ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದದ ಹಿಂದಿನ ಕಥೆ ಏನು? ಇಲ್ಲಿದೆ ಮಾಹಿತಿ

|

Updated on: Sep 19, 2023 | 3:36 PM

ಹುಬ್ಬಳ್ಳಿಯ ಹೃದಯ ಭಾಗವಾದ ಚನ್ನಮ್ಮ ವೃತ್ತದ ಪಕ್ಕದಲ್ಲಿ 1.5 ಎಕರೆ ಈದ್ಗಾ ಮೈದಾನವಿದೆ. ಇದಕ್ಕೆ ಚನ್ನಮ್ಮ ಮೈದಾನ ಎಂದೂ ಕರೆಯುತ್ತಾರೆ. ಈ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಂರಿಗೆ ನಮಾಜ್​​ ಮಾಡಲು ಅವಕಾಶ ನೀಡಲಾಗಿತ್ತು. ಉಳಿದ ದಿನಗಳಲ್ಲಿ ಇದು ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್​ ಸ್ಥಳವಾಗಿದೆ. ಹೀಗಿದ್ದರೂ ಈ ಮೈದಾನ ವಿವಾದಕ್ಕೆ ಒಳಗಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ

ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದದ ಹಿಂದಿನ ಕಥೆ ಏನು? ಇಲ್ಲಿದೆ ಮಾಹಿತಿ
ಹುಬ್ಬಳ್ಳಿ ಈದ್ಗಾ ಮೈದಾನ
Follow us on

ಉತ್ತರ ಕರ್ನಾಟಕದ ಹೆಬ್ಬಾಗಿಲು, ಛೋಟಾ ಮುಂಬೈ, ವಾಣಿಜ್ಯ ನಗರಿ ಎಂದೇ ಖ್ಯಾತಿಯಾಗಿರುವ ಹುಬ್ಬಳ್ಳಿ ದೇಶಕ್ಕೆ ಚಿರಪರಿಚಿತ. ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎರಡನೇ ಅತಿದೊಡ್ಡ ನಗರ ಎನ್ನಬಹುದು. ಈ ನಗರ ದಶಕಗಳಿಂದ ಹಲವು ಕೋಮುಗಲಭೆಗಳಿಗೆ ಸಾಕ್ಷಿಯಾಗಿದೆ. ಕೋಮುಗಲಭೆಗಳು ನಗರದಲ್ಲಿ ಇನ್ನೂ ಬೂದಿಮುಚ್ಚಿದ ಕೆಂಡದಂತಿವೆ. 90ರ ದಶಕದಲ್ಲಿ ಈದ್ಗಾ (ಚನ್ನಮ್ಮ ಮೈದಾನ)ದಿಂದ ಆರಂಭವಾದ ಗಲಭೆಗಳು ಕಳೆದ ವರ್ಷ ಹಳೇಹುಬ್ಬಳ್ಳಿಯ, ಇಂಡಿಪಂಪ್​​ ಪೊಲೀಸ್​ ಠಾಣೆ ಎದುರು ನಡೆದ ಗಲಾಟೆ ನಗರಕ್ಕೆ ಆರದ ಗಾಯವಾಗಿದೆ.

90ರದ ದಶಕದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಈದ್ಗಾ ಮೈದಾನದ ಗಲಾಟೆ ಮತ್ತೆ ಮುನ್ನಲೆಗೆ ಬಂದಿದೆ. 2022ರಲ್ಲಿ ಈ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದವು. ಈ ಸಂಬಂಧ ರಚನೆಯಾದ ಐದು ಜನರ ಸಮಿತಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿತ್ತು. ಇದಕ್ಕೆ ಅಂಜುಮಾನ್​ ಸಂಸ್ಥೆ ವಿರೋಧ ವ್ಯಕ್ತಿಪಡಿಸಿತ್ತು. ಈ ವಿಚಾರ ಕೋರ್ಟ್​ ಮೆಟ್ಟಿಲೇರಿತ್ತು. ಈ ವಿಚಾರದಲ್ಲಿ ಪಾಲಿಕೆ ಆಯುಕ್ತರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅರ್ಹರು ಎಂದು ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಅನುಮತಿ ನೀಡಿದ್ದರಿಂದ ಹಿರಿಹಿರಿ ಹಿಗ್ಗಿದ ಹಿಂದೂಪರ ಸಂಘಟನೆಗಳು ತರಾತುರಿಯಲ್ಲಿ ರಾತ್ರೋರಾತ್ರಿ ತಯಾರಿ ಮಾಡಿ, ಗಣೇಶ ಚತುರ್ಥಿಯಂದು ಬೆಳಿಗ್ಗೆ 7:30ರ ಸುಮಾರಿಗೆ ಮೈದಾನದಲ್ಲಿ ಗಣಪತಿ ಪ್ರಷ್ಠಾಪನೆ ಮಾಡಿದ್ದವು. ಇದೀಗ ಮತ್ತೆ ಗಣೇಶ ಚತುರ್ಥಿ ಬಂದಿದ್ದು, ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಈದ್ಗಾ ಮೈದಾನದ ವಿವಾದವೇನು ಇದರ ಇತಿಹಾಸವೇನು? ಈ ಮೈದಾನಕ್ಕಾಗಿ ಹಿಂದೂಪರ ಸಂಘಟನೆಗಳು ಗಣೇಶ ಕೂಡಿಸಲು ಪಟ್ಟು ಹಿಡಿದಿರುವುದು ಏಕೆ ಇಲ್ಲಿದೆ ಮಾಹಿತಿ.

ಹುಬ್ಬಳ್ಳಿಯ ಹೃದಯ ಭಾಗವಾದ ಚನ್ನಮ್ಮ ವೃತ್ತದ ಪಕ್ಕದಲ್ಲಿ 1.5 ಎಕರೆ ಈದ್ಗಾ ಮೈದಾನವಿದೆ. ಇದಕ್ಕೆ ಚನ್ನಮ್ಮ ಮೈದಾನ ಎಂದೂ ಕರೆಯುತ್ತಾರೆ. ಈ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಂರಿಗೆ ನಮಾಜ್​​ ಮಾಡಲು ಅವಕಾಶ ನೀಡಲಾಗಿತ್ತು. ಉಳಿದ ದಿನಗಳಲ್ಲಿ ಇದು ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್​ ಸ್ಥಳವಾಗಿದೆ.

ಅದು ಸ್ವಾತಂತ್ರ್ಯ ಪೂರ್ವ 1920-21 ದೇಶದಲ್ಲಿ ಇನ್ನೂ ಬ್ರಿಟಿಷ್​ ಆಡಳಿತ ಇತ್ತು. ಈ ಬ್ರಿಟಿಷ್ ಸರಕಾರ ಅಂಜುಮನ್ ಸಂಸ್ಥೆಗೆ ಈದ್ಗಾ ಮೈದಾನದಲ್ಲಿ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿತ್ತು. ಅದು ವರ್ಷಕ್ಕೆ 1 ರೂಪಾಯಿ ಫೀ ಪಡೆದು 999 ವರ್ಷದವರೆಗೆ ಈ ಜಾಗದಲ್ಲಿ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇನ್ನು ವರ್ಷದ ಉಳಿದ ದಿನಗಳಲ್ಲಿ, ಇದು ಕ್ರಿಕೆಟ್ ಮತ್ತು ಇತರ ಕ್ರೀಡೆಗಳಿಗೆ, ಜಾತ್ರೆಗಳ ಸಮಯದಲ್ಲಿ ಜಾತ್ರೆಗಳು ಮತ್ತು ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆಗಳಿಗೆ ಆಟದ ಮೈದಾನವಾಗಿದೆ.

ಸ್ವಾತಂತ್ರ ದೊರೆತ ಬಳಿಕ ಅಸ್ತಿತ್ವಕ್ಕೆ ಬಂದ ಸರಕಾರಗಳು ಕೂಡ ಹಿಂದಿನ ಪದ್ಧತಿಯನ್ನೇ ಮುಂದುವರೆಸಿಕೊಂಡು ಬಂದಿವೆ. 1980ರ ದಶಕದಲ್ಲಿ ಅಂಜುಮನ್ ಸಂಸ್ಥೆ ಈ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಮುಂದಾಗಿತ್ತು. ಆಗ ಮಹಾನಗರ ಪಾಲಿಕೆ ಇದನ್ನು ತಡೆಯಲು ಯತ್ನಿಸಿತ್ತು. ಆಗ ಅಂಜುಮನ್ ಸಂಸ್ಥೆ ಕೋರ್ಟ್ ಮೊರೆ ಹೋಯ್ತು. 1991 ರಲ್ಲಿ ಸೆಷನ್​ ನ್ಯಾಯಾಲಯ ಮತ್ತು ಹೈಕೋರ್ಟ್​ ಈ ಜಾಗ ಪಾಲಿಕೆಗೆ ಸೇರಿದ್ದು ಎಂದು ಆದೇಶ ನೀಡಿತ್ತು. ಬಳಿಕ ಅಂಜುಮನ್ ಸಂಸ್ಥೆ ಈ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್​ ಮೆಟ್ಟಿಲು ಏರಿತ್ತು. 2011ರಲ್ಲಿ ಸುಪ್ರಿಂಕೋರ್ಟ್ ಸ್ಥಳೀಯ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದು, ಅಲ್ಲಿ ಅದಾಗಲೇ ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆಗಳನ್ನು ಅಂಜುಮನ್ ಸಂಸ್ಥೆಯೇ ತೆರವುಗೊಳಿಸಿಕೊಡಬೇಕು ಎಂದು ಆದೇಶ ಮಾಡಿತ್ತು. ಆಗ ಕಟ್ಟಡ ತೆರವು ಕೂಡ ಆಯಿತು.

ಇದೆಲ್ಲ ಘಟನೆಗಳ ನಡುವೆ 1992ರಲ್ಲಿ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿ ಜಮ್ಮು-ಕಾಶ್ಮೀರದಲ್ಲಿ ತಿರಂಗಾ ಯಾತ್ರೆಯನ್ನು ಆರಂಭಿಸಿದ್ದರು. ಇದಕ್ಕೆ ಬೆಂಬಲ ನೀಡಲೆಂದೇ ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದಲ್ಲಿಯೂ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಯಾತ್ರೆ ನಡೆದಾಗ ರಾಣಿ ಚೆನ್ನಮ್ಮ ವೃತ್ತದ ಪಕ್ಕದಲ್ಲಿಯೇ ಇದ್ದ ಈದ್ಗಾ ಮೈದಾನದಲ್ಲಿಯೂ ತಿರಂಗಾ ಹಾರಿಸಲು ಯತ್ನಿಸಲಾಗಿತ್ತು. ಆದರೆ ಆ ಯತ್ನಕ್ಕೆ ವಿರೋಧ ವ್ಯಕ್ತವಾಗಿತ್ತು.

ಇದು ಖಾಸಗಿ ಜಾಗವೆಂದು ಎಂದು ಅಂಜುಮಾನ ಸಂಸ್ಥೆ ಧ್ವಜಾರೋಹಣಕ್ಕೆ ವಿರೋಧಿಸಿತ್ತು. ಇದರಿಂದ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಎಸ್.ಬಂಗಾರಪ್ಪ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಅಂಜುಮನ್​ ಸಂಸ್ಥೆಗೆ ಬೆಂಬಲ ನೀಡಿತ್ತು. ಇದು ಸಹಜವಾಗಿ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಹವಣಿಸಿದರೂ ಅದು ಸಾಧ್ಯವಾಗಲಿಲ್ಲ. ಇದೇ ವೇಳೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. 144 ಸೆಕ್ಷನ್​ ಜಾರಿ ನಂತರವೂ ಕೆಲ ಯುವಕರ ಗುಂಪು ಮೈದಾನಕ್ಕೆ ನಗ್ಗಿ ತ್ರಿವರ್ಣ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಪೊಲೀಸರು ಕೂಡಲೇ ಧ್ವಜ ಅವರೋಹಣ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪೊಲೀಸರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದವು. ಬಿಜೆಪಿ, ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ಮೂರು ಸಂಘಟನೆಯ ಕೆಲ ಪ್ರಮುಖರನ್ನು ಒಳಗೊಂಡ ರಾಷ್ಟ್ರಧ್ವಜ ಗೌರವ ಸಂರಕ್ಷಣಾ ಸಮಿತಿ (ರಾಷ್ಟ್ರಧ್ವಜದ ಗೌರವವನ್ನು ರಕ್ಷಿಸುವ ಸಮಿತಿ) ರಚಿಸಲಾಗಿತ್ತು.

ಇದೇ ವೇಳೆ ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಕೂಡ ಮುನ್ನಲೆಗೆ ಬಂದಿತ್ತು. ಈ ಕಾವು ದೇಶವ್ಯಾಪಿ ಆವರಿಸಿತ್ತು. 1992 ಮತ್ತು 1995 ರ ನಡುವೆ ಬಿಜೆಪಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಲು ಪಣತೊಟ್ಟಿತು. ಇದು ರಾಜ್ಯ ನಾಯಕರಿಗೆ ನೀಡಿದ ಟಾಸ್ಕ್​​ ಕೂಡ ಆಗಿತ್ತು. ಇದೆ ಸಮಯದಲ್ಲಿ ಬುಗಿಲೆದ್ದ ಅಯೋಧ್ಯೆ ಚಳುವಳಿ ಒಂದು ರೀತಿ ಬಿಜೆಪಿಗೆ ವರದಾನವಾಯಿತು. ಈ ಸಮಯದಲ್ಲೇ ಬಿಎಸ್​ ಯಡಿಯೂರಪ್ಪ, ಅನಂತಕುಮಾರ್​, ಸಂಸದ ಅನಂತಕುಮಾರ್​​​ ಹೆಗಡೆ, ಪ್ರಲ್ಹಾದ್​ ಜೋಶಿ, ಜಗದೀಶ್​ ಶೆಟ್ಟರ್​ ಸೇರಿದಂತೆ ಇನ್ನಿತರೆ ನಾಯಕರು ಮುನ್ನಲೆಗೆ ಬಂದರು.

ಅದು 1994ರ ಆಗಸ್ಟ್​ 15, ಬೆಳಿಗ್ಗೆ 11 ಗಂಟೆ ಸುಮಾರಿಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಈ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕಿ ಉಮಾಭಾರತಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಉಮಾಭಾರತಿ ಅವರು ರಾಜ್ಯಕ್ಕೆ ಪ್ರವೇಶಿಸದಂತೆ ಅಂದಿನ ಸರ್ಕಾರ ನಿರ್ಬಂಧಿಸಲಾಗಿತ್ತು. ಆದರೂ ಕೂಡ ಉಮಾಭಾರತಿ ಅವರು ಪೊಲೀಸರ ಕಣ್ಣುತಪ್ಪಿಸಿ ಹುಬ್ಬಳ್ಳಿಗೆ ತಲುಪಿದ್ದರು.

ದೇಶಪಾಂಡೆ ನಗರದ ಗುಜರಾತ್​ ಭವನದಲ್ಲಿ ಉಮಾಭಾರತಿ ಅವರ ಭಾಷಣವಿದ್ದು, ಇವರ ಮಾತು ಕೇಳಲು  ಕೇಂದ್ರ ಸಂಸದ ಅನಂತ್​ ಕುಮಾರ್​​ ಹೆಗಡೆ ಸೇರಿದಂತೆ 5,000 ಜನರು ಸೇರಿದ್ದರು. ಒಂದು ಕಡೆ ಉಮಾಭಾರತಿ ಅವರ ಭಾಷಣ ನಡೆಯುತ್ತಿದ್ದರೇ, ಇತ್ತ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಮೈದಾನದ ಒಳಗೆ ನುಗ್ಗಿ ರಾಷ್ಟ್ರಧ್ವಜ ಹಾರಿಸಿದ್ದರು.

ರಾಷ್ಟ್ರಧ್ವಜ ಹಾರುತ್ತಿದ್ದಂತೆ ಈದ್ಗಾ ಮೈದಾನದ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾಠಿ ಚಾರ್ಜ್​ ಮಾಡಿದರು. ಅತ್ತ ಗುಜರಾತ್ ಭವನದಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಗೋಲಿಬಾರ್​ ಮಾಡಿದ್ದರು. ಇದರಲ್ಲಿ ಆರು ಜನ ಮೃತಪಟ್ಟರು ಮತ್ತು ಅನಂತಕುಮಾರ್​ ಹೆಗಡೆ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಗಾಯಗೊಂಡರು ಎಂದು ಘಟನೆಯಲ್ಲಿ ಗಾಯಗೊಂಡ ಮತ್ತು ಪ್ರತ್ಯಕ್ಷದರ್ಶಿ ರಾಜೀವ್​ ಮೂರುಶಿಳ್ಳೆ ತಿಳಿಸಿದ್ದಾರೆ.

ಮುಂದೆ ವೀರಪ್ಪ ಮೊಯ್ಲಿ ನಂತರ 1994 ರಲ್ಲಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಧ್ವಜ ಹಾರಿಸಲು ಇದ್ದ ಅಡ್ಡಿಯನ್ನು ದೂರ ಮಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ವತಿಯಿಂದ ಧ್ವಜಾರೋಹಣ ನೆರವೇರಿಸಿದ್ದರು. ಇದಾದ ನಂತರ ಶಾಂತಿಯುತವಾಗಿದ್ದ ಮೈದಾನ ವಿವಾದ 2022ರಲ್ಲಿ ಮತ್ತೆ ಮುನ್ನಲೆಗೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 am, Tue, 19 September 23