ಹುಬ್ಬಳ್ಳಿ, ಮಾ.02: ಸಾರಿಗೆ ನೌಕರರು 2020 ಡಿಸೆಂಬರ್ ಮತ್ತು ಎಪ್ರಿಲ್ 2021 ರಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಕೇವಲ ಪ್ರತಿಭಟನೆ ಅಲ್ಲದೇ, ಬಸ್ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಈಗ ಸಾರಿಗೆ ನೌಕರರು(Transport employees)
ಮತ್ತೆ ಅದೇ ಹಾದಿ ತುಳಿಯಲು ಹೊರಟಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಸಮಾನ ವೇತನ ನೀಡಿ, ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂದು ಸಾರಿಗೆ ಸಿಬ್ಬಂದಿಗಳು ಹೋರಾಟ ಮಾಡಿದ್ದರು. ಅಂದಿನ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೇ ನೂರು ವರ್ಷ ಆಯುಷ್ಯ ಎನ್ನುವ ಹಾಗೆ ಸಾರಿಗೆ ಸಿಬ್ಬಂದಿಗಳ ಮೂಗಿಗೆ ತುಪ್ಪ ಸವರಿ ಕೈತೊಳೆದಕೊಂಡಿತ್ತು. ಆದ್ರೆ, ಇಲ್ಲಿಯವರೆಗೂ ಸಾರಿಗೆ ಸಿಬ್ಬಂದಿಗಳ ಆರು ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಸಾರಿಗೆ ಸಿಬ್ಬಂದಿಗಳ ತಾಳ್ಮೆಯ ಕಟ್ಟೆ ಒಡೆದಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಿ ತಮ್ಮ ಹಕ್ಕುಗಳನ್ನು ಪಡೆಯಲು ಸಾರಿಗೆ ಸಿಬ್ಬಂದಿಗಳ ಕುಟುಂಬಸ್ಥರು ಸಿದ್ದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ ನಾಲ್ಕರಂದು ಬೆಂಗಳೂರು ಚಲೋ ಕಾರ್ಯಕ್ರಮ ಮಾಡಿ, ಅಹೋರಾತ್ರಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಲು ಮುಂದಾಗಿದ್ದಾರೆ.
ಸಾರಿಗೆ ಸಿಬ್ಬಂದಿಗಳ ಪರವಾಗಿ ಅವರ ಕುಟುಂಬಸ್ಥರು ಹೋರಾಟ ಮಾಡಲು ಹೊರಟಿದ್ದಾರೆ. ಸಾರ್ವಜನಿಕರ ಅಗತ್ಯ ಸೇವೆಗಳಲ್ಲಿ ಸಾರಿಗೆ ಸೇವೆ ಒಂದು. ಸಾರಿಗೆ ಸಂಸ್ಥೆಯ ನೌಕರರು ದಿನಪೂರ್ತಿ ಕರ್ತವ್ಯ ನಿರ್ವಹಿಸಬೇಕು, ಮನೆಗಳನ್ನು ಬಿಟ್ಟು ಎರಡ್ಮೂರು ದಿನ ದೂರದ ಊರುಗಳಿಗೆ ಹೋಗಿ ಹಗಲು-ರಾತ್ರಿ ಎನ್ನದೆ ದುಡಿಯುತ್ತಾರೆ. ವೈಯಕ್ತಿಕವಾಗಿ ಯಾವುದೇ ಕೆಲಸಗಳನ್ನು ಮಾಡಲಾಗದೆ ಕುಟುಂಬದ ಸುಖ-ದುಃಖಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ, ನಮ್ಮ ವೈಯಕ್ತಿಕ ಬದುಕು ಹಾಳಾಗುವುದರ ಜೊತೆಗೆ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತೆ ಆಗುತ್ತಿದೆ. ಆದರೂ ಸಾರಿಗೆ ನೌಕರರ ಪರಿಶ್ರಮದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶ್ವದಲ್ಲೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಏಕೈಕ ಸಂಸ್ಥೆ ನಮ್ಮ ಸಾರಿಗೆ ಸಂಸ್ಥೆ ಎಂಬ ಹೆಮ್ಮೆ ಇದೆ ಎಂದು ನೌಕರರು ಹೇಳುತ್ತಿದ್ದಾರೆ.
ತಮ್ಮ ಸಂಸ್ಥೆಯಿಂದ ನೀಡುತ್ತಿರುವ ಸಂಬಳ ಸರ್ಕಾರಿ ನೌಕರರಿಗೆ ಹಾಗೂ ಇತರೆ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಅವರಿಗಿಂತ ಕಡಿಮೆ ಇದೆ. ಎಲ್ಲರೂ ಕೂಡ ಒಂದೇ ಸಮಾಜದಲ್ಲಿ ಜೀವನ ಸಾಗಿಸುತ್ತಿರುವ ನಮಗೆ ಈ ವೇತನ ಮತ್ತು ಇತರೆ ಸೌಲಭ್ಯಗಳಿಂದ ತಾರತಮ್ಯವೇಕೆ.? ವೇತನ ವ್ಯತ್ಯಾಸದಿಂದ ನಮ್ಮ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸಲು, ನಿತ್ಯ ಜೀವನ ನಡೆಸಲು ಮತ್ತು ನಮ್ಮ ಮಕ್ಕಳ ಮುಂದಿನ ಭವಿಷ್ಯಗಳನ್ನು ರೂಪಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಇದೆ. ದಿನದ 24 ಗಂಟೆಗಳು ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಿಂದ ಸರಿಯಾದ ಸಮಯಕ್ಕೆ ಊಟ ಮತ್ತು ನಿದ್ರೆ ಇಲ್ಲದೆ ಅನೇಕ ರೋಗಗಳಿಗೆ ತುತ್ತಾಗಿ ಬಹುತೇಕ ನೌಕರರು ನಿವೃತ್ತಿ ಪೂರ್ವದಲ್ಲೇ ನಿಧನ ಹೊಂದುತ್ತಿದ್ದಾರೆ.
ಭಾರತದಲ್ಲಿ ಕರ್ತವ್ಯ ಅವಧಿಯಲ್ಲಿ ಅತಿ ಹೆಚ್ಚು ಮರಣ ಹೊಂದುವ ನೌಕರರು ಯಾರಾದರು ಇದ್ದರೆ, ಅದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಾಗಿದ್ದಾರೆ. ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ಇದೆಯ ಎಂದು ನೋಡಿದರೆ ಬರುವ ಪಿಂಚಣಿ 3 ಸಾವಿರ ದಿಂದ 3500 ಮಾತ್ರ. ಈ ಮೊತ್ತ ಅವರಿಗೆ ಇರುವ ರೋಗಗಳ ಔಷಧಿಗಳ ಖರೀದಿಗೂ ಸಾಲುವುದಿಲ್ಲ. ಇಷ್ಟೆಲ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದ ನಾವು, ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹಿಂದಿನ ಸರ್ಕಾರದ ಮುಂದೆ ಹೋರಾಟ ಮಾಡಿದರೆ, ಆ ಸರ್ಕಾರ ನೀಡಿದ ಪ್ರತಿಫಲ ಸಾರಿಗೆ ನೌಕರರಿಗೆ ವಜಾ, ವರ್ಗಾವಣೆ, ಆಮಾನತ್ತು ಮತ್ತು ನೌಕರರು ಹಾಗೂ ಕುಟುಂಬ ಸದಸ್ಯರ ಮೇಲೆ ಸುಳ್ಳು ಪೋಲಿಸ್ ಕೇಸುಗಳು ದಾಖಲು.
ಇದನ್ನೂ ಓದಿ:ಮಾರ್ಚ್ 4 ರಿಂದ ಸಾರಿಗೆ ನೌಕರರ ಸಂಘಟನೆಗಳಿಂದ ಪ್ರತಿಭಟನೆ, ಬೇಡಿಕೆಗಳೇನು?
ಹೀಗಾಗಿ ಹಿಂದಿನ ಸರ್ಕಾರದ ಈ ಆಮಾನವೀಯ ನಡೆಯಿಂದ ಬೇಸತ್ತ ನಾವು ಕಾಂಗ್ರೆಸ್ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ನಂಬಿ ನಾವು ಮತ್ತು ನಮ್ಮ ಬಂದು ಬಳಗ ಎಲ್ಲರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ್ದೇವೆ. ಆದ್ರೆ, ಈ ಸರ್ಕಾರ ಬಂದು ಸುಮಾರು 10 ತಿಂಗಳುಗಳು ಕಳೆದರು ಯಾವುದೇ ಸಮಸ್ಯೆಗಳು ಬಗೆಹರಿಸಿರುವುದಿಲ್ಲ. ಅಲ್ಲದೇ ಪ್ರಣಾಳಿಕೆ ಭರವಸೆಯನ್ನು ಈಡೇರಿಸಿರುವುದಿಲ್ಲ. ಆದ್ದರಿಂದ ನಮಗೆ ಅನ್ಯ ಮಾರ್ಗವಿಲ್ಲದೆ ನಮ್ಮ ಯಜಮಾನರು ಕಾರ್ಯ ನಿರ್ವಹಿಸುತ್ತಿದ್ದರು ಕೂಡ, ನಾವು ನಮ್ಮ ಮನೆಯ ಮಕ್ಕಳೊಂದಿಗೆ ಆಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಲಾಗಿದೆ. ಮುಂದೆ ಯಾವುದೇ ಬೆಳವಣಿಗೆಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಸಾರಿಗೆ ಸಿಬ್ಬಂದಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಈಗಾಗಲೇ ಒಂದು ಎಚ್ಚರಿಕೆ ಸಂದೇಶವನ್ನ ಸಾರಿಗೆ ಸಿಬ್ಬಂದಿಗಳ ಕುಟುಂಬಸ್ಥರು ರವಾನೆ ಮಾಡಿದ್ದಾರೆ. ಈ ಸಂದೇಶಕ್ಕೆ ಸರ್ಕಾರ ಮಣಿದು ಸಾರಿಗೆ ಸಿಬ್ಬಂದಿಗಳ ಬೇಡಿಕೆಯನ್ನ ಈಡೇರಿಸಬೇಕಿದೆ. ಅಲ್ಲದೇ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಸಾರಿಗೆ ಸಿಬ್ಬಂದಿಗಳ ಹಿತ ಕಾಪಾಡುವ ಕೆಲಸಕ್ಕೆ ಸರ್ಕಾರ ಕೈ ಹಾಕಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ