ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿದೆ ಡ್ರಗ್ಸ್​, ಗಾಂಜಾ! ಈ ಕುರಿತು ವಿಶೇಷ ವರದಿ ಇಲ್ಲಿದೆ

|

Updated on: Jun 29, 2024 | 9:00 AM

ಹುಬ್ಬಳ್ಳಿಯಲ್ಲಿ ಎರಡು ತಿಂಗಳ ಹಿಂದೆ ಇಬ್ಬರು ಯುವತಿಯರ ಕೊಲೆಗಳಾದವು. ಈ ಕೊಲೆ ಮಾಡಿದ ಆರೋಪಿಗಳು ಮಾದಕ ವಸ್ತು ವ್ಯಸನಿಗಳು ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಮಾದಕ ವಸ್ತು ಜಾಲ ಪತ್ತೆಗಾಗಿ ಟಿವಿ9 ಗ್ರೌಂಡ್​ಗೆ ಇಳಿದಾಗ ಗೊತ್ತಾಗಿದ್ದು, ನಗರದ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲೇ ಮಾದಕ ವಸ್ತು ಸಿಗುತ್ತಿದೆ ಎಂದು. ಈ ಕುರಿತು ಒಂದು ವರದಿ ಇಲ್ಲಿದೆ.

ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿದೆ ಡ್ರಗ್ಸ್​, ಗಾಂಜಾ! ಈ ಕುರಿತು ವಿಶೇಷ ವರದಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ನಾನು ಇಂಜಿನಿಯರ್​, ಡಾಕ್ಟರ್​​, ಐಎಎಸ್​ ಅಥವಾ ಕೆಎಎಸ್​ ಆಫೀಸರ್​​​ ಆಗಬೇಕು ಅಂತ ಅನೇಕ ಯುವಕರು ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಮೆಟ್ಟಿಲು ಹತ್ತುತ್ತಾರೆ. ಅದೇ ರೀತಿಯಾಗಿ ತಂದೆ-ತಾಯಿಗಳು ಮಕ್ಕಳ ಭವಿಷ್ಯದ ಬಗ್ಗೆ ನಾನಾ ಕನಸುಗಳನ್ನು ಕಂಡಿರುತ್ತಾರೆ. ನನ್ನ ಮಗ ಅಥವಾ ಮಗಳು ಚೆನ್ನಾಗಿ ಓದಿ, ಉನ್ನತ ಹುದ್ದೆ ಅಲಂಕರಿಸುತ್ತಾರೆ, ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಾರೆ ಅಂತ ಅಂದುಕೊಂಡಿರುತ್ತಾರೆ. ಅನೇಕ ಕನಸುಗಳನ್ನು ಹೊತ್ತು ಬಂದ ಯುವಕ-ಯುವತಿಯರಲ್ಲಿ ಕೆಲವರು ಚೆನ್ನಾಗಿ ಓದಿ ಉನ್ನತ ಹುದ್ದೆ ಅಲಂಕರಿಸಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗುತ್ತಾರೆ. ಆದರೆ, ಇನ್ನು ಕೆಲ ಯುವಕ-ಯುವತಿಯರು ಕಾಲೇಜು ಹಂತದಲ್ಲಿ ಕೆಟ್ಟ ಮಾರ್ಗದಲ್ಲಿ ಸಾಗಿ ಚಟಗಳಿಗೆ ದಾಸರಾಗುತ್ತಾರೆ. ಕಂಡ ಕನಸನ್ನು ನುಚ್ಚು ನೂರಾಗಿಸಿಕೊಳ್ಳುತ್ತಾರೆ.

ಮಕ್ಕಳು ಅಥವಾ ವಿದ್ಯಾರ್ಥಿಗಳು ಅಡ್ಡ ದಾರಿ ಹಿಡಿದರೆ ತಿದ್ದಿ ಬುದ್ದಿ ಹೇಳಬೇಕಾದವರು ತಂದೆ, ತಾಯಿ, ಶಿಕ್ಷಕರು. ಮಕ್ಕಳು ಕೆಟ್ಟ ದಾರಿಗೆ ಸಾಗದಂತೆ ಕಣ್ಣಿಡುವುದು ತಂದೆ-ತಾಯಿ ಬಿಟ್ಟರೆ ವಿದ್ಯಾಸಂಸ್ಥೆ ಮಾತ್ರ. ಆದರೆ ಅದೇ ವಿದ್ಯಾಸಂಸ್ಥೆಯ ವಸತಿ ನಿಲಯಗಳಲ್ಲಿ ಮತ್ತು ಆವರಣದಲ್ಲಿ ಯಾರಿಗೂ ತಿಳಿಯದಂತೆ ವಿದ್ಯಾರ್ಥಿಗಳು ದುಷ್ಚಟಗಳನ್ನು ಮಾಡುತ್ತಿದ್ದರೆ ಏನರ್ಥ? ಭಾರತದ ಭವಿಷ್ಯ ಏನು? ಎಂಬ ಪ್ರಶ್ನೆ ಮೂಡುವುದು ಸಹಜ. ಇದೇ ವಿಚಾರವಾಗಿ ಹುಬ್ಬಳ್ಳಿ (Hubballi) ಮಹಾನಗರದಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್​ (Drugs) ಮತ್ತು ಗಾಂಜಾದಂತಹ (Ganja) ಮಾದಕ ವಸ್ತುಗಳ ದಾಸರಾಗಿದ್ದಾರೆ ಎಂಬುವು ಖೇದದ ಸಂಗತಿ.

ಹುಬ್ಬಳ್ಳಿಯ ಪ್ರತಿಷ್ಠಿತ ಮಾಹವಿದ್ಯಾಲಯದ ವಸತಿ ನಿಲಯ ಮತ್ತು ಖಾಸಗಿ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳು ಡ್ರಗ್ಸ್​​ ಮತ್ತು ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ. ನಗರದ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಓರ್ವ ವಿದ್ಯಾರ್ಥಿ ತನ್ನ ಸಹಪಾಠಿಗಳು ಡ್ರಗ್ಸ್​ ಮತ್ತು ಗಾಂಜಾಕ್ಕೆ ದಾಸನಾಗಿರುವ ಬಗ್ಗೆ ಎಳೆ ಎಳೆಯಾಗಿ ಟಿವಿ9 ಡಿಜಿಟಲ್ ಮುಂದೆ​ ಬಿಚ್ಚಿಟ್ಟಿದ್ದಾನೆ.

ವಿದ್ಯಾರ್ಥಿಯ ಮಾತು

“ನನ್ನ ಸ್ನೇಹಿತರ ಗುಂಪಿನಲ್ಲಿ ಕೆಲವರು ಈ ಡ್ರಗ್ಸ್​ ಮತ್ತು ಗಾಂಜಾ ಚಟಕ್ಕೆ ದಾಸರಾಗಿದ್ದಾರೆ. ಒಂದು ದಿನ ಗಾಂಜಾ ಅಥವಾ ಡ್ರಗ್ಸ್​ ತೆಗೆದುಕೊಳ್ಳದಿದ್ದರೆ ಜೀವ ಹೋದವರ ಹಾಗೆ ಆಡುತ್ತಾರೆ. ನಾನು ಇರುವ ವಸತಿ ನಿಲಯದಲ್ಲಿ ನನ್ನ ಸಹಪಾಠಿಗಳು, ಜೂನಿಯರ್ಸ್​​, ಸೀನಿಯರ್ಸ್​ ಡ್ರಗ್ಸ್​ ಸೇವಿಸುತ್ತಿದ್ದಾರೆ. ಡ್ರಗ್ಸ್​ ಸೇವಿಸಬೇಡಿ ಅಂತ ನನ್ನ ಸಹಪಾಠಿಗಳಿಗೆ, ಜೂನಿಯರ್ಸ್​ಗೆ ಅನೇಕ ಬಾರಿ ನಾನು ಹೇಳಿದರೂ ಅವರು ನನ್ನ ಮಾತು ಕೇಳುತ್ತಿಲ್ಲ. ಮತ್ತು ಹೀಗೆ ಡ್ರಗ್ಸ್​ ಮತ್ತು ಗಾಂಜಾಕ್ಕೆ ಚಟಕ್ಕೆ ತುತ್ತಾದವರಲ್ಲಿ ಶ್ರೀಮಂತರ ಮಕ್ಕಳಕ್ಕಿಂತ, ಮಧ್ಯಮ ವರ್ಗದವರ ಮಕ್ಕಳೇ ಹೆಚ್ಚು.

ನನ್ನ ವಸತಿ ನಿಲಯವಂತೂ ಡ್ರಗ್ಸ್​ ಮತ್ತು ಗಾಂಜಾ ಅಡ್ಡೆಯಾಗಿ ಬಿಟ್ಟಿದೆ. ವಿದ್ಯಾಭ್ಯಾಸಕ್ಕೆ ಖರ್ಚು ಮಾಡುವ ಹಣಕ್ಕಿಂತ ಈ ಮಾದಕ ವಸ್ತುಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಾರೆ. ನಮ್ಮ ಮಹಾವಿದ್ಯಾಲಯಕ್ಕೆ ಸಂಬಂಧಿಲ್ಲದ ಓರ್ವ ವ್ಯಕ್ತಿ ಪ್ರತಿದಿನ ಡ್ರಗ್ಸ್​ ತಂದು ಕೊಡುತ್ತಾನೆ. ನನ್ನ ಸ್ನೇಹಿತರು ಆತನಿಗೆ ಹಣ ನೀಡಿ, ಮಾದಕ ವಸ್ತು ಪಡೆಯುತ್ತಾರೆ. ಸಿನಿಮಾದಲ್ಲಿ ತೋರಿಸುವ ಹಾಗೆ ಈ ಮಾದಕ ವಸ್ತುವನ್ನು ಒಬ್ಬನೇ ಎಲ್ಲರಿಗೂ ಸಪ್ಲೈ ಮಾಡುತ್ತಾನೆ ಅಂದರೆ ನಿಮ್ಮ ಊಹೆ ತಪ್ಪು. ಡ್ರಗ್ಸ್​ ಅಥವಾ ಗಾಂಜಾ ಸೇವಿಸುವ ಪ್ರತಿಯೊಬ್ಬನು ತನ್ನದೇಯಾದ ಸರ್ಕಲ್​ ಹೊಂದಿದ್ದಾನೆ. ಪ್ರತಿಯೊಬ್ಬನಿಗೂ ಬೇರೆ ಬೇರೆ ವ್ಯಕ್ತಿ ಸಪ್ಲೈ ಮಾಡುತ್ತಾನೆ.

ಈ ವ್ಯಕ್ತಿ ತಂದು ಕೊಡುವ ಡ್ರಗ್ಸ್​ ಸರಿ ಇಲ್ಲದಿದ್ದರೇ, ನನ್ನ ಸ್ನೇಹಿತರು ಕಾಲೇಜು ಮುಗಿದ ಬಳಿಕ ಬೈಕ್​ ಏರಿ ಬೆಳಗಾವಿಗೆ ಹೋಗುತ್ತಾರೆ. ಅಲ್ಲಿ ಮಾದಕ ವಸ್ತು ಖರೀದಿಸಿ ಮರಳಿ ವಸತಿ ನಿಲಯಕ್ಕೆ ಬಂದು, ರಾತ್ರಿಯಲ್ಲ ಸೇವಿಸುತ್ತಾ ಕೂರುತ್ತಾರೆ. ಬೆಳಗಾವಿಯಲ್ಲಿ ಮಾರುವ ವ್ಯಕ್ತಿ, ಓರ್ವ ಪ್ರಭಾವಿ ರಾಜಕಾರಣಿಯ ಪುತ್ರ ಎಂದು ನನಗೆ ನನ್ನ ಸ್ನೇಹಿತರು ಹೇಳಿದ ನೆನಪು. ಈ ಮಾದಕ ವಸ್ತುವನ್ನು ಎಷ್ಟು ಚಾಣಚಕ್ಷತೆಯಿಂದ ಸಪ್ಲೈ ಮಾಡುತ್ತಾರೆ ಅಂದರೆ ತನಗೆ ಸಪ್ಲೈ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಕೊಂಡುಕೊಳ್ಳುವವನಿಗೆ ಏನು ಗೊತ್ತಿರುವುದಿಲ್ಲ.

ಬೆಳಗಾವಿಯಿಂದ ತರುವ ಡ್ರಗ್ಸ್​ ಬಹಳ ಚೆನ್ನಾಗಿರುತ್ತದೆ ಎಂದು ಸ್ನೇಹಿತರು ನನ್ನ ಬಳಿ ಅನೇಕ ಬಾರಿ ಹೇಳಿದ್ದು ಉಂಟು. ಬೆಳಗಾವಿಯಿಂದ ಡ್ರಗ್ಸ್​ ಬಂದಿದೆ ಅಂತ ಇತರರಿಗೆ ಸುದ್ದಿ ಗೊತ್ತಾದರೆ ಸಾಕು ಅವರು ಕುಣಿದು ಕುಪ್ಪಳಿಸುತ್ತಾರೆ.  ಏಕೆಂದರೆ ಬೆಳಗಾವಿಯಿಂದ ಬಂದ ಡ್ರಗ್ಸ್​ ತುಂಬಾ ಚೆನ್ನಾಗಿರುತ್ತದೆ ಅಂತೆ. ಮತ್ತು ಇಲ್ಲಿ ಮಾದಕ ವಸ್ತು ಸೇವಿಸುವವರು ಯಾರ ಮೇಲೂ ಅವಲಂಬಿತರಾಗಿರುವುದಿಲ್ಲ. ಇವರಿಗೆ ಡ್ರಗ್ಸ್​ ಎಲ್ಲಿ ಸಿಗುತ್ತದೆ, ಯಾರು ಮಾರಾಟ ಮಾಡುತ್ತಾರೆ ಎಲ್ಲವೂ ತಿಳಿದಿರುತ್ತದೆ.

ಇಲ್ಲಿ ಮಾದಕ ವಸ್ತು ಸಪ್ಲೈ ಎರಡು ರೀತಿ ನಡೆಯುತ್ತದೆ. ಕಾಲೇಜುಗಳಿಗೆ ಸಪ್ಲೈ ಮಾಡುವವರೆ ಬೇರೆ ಮತ್ತು ಹುಬ್ಬಳ್ಳಿ ನಗರದಲ್ಲಿ ಸಪ್ಲೈ ಮಾಡುವವರೆ ಬೇರೆ. ಹುಬ್ಬಳ್ಳಿ ನಗರಕ್ಕೆ ಸಪ್ಲೈ ಮಾಡುವರು ಕಾಲೇಜುಗಳಿಗೆ ನೀಡುವುದಿಲ್ಲ. ತಮಗೆ ಚೆನ್ನಾಗಿರುವ ಡ್ರಗ್ಸ್​ ಬೇಕು ಅಂತ ಅನ್ನಿಸಿದರೆ ಸಾಕು ನನ್ನ ಸ್ನೇಹಿತರು ಬೈಕ್​ ಏರಿ ಬೆಳಗಾವಿಗೆ ಹೋಗಿಬಿಡುತ್ತಾರೆ. ಬಿಟ್ಟರೆ ಪುಣೆವರೆಗೂ ಹೋಗಿ ತರುತ್ತಾರೆ. ಇವರಿಗೆ ಬೇಕೆನ್ನಿಸಿದರೇ ಎಲ್ಲಿಂದಾದರೂ ತರುತ್ತಾರೆ, ಅಷ್ಟು ಇವರ ನೆಟವರ್ಕ್​​ ದೊಡ್ಡದಾಗಿ ಹರಿಡಿಕೊಂಡಿದೆ” ಎಂದು ವಿದ್ಯಾರ್ಥಿ ಹೇಳಿದ.

ಪೊಲೀಸ್​ ಹೇಳಿಕೆ

ಮಹಾವಿದ್ಯಾಲಯದಲ್ಲಿ ಸಿಗುವ ಮಾದಕ ವಸ್ತುವಿನ ಬಗ್ಗೆ ಓರ್ವ ಪೊಲೀಸ್​ ಅಧಿಕಾರಿಯನ್ನು ಮಾತನಾಡಿಸಿದಾಗ, “ಈ ಬಗ್ಗೆ ನಾವು ಅನೇಕ ಸಲ ಕೇಳಿದ್ದೇವೆ. ಆದರೆ, ದೂರು ದಾಖಲಾಗಿಲ್ಲ. ದೂರು ದಾಖಲಿಸುವುದು ಬೇಡ ಕಡೆ ಪಕ್ಷ ಓರ್ವ ವಿದ್ಯಾರ್ಥಿ ನಮ್ಮ ಬಳಿ ಬಂದು ನಮ್ಮ ಕಾಲೇಜಿನಲ್ಲಿ ಈ ರೀತಿ ನಡೆಯುತ್ತಿದೆ ಎಂದು ಹೇಳಿದರೆ ಸಾಕು ನಾವು ರಹಸ್ಯ ಕಾರ್ಯಾಚರಣೆ ನಡೆಸಿ ಮಾದಕ ವಸ್ತುವನ್ನು ತಡೆಯುತ್ತೇವೆ. ಆದರೆ, ಇನ್ನೂವರೆಗೆ ಯಾವೊಬ್ಬ ವಿದ್ಯಾರ್ಥಿಯೂ ನಮಗೆ ಮಾಹಿತಿ ನೀಡಿಲ್ಲ. ನಮಗೆ ಮಾಹಿತಿ ನೀಡಿದ ವಿದ್ಯಾರ್ಥಿಯ ಹೆಸರು ಗೌಪ್ಯವಾಗಿ ಇಡುತ್ತೇವೆ. ಹೀಗಾಗಿ ನಮಗೆ ಕಾಲೇಜಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ