
ಹುಬ್ಬಳ್ಳಿ, ಜನವರಿ 23: ಅದು ನಗರದ ಪ್ರಮುಖ ವ್ಯಾಪಾರ ಏರಿಯಾ. ಆದರೆ ರಾತ್ರಿ ಸಮಯದಲ್ಲಿ ನಾಲ್ಕು ಅಂತಸ್ತಿನ ಮಾಲ್‌ನಲ್ಲಿ (Mall) ಹೊತ್ತಿಕೊಂಡ ಬೆಂಕಿ (Fire) ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು. ಮಾಲ್ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದ್ದರೆ, ಮತ್ತೊಂದೆಡೆ ಸುತ್ತಮುತ್ತಲಿನ ವಸತಿ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಲು ಆರಂಭಿಸಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
ಮರಾಠ ಗಲ್ಲಿಯಲ್ಲಿರುವ ಸುಪ್ರಸಿದ್ಧ ಸುಖಸಾಗರ ಮಾಲ್‌ನಲ್ಲಿ ಕಳೆದ ರಾತ್ರಿ 12 ಗಂಟೆ ಸಮಯಕ್ಕೆ ಅಗ್ನಿ ಅವಘಡ ಸಂಭವಿಸಿದೆ. ಮೊದಲಿಗೆ ವಿದ್ಯುತ್ ಹೋಗಿತ್ತಂತೆ, ಮತ್ತೆ ವಿದ್ಯುತ್ ಬರುತ್ತಿದ್ದಂತೆ ಮಾಲ್ನ 4ನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಮಾಲ್‌ಗೆ ಬೆಂಕಿ ಆವರಿಸಿಕೊಳ್ಳಲು ಆರಂಭವಾಗಿತ್ತು. ನಾಲ್ಕನೆ ಮಹಡಿಯಲ್ಲಿ ಪಾದರಕ್ಷೆಗಳು, ಬಟ್ಟೆ ಸೇರಿದಂತೆ ಅನೇಕ ಮಳಿಗೆಗಳು ಇದಿದ್ದರಿಂದ ಬೆಂಕಿ ತೀವ್ರವಾಗಿ ಹೊತ್ತಿಕೊಂಡಿತ್ತು. ಅದು ಮೂರನೇ ಮಹಡಿ ಮತ್ತು ಸುತ್ತಮುತ್ತಲಿನ ಕಟ್ಟಡಕ್ಕ ಕೂಡ ವ್ಯಾಪಿಸಲು ಆರಂಭವಾಗಿತ್ತು.
ಇದನ್ನೂ ಓದಿ: ಕೆಆರ್ ಪುರಂ ಬಳಿ ಬೈಕ್ ಶೋರೂಮ್‌ನಲ್ಲಿ ಅಗ್ನಿ ಅವಘಡ: 13 ಎಲೆಕ್ಟ್ರಿಕ್ ಬೈಕ್‌ಗಳು ಭಸ್ಮ
ಜೋರಾದ ಸದ್ದು ಹಾಗೂ ಬೆಂಕಿ ಹೊತ್ತುಕೊಂಡ ಬಗ್ಗೆ ಗೊತ್ತಾಗುತ್ತಿದ್ದಂತೆ ಮಾಲ್ನಲ್ಲಿದ್ದ ಶೆಕ್ಯೂರಿಟಿ ಗಾರ್ಡ್ ಹೊರಗೆ ಓಡಿ ಬಂದಿದ್ದ. ಅನೇಕರಿಗೆ ಮಾಹಿತಿ ನೀಡಿದ್ದ. ಕೂಡಲೇ ಸ್ಥಳೀಯರು ಮಾಲ್ನಲ್ಲಿದ್ದ ಶೆಕ್ಯೂರಿಟಿ ಸೋಮಶೇಖರ್ ಮತ್ತು ಆತನ ಪತ್ನಿ ವೀರುಬಾಯಿಯನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದರು. ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಿಸಿದ್ದರು. 12 ಗಂಟೆಗೆ ಹೊತ್ತಿಕೊಂಡ ಬೆಂಕಿಯನ್ನು ಸರಿಸುಮಾರು ನಸುಕಿನ ಜಾವ 4 ಗಂಟೆವರಗೆ ಕಾರ್ಯಾಚರಣೆ ನಡೆಸಿ ನಂದಿಸಲಾಗಿದೆ.
ಮಾಲ್ ಸುತ್ತಮುತ್ತ ಅನೇಕ ವಸತಿ ಕಟ್ಟಡಗಳಿದ್ದು ಅಲ್ಲಿಗೂ ಕೂಡ ಬೆಂಕಿ ಆವರಿಸಲು ಆರಂಭವಾಗಿತ್ತು. ಹೀಗಾಗಿ ಮನೆಯಲ್ಲಿದ್ದವರು ನಿದ್ರೆ ಮಂಪರಿನಿಂದ ಓಡೋಡಿ ಹೊರಗೆ ಬಂದಿದ್ದರು. ಆದರೆ ಬೆಂಕಿ ಸುತ್ತಮುತ್ತಲಿನ ಕಟ್ಟಡಕ್ಕೆ ವ್ಯಾಪಿಸುವ ಮುನ್ನವೇ ಅಗ್ನಿಶಾಮಕ ಸಿಬ್ಬಂದಿ ಜಾಗೃತಿ ವಹಿಸಿ ಬೆಂಕಿ ನಂದಿಸಿದ್ದು, ದೊಡ್ಡಮಟ್ಟದ ಅವಘಡವೊಂದು ತಪ್ಪಿದಂತಾಗಿದೆ.
ಇನ್ನು ಈ ಮಾಲ್‌ನಲ್ಲಿ ಸರಿಸುಮಾರು 250ಕ್ಕೂ ಹೆಚ್ಚು ಬಟ್ಟೆ, ಪಾದರಕ್ಷೆ ಮತ್ತು ಕಾಸ್ಮೆಟಿಕ್ ಅಂಗಡಿಗಳಿವೆ. ಮೊದಲನೇ ಮತ್ತು ಎರಡನೇ ಮಹಡಿಯಲ್ಲಿಯೇ ಹೆಚ್ಚು ಅಂಗಡಿಗಳಿವೆ. ಒಂದು ವೇಳೆ ಅಲ್ಲಿಗೂ ಬೆಂಕಿ ಆವರಿಸಿದ್ದರೆ ದೊಡ್ಡ ಮಟ್ಟದ ಅಪಾಯವಾಗುವ ಸಾಧ್ಯತೆಯಿತ್ತು. ಈ ಕಟ್ಟಡದಲ್ಲಿ ಅಗ್ನಿ ಅವಘಡವಾಗ್ತಿರೋದು ಇದೇ ಮೊದಲೇನಲ್ಲವಂತೆ. ಈ ಹಿಂದೆ ಕೂಡ ಎರಡು ಬಾರಿ ಅಗ್ನಿ ಅವಘಡವಾಗಿತ್ತಂತೆ. ಹೀಗಿದ್ದರೂ ಮಾಲ್ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಜೊತೆಗೆ ನಾಲ್ಕನೇ ಮಹಡಿಯಲ್ಲಿ ಬೇಕಾಬಿಟ್ಟಿ ವಸ್ತುಗಳನ್ನು ಸಂಗ್ರಹಿಸಿದ್ದರಿಂದ ಹೊತ್ತಿಯುರಿದಿದೆ.
ಇದನ್ನೂ ಓದಿ: ಬೆಂಗಳೂರು: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್ಗಳು
ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಮಟ್ಟದ ಅಗ್ನಿ ಅವಘಡ ತಪ್ಪಿದೆ. ಆದರೆ ಇದೇ ಮಾಲ್‌ನಲ್ಲಿ ವ್ಯಾಪಾರ ನಡೆಸುತ್ತಿರುವ ಅನೇಕ ಕುಟುಂಬಗಳು ಅಗ್ನಿ ಅವಘಡದಿಂದ ಕಂಗಾಲಾಗಿದ್ದು, ಮಾಲ್ ರಿಪೇರಿ ಆಗೋವರಗೆ ಉದ್ಯೋಗವಿಲ್ಲದೇ ಪರದಾಡುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.