ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ಮೊಹಮ್ಮದ್ ಆರೀಫ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಯತ್ನ; ಆಸ್ಪತ್ರೆಯಲ್ಲಿ ಚಿಕಿತ್ಸೆ
ಇನ್ನು ವಸೀಂ ಪಠಾಣ್ ಈಗಾಗಲೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಗಲಭೆಯನ್ನು ಸೃಷ್ಟಿಸುವ ಉದ್ದೇಶವಿರಲಿಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ನಾನು ಕರೆಕೊಟ್ಟಿದ್ದೆ ಎಂದು ಹೇಳಿದ್ದ.
ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಆರೋಪಿ ಮೊಹಮ್ಮದ್ ಆರೀಫ್ ಪೊಲೀಸ್ ಕಸ್ಟಡಿಯಲ್ಲೇ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿರುವ ಈತ, ಟರ್ಪಂಟೈನ್ ಕುಡಿದು ಸಾಯಲು ಪ್ರಯತ್ನಿಸಿದ್ದಾಗಿ ವರದಿಯಾಗಿದೆ. ತನ್ನ ಕಾಲಿಗೆ ಗಾಯವಾಗಿದೆ, ಹಾಗಾಗಿ ಟರ್ಪಂಟೈನ್ ಕೊಡಿ ಎಂದು ಮೊಹಮ್ಮದ್ ಕೇಳಿದ್ದ. ಹಾಗಾಗಿ ಪೊಲೀಸರು ತಂದುಕೊಟ್ಟಿದ್ದರು. ಬಳಿಕ ಮೊಹಮ್ಮದ್ ಆರಿಪ್ ಟರ್ಪಂಟೈನ್ನ್ನು ಕುಡಿದಿದ್ದಾನೆ. ಮೊಹಮ್ಮದ್ ಆರಿಫ್ ಜತೆಗಿದ್ದ ಇನ್ನೊಬ್ಬ ಆರೋಪಿ ಎಐಎಂಐಎಂ ಕಾರ್ಪೋರೇಟರ್ ನಜೀರ್ ಅಹಮದ್ ಹೊನ್ಯಾಳ ಕೂಡಲೇ ಆರಿಫ್ರನ್ನು ತಡೆದಿದ್ದಾನೆ. ಅಷ್ಟೇ ಅಲ್ಲ, ಪೊಲೀಸರಿಗೂ ಮಾಹಿತಿ ನೀಡಿದ್ದಾನೆ. ಕೂಡಲೇ ಮೊಹಮ್ಮದ್ ಆರೀಫ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ವಾಟ್ಸ್ಆ್ಯಪ್ ಸ್ಟೇಟಸ್ನಿಂದ ದೊಡ್ಡಮಟ್ಟದಲ್ಲಿ ಗಲಭೆ ನಡೆದಿತ್ತು. ಈ ಪ್ರಕರಣದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 10-12 ಜನರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಮೌಲ್ವಿ ವಸೀಂ ಪಠಾಣ್ನನ್ನು ಬಂಧಿಸಿದ್ದ ಪೊಲೀಸರು, ಆತನ ಹೇಳಿಕೆಯ ಮೇರೆಗೆ ಎಐಎಂಐಎಂಗೆ ಸೇರಿದ ಮೂವರನ್ನು ಬಂಧಿಸಿದ್ದರು. ಅದಾದ ಬಳಿಕ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಇದ್ದ ಕೆಲವು ಸಂದೇಶಗಳನ್ನು ಪರಿಶೀಲನೆ ಮಾಡಿ, ಅದರ ಆಧಾರದ ಮೇಲೆ ಎಐಎಂಐಎಂಗೆ ಮೊಹಮ್ಮದ್ ಆರೀಫ್ನನ್ನೂ ಅರೆಸ್ಟ್ ಮಾಡಿದ್ದರು.
ತಪ್ಪೊಪ್ಪಿಕೊಂಡಿರುವ ವಸೀಂ
ಇನ್ನು ವಸೀಂ ಪಠಾಣ್ ಈಗಾಗಲೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಗಲಭೆಯನ್ನು ಸೃಷ್ಟಿಸುವ ಉದ್ದೇಶವಿರಲಿಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ನಾನು ಕರೆಕೊಟ್ಟಿದ್ದೆ. ಹೆಚ್ಚಿನ ಜನರನ್ನು ಸೇರಿಸಿ ಪ್ರತಿಭಟನೆ ಮಾಡುವ ಉದ್ದೇಶ ನನ್ನದಾಗಿತ್ತು. ಆದರೆ ಅನೇಕರು ಬರುವಾಗ ಕಲ್ಲು ಹಿಡಿದುಕೊಂಡೇ ಬಂದಿದ್ದರು. ನನಗೆ ಅದು ಅನಿರೀಕ್ಷಿತವಾಗೇ ಇತ್ತು ಎಂದು ಹೇಳಿಕೆ ಕೊಟ್ಟಿದ್ದ.
ಇದನ್ನೂ ಓದಿ: ಅಮ್ಮ ಸ್ಕೂಟರ್ ಕೊಡಿಸಿಲ್ಲವೆಂದು ತಂಗಿಯ ಮಗುವನ್ನು ಕೊಂದವ ಅರೆಸ್ಟ್; 8 ತಿಂಗಳ ಮಗುವನ್ನು ಗೋಡೆಗೆ ಎಸೆದು ಹತ್ಯೆ
Published On - 8:53 am, Sat, 30 April 22