ್ಟ ಮೈಲಿಗಲ್ಲನ್ನು ದಾಖಲಿಸಿದೆ. ಬಾಹ್ಯಾಕಾಶ ಆಧಾರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಹಸಿರುಕಾಳು ಮತ್ತು ಮೆಂತ್ಯ (ಮೇಥಿ) ಒಣ ಬೀಜಗಳನ್ನು ಕಳುಹಿಸಿದೆ. ಗಗನಯಾತ್ರಿಗಳು ಹೆಚ್ಚಾಗಿ ಬಾಹ್ಯಾಕಾಶದಲ್ಲಿ ಪೌಷ್ಠಿಕಾಂಶದ ಕೊರತೆ ಸೇರಿದಂತೆ ಗಮನಾರ್ಹ ಆರೋಗ್ಯ ಸವಾಲುಗಳನ್ನು ಎದುರಿಸುತ್ತಾರೆ. ಇದಕ್ಕೆ ಪರಿಹಾರವಾಗಿ ಬಾಹ್ಯಾಕಾಶದಲ್ಲಿ ತಾಜಾ, ಮೊಳಕೆಯೊಡೆದ ಆಹಾರ ಮೂಲಗಳಾಗಿ ಬಳಸಲು ಕೃಷಿ ವಿವಿಯು ಎರಡು ಭಾರತೀಯ ಆಹಾರ ಪ್ರಧಾನ ಬೆಳೆಗಳಾದ ಹಸಿರುಕಾಳು ಮತ್ತು ಮೆಂತ್ಯ ಬೀಜಗಳನ್ನು ಕಳುಹಿಸಿದೆ. ಇಷ್ಟೇ ಅಲ್ಲದೆ, ಪ್ರಯೋಗಗಳಿಗೂ ಇದು ಬಳಕೆಯಾಗುತ್ತದೆ ಎಂದು ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಯೋಜನೆಯ ಪ್ರಧಾನ ಅಧಿಕಾರಿ ಡಾ. ರವಿಕುಮಾರ್ ಹೊಸಮನಿ ‘ಟಿವಿ9’ ಕನ್ನಡ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

ಪ್ರಯೋಗ ಹೇಗೆ ನಡೆಯುತ್ತದೆ?

ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನಾವು ಕಳುಹಿಸಿರುವ ಬೀಜಗಳಿಗೆ ನೀರನ್ನು ಸೇರಿಸುವ ಮೂಲಕ ಬೀಜಗಳನ್ನು ಜೀವಂತ ಇಟ್ಟು, 2 ರಿಂದ 4 ದಿನಗಳಲ್ಲಿ ಮೊಳಕೆಯೊಡೆಯವಂತೆ ಮಾಡುತ್ತಾರೆ. ನಂತರ, ಬೀಜಗಳನ್ನು ಫ್ರೀಜ್ ಮಾಡಿ ಭೂಮಿಗೆ ಹಿಂತಿರುಗಿಸುವ ಮೊದಲು ನಿಲ್ದಾಣದಲ್ಲಿ ಸಂರಕ್ಷಿಸಲಾಗುತ್ತದೆ. ಅವುಗಳು ಹಿಂತಿರುಗಿದ ನಂತರ, ಕೃಷಿ ವಿವಿಯಲ್ಲಿ ಮೊಳಕೆಯ ಪ್ರಮಾಣವನ್ನು ಅವುಗಳ ಪೋಷಕಾಂಶ ಗುಣಮಟ್ಟವನ್ನು ಫೈಟೊಹಾರ್ಮೋನ್ ಡೈನಾಮಿಕ್ಸ್‌ನಲ್ಲಿನ ಬದಲಾವಣೆಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಗಳಿಗೆ ಹೊಂದುಕೊಳ್ಳುವ ಕುರಿತು ನಾವು ವಿಶ್ಲೇಷಿಸುತ್ತೇವೆ ಎಂದು ಡಾ. ರವಿಕುಮಾರ್ ಹೊಸಮನಿ ವಿವರಿಸಿದರು.

ಈ ಸಂಶೋಧನೆಯಿಂದ, ಭವಿಷ್ಯದಲ್ಲಿ ಅಂತರಿಕ್ಷಯಾನದ ವೇಳೆ ಭಾರತೀಯರ ಆಹಾರದ ಭಾಗವಾಗಿ ಆರೋಗ್ಯಕರ ಸಲಾಡ್‌ ಬಳಸಬಹುದೇ? ನಮ್ಮ ಧಾನ್ಯಗಳು ಪೂರಕವಾಗಲಿವೆಯೇ ಎಂಬುದನ್ನು ತಿಳಿಯುವುದು ನಮ್ಮ ಗುರಿ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ
ಗ್ರಾಹಕರಿಗೆ ಮತ್ತೊಂದು ಶಾಕ್: ಬೆಸ್ಕಾಂ ವಿದ್ಯುತ್ ಬಿಲ್ ನೋಡಿ ಜನ ಬೇಸ್ತು
ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ
ಬಾಹ್ಯಾಕಾಶದಿಂದ ಬಂದ ಶುಭಾಂಶು ಶುಕ್ಲಾರ ಮೊದಲ ಸಂದೇಶ

‘ಬಾಹ್ಯಾಕಾಶ ಕೃಷಿಗೆ ಹಸಿರು ಕಾಳು ಸೂಕ್ತ’

ಮೊಳಕೆಯೊಡೆದ ಬೀಜಗಳು ಪೌಷ್ಟಿಕವಾಗಿರುತ್ತವೆ ಎಂದು ತಿಳಿದುಬಂದಿದೆ. ಅನೇಕ ಸಲಾಡ್ ಸಸ್ಯಗಳಿಗಿಂತ ಹೆಚ್ಚಿನ ಆಹಾರ ಮೌಲ್ಯವನ್ನು ಇವು ನೀಡುತ್ತವೆ. ಭಾರತೀಯ ಪಾಕ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಹಸಿರುಕಾಳು, ಅರೆ-ಶುಷ್ಕ ಪರಿಸ್ಥಿತಿಗಳಲ್ಲಿ ಬೆಳೆಯುತ್ತದೆ ಮತ್ತು ಬಾಹ್ಯಾಕಾಶ ಕೃಷಿಗೆ ಸೂಕ್ತವಾಗಿದೆ. ಮತ್ತೊಂದೆಡೆ, ಮೆಂತ್ಯ ಪೌಷ್ಟಿಕಾಂಶದ ಸಂಯುಕ್ತಗಳಿಂದ ಸಮೃದ್ಧವಾಗಿದೆ ಮತ್ತು ರೋಗನಿರೋಧಕ ಶಕ್ತಿ, ಸುಧಾರಿತ ಮೂಳೆ ಆರೋಗ್ಯ, ಮೂತ್ರಪಿಂಡದ ಕಲ್ಲುಗಳ ಅಪಾಯ ಕಡಿಮೆ ಮತ್ತು ಹೃದಯ ರಕ್ತನಾಳದ ಬೆಂಬಲ ಸೇರಿದಂತೆ ಹಲವಾರು ಔಷಧೀಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಧಾರವಾಡ ಹೆಮ್ಮೆ…

ಹೆಸರುಕಾಳು ಹಾಗೂ ಮೆಂತ್ಯ ಬೀಜಗಳನ್ನು ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಕಳುಹಿಸಿರುವುದು ಧಾರವಾಡ ಕೃಷಿ ವಿವಿಗೆ ಹೆಮ್ಮೆಯ ವಿಚಾರವಾಗಿದೆ. ಅಲ್ಲಿಂದ ಹೆಪ್ಪುಗಟ್ಟಿದ ಈ ಕಾಳುಗಳ ಬೀಜಗಳನ್ನು ಮುಂದಿನ 14 ದಿನಗಳಲ್ಲಿ ಧಾರವಾಡದ ಕೃಷಿ ವಿವಿಗೆ ಹಿಂತಿರುಗಿಸುವ ನಿರೀಕ್ಷೆಯಿದೆ. ಅವು ಬಂದ ನಂತರ ಪೌಷ್ಟಿಕಾಂಶ ಮತ್ತು ಶಾರೀರಿಕ ನೆರವಿಗೆ ಸಂಬಂಧಿಸಿದ ವಿವರವಾದ ಮೌಲ್ಯಮಾಪನಗಳನ್ನು ಮಾಡಬಹುದು. ಈ ಯೋಜನೆಯನ್ನು ಐಐಟಿ-ಧಾರವಾಡದ ಅಸೋಸಿಯೇಟ್ ಪ್ರೊಫೆಸರ್ ಡಾ. ಸುಧೀರ್ ಸಿದ್ದಾಪುರರೆಡ್ಡಿ ಅವರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಎಂದು ಕೃಷಿ ವಿವಿಯ ಕುಲಪತಿ ಪ್ರೊ. ಪಿಎಲ್‌ ಪಾಟೀಲ ‘ಟಿವಿ9’ ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ನನ್ನ ಭುಜದ ಮೇಲೆ ತ್ರಿವರ್ಣ ಧ್ವಜವಿದೆ: ಬಾಹ್ಯಾಕಾಶದಿಂದ ಬಂದ ಶುಭಾಂಶು ಶುಕ್ಲಾರ ಮೊದಲ ಸಂದೇಶ

ಧಾರವಾಡ ವೈಜ್ಞಾನಿಕ ಪ್ರಗತಿಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ: ಪ್ರಲ್ಹಾದ್ ಜೋಶಿ

ಬಾಹ್ಯಾಕಾಶ ಕೃಷಿ ಮತ್ತು ಗಗನಯಾತ್ರಿಗಳ ಪೋಷಣೆಗೆ ಅಂತಾರಾಷ್ಟ್ರೀಯವಾಗಿ ಕೈಗೊಂಡಿರುವ ಮಹತ್ತರ ಅಧ್ಯಯನಕ್ಕೆ ಧಾರವಾಡದ ಅನನ್ಯ ಕೊಡುಗೆ ಸಲ್ಲುತ್ತಿದೆ. ವಿದ್ಯಾಕಾಶಿ ಆಗಿರುವ ಧಾರವಾಡ ಬಾಹ್ಯಾಕಾಶವರೆಗೆ ವಿಜ್ಞಾನ ಸ್ಫೂರ್ತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಟಿವಿ9’ ಕನ್ನಡ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ ಅವರು, ಬಾಹ್ಯಾಕಾಶ ಮತ್ತು ಗಗನಯಾತ್ರಿಗಳ ಪೋಷಣೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದ್ದು, ಧಾರವಾಡ ನಾವೀನ್ಯತೆ ಮತ್ತು ವೈಜ್ಞಾನಿಕ ಪ್ರಗತಿಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Thu, 26 June 25