ರಂಜಾನ್ ಹಿನ್ನೆಲೆ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಕ್ಕೆ ಜಮೀರ್ ಅಹ್ಮದ್ ಸಹಾಯ ಹಸ್ತ

ಈ ಸಹಾಯ ಹಸ್ತ ಯಾವುದೇ ರೀತಿಯ ಬೇರೆ ಅರ್ಥ ಕಲ್ಪಿಸುವುದು ಬೇಡ. ವರ್ಷಕ್ಕೊಮ್ಮೆ ಬರುವ ಪವಿತ್ರ ರಂಜಾನ್ ಹಬ್ಬವನ್ನು ತಾಯಂದಿರು, ಹೆಣ್ಣು ಮಕ್ಕಳು ಆಚರಣೆ ಮಾಡಿಲಿ ಅಂತ ಸಹಾಯ ಮಾಡುತ್ತಿದ್ದೇನೆ. -ಜಮೀರ್ ಅಹ್ಮದ್

ರಂಜಾನ್ ಹಿನ್ನೆಲೆ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಕ್ಕೆ ಜಮೀರ್ ಅಹ್ಮದ್ ಸಹಾಯ ಹಸ್ತ
ಶಾಸಕ ಜಮೀರ್ ಅಹ್ಮದ್ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Apr 29, 2022 | 12:41 PM

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕಿಡಿಗೇಡಿಗಳ ಕುಟುಂಬಕ್ಕೆ ಸಹಾಯ ಮಾಡಲು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾಗಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿರೋ ಕುಟುಂಬದ ಮಹಿಳೆಯರಿಗೆ, ಪುಟ್ಟ ಮಕ್ಕಳಿಗೆ ರಂಜಾನ್ ಹಬ್ಬ ಹಿನ್ನೆಲೆ ಸಹಾಯ ಮಾಡಲು ಮಾಜಿ ಸಚಿವ ಜಮೀರ್ ಅಹ್ಮದ್ ತಯಾರಿ ನಡೆಸಿದ್ದಾರೆ.

ಪ್ರತಿ ಕುಟುಂಬಕ್ಕೂ ಫುಡ್ ಕಿಟ್ ಹಾಗೂ 5 ಸಾವಿರ ಧನ ಸಹಾಯ ಮಾಡಲಿದ್ದಾರೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನಲೆಯಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆಗೆ ಕಷ್ಟ ಆಗಬಾರದು, ಕುಟುಂಬದಲ್ಲಿ ದುಃಖವಿರಬಾರದು ಎಂದು ತಾಯಂದಿರಿಗೆ, ಹೆಣ್ಣುಮಕ್ಕಳಿಗೆ, ಪುಟ್ಟ ಮಕ್ಕಳಿಗೆ ಸಹಾಯ ಮಾಡ್ತಿದ್ದೀವಿ ಅಂತ ಜಮೀರ್ ಅಹ್ಮದ್ ಸಂದೇಶ ರವಾನಿಸಿದ್ದಾರೆ. ಈ ಸಹಾಯ ಹಸ್ತ ಯಾವುದೇ ರೀತಿಯ ಬೇರೆ ಅರ್ಥ ಕಲ್ಪಿಸುವುದು ಬೇಡ. ವರ್ಷಕ್ಕೊಮ್ಮೆ ಬರುವ ಪವಿತ್ರ ರಂಜಾನ್ ಹಬ್ಬವನ್ನು ತಾಯಂದಿರು, ಹೆಣ್ಣು ಮಕ್ಕಳು ಆಚರಣೆ ಮಾಡಿಲಿ ಅಂತ ಸಹಾಯ ಮಾಡುತ್ತಿದ್ದೇನೆ. ಆದ್ರೆ ಗಲಭೆಯಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಮತ್ತೊಮ್ಮೆ ತಪ್ಪು ಮಾಡದಂಗೆ ಅಲ್ಲಾ ಬುದ್ಧಿ ನೀಡಲಿ ಎಂದು ಪ್ರಾರ್ಥಿಸೋಣ. ತಪ್ಪು ಮಾಡಿದವರಿಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡುವ ಶಿಕ್ಷೆಗೆ ಒಳಪಡಲಿ. ಇದು ಯಾವುದೇ ರೀತಿಯ ತಪ್ಪಿತಸ್ಥರಿಗೆ ಸಹಾಯ ಅಲ್ಲ ಹಾಗೂ ಉತ್ತೇಜನೆ ಅಲ್ಲ. ಇದು ಕೇವಲ ತಾಯಂದಿರ ಹಾಗೂ ಹೆಣ್ಣು ಮಕ್ಕಳು, ಪುಟ್ಟ ಮಕ್ಕಳು ವರ್ಷಕ್ಕೊಮ್ಮೆ ಬರುವ ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡಿಲಿ ಎಂಬುವುದಷ್ಟೇ ಎಂದು ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಇನ್ನು ಸಂಜೆ ನಾಲ್ಕು ಗಂಟೆಗೆ ಮಸ್ತಾನ ಶಾದಿ ಮಹಲ್ನಲ್ಲಿ ಎಲ್ಲರಿಗೂ ಫುಡ್ ಕಿಟ್ ಹಾಗೂ ಸಹಾಯಧನ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಹಣ ಕೊಡುವುದು ಎಷ್ಟು ಸರಿ ಇನ್ನು ಬಂಧಿತರಿಗೆ ಶಾಸಕ ಜಮೀರ್ ಅಹ್ಮದ್ ಸಹಾಯಹಸ್ತ ವಿಚಾರಕ್ಕೆ ಸಂಬಂಧಿಸಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಹಣ ಕೊಡುವುದು ಎಷ್ಟು ಸರಿ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಗಲಾಟೆ ಆದಾಗಲೂ ಬಂಧಿತ ಆರೋಪಿಗಳಿಗೆ ಶಾಸಕ ಜಮೀರ್ ನೆರವು ನೀಡಿದ್ದರು. ಗಲಾಟೆ ಪ್ರಕರಣದಲ್ಲಿ ಬಂಧಿಸಿದವರಿಗೆ ಸಹಾಯ ಮಾಡಬಾರದು ಎಂದರು.

ಕಾಂಗ್ರೆಸ್ ಈ ಹಿಂದೆ ಕೂಡ ಇದೇ ರೀತಿ ನಡೆದುಕೊಂಡಿದೆ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್​ನಿಂದ ಗಲಾಟೆ ಪ್ರಕರಣದಲ್ಲಿ ಬಂಧಿತರಿಗೆ ಶಾಸಕ ಜಮೀರ್​ ಅಹ್ಮದ್​ ಸಹಾಯಹಸ್ತ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್​ ಕೊಟ್ಟಿದ್ದಾರೆ. ಈ ಹಿಂದೆ ಕೂಡ ಕಾಂಗ್ರೆಸ್ ಇದೇ ರೀತಿಯಾಗಿ ನಡೆದುಕೊಂಡಿದೆ. ಪೊಲೀಸ್ ಠಾಣೆ ಸುತ್ತೋರಿಗೆ ವಕೀಲರನ್ನು ನೇಮಕ, ಹಣಕಾಸಿನ ನೆರವು ನೀಡಿದ್ದು ಕಾಂಗ್ರೆಸ್. ಡಿಜೆ ಹಳ್ಳಿ ಕೆಜಿ ಹಳ್ಳಿ, ಪಾದರಾಯನಪುರ ಪ್ರಕರಣದಲ್ಲೂ ಜಮೀರ್ ಹೆಸರು ಕೇಳಿಬಂದಿತ್ತು. ಮಗುವನ್ನ ಚಿವುಟಿ, ತೊಟ್ಟಿಲು ತೂಗೋ ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ. ಕೋಮುಗಲಭೆ ಹುಟ್ಟು ಹಾಕಿ, ಓಟ್ ಬ್ಯಾಂಕನ್ನು ಗಟ್ಟಿಯಾಗಿಸಲು ನೆರವು ನೀಡ್ತಿದ್ದಾರೆ. ಹಿಜಾಬ್ ಪ್ರಕರಣದಲ್ಲೂ ಕೂಡ ಕಾಂಗ್ರೆಸ್ ಕೈವಾಡವಿತ್ತು. ಜಾತ್ಯಾತೀತ ಚಾಂಪಿಯನ್ ಅನ್ನಿಸಿಕೊಂಡವರು ಹಿಜಾಬ್ ಪರ ನಿಂತರು. ಎದ್ದು ನಿಂತ್ರೆ 50 ಲಕ್ಷ ಬಿಲ್ ಮಾಡುವ ವಕೀಲರನ್ನ ಇಟ್ಟಿದ್ದು ಕೂಡ ಕಾಂಗ್ರೆಸ್ ಎಂದು ಸಿ.ಟಿ. ರವಿ ಟಾಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಜಮ್ಮು- ಕಾಶ್ಮೀರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ; ಭಾರತ ತಿರುಗೇಟು

ಕಿರುತೆರೆ ಸೀರಿಯಲ್ ನಿರ್ದೇಶಕ ಅರವಿಂದ್​ ಕೌಶಿಕ್​ ಬಂಧನ: ನಿರ್ಮಾಪಕರಿಗೆ 73 ಲಕ್ಷ ರೂ. ವಂಚಿಸಿದ ಆರೋಪ

Published On - 10:12 am, Fri, 29 April 22