ಹುಬ್ಬಳ್ಳಿ : ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ ಕೇವಲ ಮೂರು ತಿಂಗಳು ಬಾಕಿ ಇದೆ. ಕಾಂಗ್ರೆಸ್ ಸ್ವಲ್ಪ ದಿನಗಳಲ್ಲಿಯೇ ಅಭ್ಯರ್ಥಿಗಳ ಮೊದಲನೆಯ ಪಟ್ಟಿಯನ್ನ ರಿಲೀಸ್ ಮಾಡಲಿದೆ. ಮೊದಲನೆಯ ಪಟ್ಟಿ ಬಿಡುಗಡೆ ಮುನ್ನವೇ ಟಿಕೆಟ್ ಹಂಚಿಕೆ ಕಾಂಗ್ರೆಸ್ ಹೈಕಮಾಂಡಗೆ ದೊಡ್ಡ ತಲೆನೋವಾಗಿದೆ. ಈ ನಡುವೆ ಧಾರವಾಡ ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರು ಟಿಕೆಟ್‌ಗಾಗಿ ಕಾಂಗ್ರೆಸ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಟಿಕೆಟ್ ನೀಡದೆ ಹೋದ್ರೆ ಒಳ ಹೊಡೆತ ಕೊಡಲು ಅಲ್ಪಸಂಖ್ಯಾತ ಮುಂಖಡರು ಮುಂದಾಗಿದ್ದಾರೆ. ಟಿಕೆಟ್‌ಗಾಗಿ ಪಟ್ಟು ಹಿಡಿದ ಮುಸ್ಲಿಂ ಸಮುದಾಯ, ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿಯಾದ್ರೂ ಕೈ ಟಿಕೆಟ್ ನೀಡಬೇಕು, ನೀಡದೆ ಹೋದ್ರೆ ಆರು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಸಿದ್ದತೆ ನಡೆಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 7 ಕ್ಷೇತ್ರಗಳಿವೆ, ಇದರಲ್ಲಿ ಒಂದು ಮೀಸಲು ಕ್ಷೇತ್ರ, ಉಳಿದ ಆರು ಕ್ಷೇತ್ರಗಳಲ್ಲಿ ಒಂದು ಟಿಕೆಟ್ ನೀಡಲೇಬೇಕೆಂದು ಅಲ್ಪಸಂಖ್ಯಾತ ಮುಖಂಡರು ಕೇಳುತ್ತಿದ್ದಾರೆ. ನಾವು ಐವತ್ತು ವರ್ಷಗಳಿಂದ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾ ಬಂದಿದ್ದೇವೆ. ಈಗ ನಮ್ಮ ಹಕ್ಕನ್ನ ನಾವು ಕೇಳ್ತಾ ಇದ್ದೇವೇ. ಮುಸ್ಲಿಂ ಸಮುದಾಯ ವೋಟ್‌ಗಳು ಹೆಚ್ಚಿರುವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು. ಮುಸ್ಲಿಂ ಸಮುದಾಯದವರಿಗೆ ಯಾರಿಗೆ ಟಿಕೆಟ್ ನೀಡಿದ್ರು ಒಗ್ಗಟ್ಟಾಗಿ ಕೆಲಸ ಮಾಡುತ್ತೆವೆ, ಇಲ್ಲ ಅಂದ್ರೆ ಧಾರವಾಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸುವುದು ಪಕ್ಕಾ ಎನ್ನುತ್ತಿದ್ದಾರೆ ಅಲ್ಪಸಂಖ್ಯಾತ ಮುಖಂಡರು.ಹೀಗಾಗಿ ಇಂದು ಹುಬ್ಬಳ್ಳಿಗೆ ಆಗಮಿಸಿದ ಸಿದ್ದರಾಮಯ್ಯ, ಡಿಕೆಶಿವಕುಮಾರ್, ಬಿಕೆ ಹರಿಪ್ರಸಾದ್ರನ್ನ ಮುಸ್ಲಿಂ ಮುಖಂಡರು ಟಿಕೆಟ್ ಆಕಾಂಕ್ಷಿಗಳು, ಮೌಲ್ವಿಗಳು ಭೇಟಿ ಮಾಡಿ ಬೇಡಿಕೆ ಇಟ್ಟಿದ್ದಾರೆ.
ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿಯೂ 30-40 ಸಾವಿರ ಅಲ್ಪಸಂಖ್ಯಾತ ಮತಗಳಿವೆ. ಇದರಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರ. ಈ ಕ್ಷೇತ್ರವನ್ನ ಹೊರತು ಪಡಿಸಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ, ಕಲಘಟಗಿ, ನವಲಗುಂದ, ಕುಂದಗೋಳ ಕ್ಷೇತ್ರದ ಮೇಲೆ ಮುಸ್ಲಿಂ ಸಮುದಾಯ ಟಿಕೆಟ್‌ಗಾಗಿ ಕಣ್ಣಿಟ್ಟಿದೆ. ಅದರಲ್ಲಿಯೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಓರ್ವ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮೂರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಾಲ್ಕು ಜನ, ಕುಂದಗೋಳ ಕ್ಷೇತ್ರದಲ್ಲಿ ಓರ್ವ ಕೈ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಹಾಕಿದವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಮುಸ್ಲಿಂ ಸಮುದಾಯದ ಹಠ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಲ್ಪಸಂಖ್ಯಾತ ಮುಖಂಡರು ಹುಬ್ಬಳ್ಳಿಯಲ್ಲಿ ಸಭೆ ಮೇಲೆ ಸಭೆ ನಡೆಸಿದ್ದಾರೆ. ನಿನ್ನೆಯೂ ಸಹ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಕೈ ಹೈಕಮಾಂಡಗೆ ಒಂದು ಸಂದೇಶವನ್ನ ರವಾನೆ ಮಾಡಿದೆ. ನಮ್ಮ ಸಮಾಜ ಕಾಂಗ್ರೆಸ್ ಜೊತೆ ಇದೆ. ನಮಗೆ ಟಿಕೆಟ್ ಬೇಕು ಎಂದು ಮುಸ್ಲಿಂ ಮುಖಂಡರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:ಬಿಜೆಪಿಯವರಿಗೆ ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡುವ ಪ್ಲಾನ್ ಇದೆ -ಡಿಕೆ ಶಿವಕುಮಾರ್ ಗಂಭೀರ ಆರೋಪ
ಮುಂಬರುವ ಚುನಾವಣೆಗೆ ಅಲ್ಪಸಂಖ್ಯಾತ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟು ಕುಳಿತಿದೆ. ಈ ನಡುವೆ ಅಲ್ಪಸಂಖ್ಯಾತರ ಈ ನಿರ್ಧಾರದಿಂದ ಕಾಂಗ್ರೆಸ್‌ಗೆ ಟಿಕೆಟ್ ಹಂಚಿಕೆಗೆ ಬಿಸಿ ತುಪ್ಪವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷದಂತೆ ಒಂದು ಕ್ಷೇತ್ರದಲ್ಲಿಯಾದ್ರೂ ಟಿಕೆಟ್ ನೀಡುತ್ತಾ..? ಇಲ್ಲವೇ ಬೇರೆ ಯಾವುದಾದರೂ ನಿರ್ಧಾರವನ್ನ ತೆಗೆದುಕೊಂಡು ಮುಸ್ಲಿಂ ಸಮುದಾಯದ ಮುಖಂಡರನ್ನ ಮನವೊಲಿಸುತ್ತಾ ಎಂಬುದನ್ನ ಕಾದು ನೋಡಬೇಕಾಗಿದೆ.
ವರದಿ: ಶಿವಕುಮಾರ್ ಪತ್ತಾರ ಟಿವಿ9 ಹುಬ್ಬಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ