ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗಾಗಿ ಹಿಂದೂ ಸಂಘಟನೆಗಳ ಪಟ್ಟು: ಅನುಮತಿ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Aug 24, 2022 | 6:44 PM

ನಾಳೆ ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಗಣೇಶೋತ್ಸವ ಆಚರಣೆಗೆ ಅನುಮತಿ‌ ನೀಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಈಗಾಗಲೇ ಪಾಲಿಕೆಗೆ ಮೂರು ಬಾರಿ ಮನವಿ ಮಾಡಲಾಗಿದೆ. ಕೊನೆಯ ಗಡುವು ಸಹ ನೀಡಲಾಗಿದೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗಾಗಿ ಹಿಂದೂ ಸಂಘಟನೆಗಳ ಪಟ್ಟು: ಅನುಮತಿ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನ
Follow us on

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ(Ganeshotsav Celebration) ಅನುಮತಿ ನೀಡಿ ಎಂದು ಹು-ಧಾ ಮಹಾನಗರ ಪಾಲಿಕೆ ಕಚೇರಿ ಎದುರು ಹಿಂದೂ ಸಂಘಟನೆಗಳು(Hindu Organizations) ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀರಾಮ ಸೇನೆ, ವಿಹೆಚ್ಪಿ, ಬಜರಂಗದಳ, ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಧಿಡೀರ್ ಪ್ರತಿಭಟನೆ ನಡೆಸುತ್ತಿವೆ. ಹಾಗೂ ಸಾರ್ವಜನಿಕ‌ ಗಣೇಶೋತ್ಸವ ಆಚರಣೆಗೆ ಅನುಮತಿ‌ ನೀಡಲೇಬೇಕು ಎಂದು ಪಟ್ಟು ಹಿಡಿದಿವೆ.

ನಾಳೆ ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಗಣೇಶೋತ್ಸವ ಆಚರಣೆಗೆ ಅನುಮತಿ‌ ನೀಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಈಗಾಗಲೇ ಪಾಲಿಕೆಗೆ ಮೂರು ಬಾರಿ ಮನವಿ ಮಾಡಲಾಗಿದೆ. ಕೊನೆಯ ಗಡುವು ಸಹ ನೀಡಲಾಗಿದೆ. ಮೂರು ಬಾರಿ ಮನವಿ ಸಲ್ಲಿಸಿದರೂ ಪಾಲಿಕೆಯಿಂದ ಸ್ಪಂದನೆ ದೊರೆಯುತ್ತಿಲ್ಲ ಎಂದು ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಒಂದು ವೇಳೆ ಅನುಮತಿ ನೀಡದಿದ್ದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿವೆ. ಮುಂದಾಗುವ ಅನಾಹುತಗಳಿಗೆ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ನೇರ ಹೊಣೆ ಎಂದು ಪಾಲಿಕೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹಿಂದೂ ಸಂಘಟನೆಗಳ ಮನವಿ ಸ್ವಿಕರಿಸಿದ ಮೇಯರ್

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶಕ್ಕಾಗಿ ಹೋರಾಟ ನಡೆಯುತ್ತಿದೆ ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹಿಂದೂ ಸಂಘಟನೆಗಳ ಮನವಿ ಸ್ವಿಕರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾಳೆ ಪಾಲಿಕೆಯ ಸಾಮಾನ್ಯ ಸಭೆ ಇದೆ. ಈ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ವಿಶೇಷ ವಿಷಯ ಅಂತ ಚರ್ಚೆಗೆ ತೆಗೆದುಕೊಳ್ಳುತ್ತೇವೆ. ಸರ್ವ ಪಕ್ಷದ ಸದಸ್ಯರ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಕಾನೂನಾತ್ಮಕವಾಗಿ ಈ ಬಗ್ಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

Published On - 5:52 pm, Wed, 24 August 22