ಹುಬ್ಬಳ್ಳಿ, ಮೇ 19: ಕೊಲೆಯಾದ ಅಂಜಲಿ ಅಂಬಿಗೇರ (ಮೇ 20) (Anjali Ambiger) ಸಹೋದರಿ ಯಶೋಧ ಅಕ್ಕನ ಸಾವಿನಿಂದ ಮನನೊಂದು ಪಿನಾಯಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೆ ಅವರನ್ನು ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಶೋಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಶನಿವಾರ (ಮೇ 18) ರಂದು ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ದಿಂಗಾಲೇಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಮತ್ತು ಸಾರ್ವಜನಿಕರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಯಶೋಧ ಕೂಡ ಭಾಗಿಯಾಗಿದ್ದಳು. ಪ್ರತಿಭಟನೆ ವೇಳೆ ಯಶೋಧ ಪ್ರಜ್ಞೆ ತಪ್ಪಿ ಬಿದ್ದಿದ್ದರು.ಕೂಡಲೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ಯಶೋಧ ರಾತ್ರಿ ಪಿನಾಯಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇವತ್ತು ಅಂಜಲಿ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಸಚಿವರು ಹಾಗೂ ಶಾಸಕರು ಆಗಮಿಸಿದ್ದಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಈ ವೇಳೆ ಸ್ಥಳೀಯ ನಾಯಕರು ಜನರನ್ನು ಸಮಾಧಾನಗೊಳಿಸಿದರು. ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸಚಿವರು ಎರಡು ಲಕ್ಷ ರೂಪಾಯಿ ನೀಡಿದರು.
ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು
ಇಂತಹ ಪಾಪಿ ಮಗ ಯಾರಿಗೂ ಬೇಡ. ನನಗೆ ಇವನೊಬ್ಬನೇ ಮಗ, ಏನು ಕೆಲಸ ಮಾಡುತ್ತಿದ್ದ ಗೊತ್ತಿಲ್ಲ. ನ್ಯಾಯಾಲಯ ಅವನಿಗೆ ಏನು ಶಿಕ್ಷೆ ಕೊಡುತ್ತದೆ ಕೊಡಲಿ. ನನ್ನ ಮಗ ವಿಶ್ವ ಮಾಡಿದ ತಪ್ಪಿಗೆ ನಾವೆಲ್ಲ ಶಿಕ್ಷೆ ಅನುಭವಿಸುತ್ತಿದ್ದೇವೆ. ಮೊದಲು ವಿಶ್ವ ಚೆನ್ನಾಗಿದ್ದ, ನಾಲ್ಕು ವರ್ಷದ ನಂತರ ಹೀಗೆ ಆಗಿದ್ದಾನೆ. ಅಂತಹ ಮಗ ನನಗೆ ಬೇಡ, ಅವನನ್ನು ನೋಡಲು ಹೋಗುವುದಿಲ್ಲ ಎಂದು ಆರೋಪಿ ವಿಶ್ವ ತಾಯಿ ಸವಿತಾ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 am, Sun, 19 May 24