ಭಾನುವಾರವೂ ಕಚೇರಿಗೆ ಹಾಜರ್! ಬಾಕಿ ಕಡತಗಳ ವಿಲೇವಾರಿ; ಕರ್ತವ್ಯ ಪ್ರಜ್ಞೆ ಮೆರೆದ ತಹಶೀಲ್ದಾರ್, ಸಿಬ್ಬಂದಿ
ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಭಾನುವಾರವೂ ಕೆಲಸಕ್ಕೆ ಹಾಜರಾಗಿ, ಬಾಕಿ ಉಳಿದಿದ್ದ ಸರ್ಕಾರಿ ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ರಜೆ ದಿನ ಸ್ವತಃ ತಹಶೀಲ್ದಾರ್ ಕೆಲಸಕ್ಕೆ ಹಾಜರಾಗಿದ್ದರೆ, ಅವರಿಗೆ 30ಕ್ಕೂ ಹೆಚ್ಚು ಸಿಬ್ಬಂದಿ ಸಾಥ್ ನೀಡಿದ್ದಾರೆ. ರಜಾ ದಿನವೂ ಕೆಲಸ ಮಾಡಲು ಕಾರಣವೇನು ಎಂದು ತಿಳಿಯಲು ಈ ಸ್ಟೋರಿ ಓದಿ.

ಹುಬ್ಬಳ್ಳಿ, ಸೆಪ್ಟೆಂಬರ್ 27: ಅನೇಕ ಸರ್ಕಾರಿ ನೌಕರರು, ಕೆಲಸದ ಸಮಯದಲ್ಲಿಯೇ ಕಚೇರಿಯಲ್ಲಿ ಕೆಲಸ ಮಾಡಲ್ಲ. ಇನ್ನು ತಮ್ಮ ಬಳಿಯಿರುವ ಫೈಲ್ಗಳನ್ನ ವರ್ಷಗಟ್ಟಲೆ ಕ್ಲಿಯರ್ ಮಾಡಲ್ಲ. ಆದರೆ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇಂದು ಭಾನುವಾರವಾದರೂ ಕೆಲಸಕ್ಕೆ ಹಾಜರಾಗಿದ್ದರು. ಸ್ವತಃ ತಹಶೀಲ್ದಾರ್ ಮುಂಜಾನೆಯಿಂದ ಸಂಜೆವರಗೆ ಕಚೇರಿಯಲ್ಲಿ ಕೂತು ಕೆಲಸ ಮಾಡಿದರು. ಆ ಮೂಲಕ ಬಾಕಿ ಉಳಿದಿದ್ದ ಕಡತಗಳ ವಿಲೇವಾರಿ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಸ್ವತಃ ತಹಶೀಲ್ದಾರ್ ಕೆಲಸಕ್ಕೆ ಹಾಜರು: ಸಾಥ್ ನೀಡಿದ 30ಕ್ಕೂ ಹೆಚ್ಚು ಸಿಬ್ಬಂದಿ
ಹುಬ್ಬಳ್ಳಿ ನಗರ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಭಾನುವಾರದಂದೂ ದೈನಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಸ್ವತಃ ತಹಶೀಲ್ದಾರ್ ಮಹೇಶ್ ಗಸ್ತೆ ಅವರು ಮುಂಜಾನೆ 10 ಗಂಟೆಗೆ ಕಚೇರಿಗೆ ಆಗಮಿಸಿ ಕೆಲಸ ಆರಂಭಿಸಿದ್ದರು. ಕಂದಾಯ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳು, ಉಪ ತಹಶೀಲ್ದಾರ್ ಸೇರಿದಂತೆ ಕಚೇರಿಯಲ್ಲಿ ಕೆಲಸ ಮಾಡುವ 30ಕ್ಕೂ ಹೆಚ್ಚು ಸಿಬ್ಬಂದಿ ಇಂದು ಕೆಲಸಕ್ಕೆ ಹಾಜರಾಗಿದ್ದರು. ಪಿಎಂ, ಸಿಎಂ, ಸೇರಿದಂತೆ ಯಾವುದೇ ಸಚಿವರ ಭೇಟಿ ಅಥವಾ ತುರ್ತು ಚುನಾವಣಾ ಕೆಲಸಗಳು ಇಲ್ಲದಿದ್ದರೂ, ಇಡೀ ದಿನ ತಮ್ಮ ತಮ್ಮ ಆಸನಗಳಲ್ಲಿ ಕುಳಿತು ಕಡತ ವಿಲೇವಾರಿಯಲ್ಲಿ ತೊಡಗಿಸಿಕೊಂಡಿದ್ದರು.
ರಜಾ ದಿನವೂ ಕೆಲಸ ಮಾಡಲು ಕಾರಣವೇನು?
ಇನ್ನು ರಜಾ ದಿನವೂ ಕೆಲಸ ಮಾಡಲು ಕಾರಣವಿದೆ. ಕಳೆದ ಕೆಲ ದಿನಗಳಿಂದ ಸಿಬ್ಬಂದಿ ಎಸ್ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು. ಎಸ್ಐಆರ್ ಆರಂಭವಾದಗಿನಿಂದ ಸಿಬ್ಬಂದಿಗೆ ತಮ್ಮ ದೈನಂದಿನ ಕಚೇರಿ ಕೆಲಸವನ್ನು ಸರಿಯಾಗಿ ಮಾಡಲು ಆಗಿರಲಿಲ್ಲ. ಹೀಗಾಗಿ ಅನೇಕ ಕಡತಗಳ ವಿಲೇವಾರಿ ಬಾಕಿ ಉಳಿದಿತ್ತು. ಇದರಿಂದ ಸರ್ಕಾರಿ ಕೆಲಸ, ಜನರ ಅನೇಕ ಕೆಲಸಗಳಿಗೆ ತೊಂದರೆಯಾಗಿತ್ತು. ಹಾಗಾಗಿ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ನಿರ್ಧರಿಸಿದ ಮಹೇಶ್ ಗಸ್ತೆ, ಇಂದು ತಮ್ಮ ಸಿಬ್ಬಂದಿಗೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಯಾವುದೇ ನೌಕರರೂ ಅಪಸ್ವರ ಎತ್ತದೆ, ಸ್ವಇಚ್ಛೆಯಿಂದ ಬಂದು ಕರ್ತವ್ಯ ನಿರ್ವಹಿಸಿದರು.
ಇದನ್ನೂ ಓದಿ: 50 ಲಕ್ಷ ಲಂಚ ರೂ. ಪಡೆದು ಲಾಕ್ ಆದ ತಹಶೀಲ್ದಾರ್: ಇದೀಗ ಮತ್ತಷ್ಟು ಅಕ್ರಮಗಳು ಬಯಲಿಗೆ
ಭಾನುವಾರ ಬಂದರೆ ಅನೇಕ ಸಿಬ್ಬಂದಿ ವೈಯಕ್ತಿಕ ಕೆಲಸದಲ್ಲಿ ತೊಡಗಿರುತ್ತಾರೆ. ಅನೇಕರು ವಿಶ್ರಾಂತಿ ಪಡಿಯುತ್ತಾರೆ. ಆದರೆ ಕಳೆದ ಕೆಲ ದಿನಗಳಿಂದ ಎಸ್ಐಆರ್ ಕೆಲಸದಲ್ಲಿ ಹಗಲಿರಳು ಕೆಲಸ ಮಾಡಿದ್ದ ಸಿಬ್ಬಂದಿ ದಣಿದಿದ್ದರು. ಆದರು ಕೂಡ ತಮ್ಮ ದೈನಂದಿನ ಕಚೇರಿ ಕೆಲಸಗಳು ಬಾಕಿ ಉಳಿದ ಕಾರಣ ಇಂದು ಕಚೇರಿಗೆ ಆಗಮಿಸಿ ಬಾಕಿಯಿರುವ ಕಡಿತಗಳ ವಿಲೇವಾರಿ ಮಾಡಿದರು. ಭಾನುವಾರವಾಗಿದ್ದರಿಂದ ಜನರು ಕಚೇರಿಗೆ ಬಾರದ ಹಿನ್ನೆಲೆ 8 ಗಂಟೆ ಕೆಲಸ ಮಾಡಿ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಿದರು.
ಇತರ ಸರ್ಕಾರಿ ಕಚೇರಿಗಳಿಗೆ ಮಾದರಿ ಹೆಜ್ಜೆ
ಸರ್ಕಾರಿ ಕಚೇರಿಗಳಲ್ಲಿ ಸಣ್ಣಪುಟ್ಟ ನೆಪಗಳನ್ನು ಹೇಳಿ ಕಡತಗಳನ್ನು ತಿಂಗಳುಗಟ್ಟಲೆ ಬಾಕಿ ಉಳಿಸಿಕೊಳ್ಳುವ ನೌಕರರ ನಡುವೆ, ರಜೆಯ ದಿನವಾದರೂ ಸ್ವತಃ ಕರ್ತವ್ಯಕ್ಕೆ ಹಾಜರಾಗಿ ಕಡತ ವಿಲೇವಾರಿ ಮಾಡಿದ ಹುಬ್ಬಳ್ಳಿ ತಹಶೀಲ್ದಾರ್ ಹಾಗೂ ಸಿಬ್ಬಂದಿಯ ಈ ಕಾರ್ಯವೈಖರಿ ರಾಜ್ಯದ ಇತರ ಸರ್ಕಾರಿ ಕಚೇರಿಗಳಿಗೂ ಮಾದರಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




