
ಹುಬ್ಬಳ್ಳಿ, ಅಕ್ಟೋಬರ್ 27: ಅದು ಉತ್ತರ ಕರ್ನಾಟಕದ ಸುಪ್ರಸಿದ್ದ ಸರ್ಕಾರಿ ಆಸ್ಪತ್ರೆ. ಅಲ್ಲಿ ರೋಗಿಗಳಿಗೆ ಹೊರಗಿನಿಂದ ಮಾತ್ರೆ ಮತ್ತು ಇಂಜೆಕ್ಷನ್ (Injection) ಬರೆದುಕೊಡದಂತೆ ಸೂಚನೆ ಇದೆ. ಹೀಗಿದ್ದರೂ ಹೊರಗಿನಿಂದ ಇಂಜೆಕ್ಷನ್ ತರುವಂತೆ ವೈದ್ಯರು ಹೇಳಿದ್ದರಂತೆ. ಹೀಗಾಗಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಮಗಳಿಗಾಗಿ ತಂದೆ (Father) ಹತ್ತಾರು ಕಿ.ಮೀ ಓಡಿಕೊಂಡು ನಗರದ ವಿವಿಧ ಮೆಡಿಕಲ್ಗಳನ್ನು ಸುತ್ತುಹಾಕಿರುವ ಮನಕಲಕುವ ಘಟನೆ ನಡೆದಿದೆ.
ವೈದ್ಯರ ಅದೊಂದು ಮಾತಿಗೆ ರಾತ್ರಿ ಸಮಯದಲ್ಲಿ ವ್ಯಕ್ತಿ ಪಟ್ಟ ಪಡಿಪಾಟಿಲು ಕೇಳಿದರೆ ನೀವು ಶಾಕ್ ಆಗುತ್ತೀರಾ. ರಾತ್ರಿ ಸಮಯದಲ್ಲಿ ಒಂದು ಏರಿಯಾದಿಂದ ಮತ್ತೊಂದು ಏರಿಯಾಕ್ಕೆ, ಒಂದು ಮೆಡಿಕಲ್ ಶಾಪ್ ನಿಂದ ಮತ್ತೊಂದು ಮೆಡಿಕಲ್ ಶಾಪ್ಗೆ ಓಡಾಡಿ ಸುಸ್ತಾಗಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ ಇಯರ್ಫೋನ್ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಂಗಳೂರಿನ ಆಟೋ ಚಾಲಕ!
ಗದಗ ಜಿಲ್ಲೆಯ ನರಗುಂದ ನಿವಾಸಿ ದಾವಲಸಾಬ್ ಎನ್ನುವವರ ಒಂದುವರೆ ವರ್ಷದ ಪುತ್ರಿ ತಸ್ಮೀಯಾ ಮನೆ ಮುಂದೆ ಇದ್ದ ವಿಷಕಾರಿ ಗುಲಗಂಜಿ ಗಿಡದ ಎಲೆಗಳನ್ನು ತಿಂದಿದ್ದಳಂತೆ. ಎಲೆಗಳನ್ನು ತಿಂದ ಮೇಲೆ ಬಾಲಕಿ ಅಸ್ವಸ್ಥಳಾಗಿದ್ದಳು. ಹೀಗಾಗಿ ಸ್ಥಳೀಯ ಆಸ್ಪತ್ರೆಗೆ ಹೆತ್ತವರು ಬಾಲಕಿಯನ್ನು ಕರೆದುಕೊಂಡು ಹೋಗಿದ್ದರಂತೆ. ಆದರೆ ಹೆಚ್ಚಿನ ತುರ್ತು ಚಿಕಿತ್ಸೆ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಅಕ್ಟೋಬರ್ 25 ರಂದು ರಾತ್ರಿ ಸಮಯದಲ್ಲಿ ಬಾಲಕಿಯನ್ನು ಕಿಮ್ಸ್ಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ತಪಾಸಣೆ ಮಾಡಿದ ವೈದ್ಯರು, ಬಾಲಕಿಗೆ ಪೈಸೋಸ್ಟಿಗಮನ್ ಎಂಬ ಇಂಜೆಕ್ಷನ್ ಬೇಕು. ಅದು ಕಿಮ್ಸ್ನಲ್ಲಿ ಸಿಗುವುದಿಲ್ಲ, ಹೊರಗಡೆಯಿಂದ ತರುವಂತೆ ಹೇಳಿದ್ದಾರೆ. ವೈದ್ಯರ ಮಾತಿನ ಹಿನ್ನೆಲೆ ದಾವಲಸಾಬ್, ಮಧ್ಯರಾತ್ರಿ 12 ರಿಂದ 2 ಗಂಟೆವರಗೆ ಹುಬ್ಬಳ್ಳಿ ನಗರದ ವಿವಿಧ ಖಾಸಗಿ ಆಸ್ಪತ್ರೆಯ ಮೆಡಿಕಲ್, ಬೇರೆ ಬೇರೆ ಮೆಡಿಕಲ್ ಶಾಪ್ಗಳಿಗೆ ಅಲೆದಿದ್ದಾರೆ. ಅಡ್ಡಾಡಲು ಬೈಕ್ ಕೂಡ ಇಲ್ಲದೇ ಹತ್ತಾರು ಕಿ.ಮೀ ನಡೆದುಕೊಂಡು, ಓಡಿಕೊಂಡು ಹೋಗಿದ್ದಾರೆ.
ದಾವಲಸಾಬ್ ಓಡಿಕೊಂಡು ಹೋಗುವುದನ್ನು ಗಮನಿಸಿದ ಶ್ರೀಧರ್ ಎಂಬ ವ್ಯಕ್ತಿ, ದಾವಲಸಾಬ್ರನ್ನ ಮಾತನಾಡಿಸಿದ್ದಾರೆ. ಆಗ ಆತ ತನ್ನ ಗೋಳನ್ನು ಹೇಳಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಮಾಡಲಾಗಿದ್ದು, ಸದ್ಯ ಎಲ್ಲಡೆ ವೈರಲ್ ಆಗಿದೆ. ಇನ್ನು ಸ್ವತ ಶ್ರೀಧರ್, ದಾವಲಸಾಬ್ರನ್ನು ತಮ್ಮ ಬೈಕ್ ಮೇಲೆ ಹತ್ತಿಸಿಕೊಂಡು ಅನೇಕ ಮೆಡಿಕಲ್ ಶಾಪ್ಗೆ ತೆರಳಿದರೂ ಕೂಡ ಎಲ್ಲಿಯೂ ಪೈಸೋಸ್ಟಿಗಮನ್ ಇಂಜೆಕ್ಷನ್ ಸಿಕ್ಕಿಲ್ಲ. ಹೀಗಾಗಿ ಪೈಸೋಸ್ಟಿಗಮನ್ಗೆ ಪರ್ಯಾಯವಾಗಿರುವ ನಿಯೋಸ್ಟಿಗಮನ್ ಇಂಜೆಕ್ಷನ್ನನ್ನು ವೈದ್ಯರು ನೀಡಿದ್ದು, ಬಾಲಕಿ, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕಿಮ್ಸ್ ವೈದ್ಯರು, ಬಾಲಕಿಗೆ ಬೇಕಾದ ಎಲ್ಲಾ ರೀತಿಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ, ಪೈಸೋಸ್ಟಿಗಮನ್ ಇಂಜೆಕ್ಷನ್, ನಮ್ಮ ಔಷಧಿಗಳ ಸಂಗ್ರಹದ ಪಟ್ಟಿಯಲ್ಲಿಲ್ಲ. ಅದಕ್ಕೆ ಪರ್ಯಾಯವಾಗಿ ನಿಯೋಸ್ಟಿಗಮನ್ ಇಂಜೆಕ್ಷನ್ ಇದ್ದು, ಅದು ಸ್ಟಾಕ್ ಇದೆ. ಅದನ್ನು ನೀಡಲಾಗಿದೆ. ಆದರೆ ನಾವು ಬಾಲಕಿ ಸಂಬಂಧಿಗೆ ಹೊರಗಿನಿಂದ ಇಂಜೆಕ್ಷನ್ ತರುವಂತೆ ಹೇಳಿರಲಿಲ್ಲ ಎಂದಿದ್ದಾರೆ.
ನಮ್ಮ ವೈದ್ಯರು ಈ ಇಂಜೆಕ್ಷನ್ ನೀಡಿದರೆ ಬೇಗನೆ ಗುಣಮುಖಳಾಗುತ್ತಾಳೆ ಅಂತ ಹೇಳಿದನ್ನು ಕೇಳಿ, ಅವರೇ ಗೂಗಲ್ನಲ್ಲಿ ಡೌನಲೋಡ್ ಮಾಡಿಕೊಂಡಿದ್ದಾರೆ. ಅವರಿಗೆ ನಮ್ಮ ಸಿಬ್ಬಂದಿ ಸಹಾಯ ಕೂಡ ಮಾಡಿದ್ದಾರೆ. ಆದರೆ ನಾವಾಗಿಯೇ ಇಂಜೆಕ್ಷನ್ ತರುವಂತೆ ಹೇಳಿಲ್ಲ ಎಂದಿದ್ದಾರೆ.
ಸದ್ಯ ದಾವಲಸಾಬ್ ಇಂಜೆಕ್ಷನ್ಗಾಗಿ ಮಧ್ಯರಾತ್ರಿ ಪರದಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಮ್ಸ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಕಿಮ್ಸ್ನವರು ಮಾತ್ರ ಆರೋಪಗಳನ್ನು ಅಲ್ಲಗಳೆಯುತ್ತಿದ್ದಾರೆ. ಆದರೆ ಹುಬ್ಬಳ್ಳಿ ಕಿಮ್ಸ್ನಲ್ಲಿ ಹತ್ತಾರು ಸಮಸ್ಯೆಗಳಿದ್ದು, ಅದರಲ್ಲಿ ಮಾತ್ರೆ ಮತ್ತು ಇಂಜೆಕ್ಷನ್ಗಳನ್ನು ಹೊರಗಡೆ ಬರೆದುಕೊಡುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇನ್ನಾದರೂ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:53 pm, Mon, 27 October 25