AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಮಳೆ ಬರುತ್ತೆ ಅಂದ್ರೆ ಮಕ್ಕಳು ಶಾಲೆಗೆ, ಜನ್ರು ಕೆಲಸಕ್ಕೆ ಹೋಗುವುದನ್ನೇ ಬಿಡ್ತಾರೆ, ಏಕೆ ಗೊತ್ತಾ?

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಬಾಲಗಿರಿ ಗ್ರಾಮದಿಂದ ಬೆಣಚಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ 2019 ರಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿದ್ದು, ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಇದೀಗ ಮಳೆ ಹೆಚ್ಚಾದರೆ ಗ್ರಾಮದ ಜನರು ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜನರು ಕೆಲಸಕ್ಕೆ ಮತ್ತು ವಿದ್ಯಾರ್ಥಿಗಳು ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಧಾರವಾಡ: ಮಳೆ ಬರುತ್ತೆ ಅಂದ್ರೆ ಮಕ್ಕಳು ಶಾಲೆಗೆ, ಜನ್ರು ಕೆಲಸಕ್ಕೆ ಹೋಗುವುದನ್ನೇ ಬಿಡ್ತಾರೆ, ಏಕೆ ಗೊತ್ತಾ?
ಅರ್ಧ ಉಳಿದ ಸೇತುವೆ ದಾಟುತ್ತಿರುವ ಜನರು
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 27, 2025 | 9:29 AM

Share

ಧಾರವಾಡ, ಜೂನ್​ 27: ಜಿಲ್ಲೆಯಲ್ಲಿ ಗುರುವಾರದಿಂದ ನಾಲ್ಕು ದಿನಗಳ ಕಾಲ ಯೆಲ್ಲೋ ಅಲರ್ಟ್ (Yellow Alert) ಘೋಷಣೆಯಾಗಿದೆ. ಇದರಿಂದಾಗಿ ಜಿಲ್ಲೆಯ ಅಳ್ನಾವರ ತಾಲೂಕು ಸೇರಿದಂತೆ ಅನೇಕ ಕಡೆಗಳಲ್ಲಿ ಜನರಿಗೆ ಭೀತಿ ಆವರಿಸಿದೆ. ಅದರಲ್ಲೂ ಹಳ್ಳಗಳ ಅಕ್ಕಪಕ್ಕದ ಗ್ರಾಮಗಳ ಜನರಂತೂ ಮತ್ತೇನು ಅನಾಹುತಗಳಾಗುತ್ತವೋ ಅನ್ನೋ ಚಿಂತೆಯಲ್ಲಿದ್ದಾರೆ. ಇಂಥ ಗ್ರಾಮಗಳ ಪೈಕಿ ಬಾಲಗಿರಿ ಗ್ರಾಮವೊಂದು. ಅಲ್ಲಿ ಮಳೆ (rain) ಬರುತ್ತೆ ಅಂದರೆ ಮಕ್ಕಳು ಶಾಲೆಗೆ ಹೋಗುವುದನ್ನು ಬಿಡುತ್ತಾರೆ. ಅಷ್ಟೇ ಅಲ್ಲದೆ ಜನರು ಕೆಲಸಕ್ಕೆ ಹೋಗುವುದನ್ನೇ ಬಿಡುತ್ತಾರೆ.

ಮಳೆ ಹೆಚ್ಚಾದ್ರೆ ಅರ್ಧ ಉಳಿದಿರುವ ಸೇತುವೆ ಕೂಡ ನೀರು ಪಾಲು

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಬಾಲಗಿರಿ ಗ್ರಾಮದಿಂದ ಬೆಣಚಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ 2019 ರಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿತ್ತು. ಅದಾದ ಬಳಿಕ ಜಿಲ್ಲಾಡಳಿತಕ್ಕೆ ಎಷ್ಟೇ ಮನವಿ ಮಾಡಿದರೂ ಇತ್ತ ಗಮನ ಹರಿಸದೇ ಇರೋದ್ರಿಂದ ಸ್ಥಳೀಯರೆಲ್ಲ ಸೇರಿ ತಾವೇ ತಾತ್ಕಾಲಿಕವಾಗಿ ಮಣ್ಣನ್ನು ಹಾಕಿ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ ಅದು ಕೂಡ ನೀರಿನ ಹೊಡೆತಕ್ಕೆ ಕೊಚ್ಚಿಕೊಂಡು ಹೋಯಿತು.

Bridge

ಅಂದಿನಿಂದ ಇಂದಿನವರೆಗೂ ಇದೇ ಸ್ಥಿತಿಯಲ್ಲಿಯೇ ಜನರು ಈ ಹಳ್ಳವನ್ನು ದಾಟಬೇಕಿದೆ. ಇದೀಗ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚಾದರೆ ಅರ್ಧ ಉಳಿದಿರುವ ಸೇತುವೆ ಮೇಲೆ ನೀರು ಹರಿಯಲು ಶುರುವಾಗುತ್ತೆ. ಅಲ್ಲಿಗೆ ಗ್ರಾಮದ ಜನರು ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ಬೆಣ್ಣೆಹಳ್ಳ, ಬಿತ್ತಿದ ಜಮೀನುಗಳು ಹಾಳಾಗಿ ರೈತರು ಕಂಗಾಲು, ನೆರವಿಗೆ ಬಾರದ ಸರ್ಕಾರ

ಹೀಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದಂತೆಯೇ ಮೊದಲಿಗೆ ಸಮಸ್ಯೆ ಶುರುವಾಗುವುದು ಕಬ್ಬು ಬೆಳೆಯುವ ರೈತರಿಗೆ. ಈ ಹಳ್ಳವನ್ನು ದಾಟಿ ಸಾವಿರಾರು ಎಕರೆ ಕಬ್ಬು ಬೆಳೆಯ ಗದ್ದೆಗಳಿವೆ. ಕಬ್ಬು ಕಟಾವು ಆರಂಭವಾದರೆ ಟ್ರಾಕ್ಟರ್​ಗಳು ಇದೇ ಹಳ್ಳದ ಮೂಲಕ ಕಾರ್ಖಾನೆಗೆ ಕಬ್ಬನ್ನು ಸಾಗಿಸಬೇಕು. ಆದರೆ ಇದೀಗ ಸೇತುವೆಯೇ ಕೊಚ್ಚಿ ಹೋಗಿರೋದ್ರಿಂದ ಮುಂದೇನು ಮಾಡುವುದು ಅಂತಾ ರೈತರು ಸಂಕಷ್ಟದಲ್ಲಿದ್ದಾರೆ. ಇದೆಲ್ಲ ಒಂದು ಕಡೆಯಾದರೆ, ಈ ಗ್ರಾಮದಲ್ಲಿ ಸುಮಾರು 10 ವಿದ್ಯಾರ್ಥಿಗಳು ಇದ್ದಾರೆ. ಆದರೆ ಅಲ್ಲಿ ಶಾಲೆ ಇಲ್ಲ. ಹೀಗಾಗಿ ಅವರೆಲ್ಲ ಪಕ್ಕದ ಬೆಣಚಿ ಗ್ರಾಮಕ್ಕೆ ಹೋಗಬೇಕು. ಆದರೆ ಅಲ್ಲಿಗೆ ಹೋಗಬೇಕೆಂದರೆ ಈ ಹಳ್ಳವನ್ನು ದಾಟಲೇಬೇಕು. ಈ ಹಳ್ಳದಲ್ಲಿ ನೀರು ಬಂದರೆ ಸಾಕು ಅದು ಕಡಿಮೆಯಾಗುವವರೆಗೂ ವಿದ್ಯಾರ್ಥಿಗಳು ಶಾಲೆಯನ್ನೇ ಮರೆಯೋ ಸ್ಥಿತಿ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: ರಾಜ್ಯದ ಹಲವಾರು ಭಾಗಗಳಲ್ಲಿ ಧಾರಾಕಾರ ಮಳೆ; ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ

ಇತ್ತೀಚಿಗೆ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ತಾತ್ಕಾಲಿಕವಾಗಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸೇತುವೆಯನ್ನು ದುರಸ್ತಿ ಮಾಡಿಕೊಡೋದಾಗಿ ಹೇಳಿದ್ದಾರೆ. ಆದರೆ ಅದಕ್ಕೆ ಸ್ಥಳೀಯರು ಒಪ್ಪಿಲ್ಲ. ಹೀಗಾಗಿ ಇದೀಗ ಎರಡು ಕೋಟಿ ರೂಪಾಯಿ ಅನುದಾನದಲ್ಲಿ ಹೊಸ ಸೇತುವೆಗೆ ಪ್ರಸ್ತಾವನೆ ಕಳಿಸಲಾಗಿದ್ದು, ಅದಕ್ಕೆ ಇಷ್ಟರಲ್ಲಿಯೇ ಅನುಮೋದನೆ ಸಿಗಲಿದ್ದು, ಮಳೆಗಾಲ ಮುಗಿಯುತ್ತಿದ್ದಂತೆಯೇ ಶಾಶ್ವತ ಸೇತುವೆ ನಿರ್ಮಾಣದ ಕೆಲಸ ಆರಂಭಿಸುವುದಾಗಿ ಹೇಳಿದ್ದಾರೆ. ಆದಷ್ಟು ಬೇಗನೇ ಈ ಸೇತುವೆ ಸಿದ್ಧಗೊಂಡು, ಇಲ್ಲಿಯ ಜನರ ಸಂಕಷ್ಟವನ್ನು ದೂರ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:46 am, Fri, 27 June 25